ಮಳೆ, ಜತೆಗೆ ಹಲಸಿನ ಹಪ್ಪಳ, ಮಜಾನೇ ಬೇರೆ, ಇಲ್ಲಿದೆ ರೆಸಿಪಿ...

By Web Desk  |  First Published May 26, 2019, 10:32 AM IST

ಮೇ ತಿಂಗಳು ಬಂತೆಂದರೆ ಮಾವು, ಹಲಸಿನ ಸುಗ್ಗಿ. ಹಲವೆಡೆ ಹಲಸಿನ್ನೂ ಹಣ್ಣಾಗದೆ, ತನ್ನನ್ನು ಹಪ್ಪಳ ಮಾಡಿ ನೋಡಿ ಎಂದು ಕೈಬೀಸಿ ಕರೆಯುತ್ತಿದೆ. ಹಾಗಿದ್ದರೆ ಹಲಸಿನ ಕಾಯಿ ಹಪ್ಪಳ ಮಾಡೋದು ಹೇಗೆ, ನೋಡೋಣ ಬನ್ನಿ.


ಹಲಸಿನ ಸೀಸನ್ ಎಂದರೆ ಚಿಪ್ಸ್, ಹಲಸಿನ ದಿಂಡಿನ ಪಲ್ಯ, ಹಪ್ಪಳ, ಸಂಡಿಗೆ, ಮೂಳಕ, ಹಲಸಿನ ಹಣ್ಣಿನ ಪಾಯಸ, ಹಲ್ವಾ ಎಂದು ಹತ್ತು ಹಲವು ತಿನಿಸುಗಳು ನಾಲಿಗೆಯ ಚಪಲ ತೀರಿಸುತ್ತವೆ. ಈಗಿನ್ನೂ ಹಲಸಿನ ಕಾಯಿ ತನ್ನ ರಾಜ್ಯಭಾರ ಜೋರಾಗಿ ನಡೆಸುತ್ತಿದೆ. ಕರಾವಳಿ ಹಾಗೂ ಮಲೆನಾಡಿಗೆ ಹೋದರೆ ಮನೆಗಳ ತಾರಸಿಯಲ್ಲಿ ಮಹಿಳೆಯರು ಹಪ್ಪಳ ಒಣಸುವ ದೃಶ್ಯ ಈಗ ಸರ್ವೇಸಾಮಾನ್ಯ. ಬೇಸಿಗೆಯಲ್ಲಿ ಸಾಕಷ್ಟು ಹಪ್ಪಳಗಳನ್ನು ಒಣಗಿಸಿಟ್ಟುಕೊಂಡರೆ ಮಳೆಗಾಲದಲ್ಲಿ ಜಿಟಿಜಿಟಿ ಸದ್ದು ಆಲಿಸುತ್ತಾ ಕಟಿ ಕಟಿ ಹಪ್ಪಳವನ್ನು ಕರುಂ ಕುರುಂ ಎಂದು ತಿನ್ನಬಹುದು. ಹಾಗಾದರೆ ಹಲಸಿನ ಹಪ್ಪಳ ಮಾಡುವುದು ಹೇಗೆ?

ಹಪ್ಪಳ ಮಾರಿ ತಿಂಗಳಿಗೆ 3 ಲಕ್ಷ ಆದಾಯ

ಬೇಕಾಗುವ ಸಾಮಾಗ್ರಿಗಳು:

Tap to resize

Latest Videos

-1 ಮಧ್ಯಮ ಗಾತ್ರದ ಹಲಸಿನ ಕಾಯಿ

- 2 ಚಮಚ ಕೆಂಪು ಮೆಣಸಿನ ಪುಡಿ

- ಸ್ವಲ್ಪ ಹುಣಸೆ ಹುಳಿ

-ರುಚಿಗೆ ತಕ್ಕಷ್ಟು ಉಪ್ಪು

-2 ಸಣ್ಣ ಪ್ಲ್ಯಾಸ್ಟಿಕ್ ಶೀಟ್‌ಗಳು, 1 ದೊಡ್ಡ ಪ್ಲ್ಯಾಸ್ಟಿಕ್ ಶೀಟ್ ಅಥವಾ ಕಾಟನ್ ಬಟ್ಟೆ

ಹೊಟ್ಟೆ ತುಂಬುತ್ತೆ, ಬಾಯಿಗೂ ರುಚಿ ಎನಿಸುವ ಅಕ್ಕಿ ಹಪ್ಪಳ ಮಾಡೋದು ಹೇಗೆ?

ಮಾಡುವ ವಿಧಾನ:

ಹಲಸಿನ ಕಾಯಿಯನ್ನು ಹೆಚ್ಚಿ ತೊಳೆಗಳನ್ನು ಬಿಡಿಸಿ. ಹಲಸಿನ ಕಾಯಿ ಸ್ವಲ್ಪ ಸಿಹಿ ಪಡೆದಿದ್ದರೆ ಉತ್ತಮ. ಈ ತೊಳೆಗಳನ್ನುಇಡ್ಲಿ ಪಾತ್ರೆಯಲ್ಲಿ ಚೆನ್ನಾಗಿ ಬೇಯಿಸಿ. ಗ್ರೈಂಡರ್‌ನಲ್ಲಿ ಬೇಯಿಸಿದ ಸೊಳೆಯನ್ನು ಹಾಕಿ, ಅದಕ್ಕೆ ಉಪ್ಪು, ಖಾರ ಹಾಗೂ ಸ್ವಲ್ಪ ಹುಳಿ ಹಾಕಿ. ಪೂರ್ತಿ ನುಣ್ಣಗೆ ತಿರುಗಿಸಿ. (ಸಾಮಾನ್ಯವಾಗಿ ಈ ತೊಳೆಗಳನ್ನು ಒನಕೆಯಿಂದ ಕುಟ್ಟಿ ಪೇಸ್ಟ್ ಮಾಡಲಾಗುತ್ತದೆ. ) ಈ ಪೇಸ್ಟನ್ನು ತೆಗೆದುಕೊಂಡು ಒದ್ದೆ ಕೈಯ್ಯಲ್ಲಿ ನಿಂಬೆಹಣ್ಣಿನ ಗಾತ್ರದ ಉಂಡೆ ಮಾಡಿಕೊಳ್ಳಿ. ನಂತರ ಎರಡು ಪ್ಲ್ಯಾಸ್ಟಿಕ್ ಶೀಟ್ (ಪಾಲಿಥಿನ್)ಗಳಿಗೆ ಎಣ್ಣೆ ಸವರಿಕೊಳ್ಳಿ. ಒಂದು ಶೀಟ್ ಮೇಲೆ ಹಲಸಿನ ಉಂಡೆಯಿಟ್ಟು ಮೇಲೆ ಇನ್ನೊಂದು ಶೀಟ್‌ನಿಂದ ಮುಚ್ಚಿಬಿಡಿ. ಇದರ ಮೇಲೆ ಮರದ ಮಣೆ ಇಟ್ಟು ಒತ್ತಿ. ಬಳಿಕ ನಿಧಾನವಾಗಿ, ಮೇಲಿನ ಪಾಲಿಥಿನ್ ಶೀಟ್ ಎತ್ತಿದರೆ ಚಪಾತಿಯಂತೆ ಹಿಟ್ಟು ಹರಡಿರುತ್ತದೆ. ಇವುಗಳನ್ನು ದೊಡ್ಡದಾದ ಪ್ಲ್ಯಾಸ್ಟಿಕ್ ಇಲ್ಲವೇ ಸ್ವಚ್ಛವಾದ ಬಟ್ಟೆ ಮೇಲೆ ಒಂದರ ಪಕ್ಕ ಒಂದನ್ನು ಹಾಕಿ 3-4 ಗಂಟೆಗಳ ಕಾಲ ಬಿಸಿಲಿನಲ್ಲಿಡಿ. ನಂತರ ಒಮ್ಮೆ ಎಲ್ಲ ಹಪ್ಪಳಗಳನ್ನು ತಿರುವಿ ಹಾಕಿ. ಮತ್ತೆ 3-4 ಗಂಟೆ ಬಿಡಿ. ಎರಡರಿಂದ ಮೂರು ದಿನ ಒಣಗಿಸಿದ ಬಳಿಕ ಹಪ್ಪಳಗಳನ್ನು ಡಬ್ಬಿಯಲ್ಲಿ ಹಾಕಿ ತೆಗೆದಿಟ್ಟುಕೊಳ್ಳಿ. ಬೇಕೆಂದಾಗ ಎಣ್ಣೆಯಲ್ಲಿ ಕರಿದರೆ ಆಯ್ತು. ಇದನ್ನು ವರ್ಷಗಟ್ಟಲೆ ಇಟ್ಟುಕೊಳ್ಳಬಹುದು. 

click me!