
ಮಕ್ಕಳಾದ ಮೇಲೆ ದಂಪತಿ ನಡುವೆ ಆಗಾಗ ಕೆಲವೊಂದು ವಾಗ್ವಾದಗಳು ನಡೆಯುವುದು ಸಾಮಾನ್ಯ. ಮಕ್ಕಳನ್ನು ಶಿಸ್ತಿನಿಂದ ಬೆಳೆಸಬೇಕೆನ್ನುವವರು ಒಬ್ಬರಾದರೆ ಗೆಳೆಯರಂತೆ ನೋಡಿಕೊಳ್ಳಬೇಕು ಎನ್ನುವವರು ಮತ್ತೊಬ್ಬರು. ಹೀಗೆ ಎತ್ತು ಏರಿಗೆಳೆದರೆ ಕೋಣ ನೀರಿಗೆಳೆವ ಚಿತ್ರಣಗಳು ಕಾಮನ್. ಮಕ್ಕಳ ವಿಷಯದಲ್ಲಿ ಈ ಕೆಳಗಿನ ಸಂಗತಿಗಳಿಗಾಗಿ ದಂಪತಿ ಜಗಳವಾಡುತ್ತಾರೆ.
1. ಯಾವ ರೀತಿಯ ಪೇರೆಂಟಿಂಗ್ ಬೆಸ್ಟ್?
ಈ ಒಂದು ವಾದವೇ ಉಳಿದೆಲ್ಲ ವಾದಗಳಿಗೆ ನಾಂದಿ ಹಾಡುವುದು. ಯಾರು ನಂಬಿರುವ ಪೇರೆಂಟಿಂಗ್ ರೀತಿ ಬೆಸ್ಟ್ ಎಂಬುದು. ಪೋಷಕರಲ್ಲಿ ಒಬ್ಬರು ಸ್ಟ್ರಿಕ್ಟ್ ಆಗಿದ್ದರೆ ಮಕ್ಕಳು ಶಿಸ್ತು ಕಲಿಯುತ್ತಾರೆ ಎಂದು ನಂಬಿದ್ದರೆ, ಮತ್ತೊಬ್ಬರು ಫ್ರೆಂಡ್ಲಿಯಾಗಿರಬೇಕು ಹಾಗೂ ಮಕ್ಕಳ ಜೀವನದ ಪ್ರತಿ ವಿಷಯಕ್ಕೂ ಮೂಗು ತೂರಿಸದೆ ಅವರನ್ನು ಫ್ರೀಯಾಗಿ ಬಿಡಬೇಕು ಎಂದು ನಂಬಿದ್ದಾಗ ವಾದಗಳು ಸಾಮಾನ್ಯ. ಇಬ್ಬರೂ ತಮಗಿಷ್ಟ ಬಂದಂತೆ ಪೇರೆಂಟಿಂಗ್ ಮಾಡಿದಾಗ ಮಕ್ಕಳಲ್ಲೂ ತಾವು ಹೇಗಿರಬೇಕೆಂಬ ಗೊಂದಲ ಮೂಡುತ್ತದೆ. ನಿಧಾನವಾಗಿ ಅಪ್ಪನ ಬಳಿ ಹೇಗಿರಬೇಕು, ಅಮ್ಮನ ಬಳಿ ಹೇಗಿರಬೇಕು ಎಂಬ ಅಡ್ಡದಾರಿಗಳನ್ನು ಮಕ್ಕಳು ಹುಡುಕಿಕೊಳ್ಳಬಹುದು.
ಮಕ್ಕಳನ್ನು ಗೆಳೆಯರನ್ನಾಗಿ ಮಾಡಿಕೊಳ್ಳುವುದು ಹೇಗೆ?
2. ಮಗು ತಪ್ಪು ಮಾಡಿದಾಗ ಹೇಗೆ ಶಿಕ್ಷೆ ನೀಡಬೇಕು?
ಮಗು ತಪ್ಪು ಮಾಡಿದಾಗ ಒಬ್ಬರು ಸೀದಾ ಹೊಡೆಯುವುದೋ, ಸಿಕ್ಕಾಪಟ್ಟೆ ಗದರಿಸುವುದೋ ಮಾಡಬಹುದು. ಇದರಿಂದ ಇನ್ನೊಮ್ಮೆ ಮಗು ಆ ತಪ್ಪನ್ನು ಮಾಡುವುದಿಲ್ಲ ಎಂಬುದು ಅವರ ನಂಬಿಕೆ. ತಪ್ಪು ಮಾಡಿದಾಗ ಮಗುವಿಗೆ ಹೊಡೆಯದೆ ಅವರಿಗೆ ತಿಳಿ ಹೇಳಿದರೆ ಸಾಕೆನ್ನುವುದು ಮತ್ತೊಬ್ಬರ ಅಭಿಪ್ರಾಯ. ಇಂಥ ಸಂದರ್ಭದಲ್ಲಿ ವಾಗ್ವಾದಗಳು ಹುಟ್ಟೇ ಹುಟ್ಟುತ್ತವೆ. ಆದರೆ, ಈ ಎರಡರ ಮಧ್ಯದ ಹಂತದಲ್ಲಿ ಮಗುವನ್ನು ನಿಭಾಯಿಸುವುದು ಜಾಣತನ. ಮಗು ಏಕೆ ಹಾಗೆ ಮಾಡಿತು ಎಂಬುದನ್ನು ನಿಧಾನವಾಗಿ ಕೇಳಿಸಿಕೊಂಡು, ಆ ತಪ್ಪಿನಿಂದಾಗಬಹುದಾದ ಪರಿಣಾಮಗಳನ್ನು ವಿವರಿಸಬೇಕು. ಕ್ಷಮೆ ಕೇಳಲು ಅವಕಾಶ ನೀಡಬೇಕು. ಮಗು ತಪ್ಪನ್ನು ರಿಪೀಟ್ ಮಾಡಿದಾಗ ಗದರಬಹುದು.
3. ಮಗುವಿಗಾಗಿ ಎಷ್ಟು ಖರ್ಚು ಮಾಡಬೇಕು?
ಈ ಸಂಗತಿಯು ದಂಪತಿಯಿಬ್ಬರೂ ಬೆಳೆದು ಬಂದ ಪರಿಸರ ಹಾಗೂ ಅವರ ಪ್ರಸ್ತುತ ಆರ್ಥಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಮಗು ಕೇಳಿದ್ದೆಲ್ಲ ಕೊಟ್ಟರೆ ಅದಕ್ಕೆ ದುಡ್ಡಿನ ಅಥವಾ ವಸ್ತುವಿನ ಬೆಲೆ ಅರಿವಾಗುವುದಿಲ್ಲ. ಹಾಗಂತ ಏನೂ ಕೊಡಿಸದಿದ್ದರೆ ಮಗು ಸಂತೋಷವಾಗಿರುವುದಿಲ್ಲ. ಇದಕ್ಕಾಗಿ ದಂಪತಿ ನಡುವೆ ಜಗಳ ಬರಬಹುದು. ಹೀಗಾಗಿ ಎಲ್ಲವನ್ನೂ ಬಜೆಟ್ ಮಾಡಿ. ಇಂಥ ವರ್ತನೆಗಾಗಿ ಇದು ಎಂದು ವಸ್ತುಗಳನ್ನು ಕೊಡಿಸಿದರೆ ಮಕ್ಕಳಲ್ಲಿ ಪಾಸಿಟಿವ್ ವರ್ತನೆಯನ್ನು ಬೆಂಬಲಿಸಿದಂತಾಗುತ್ತದೆ. ಅಲ್ಲದೆ, ಮಕ್ಕಳಲ್ಲಿ ನೀವು ಕಾಣಬೇಕಿರುವ ಬದಲಾವಣೆ ಒಮ್ಮೊಮ್ಮೆ ತೋರಿದಾಗಲೂ ಇಂತಿಷ್ಟು ಎಂದು ಹಣ ನೀಡಿ. ಅದನ್ನು ಸೇವ್ ಮಾಡಿ ಹೆಚ್ಚಿನ ಹಣ ಒಟ್ಟಾದಾಗ ಬೇಕಾದ್ದನ್ನು ಕೊಳ್ಳಬಹುದು ಎಂದು ತಿಳಿಸಿ. ಈ ಸಂದರ್ಭದಲ್ಲಿ ಬೋನಸ್ ಆಗಿ ನೀವು ಬೇರೆ ವಸ್ತುಗಳನ್ನೂ ಕೊಡಿಸಬಹುದು.
ಮಕ್ಕಳ ಸಿಟ್ಟನ್ನು ನಿಭಾಯಿಸುವುದು ಹೇಗೆ?
4. ಮಗುವಿಗೆ ಆಹಾರ ಏನು ಕೊಡಬೇಕು?
ಹಲವು ಮನೆಗಳಲ್ಲಿ ಈ ವಿಷಯಕ್ಕೂ ದಂಪತಿ ನಡುವೆ ವಾದವಿವಾದಗಳೇಳುತ್ತವೆ. ಮಗುವಿಗೆ ಕೇವಲ ಹೆಲ್ದೀ ಫುಡ್ ನೀಡಬೇಕೆಂಬ ಅಭಿಪ್ರಾಯ ಒಬ್ಬರದ್ದಾದರೆ, ಆಗಾಗ ಜಂಕ್ ತಿಂದರೂ ತಲೆ ಕೆಡಿಸಿಕೊಳ್ಳದ ಪೇರೆಂಟ್ ಮತ್ತೊಬ್ಬರು. ಜಂಕ್ ರುಚಿ ನೋಡಿದ್ದರಿಂದ ಮಗು ತರಕಾರಿಗಳನ್ನು ತಿನ್ನುತ್ತಿಲ್ಲ ಎಂಬ ಅಳಲು ಒಬ್ಬರದಾದರೆ, ತರಕಾರಿಯನ್ನು ಮಕ್ಕಳಿಗಿಷ್ಟವಾಗುವಂತೆ ಅಡಿಗೆಯಲ್ಲಿ ಸೇರಿಸಿ ಕೊಡಲು ಬಾರದೇ ಎಂಬ ಬೈಗುಳ ಇನ್ನೊಬ್ಬರದು. ಒಟ್ಟಿನಲ್ಲಿ ಹಿತಮಿತವಾಗಿ ಜಂಕ್ ನೀಡಿದರೆ ಅಡ್ಡಿಯೇನಿಲ್ಲ. ಆದರೆ, ಮನೆಯಡುಗೆ ನ್ಯೂಟ್ರಿಷಿಯಸ್ ಆಗಿರುವುದು ಮುಖ್ಯ.
5. ಮಕ್ಕಳಿಗೆ ಏನು ಹೇಳಿಕೊಡಬೇಕು?
ಇದೂ ಪೋಷಕರು ಬೆಳೆದು ಬಂದ ಪರಿಸರವನ್ನು ಅವಲಂಬಿಸಿರುತ್ತದೆ. ಪೋಷಕರಲ್ಲಿ ಒಬ್ಬರು ಸಾಂಪ್ರದಾಯಿಕ ವಾತಾವರಣದಲ್ಲಿ ಬೆಳೆದು ಬಂದಿದ್ದು, ಮತ್ತೊಬ್ಬರು ಹೆಚ್ಚು ಫ್ರೀಯಾಗಿ ಬೆಳೆದಿದ್ದರೆ ಮಕ್ಕಳಿಗೆ ಎಂಥ ಮೌಲ್ಯಗಳನ್ನು ಕಲಿಸಬೇಕೆಂಬ ಗೊಂದಲ ಆರಂಭವಾಗುತ್ತದೆ. ಈ ಗೊಂದಲ ಮಕ್ಕಳಲ್ಲೂ ಮುಂದುವರಿಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.