ಮಗಳಿಗೆ ಮಾತ್ರವಲ್ಲ, ಮಗನಿಗೂ ಗೊತ್ತಿರಲಿ ಮುಟ್ಟಿನ ಈ ಗುಟ್ಟು!

By Web Desk  |  First Published Sep 13, 2019, 2:11 PM IST

ಯಾವುದೇ ವಿಷಯದ ಕುರಿತು ಉತ್ತಮ ಮಾಹಿತಿ ಇದ್ದಾಗ ಅದರ ಕುರಿತ ಕೆಟ್ಟ ಕುತೂಹಲ, ಕಲ್ಪನೆಗಳು, ಕಳಂಕಗಳು ದೂರಾಗುತ್ತವೆ. ಹೆಣ್ಣುಮಕ್ಕಳಿಗೆ ಪೀರಿಯಡ್ಸ್‌ಗೆ ಹೇಗೆ ಮಾನಸಿಕವಾಗಿ ತಯಾರು ಮಾಡುತ್ತೀರೋ, ಗಂಡುಮಕ್ಕಳನ್ನು ಕೂಡಾ ಆ ಕುರಿತು ಉತ್ತಮ ರೀತಿಯಲ್ಲಿ ವರ್ತಿಸುವಂತೆ, ತನ್ನ ಗೆಳತಿಯನ್ನು, ಆಕೆಯ ದೇಹದ ಬದಲಾವಣೆಗಳನ್ನು ಗೌರವಿಸುವಂತೆ, ಅದೊಂದು ಸಾಮಾನ್ಯ ಸಂಗತಿಯೆಂಬಂತೆ ಅರಿವು ಮೂಡಿಸಿ ಬೆಳೆಸುವುದು ಅಗತ್ಯ.


ಇತ್ತೀಚೆಗೊಂದು ಬೆಂಗಾಲಿ ಶಾರ್ಟ್ ಮೂವಿ ವೈರಲ್ ಆಗಿದೆ. ಹದಿಹರೆಯದ ಹುಡುಗಿಯೊಬ್ಬಳು ದಾರಿಯಲ್ಲಿ ಬರುವಾಗ ಮೊದಲ ಬಾರಿ ಮುಟ್ಟಾಗಿದ್ದಾಳೆ. ಮೊದಲ ಬಾರಿಯಾದ್ದರಿಂದ ರಕ್ತ ಕಂಡು ಹೆದರಿದ್ದಾಳೆ. ಇದರ ಮಧ್ಯೆ, ಅವಳು ಮನೆಯತ್ತ ನಡೆದು ಹೋಗಲೇಬೇಕು. ಈಗ ದಾರಿಯಲ್ಲಿ ಸಿಕ್ಕವರೆಲ್ಲ ಆಕೆಯ ಬಟ್ಟೆಯಲ್ಲಿ ರಕ್ತದ ಕಲೆ ಕಂಡು ಆಡಿಕೊಂಡು ನಗುತ್ತಿದ್ದಾರೆ. ಹುಡುಗಿಯೊಬ್ಬಳು ಕೂಡಾ ಸಹಾಯಕ್ಕೆ ಬರುವುದು ಬಿಟ್ಟು ತನ್ನ ಗೆಳೆಯನಿಗೆ ಕರೆದು ಅವಳತ್ತ ತೋರುತ್ತಿದ್ದಾಳೆ...

ದಿನ ಏಳಾದರೂ ನಿಲ್ಲದ ಪೀರಿಯಡ್ಸ್ ಗೆ ಕಾರಣವೇ ಇದು!

Tap to resize

Latest Videos

undefined

ಈ ಎಲ್ಲ ಮುಜುಗರದಿಂದ ಮತ್ತಷ್ಟು ಹೆದರಿದ ಹುಡುಗಿ ಅಲ್ಲೇ ನಿಂತಿದ್ದ ಸ್ಕೂಟಿಯೊಂದಕ್ಕೆ ಒರಗಿ ನಿಲ್ಲುತ್ತಾಳೆ. ಅಷ್ಟರಲ್ಲಿ ಆ ಸ್ಕೂಟಿಯ ಮಾಲೀಕ, ಯುವಕನೊಬ್ಬ ಬಂದು ಅವಳಿಗೆ ಏಳಲು ಹೇಳುತ್ತಾನೆ. ಏನೇ ಹೇಳಿದರೂ ಅವಳು ಕದಲದೆ ದುಃಖಿಸುತ್ತಾ ನಿಂತಿದ್ದನ್ನು ನೋಡಿದಾಗ ಆಕೆಯ ಕೈಕಾಲುಗಳಲ್ಲಿ ರಕ್ತ ಕಂಡು ಆತನಿಗೆ ಪರಿಸ್ಥಿತಿ ಅರ್ಥವಾಗುತ್ತದೆ. ತಕ್ಷಣ ಆಕೆಗೆ ಧೈರ್ಯ ಹೇಳುವ ಆತ ತಾನೇನಾದರೂ ಮಾಡುವುದಾಗಿ ಅಭಯ ನೀಡುತ್ತಾನೆ.

ಅಲ್ಲೇ ಹತ್ತಿರದಲ್ಲಿ ನಿಂತ ಯುವತಿಯನ್ನು ಕರೆದು ವಿಷಯ ತಿಳಿಸಿ, ಹುಡುಗಿಗೆ ಸಹಾಯ ಮಾಡುವಂತೆ ಕೋರುತ್ತಾನೆ. ಆಗ ಆಕೆ ಅವನಿಗೆ ಸ್ಯಾನಿಟರಿ ಪ್ಯಾಡ್ ತರುವಂತೆ ಹೇಳಿ ತಾನು ಹುಡುಗಿಯತ್ತ ಹೋಗಿ ಇದು ಎಲ್ಲ ಹುಡುಗಿಯರಿಗೂ ಆಗುತ್ತದೆ, ಭಯ ಬೇಡ ಎಂದು ಧೈರ್ಯ ಹೇಳುತ್ತಾಳೆ. ಅಷ್ಟರಲ್ಲಿ ಯುವಕನು ಪ್ಯಾಡ್ ತರುತ್ತಾನೆ. ಯುವತಿಯು ಹುಡುಗಿಯನ್ನು ಹೋಟೆಲ್ ವಾಶ್‌ರೂಂಗೆ ಕರೆದುಕೊಂಡು ಹೋಗಿ ಬರುತ್ತಾಳೆ. ಅಷ್ಟರಲ್ಲಿ ಯುವಕನು ಹುಡುಗಿಗೆ ಕ್ಯಾಬ್ ಬುಕ್ ಮಾಡಿ, ಆಕೆಯ ಕೈಗಿಷ್ಟು ಹಣ ಕೊಟ್ಟು ಮನೆಗೆ ಕಳುಹಿಸುತ್ತಾನೆ. ಅಪರಿಚಿತ ಹುಡುಗಿಗೆ ಈತ ಮಾಡಿದ ಸಹಾಯ ನೋಡಿದ ಯುವತಿ ಆತನನ್ನು ಕಾಫಿಗೆ ಕರೆಯುತ್ತಾಳೆ... ನನ್ನನ್ನು ಕಾಫಿಗೆ ಕರೆಯುತ್ತಿರುವ ಮೊದಲ ಹುಡುಗಿ ನೀನು ಎಂದು ಅವನು ಹೇಳುವಲ್ಲಿಗೆ ಕತೆ ಮುಗಿಯುತ್ತದೆ...

ಪೀರಿಯಡ್ಸ್‌‌ ನೋವಿದ್ಯಾ? ಡಯಟ್ ಹೀಗಿರಲಿ...

ಇಂಥ ನಡತೆಯ ಸೆನ್ಸಿಬಲ್ ಹುಡುಗ ಸಿಕ್ಕರೆ ಯಾವ ಹುಡುಗಿ ತಾನೇ ಕಾಫಿಗೆ ಕರೆಯುವುದಿಲ್ಲ ಹೇಳಿ? ಆದರೆ, ಇಂಥ ಹುಡುಗರು ಅಪರೂಪದಲ್ಲಿ ಅಪರೂಪವೆನ್ನುವುದೇ ಹುಡುಗರ ಜಾತಿಗೆ ಅಪವಾದ. ದಾರಿಯಲ್ಲಿ ಅಷ್ಟೆಲ್ಲ ಹುಡುಗರಿದ್ದರಲ್ಲ, ಅವರಲ್ಲಿ ಯಾರಿಗೂ ಈತನಂತೆ ವರ್ತಿಸಲು ಸಾಧ್ಯವಾಗಲಿಲ್ಲವೇಕೆ? ಆಡಿಕೊಂಡು, ನೋಡಿಕೊಂಡು ನಗುವ ಯುವಕರ ಮಧ್ಯೆ ಈತ ಹೀರೋವಾಗಿದ್ದು ವಿಶೇಷವೇನಲ್ಲ. ಆದರೆ ಎಲ್ಲ ಹುಡುಗರೂ ಹೀರೋಗಳೇಕೆ ಆಗಿರುವುದಿಲ್ಲ? ಹೀಗೊಂದು ಪ್ರಶ್ನೆ ಬಂದರೆ ಬೊಟ್ಟು ಹೋಗುವುದು ಅವರ ಪೋಷಕರತ್ತಲೇ. ಹೌದು, ನಮ್ಮ ಮಗನನ್ನು ನಾವು ಹುಡುಗಿಯರ ಬಗ್ಗೆ, ಅವರ ಪೀರಿಯಡ್ಸ್ ಬಗ್ಗೆ ಸೆನ್ಸಿಟೈಸ್ ಮಾಡದಿರುವುದು ನಮ್ಮದೇ ತಪ್ಪು. 

ಸಾಮಾನ್ಯವಾಗಿ ಪೋಷಕರಿಗೆ ತಮ್ಮ ಮಗಳಿಗೆ ಸೆನ್ಸಿಬಲ್ ಅಳಿಯ ಬೇಕೆಂಬ ಕನಸಿರುತ್ತದೆ. ಹಾಗೆ ಕನಸು ಕಾಣುವುದಕ್ಕೂ ಮೊದಲು ಇಂಥ ಸೆನ್ಸಿಬಲ್ ಹುಡುಗ ತಮ್ಮ ಮಗನಾಗುವಂತೆ ತಯಾರು ಮಾಡುವ ಅಗತ್ಯವಿದೆ. ಮಗನ ಬಳಿ ಹೇಗೆ ಪೀರಿಯಡ್ಸ್ ಬಗ್ಗೆ ಮಾತನಾಡುವುದು, ಯಾವಾಗ ಮಾತನಾಡುವುದು ಎಂದೆಲ್ಲ ಗೊಂದಲ, ಮುಜುಗರ ಕಾಡಬಹುದು.

ಸಾಮಾನ್ಯವಾಗಿ ಹುಡುಗಿಯರು 10ನೇ ವಯಸ್ಸಿನ ಬಳಿಕ ಯಾವಾಗಾದರೂ ಮೊದಲ ಬಾರಿ ಮುಟ್ಟಾಗಬಹುದು. ಅದೇ ವಯಸ್ಸು ಮಗನಿಗೆ ಈ ವಿಷಯದ ಕುರಿತು ತಿಳಿ ಹೇಳಲು ಸರಿಯಾದ ಸಮಯ. ಏಕೆಂದರೆ, ಆತನ ತರಗತಿಯಲ್ಲಿ ಅವನದೇ ವಯಸ್ಸಿನ ಹುಡುಗಿಯರಿರುತ್ತಾರೆ. ಅವರ ದೇಹದ ಬದಲಾವಣೆಗಳನ್ನು ಈತ ಗೌರವದಿಂದ ಸಾಮಾನ್ಯವೆಂಬಂತೆ ಕಾಣುವ ಅಗತ್ಯ ಇರುತ್ತದೆ. ಇದಕ್ಕಾಗಿ ಮಗ 5 ಅಥವಾ 6ನೇ ತರಗತಿಯಲ್ಲಿರುವಾಗಲೇ ಅವನಿಗೆ ಪೀರಿಯಡ್ಸ್ ಕುರಿತು ತಿಳಿವಳಿಕೆ ನೀಡಲು ಶುರು ಮಾಡಬೇಕು. 

'ಆ ದಿನಗಳ'ಲ್ಲಿ ಏನು ತಿನ್ನಬೇಕು?

ಹೀಗೆ ಮಾಡಬಹುದು... ನಿಮ್ಮ ಮಗನೊಂದಿಗೆ ಟಿವಿ ನೋಡುತ್ತಾ ಕುಳಿತಾಗ ಸ್ಯಾನಿಟರ್ ಪ್ಯಾಡ್ ಕುರಿತ ಜಾಹಿರಾತು ಬರುತ್ತದೆಂದುಕೊಳ್ಳಿ. ವಿಷಯವನ್ನು ಮಾತಿಗೆಳೆಯಲು ಅದೇ ಸರಿಯಾದ ಸಂದರ್ಭ. ಅದು ಏನು, ಏಕೆ ಬಳಸುತ್ತಾರೆ ಕೇಳಿ. ಆತ ಉತ್ತರಕ್ಕಾಗಿ ತಡಬಡಿಸುತ್ತಿದ್ದಾಗ ನೀವೇ ವಿವರಿಸಿ. ಈ ಸಂದರ್ಭದಲ್ಲಿ ನೀವೇ ಮುಜುಗರ ಅನುಭವಿಸಿದರೆ, ಮಗನಿಗೆ ಇದೇನೋ ನಿಗೂಢ ವಿಷಯ ಅಥವಾ ಅವಮಾನಕಾರಿ ವಿಷಯ ಎನಿಸಬಹುದು. ಹಾಗಾಗಿ, ಆರಾಮಾಗಿ ಎಲ್ಲವನ್ನೂ ವಿವರಿಸಿ, ಆತ ಕೇಳುವ ಪ್ರಶ್ನೆಗಳಿಗೆಲ್ಲ ಉತ್ತರಿಸುತ್ತಾ ಬನ್ನಿ. 

ಹೀಗೆ ಹೇಳಬಹುದು... 

ನೀನು ಹದಿಹರೆಯ ತಲುಪಿದಾಗ ಹೇಗೆ ಧ್ವನಿ ಬದಲಾಗುತ್ತದೋ, ಹಾಗೆಯೇ ಹುಡುಗಿಯರು ಈ ವಯಸ್ಸಿಗೆ ಬಂದಾಗ ಅವರು ಮುಟ್ಟಾಗುತ್ತಾರೆ. ನಿನ್ನ ದೇಹದಲ್ಲಿ ಕೆಲವೊಂದು ಬದಲಾವಣೆಗಳಾಗುವಂತೆಯೇ ಅವರ ದೇಹದಲ್ಲೂ ಆಗುತ್ತದೆ. ಅವರಿಗೆ ಬ್ಲೀಡಿಂಗ್ ಆಗಬಹುದು. ಮೊದಲ ಬಾರಿ ಹೀಗಾದಾಗ ಅವರ ಬಟ್ಟೆಯಲ್ಲಿ ಕಲೆ ಕಾಣಬಹುದು. ಆಗ ನೀನು ಅವಳನ್ನು ನೋಡಿ ನಗುವುದು, ದೂರವಿಡುವುದು ಮಾಡಕೂಡದು ಎಂದು ತಿಳಿಸಿ, ಆಕೆ ಅನುಭವಿಸುವ ಹೊಟ್ಟೆನೋವಿನಿಂದ ಹಿಡಿದು ಇತರೆ ಸಂಗತಿಗಳನ್ನು ವಿವರಿಸಿ.

ಇದರೊಂದಿಗೆ, ನಾನೂ ಕೂಡಾ ಮುಟ್ಟಾಗುತ್ತೇನೆ. ಆಗ ಹೀಗೆ ಆಗುತ್ತದೆ. ಅದಾಗುವುದು ಸಂಪೂರ್ಣ ನಾರ್ಮಲ್. ಇಲ್ಲದಿದ್ದಲ್ಲಿ ನೀನು ಹುಟ್ಟುವುದೇ ಸಾಧ್ಯವಿರುತ್ತಿರಲಿಲ್ಲ ಎಂದು ತಿಳಿಸಿ ನಿಮ್ಮ ಮುಟ್ಟಿನ ಅನುಭವಗಳನ್ನು ಹೇಳಿಕೊಳ್ಳಿ. ಅಮ್ಮನೆಂದರೆ ಮಕ್ಕಳಿಗೆ ಮೊದಲ ಗುರು. ಹೀಗಾಗಿ, ಅಮ್ಮನೂ ಈ ಎಲ್ಲ ಹಂತ ದಾಟಿದ್ದಾಳೆ ಎಂಬುದು ಅರಿವಾದಾಗ ಅವರು ಹೆಣ್ಣುಮಕ್ಕಳ ಬಗ್ಗೆ ಗೌರವ ಬೆಳೆಸಿಕೊಳ್ಳುತ್ತಾರೆ. ಜೊತೆಗೆ, ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಕೂಡಾ ತಿಳಿಸಿ ಹೇಳಿ. ಹೆಣ್ಣು ಮಕ್ಕಳೊಂದಿಗೆ ಆಡುವಾಗ ಹೇಗೆ ಮುಟ್ಟಬಹುದು ಹಾಗೂ ಅವರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ವಿವರಿಸಿ. 

ವಿಡಿಯೋದಲ್ಲಿರುವಂಥ ಯುವಕ ಮನೆಮನೆಯಲ್ಲೂ ತಯಾರಾದರೆ, ಸಮಾಜ ಅದೆಷ್ಟು ಸುಂದರವಾಗಿರುತ್ತದಲ್ಲವೇ? 

"

click me!