
ಆಹಾರದಲ್ಲಿ, ದ್ರವ ಪದಾರ್ಥಗಳಿಗೂ ಒಂದು ವಿಶೇಷ ಸ್ಥಾನವಿದೆ. ಭೌಗೋಳಿಕ ಪರಿಸರಕ್ಕೆ ತಕ್ಕಂತೆ ಪಾನೀಯಗಳು ನಮ್ಮ ಆಹಾರದೊಂದಿಗೆ ಜಾಗ ಪಡೆದುಕೊಳ್ಳುತ್ತವೆ. ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ ಇಂಥದ್ದೊಂದು ಹೊಂದಾಣಿಕೆಯನ್ನು ನೋಡಬಹುದು. ಹಾಗೆಯೇ ನಿಂಬೆಹಣ್ಣಿನಿಂದ ಮಾಡುವ ಲೆಮನೇಡ್'ಗೂ ಅಂದರೆ ನಿಂಬೆಹಣ್ಣಿನ ಶರಬತ್ತು ಅಥವಾ ಪಾನೀಯಕ್ಕೂ ಅಂಥ ವಿಶೇಷ ಸ್ಥಾನವಿದೆ. ನಾವೆಲ್ಲರೂ ಸೇವಿಸುವ ಶರಬತ್ತು ಎಂದು ಸೇವಿಸುವ ಲೆಮನೇಡ್‌ಗೂ ಒಂದು ಇತಿಹಾಸವಿದೆ.
ಅದಕ್ಕೂ ಮೊದಲು ನಿಂಬೆ ಹಣ್ಣಿನ ಮೂಲವನ್ನು ತಿಳಿಯೋಣ. ನಿಂಬೆಹಣ್ಣು ಯಾರು ಮೊದಲು ಬೆಳೆದರು ಗೊತ್ತೆ? ಮೆಡಟರೇನಿಯನ್ ಕಾಲದಲ್ಲಿ ನಿಂಬೆ ಹಣ್ಣಿನ ಗಿಡವನ್ನು ಅಲಂಕಾರಕ್ಕಾಗಿ ಬೆಳೆಯಲಾಗುತ್ತಿತ್ತಂತೆ. ಇಲ್ಲಿಗೆ ನಿಂಬೆ ಹಣ್ಣಿನ ಗಿಡ ಬಂದಿದ್ದು ಅಸ್ಸಾಮಿನಿಂದ. ಅಲ್ಲಿಂದ ಬರ್ಮಾ, ಚೀನಾ, ಪರ್ಷಿಯಾ ಮೂಲಕ ಅರಬ್ ದೇಶಗಳಲ್ಲಿ ಹರಿದಾಡಿ, ಮೆಟರೇನಿಯನ್ ಪ್ರದೇಶಕ್ಕೆ ಬಂದಿತ್ತು. ಹತ್ತನೆಯ ಶತಮಾನದಲ್ಲಿ ಬರೆಯಲಾದ ಅರೇಬಿಕ್ ಕೃತಿ ಕಸ್ತಾಸ್ ಅಲ್ ರುಮಿಯಲ್ಲಿ ನಿಂಬೆ ಹಣ್ಣು ಬೆಳೆಯುವ ಉಲ್ಲೇಖವೂ ಬರುತ್ತದೆ. ಹನ್ನೆರಡನೆಯ ಶತಮಾನದ ಅಂತ್ಯದಲ್ಲಿ ಇಬನ್ ಜಾಮಿ, ‘ವೈದ್ಯರೊಬ್ಬರು ಮುಸ್ಲಿಮ್ ನಾಯಕ ಸಲಾದಿನ್‌ಗೆ ಸೂಚಿಸಿದ ಮೇಲೆ ಮೆಡಿಟರೇನಿಯನ್ ಪ್ರದೇಶದಲ್ಲಿ ನಿಂಬೆಹಣ್ಣಿನ ಬೆಳೆ ಹೆಚ್ಚಿತು' ಎಂದು ಬರೆಯದ ದಾಖಲೆಯೊಂದಿದೆ.
ಈಜಿಪ್ತಿಯನ್ನರಿಗೆ ನಿಂಬೆ ಹಣ್ಣಿನ ಪರಿಚಯವಾಗಿದ್ದು ಹದಿನಾಲ್ಕನೆಯ ಶತಮಾನದಲ್ಲಿ. ನಿಂಬೆ ಹಣ್ಣಿನ ಪರಿಚಯವಾಗುವವರೆಗೆ ಈಜಿಪ್ತಿಯನ್ನರು ಜೇನಿನಿಂದ ಮಾಡಿದ ವೈನ್ ಮತ್ತು ಖರ್ಜೂರ ರಸವನ್ನು ಸೇವಿಸುತ್ತಿದ್ದರು. ಬಾರ್ಲಿ, ಕಪ್ಪು ಮೆಣಸು, ಮೆಂಥ್ಯೆ ಬಳಸಿ ಮಾಡಿದ ದ್ರವ ಆಹಾರವನ್ನೂ ಸೇವಿಸುತ್ತಿದ್ದರು. ಇಲ್ಲಿಯೇ ನಿಂಬೆಹಣ್ಣಿನ ರಸವನ್ನು ಪಾನೀಯವಾಗಿ ಮಾಡಿ ಸೇವಿಸಲಾರಂಭಿಸುವುದು ಆರಂಭವಾಯಿತು. ಹನ್ನೊಂದನೆಯ ಶತಮಾನದಲ್ಲಿದ್ದ ಪರ್ಷಿಯಾದ ಕವಿ ಮತ್ತು ಪ್ರವಾಸಿ ನಾಸಿರ್ ಎ ಕುಶ್ರಾವ್ ತನ್ನ ಬರವಣಿಗೆಯಲ್ಲಿ ಈಜಿಪ್ತಿನಲ್ಲಿ ಲೆಮನೇಡ್ ಚಾಲ್ತಿಯಲ್ಲಿದ್ದಿದ್ದನ್ನು ಉಲ್ಲೇಖಿಸುತ್ತಾರೆ. ಕ್ರಿಸ್ತಶಕ 1104ರಲ್ಲಿ ನಿಂಬೆಹಣ್ಣಿನ ಪಾನೀಯ ವ್ಯಾಪಾರವಾಗಿತ್ತು ಎಂಬುದನ್ನು ಉಲ್ಲೇಖಿಸುತ್ತಾರೆ. ಕೈರೊದಲ್ಲಿರುವ ಯಹೂದಿ ಸಮುದಾಯವೂ ಇದನ್ನು ವ್ಯಾಪಾರವಾಗಿ ಪರಿಗಣಿಸಿ, ನಿಂಬೆ ಹಣ್ಣಿನ ರಸ ಮತ್ತು ಸಕ್ಕರೆ ಬೆರೆಸಿ ಬಾಟಲಿಗಳಲ್ಲಿ ತುಂಬಿ ಮಾರಾಟ ಮಾಡುತ್ತಿರುತ್ತದೆ. ಅಲ್ಲದೆ ರಫ್ತು ಮಾಡುವುದರಲ್ಲಿ ತೊಡಗಿಸಿಕೊಂಡಿರುತ್ತದೆ ಎಂಬುದನ್ನು ಕುಶ್ರಾವ್ ಬರಹಗಳು ಹೇಳುತ್ತವೆ. ಮುಸ್ತನೀರ್ ಎಂಬ ಇನ್ನೊಬ್ಬ ಪ್ರವಾಸಿಯ ಬರಹಗಳೂ ಈ ವಿಚಾರಗಳನ್ನು ಪುಷ್ಟೀಕರಿಸುತ್ತವೆ. ಈ ಪಾನೀಯಕ್ಕೆ ಕತಾರ್ ಮಿಝತ್ ಎಂದು ಹೆಸರಿಡಲಾಗಿರುತ್ತದೆ. ಬಿರು ಬಿಸಿಲಿನ ಹೊಡೆತವನ್ನು ಸಹಿಸಿಕೊಳ್ಳುವುದಕ್ಕೆ, ದೇಹಕ್ಕೆ ಚೈತನ್ಯ ತುಂಬುವುದಕ್ಕೆ ಲೆಮನೇಡ್ ಅದ್ಭುತವಾದ, ಸುಲಭವಾದ ಮಾರ್ಗವಾಗಿ ಕಂಡುಕೊಂಡ ಈಜಿಪ್ತಿಯನ್ನರು ಲೆಮನೇಡ್ ಅನ್ನು ಅಂದರೆ ನಿಂಬೆಹಣ್ಣಿನ ಪಾನೀಯವನ್ನು ಹೆಚ್ಚು ಹೆಚ್ಚು ಬಳಸಿ ಮತ್ತು ಜನಪ್ರಿಯಗೊಳಿಸಿದರು.
ಪೂರ್ವ ದೇಶಗಳಲ್ಲಿ ಜನಪ್ರಿಯವಾದ ಈ ಪಾನೀಯ 17ನೇ ಶತಮಾನದ ಬಳಿಕ ಪಾಶ್ಚತ್ಯ ದೇಶಗಳಲ್ಲೂ ವ್ಯಾಪಿಸಿಕೊಂಡಿತು. ವಿವಿಧ ಬಗೆಯ ರುಚಿಗಳನ್ನು ಒಳಗೊಂಡು ನೆಚ್ಚಿನ ಪಾನೀಯ ಎಂಬ ಸ್ಥಾನವನ್ನು ಪಡೆದುಕೊಂಡಿತು.
(epaper.kannadaprabha.in)
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.