ಕೈತುಂಬಾ ಸಂಪಾದನೆ ಇದ್ದರೂ ನೆಮ್ಮದಿ ಇಲ್ವಾ? ಮಹರ್ಷಿ ಚರಕರು ಅಂದೇ ಹೇಳಿದ ಒತ್ತಡ ಮುಕ್ತಿ ರಹಸ್ಯ ಇಲ್ಲಿದೆ!

Published : Jun 21, 2026, 07:20 PM IST
International yoga day 2026

ಸಾರಾಂಶ

International yoga day 2026: ಇಂದಿನ ಯಾಂತ್ರಿಕ ಹಾಗೂ ಆಧುನಿಕ ಜೀವನಶೈಲಿಯಲ್ಲಿ ಮನುಷ್ಯನನ್ನು ಕಾಡುತ್ತಿರುವ ಅತಿ ದೊಡ್ಡ ರೋಗವೆಂದರೆ ಒತ್ತಡ. ಹಾಗಾದರೆ, ಈ ಒತ್ತಡ ರಹಿತ ಮತ್ತು ಶಾಂತಿಯುತ ಬದುಕಿಗೆ ಯೋಗ ಮತ್ತು ಆಯುರ್ವೇದ ಹೇಗೆ ದಾರಿದೀಪವಾಗುತ್ತದೆ? ಇಲ್ಲಿದೆ ಒಂದು ಆಳವಾದ ವಿಶ್ಲೇಷಣೆ.

ಇಂದಿನ ಧಾವಂತದ ಬದುಕಿನಲ್ಲಿ ನಮಗೆಲ್ಲವೂ ಇದೆ, ಆದರೆ ಮನಸ್ಸಿಗೆ ಮಾತ್ರ ಶಾಂತಿ ಇಲ್ಲ. ಸಾವಿರಾರು ವರ್ಷಗಳ ಹಿಂದೆಯೇ ಇಂಥದ್ದೇ ಮಾನಸಿಕ ತಳಮಳವನ್ನು ಹೊತ್ತು ಮಹಾರಾಜನೊಬ್ಬ ಮಹರ್ಷಿ ಚರಕರ ಬಳಿ ಹೋದಾಗ ಸಿಕ್ಕ ದಿವ್ಯೌಷಧಿ ಮತ್ತೇನೂ ಅಲ್ಲ; ಅದುವೇ 'ಯೋಗ'. ಇಂದು ಜೂನ್ 21, ವಿಶ್ವ ಯೋಗ ದಿನಾಚರಣೆ. ಈ ವಿಶೇಷ ಸಂದರ್ಭದಲ್ಲಿ, ಒತ್ತಡದ ಬದುಕಿಗೆ ಆಯುರ್ವೇದ ಮತ್ತು ಯೋಗ ಹೇಗೆ ಸಂಜೀವಿನಿಯಾಗಬಲ್ಲದು ಎಂಬುದನ್ನು ಜನಪ್ರಿಯ ಆಯುರ್ವೇದ ವೈದ್ಯರಾದ ಡಾ. ರಾಜೇಶ್ ಬಾಯರಿ ಅವರು ವಿವರಿಸಿರುವ ಒಂದು ವಿಶೇಷ ಲೇಖನ ಇಲ್ಲಿದೆ.

ಒಂದಾನೊಂದು ಕಾಲದಲ್ಲಿ, ಹಿಮಾಲಯದ ತಪ್ಪಲಿನಲ್ಲಿ ಒಬ್ಬ ಮಹಾರಾಜನು ಮಹರ್ಷಿ ಚರಕರನ್ನು ಭೇಟಿಯಾಗಲು ಬಂದನು. ಆ ರಾಜನಿಗೆ ಎಲ್ಲಾ ಸುಖ-ಭೋಗಗಳಿದ್ದರೂ ಮನಸ್ಸಿನಲ್ಲಿ ಶಾಂತಿ ಇರಲಿಲ್ಲ. ಸದಾ ಆತಂಕ, ಭೀತಿ ಮತ್ತು ಅತಿಯಾದ ದಣಿವಿನಿಂದ ಆತ ಬಳಲುತ್ತಿದ್ದನು. ರಾಜನು ಚರಕ ಮಹರ್ಷಿಗಳಿಗೆ ವಂದಿಸಿ, "ಹೇ ಮಹಾತ್ಮರೇ, ನನ್ನ ಈ ಮಾನಸಿಕ ತಳಮಳಕ್ಕೆ, ಒತ್ತಡಕ್ಕೆ ಯಾವುದಾದರೂ ದಿವ್ಯೌಷಧಿಯಿದ್ದರೆ ನೀಡಿ" ಎಂದು ಬೇಡಿಕೊಂಡನು.

ಆಗ ಮಹರ್ಷಿಗಳು ಮಂದಸ್ಮಿತರಾಗಿ, "ರಾಜನೇ, ನಿನ್ನ ಕಾಯಿಲೆಗೆ ಕಾಡಿನ ಮೂಲಿಕೆಗಳಷ್ಟೇ ಮದ್ದಲ್ಲ. ನಿನ್ನ ಶರೀರದ ಒಳಗಿರುವ ವಾಯು ಮತ್ತು ಮನಸ್ಸು ಹತೋಟಿ ತಪ್ಪಿದೆ. ಇದಕ್ಕೆ ಔಷಧಿಯ ರೂಪದಲ್ಲಿ ನೀನು ಯೋಗವನ್ನು ಆಶ್ರಯಿಸಬೇಕು. ಶ್ವಾಸವನ್ನು ಗೆದ್ದವನು ಮನಸ್ಸನ್ನು ಗೆಲ್ಲುತ್ತಾನೆ, ಮನಸ್ಸನ್ನು ಗೆದ್ದವನು ಜಗತ್ತನ್ನೇ ಗೆಲ್ಲುತ್ತಾನೆ" ಎಂದು ಹೇಳಿ ಆತನಿಗೆ ಪ್ರಾಣಾಯಾಮ ಮತ್ತು ಧ್ಯಾನದ ದೀಕ್ಷೆ ನೀಡಿದರು. ಕೆಲವು ವಾರಗಳ ನಿರಂತರ ಅಭ್ಯಾಸದ ನಂತರ ರಾಜನು ಸಂಪೂರ್ಣ ಒತ್ತಡ ಮುಕ್ತನಾಗಿ, ಪರಮ ಶಾಂತಿಯನ್ನು ಅನುಭವಿಸಿದನು.

ಈ ಕಥೆ ಇಂದಿನ ಆಧುನಿಕ ಬದುಕಿನ ಪ್ರತಿಯೊಬ್ಬ ಮನುಷ್ಯನಿಗೂ ಅನ್ವಯಿಸುತ್ತದೆ. ಆಯುರ್ವೇದದ ಮೂಲ ಸಂಹಿತೆಗಳು ಹೇಳುವುದೂ ಇದನ್ನೇ:

"ಸ್ವಸ್ಥಸ್ಯ ಸ್ವಾಸ್ಥ್ಯರಕ್ಷಕಂ, ಆತುರಸ್ಯ ವಿಕಾರ ಪ್ರಶಮನಂ ಚ".

ಆರೋಗ್ಯವಂತನ ಆರೋಗ್ಯವನ್ನು ಕಾಪಾಡುವುದು ಮತ್ತು ರೋಗಿಯ ರೋಗವನ್ನು ಗುಣಪಡಿಸುವುದು ಆಯುರ್ವೇದದ ಮೂಲ ಉದ್ದೇಶ ಅನ್ನುವುದು ಈ ಶ್ಲೋಕದ ಅರ್ಥ.

ಇಂದು ಜೂನ್ 21, ವಿಶ್ವ ಯೋಗ ದಿನಾಚರಣೆ. ಇಡೀ ದೇಶ ಯೋಗ ದಿನ ಆಚರಿಸುತ್ತಿದೆ. ಇತ್ತೀಚೆಗೆ ಯೋಗದ ಕುರಿತು ಅರಿವು ಹೆಚ್ಚಿರುವುದು ಕೂಡ ಅದಕ್ಕೆ ಕಾರಣ. ಈ ಸಂದರ್ಭದಲ್ಲಿ ಯೋಗ ಮತ್ತು ಆಯುರ್ವೇದ ಎಂಬ ಎರಡು ವಿಭಾಗಗಳ ಕುರಿತು ನೋಡೋಣ.

ಆಯುರ್ವೇದದ ದೃಷ್ಟಿಕೋನದಲ್ಲಿ ಯೋಗ ಎಂಬುದು ಕೇವಲ ದೈಹಿಕ ಕಸರತ್ತಲ್ಲ; ಅದು ದೇಹ, ಮನಸ್ಸು ಮತ್ತು ಆತ್ಮವನ್ನು ಬೆಸೆಯುವ ಒಂದು ಅಪೂರ್ವ ವಿಜ್ಞಾನ. ಆಯುರ್ವೇದ ಮತ್ತು ಯೋಗಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆಯುರ್ವೇದವು ಶರೀರವನ್ನು ಒಳಗಿನಿಂದ ಶುದ್ಧೀಕರಿಸಿದರೆ, ಯೋಗವು ಬಾಹ್ಯ ಮತ್ತು ಆಂತರಿಕ ಶಕ್ತಿಯನ್ನು ಸಮತೋಲನದಲ್ಲಿಡುತ್ತದೆ.

ಇಂದಿನ ಯಾಂತ್ರಿಕ ಹಾಗೂ ಆಧುನಿಕ ಜೀವನಶೈಲಿಯಲ್ಲಿ ಮನುಷ್ಯನನ್ನು ಕಾಡುತ್ತಿರುವ ಅತಿ ದೊಡ್ಡ ರೋಗವೆಂದರೆ ಒತ್ತಡ. ಎಲ್ಲರೂ ಒತ್ತಡದಿಂದ ಮುಕ್ತರಾಗಿ, ಶಾಂತಿಯುತ ಬದುಕನ್ನು ನಡೆಸಲು ಆಸೆ ಪಡುತ್ತಾರೆ. ಹೀಗಾಗಿ ಈ ಒತ್ತಡ ರಹಿತ ಮತ್ತು ಶಾಂತಿಯುತ ಬದುಕಿಗೆ ಯೋಗ ಹೇಗೆ ಸಂಜೀವಿನಿಯಾಗುತ್ತದೆ ಎಂಬುದು ಎಲ್ಲರೂ ತಿಳಿದುಕೊಳ್ಳಬೇಕು.

1. ತ್ರಿದೋಷಗಳ ಸಮತೋಲನ ಮತ್ತು ಯೋಗ
ಆಯುರ್ವೇದದ ಪ್ರಕಾರ ನಮ್ಮ ದೇಹವು ವಾತ, ಪಿತ್ತ ಮತ್ತು ಕಫ ಎಂಬ ಮೂರು ದೋಷಗಳಿಂದ ನಿಯಂತ್ರಿಸಲ್ಪಡುತ್ತದೆ. ಅತಿಯಾದ ಆತಂಕ ಮತ್ತು ಒತ್ತಡದಿಂದ ದೇಹದಲ್ಲಿ ವಾತ ದೋಷ ಹೆಚ್ಚಾಗುತ್ತದೆ. ಪ್ರಾಣಾಯಾಮ (ಶ್ವಾಸಕೋಶದ ಪ್ರಕ್ರಿಯೆ) ಮಾಡುವುದರಿಂದ ವಾಯುವಿನ ಚಲನೆ ನಿಯಂತ್ರಣಕ್ಕೆ ಬಂದು ಮನಸ್ಸು ಶಾಂತವಾಗುತ್ತದೆ. ಶೀತಲೀ ಪ್ರಾಣಾಯಾಮ ಮತ್ತು ಧ್ಯಾನ ಮಾಡುವುದರಿಂದ ದೇಹದ ಉಷ್ಣತೆ (ಪಿತ್ತ) ಕಡಿಮೆಯಾಗಿ, ಕೋಪ ಮತ್ತು ಕಿರಿಕಿರಿ ದೂರವಾಗುತ್ತದೆ.

2. ಮನಸ್ಸಿನ ಸತ್ವ ಗುಣದ ವೃದ್ಧಿ
ಆಯುರ್ವೇದವು ಮನಸ್ಸಿಗೆ ಮೂರು ಗುಣಗಳನ್ನು ಹೇಳುತ್ತದೆ: ಸತ್ವ (ಶಾಂತಿ/ ಶುದ್ಧತೆ), ರಜಸ್ (ಚಂಚಲತೆ/ ಅತಿಯಾದ ಆಸೆ), ಮತ್ತು ತಮಸ್ (ಆಲಸ್ಯ/ ಅಜ್ಞಾನ). ಒತ್ತಡ ಮತ್ತು ಖಿನ್ನತೆಗೆ ರಜಸ್ ಮತ್ತು ತಮಸ್ ಗುಣಗಳು ಕಾರಣ. ಪ್ರತಿದಿನ ಯೋಗಾಸನ ಮತ್ತು ಧ್ಯಾನ ಮಾಡುವುದರಿಂದ ಮನಸ್ಸಿನಲ್ಲಿ ಸತ್ವ ಗುಣ ಹೆಚ್ಚಾಗುತ್ತದೆ. ಸತ್ವ ಗುಣ ಹೆಚ್ಚಾದಾಗ ಸಕಾರಾತ್ಮಕ ಆಲೋಚನೆಗಳು ಮೂಡಿ, ಮನಸ್ಸು ಯಾವುದೇ ಪರಿಸ್ಥಿತಿಯಲ್ಲೂ ಧೃತಿಗೆಡದೆ ಶಾಂತವಾಗಿರುತ್ತದೆ.

3. ಓಜಸ್ಸ್ ವೃದ್ಧಿ ಮತ್ತು ರೋಗನಿರೋಧಕ ಶಕ್ತಿ
ಆಯುರ್ವೇದದಲ್ಲಿ ಓಜಸ್ಸ್ ಎಂದರೆ ದೇಹದ ಅತ್ಯುನ್ನತ ಚೈತನ್ಯ ಮತ್ತು ರೋಗನಿರೋಧಕ ಶಕ್ತಿ. ಅತಿಯಾದ ಮಾನಸಿಕ ಒತ್ತಡದಿಂದಾಗಿ ದೇಹದಲ್ಲಿ ವಿಷಕಾರಿ ಅಂಶಗಳು (ಆಮ) ಉತ್ಪತ್ತಿಯಾಗಿ ಓಜಸ್ಸು ಕ್ಷಯಿಸುತ್ತದೆ. ಯೋಗದ ಆಸನಗಳಾದ ಸೂರ್ಯ ನಮಸ್ಕಾರ, ಭುಜಂಗಾಸನ, ಮತ್ತು ಧನುರಾಸನಗಳು ಜೀರ್ಣಾಗ್ನಿಯನ್ನು ಪ್ರದೀಪ್ತಗೊಳಿಸಿ, ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುತ್ತವೆ. ಇದರಿಂದ ಓಜಸ್ಸು ವೃದ್ಧಿಯಾಗಿ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸುತ್ತದೆ.

4. ನೆಮ್ಮದಿಯ ನಿದ್ದೆಗೆ ಯೋಗ ನಿದ್ರೆ
ಇಂದಿನ ದಿನಗಳಲ್ಲಿ ಅನೇಕರು ಅನಿದ್ರಾ (ಇನ್ ಸೋಮ್ನಿಯಾ) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಯುರ್ವೇದದಲ್ಲಿ ಉತ್ತಮ ನಿದ್ದೆಯನ್ನು ಆರೋಗ್ಯದ ಮೂರು ಸ್ತಂಭಗಳಲ್ಲಿ (ಆಹಾರ, ನಿದ್ರಾ, ಬ್ರಹ್ಮಚರ್ಯ) ಒಂದೆಂದು ಪರಿಗಣಿಸಲಾಗಿದೆ. ರಾತ್ರಿ ಮಲಗುವ ಮುನ್ನ ಅಥವಾ ಸಂಜೆ ಯೋಗ ನಿದ್ರೆ ಅಥವಾ ಶವಾಸನ ಅಭ್ಯಾಸ ಮಾಡುವುದರಿಂದ ನರಮಂಡಲವು ಶಾಂತಗೊಂಡು, ಆಳವಾದ ಮತ್ತು ನೆಮ್ಮದಿಯ ನಿದ್ದೆ ನಿಮ್ಮದಾಗುತ್ತದೆ. ಇದು ಒತ್ತಡವನ್ನು ಬೇರಿನಿಂದಲೇ ಕಿತ್ತೆಸೆಯುತ್ತದೆ.

ಕೊನೆಯ ಮಾತು

ಯೋಗವನ್ನು ಕೇವಲ ವರ್ಷಕ್ಕೊಮ್ಮೆ ಮಾಡುವ ಆಚರಣೆಯಾಗಿಸಬೇಡಿ. ಪ್ರತಿದಿನ ಕನಿಷ್ಠ 20 ರಿಂದ 30 ನಿಮಿಷಗಳ ಕಾಲ ಯೋಗಾಸನ, ಪ್ರಾಣಾಯಾಮ (ಅನುಲೋಮ-ವಿಲೋಮ, ಭ್ರಾಮರಿ) ಮತ್ತು ಧಾನ್ಯವನ್ನು ನಿಮ್ಮ ದಿನಚರಿಯ ಭಾಗವಾಗಿಸಿಕೊಳ್ಳಿ. ನಿಮ್ಮ ಪ್ರಕೃತಿಗೆ (ವಾತ, ಪಿತ್ತ, ಕಫ) ಅನುಗುಣವಾದ ಯೋಗಾಸನಗಳನ್ನು ತಜ್ಞರ ಮಾರ್ಗದರ್ಶನದಲ್ಲಿ ಕಲಿಯಿರಿ.

ಆರೋಗ್ಯ ಎಂದರೆ ಕೇವಲ ರೋಗವಿಲ್ಲದಿರುವುದಲ್ಲ, ಮನಸ್ಸು ಮತ್ತು ಇಂದ್ರಿಯಗಳು ಪ್ರಸನ್ನವಾಗಿರುವುದೇ ನಿಜವಾದ ಆರೋಗ್ಯ ಎನ್ನುತ್ತದೆ ಆಯುರ್ವೇದ. ಈ ಯೋಗ ದಿನದಂದು ನಮ್ಮ ಆಂತರಿಕ ಶಾಂತಿಯನ್ನು ಕಂಡುಕೊಳ್ಳಲು, ಒತ್ತಡ ಮುಕ್ತ ಸಮಾಜ ನಿರ್ಮಿಸಲು ಯೋಗದ ಹಾದಿಯನ್ನು ಹಿಡಿಯೋಣ.

“ಲೋಕಾಃ ಸಮಸ್ತಾ ಸುಖಿನೋ ಭವಂತು”

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cooked Rice: ಫ್ರಿಡ್ಜ್‌ನಲ್ಲಿಟ್ಟ ಅನ್ನ ಎಷ್ಟು ದಿನ ತಿನ್ಬೋದು? ನಿರ್ಲಕ್ಷಿಸಿದರೆ ಜೀವಕ್ಕೇ ಅಪಾಯವೇ?
Shankhpushpi: ಹೀಗೆ ಮಾಡಿದ್ರೆ ಸಿಕ್ಕಾಪಟ್ಟೆ ಶಂಖಪುಷ್ಪ ಬಿಡುತ್ತೆ; ದೇವರಿಗೆ ಪ್ರಿಯ, ಪವರ್‌ಫುಲ್‌