ಮೈಸೂರು ದಸರಾ ನೋಡಲು ದೇಶವಿದೇಶಗಳಿಂದ ಜನ ಸೇರುತ್ತಾರೆ. ಆದರೆ, ಇಲ್ಲಿಯೇ ಹತ್ತಿರದಲ್ಲಿರುವ ಬಹುತೇಕರು ಹೋಗಲು ಅಸಡ್ಡೆ ತೋರುತ್ತಾರೆ. ಆದರೆ, ನಮ್ಮದೇ ರಾಜ್ಯದ ನಾಡಹಬ್ಬವೆನಿಸಿರುವ ಈ ವೈಭೋಗವನ್ನು ಜೀವನದಲ್ಲಿ ಒಮ್ಮೆಯಾದರೂ ಕಣ್ತುಂಬಿಕೊಳ್ಳಲೇಬೇಕು. ಏಕೆಂದರೆ ನೀವದನ್ನು ಮತ್ತೆಂದೂ ಮರೆಯಲಾರಿರಿ.
ದಸರಾ ಎಂದರೆ ನೆನಪಾಗುವುದೇ ಮೈಸೂರು. ನಾಡಹಬ್ಬವಾದರೂ ಮೈಸೂರು ರಾಜವೈಭೋಗದಲ್ಲಿ ಮೆರೆವಷ್ಟು ಸಡಗರ ಬೇರೆಡೆ ಕಾಣಸಿಗುವುದಿಲ್ಲ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ ದಸರಾ ವೈಭವ ಈಗಲೂ ಕೂಡಾ ಲಕ್ಷಾಂತರ ಜನರನ್ನು ಸೆಳೆಯುತ್ತದೆ.
ಕೆಟ್ಟದ್ದರ ವಿರುದ್ಧ ಒಳ್ಳೆಯದರ ಜಯವನ್ನು ಸಂಭ್ರಮಿಸುವ ಹಬ್ಬವಾಗಿ ದಸರಾ ಆಚರಣೆ ನಡೆಯುತ್ತದೆ. ಈ ಒಂದು ತಿಂಗಳು ಮೈಸೂರನ್ನು ನೋಡುವುದೇ ಕಣ್ಣಿಗೆ ಹಬ್ಬ. ಜಂಬೂಸವಾರಿ, ಮೈಸೂರು ಅರಮನೆ, ಆಹಾರ ಮೇಳ, ಮಿಲಿಟರಿ ಪೆರೇಡ್, ಹಲವಾರು ದೇಸಿ ಕ್ರೀಡೆಗಳು, ದೇಸಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಗರವನ್ನು ಚಟುವಟಿಕೆಯ ಚಿಲುಮೆಯಾಗಿಸುತ್ತದೆ. ದಸರಾ ಮುಗಿದ ಬಳಿಕವೂ ಎರಡು ತಿಂಗಳು ಎಕ್ಸಿಬಿಶನ್ ಮುಂದುವರಿದು ನಗರಕ್ಕೆ ಜನರನ್ನು ಸೆಳೆಯುತ್ತಲೇ ಇರುತ್ತದೆ. ಈ ದಸರಾದ ಕೆಲ ಪ್ರಮುಖ ಆಕರ್ಷಣೆಗಲು ಇಲ್ಲಿವೆ.
undefined
ಫಿಯರ್ ಫ್ಯಾಕ್ಟರ್: ಮೈಸೂರಿನಲ್ಲಿ ಪ್ರಥಮ ಸಾಹಸ ಕ್ರೀಡೆ ಉದ್ಯಾನವನ
ಸಂಸ್ಕೃತಿ ವೈಭವ
16ನೇ ಶತಮಾನದಲ್ಲಿ ಬಹಳ ವೈಭವಯುತವಾಗಿ ವಿಜಯನಗರದ ಅರಸರು ಆರಂಭಿಸಿದ ದಸರಾ ಇಂದಿಗೂ ಕೂಡಾ ಅದೇ ಘನತೆಯನ್ನು ಮೈದಾಳುತ್ತದೆ. ದಸರಾ ಮೆರವಣಿಗೆ ಅರಮನೆಯಿಂದ ಶುರುವಾಗಿ ಬನ್ನಿಮಂಟಪದ ಬಳಿ ಕೊನೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಬಣ್ಣಬಣ್ಣದ ಉಡುಗೆ ತೊಟ್ಟ ನೃತ್ಯ ತಂಡಗಳು, ಸಂಗೀತ ಬ್ಯಾಂಡ್‌ಗಳು, ಮಿಲಿಟರಿ ಪೆರೇಡ್, ಜಾನಪದ ನೃತ್ಯಗಳು, ತಟ್ಟಿರಾಯಗಳು, ಸಿಂಗರಿಸಿಕೊಂಡ ಆನೆ ಕುದುರೆ ಒಂಟೆಗಳು ಮುಂತಾದವನ್ನು ನೀವು ಮೆರವಣಿಗೆಯಲ್ಲಿ ನೋಡಬಹುದು.
ರಾಜಾ ಒಡೆಯರ್ ಈ ಮೆರವಣಿಗೆ ಸಂಪ್ರದಾಯವನ್ನು 1610ರಲ್ಲಿ ಆರಂಭಿಸಿದರು. ಇಂದು ಕೂಡಾ ಅದೇ ಪರಂಪರೆ, ಸಂಸ್ಕೃತಿ, ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ದಸರಾದ 10ನೇ ದಿನ ನೂರಾರು ಆನೆಗಳು ಚಿನ್ನದ ಬಣ್ಣದ ಆಭರಣಗಳಲ್ಲಿ ಸಿಂಗರಿಸಿಕೊಂಡು ಮೈಸೂರಿನ ಬೀದಿಬೀದಿಗಳಲ್ಲಿ ಮೆರವಣಿಗೆ ಹೋಗುತ್ತವೆ. ಈ ಸಂದರ್ಭದಲ್ಲಿ 750 ಕೆಜಿ ತೂಕದ ಚಾಮುಂಡೇಶ್ವರಿ ವಿಗ್ರಹವನ್ನು ಕೂಡಾ ಒಂದು ಆನೆ ಹೊತ್ತು ನಡೆಯುತ್ತದೆ.
ಅರಮನೆ
ಮೈಸೂರು ಅರಮನೆ ಯಾವ ಆಚರಣೆ ಇಲ್ಲದೆಯೇ ಕಣ್ಣು ಕುಕ್ಕುತ್ತದೆ. ಅಂಥದರಲ್ಲಿ ದಸರಾ ಸಂದರ್ಭದಲ್ಲಿ ಅದರ ಜಗಮಗ ಇಡೀ ನಗರಕ್ಕೇ ಕೋರೈಸುತ್ತದೆ. ಲಕ್ಷಾಂತರ ಬಲ್ಬ್‌ಗಳು ಅರಮನೆಯನ್ನು ಹೊಳೆವಂತೆ ಮಾಡುತ್ತವೆ. ಮೈಸೂರಿಗೆ ಹೋದ ಮೇಲೆ ಅರಮನೆಗೆ ಹೋಗದೆ ಬರಲು ಸಾಧ್ಯವೇ ಇಲ್ಲ.
ಆಹಾರ ಮೇಳ
ನೀವು ಆಹಾರ ಪ್ರಿಯರಾದರೆ ದಸರಾ ಸಂದರ್ಭದಲ್ಲಿ ಮೈಸೂರಿಗೆ ಭೇಟಿ ನೀಡಲೇಬೇಕು. ಎಲ್ಲ ರೀತಿಯ ಸಿಹಿ ತಿಂಡಿಗಳಿಂದ ಹಿಡಿದು ಖಾರ, ಚಾಟ್ಸ್ ಸೇರಿ ನೂರಾರು ಬಗೆಯ ಆಹಾರಗಳು ನಿಮಗಾಗಿ ಕಾದು ಕುಳಿತು ಬಾಯಲ್ಲಿ ನೀರೂರಿಸುತ್ತವೆ. ಆಹಾರ ಮೇಳಕ್ಕೆ ಹೋಗಿ ಹೊಟ್ಟೆಯ ತಾಳಕ್ಕೆ ತಕಧಿಮಿತ ಹೇಳಿಬನ್ನಿ.
ಶಾಪಿಂಗ್ ಎಕ್ಸಿಬಿಶನ್ಸ್
ದಸರಾದ ಮೊದಲ ದಿನ ಆಱಂಭವಾಗುವ ಶಾಪಿಂಗ್ ಎಕ್ಸಿಬಿಶನ್, ಎರಡು ತಿಂಗಳ ಕಾಲ ಮುಂದುವರಿದು ಜನರನ್ನು ಸೆಳೆಯುತ್ತದೆ. ಸಾಮಾನ್ಯವಾಗಿ ಮೈಸೂರಿನ ಅರಮನೆ ಎದುರಿನ ದೊಡ್ಡಕೆರೆ ಮೈದಾನದಲ್ಲಿ ನಡೆವ ಈ ಖರೀದಿ ವಸ್ತುಗಳ ಪ್ರದರ್ಶನ ಗೊಂಬೆಗಳು, ಕರಕುಶಲ ವಸ್ತುಗಳು, ಬಟ್ಟೆಗಳು, ಆಭರಣಗಳು ಮುಂತಾದವು ಶಾಪಿಂಗ್ ಪ್ರಿಯರನ್ನು ಕೈ ಬೀಸಿ ಕರೆಯುತ್ತವೆ. ದಸರಾ ಸಂದರ್ಭದಲ್ಲಿ ಶಾಪಿಂಗ್‌ಗಾಗಿಯೇ ಮೈಸೂರಿಗೆ ಹೋಗುವವರೂ ಹಲವರಿದ್ದಾರೆ.
ಗೊಂಬೆಗಳ ಹಬ್ಬ
ಗೊಂಬೆಗಳ ಹಬ್ಬ ಕೂಡಾ ದಸರಾ ಆರಂಭವಾದ ದಿನದಿಂದಲೂ ನಡೆದು ಬಂದಿದೆ. ಈ ಸಂದರ್ಭದಲ್ಲಿ ಸ್ಥಳೀಯ ಕಲಾವಿದರು ತಯಾರಿಸಿದ ಗೊಂಬೆಗಳು, ಪಪೆಟ್ಸ್, ಮಿನಿಯೇಚರ್ಸ್ ಕಣ್ಮನ ಸೆಳೆಯುತ್ತವೆ.
ದಸರಾ: ಹೂಗಳಲ್ಲಿ ಮೂಡಿಬರಲಿದೆ ಚಂದ್ರಯಾನ, ಏರ್ ಶೋ ಮಾದರಿ..!
ಸಾಂಸ್ಕೃತಿಕ ಸಂಜೆ
ದಸರಾದ ಪ್ರತಿ ದಿನವೂ ಸಂಜೆ ಹೊತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮೈಸೂರು ಜನರನ್ನು ಹುಚ್ಚೆಬ್ಬಿಸಿ ಕುಣಿಸುತ್ತದೆ. ದೇಶಾದ್ಯಂತದ ಜನಪ್ರಿಯ ಕಲಾವಿದರು ಅರಮನೆ ನಗರಿಗೆ ಬಂದು ದಸರಾ ವೀಕ್ಷಕರನ್ನು ಮನರಂಜಿಸುತ್ತಾರೆ. ಹಾಡು, ನೃತ್ಯ, ನಾಟಕ ಸೇರಿದಂತೆ ಎಲ್ಲ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಮನಸೋಇಚ್ಛೆ ಸವಿಯಬಹುದು.
ಕುಸ್ತಿ
ಕುಸ್ತಿ ಪಂದ್ಯಾವಳಿಗಳು ಕರ್ನಾಟಕ ಸಂಸ್ಕೃತಿಯ ಭಾಗ. ಮೈಸೂರಲ್ಲಿ ವಿಜಯನಗರ ಅರಸರ ಕಾಲದಲ್ಲಿ ಇದು ಬಹಳ ಜನಪ್ರಿಯತೆ ಪಡೆದ ಪಂದ್ಯಾಟವಾಗಿತ್ತು. ಈಗಲೂ ಕೂಡಾ ಈ ಕುಸ್ತಿ ಪಂದ್ಯಾವಳಿಗಳು ಟೂರಿಸ್ಟ್‌ಗಳೊಳಗಿನ ಮಗುವನ್ನು ಹೊರಗೆಳೆದು ಕೂಗಿ ಕುಣಿಸುತ್ತವೆ. ಆ ಥ್ರಿಲ್ಲಿಂಗ್ ಫೈಟ್‌ಗೆ ಮತ್ತಷ್ಟು ಹುರಿದುಂಬಿಸುವ ಕೂಗುಗಳು ರೋಮಾಂಚನಗೊಳಿಸುತ್ತವೆ.
ಚಾಪರ್ ರೈಡ್
ಮೈಸೂರಿನ ಸುತ್ತ ಹೆಲಿಕಾಪ್ಟರ್‌ನಲ್ಲಿ ಓಡಾಡುವ ಅವಕಾಶವನ್ನು ಕೂಡಾ ನೀವು ದಸರಾ ಸಂದರ್ಭದಲ್ಲಿ ಬಳಸಿಕೊಳ್ಳಬಹುದು. ಇದು ದಸರಾದ ಏರಿಯಲ್ ವ್ಯೂ ಒದಗಿಸುತ್ತದೆ. ಅದರಲ್ಲೂ ರಾತ್ರಿ ಹೊತ್ತಿನಲ್ಲಿ ಚಾಪರ್ ರೈಡ್ ಹೊರಟರೆ ಝಗಮಗಿಸುವ ಮೈಸೂರು ನಗರವನ್ನು ನೋಡಿ ಮಂತ್ರಮುಗ್ಧರಾಗುವುದರಲ್ಲಿ ಅನುಮಾನವಿಲ್ಲ. ಚಾಪರ್ ರೈಡ್ ಹೊರತಾಗಿಯೂ, ತ್ರಿಡಿ ಪ್ರೊಜೆಕ್ಷನ್, ಪ್ಯಾಲೇಸ್ ಆನ್ ವ್ಹೀಲ್ಸ್, ಟ್ರಿನ್ ಟ್ರಿನ್ ಸೇವೆಗಳನ್ನು ಬಳಸಿಕೊಂಡು ಮೈಸೂರು ಸುತ್ತಬಹುದು.