ಡ್ರ್ಯಾಗನ್ ಫ್ರೂಟ್ ಅನ್ನು ಮನೆಯಲ್ಲಿ ಬೆಳೆಯಲು ಸಾಧ್ಯವೇ ಎಂದು ಹಲವರಿಗೆ ಅನುಮಾನವಿದೆ. ಆದರೆ ಇದನ್ನು ಸಣ್ಣ ಕುಂಡದಲ್ಲಿಯೂ ಬೆಳೆಯಬಹುದು.
ಡ್ರ್ಯಾಗನ್ ಫ್ರೂಟ್ ಎಲ್ಲರಿಗೂ ಇಷ್ಟವಾಗುವ ಹಣ್ಣು. ಇದನ್ನು ಜ್ಯೂಸ್ ಆಗಿಯೂ ಅಥವಾ ಹಾಗೆಯೇ ತಿನ್ನಬಹುದು. ಹಲವಾರು ಗುಣಗಳನ್ನು ಹೊಂದಿರುವ ಡ್ರ್ಯಾಗನ್ ಫ್ರೂಟ್ ಬಣ್ಣ ಮತ್ತು ಆಕಾರದಲ್ಲಿ ಇತರ ಹಣ್ಣುಗಳಿಗಿಂತ ಭಿನ್ನವಾಗಿದೆ. ಆದರೆ ಬೆಲೆಯಲ್ಲಿ ಡ್ರ್ಯಾಗನ್ ಫ್ರೂಟ್ ಏನೂ ಕಡಿಮೆಯಿಲ್ಲ. ಡ್ರ್ಯಾಗನ್ ಫ್ರೂಟ್ ಅನ್ನು ಮನೆಯಲ್ಲಿ ಬೆಳೆಯಲು ಸಾಧ್ಯವೇ ಎಂದು ಹಲವರಿಗೆ ಅನುಮಾನವಿದೆ. ಆದರೆ ಇದನ್ನು ಸಣ್ಣ ಕುಂಡದಲ್ಲಿಯೇ ಬೆಳೆಯಬಹುದು. ಹೇಗೆ ಅಂತೀರಾ? ಹೀಗೆ ಮಾಡಿ ನೋಡಿ.
ಬೀಜದಿಂದ ಗಿಡ
ಬೀಜಗಳಿಂದ ಗಿಡ ಮಾಡಿ ಡ್ರ್ಯಾಗನ್ ಫ್ರೂಟ್ ಬೆಳೆಸುವುದು ಸಾಧ್ಯವಾದರೂ, ಆ ಗಿಡದಲ್ಲಿ ಹಣ್ಣು ಬಿಡಲು ಕನಿಷ್ಠ 4 ವರ್ಷಗಳಾದರೂ ಬೇಕಾಗುತ್ತದೆ. ಆದ್ದರಿಂದ, ಕುಂಡದಲ್ಲಿ ಬೀಜಗಳನ್ನು ಹಾಕಿ ಬೆಳೆಸಿದ ನಂತರ, ಅದನ್ನು ಕತ್ತರಿಸಿ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಬಹುದು. ಹೀಗೆ ಮಾಡಿದರೆ ಡ್ರ್ಯಾಗನ್ ಫ್ರೂಟ್ 2 ವರ್ಷಗಳಲ್ಲಿ ಕಾಯಿ ಬಿಡಲು ಪ್ರಾರಂಭಿಸುತ್ತದೆ.
ಬೆಳೆಯುವ ಸಮಯ
ಬೆಚ್ಚಗಿನ ವಾತಾವರಣವು ಡ್ರ್ಯಾಗನ್ ಫ್ರೂಟ್ ಬೆಳೆಯಲು ಹೆಚ್ಚು ಸೂಕ್ತವಾದ ಸಮಯ ಹಾಗೂ ಸ್ಥಳ. ನಿರ್ದಿಷ್ಟವಾಗಿ ಬೇಸಿಗೆ ಅಥವಾ ವಸಂತಕಾಲದ ಆರಂಭದಲ್ಲಿ ಬೆಳೆಯುವುದು ಒಳ್ಳೆಯದು. ಆದ್ದರಿಂದ ಮಾರ್ಚ್‌ನಿಂದ ಮೇ ವರೆಗೆ ಇದನ್ನು ಬೆಳೆಯಬಹುದು. ಪ್ರತಿದಿನ ಕನಿಷ್ಠ 4 ರಿಂದ 6 ಗಂಟೆಗಳ ಕಾಲ ಸೂರ್ಯನ ಬೆಳಕು ಈ ಗಿಡಕ್ಕೆ ಬೇಕೇ ಬೇಕು.
ಎಲ್ಲಿ ನೆಡಬೇಕು
ಕುಂಡದಲ್ಲಿ ಬೀಜಗಳನ್ನು ಹಾಕಿ ಬೆಳೆಸಬಹುದು. ಆದರೆ ಚೆನ್ನಾಗಿ ಬೆಳೆಯಬೇಕೆಂದರೆ ಅವುಗಳನ್ನು ಕತ್ತರಿಸಿ ಹೆಚ್ಚು ಅನುಕೂಲಕರ ಸ್ಥಳದಲ್ಲಿ ನೆಡಬೇಕು. ಡ್ರ್ಯಾಗನ್ ಫ್ರೂಟ್ ಅನ್ನು ಕನಿಷ್ಠ 15 ಇಂಚು ವ್ಯಾಸದ ಕುಂಡದಲ್ಲಿ ಬೆಳೆಸಬೇಕು. ಜೊತೆಗೆ ಬೇರುಗಳಿಗೆ ಹರಡಲು ಸ್ಥಳಾವಕಾಶವೂ ಇರಬೇಕು.
ಕತ್ತರಿಸಿದ ನಂತರ ನೆಡುವ ವಿಧಾನ
ಬೆಳೆದ ನಂತರ ಕತ್ತರಿಸಿ ಇನ್ನೊಂದು ಸ್ಥಳದಲ್ಲಿ ನೆಡುವಾಗ ಎಚ್ಚರಿಕೆಯಿಂದಿರಬೇಕು. ಗಿಡ ಹಾಳಾಗದ ರೀತಿಯಲ್ಲಿ ಕತ್ತರಿಸಬೇಕು. ಕನಿಷ್ಠ 12 ಇಂಚು ಉದ್ದವಿರಬೇಕು. ನಂತರ ಮಣ್ಣಿನಲ್ಲಿ ಒಂದು ಸಣ್ಣ ಗುಂಡಿ ಮಾಡಿ ನೆಡಬಹುದು.
ಮಣ್ಣಿನ ಮಿಶ್ರಣ
ಮರಳು, ಮಣ್ಣು, ಕಾಂಪೋಸ್ಟ್, ಕೊಕೊಪೀಟ್ ಇವುಗಳ ಮಣ್ಣಿನ ಮಿಶ್ರಣವು ಡ್ರ್ಯಾಗನ್ ಫ್ರೂಟ್ ಬೆಳೆಯಲು ಹೆಚ್ಚು ಸೂಕ್ತವಾಗಿದೆ. ಉತ್ತಮ ಫಲಿತಾಂಶಕ್ಕಾಗಿ, 40 ಪ್ರತಿಶತ ತೋಟದ ಮಣ್ಣು, 10 ಪ್ರತಿಶತ ಮರಳು, 30 ಪ್ರತಿಶತ ಕೊಕೊಪೀಟ್, 20 ಪ್ರತಿಶತ ಕಾಂಪೋಸ್ಟ್ ಅನ್ನು ಸೇರಿಸುವುದು ಒಳ್ಳೆಯದು.
ಗಿಡದ ರಕ್ಷಣೆ
ಬೆಳವಣಿಗೆ ಮುಂದುವರಿಯಬೇಕಾದರೆ ಗಿಡಕ್ಕೆ ಸರಿಯಾದ ರೀತಿಯಲ್ಲಿ ರಕ್ಷಣೆ ನೀಡಬೇಕು. ಗಿಡ ಬೆಳೆಯಲು ಪ್ರಾರಂಭಿಸಿದ ನಂತರ ಅದರ ತೂಕದಿಂದ ಬಾಗುವ ಸಾಧ್ಯತೆಯಿದೆ. ಆದ್ದರಿಂದ ಗಿಡವನ್ನು ಬೆಂಬಲಿಸಲು ಆಧಾರವನ್ನು ನೀಡಬೇಕು.
ನೀರು ಹಾಕುವಾಗ ಗಮನಿಸಿ
ಕಳ್ಳಿ ಗಿಡದಿಂದ ಬೆಳೆಯುವ ಡ್ರ್ಯಾಗನ್ ಫ್ರೂಟ್‌ಗೆ ಸ್ವಲ್ಪ ಪ್ರಮಾಣದ ತೇವಾಂಶದ ಅಗತ್ಯವಿದೆ. ಕನಿಷ್ಠ 4 ಗಂಟೆಗಳ ಕಾಲ ಸೂರ್ಯನ ಬೆಳಕು ಇದ್ದರೆ, ಪ್ರತಿದಿನ ಒಮ್ಮೆ ನೀರು ಹಾಕಬಹುದು. ಆದರೆ ಕಡಿಮೆ ಪ್ರಮಾಣದ ಸೂರ್ಯನ ಬೆಳಕು ಇದ್ದರೆ, ಎರಡು ದಿನಗಳಿಗೊಮ್ಮೆ ಮಾತ್ರ ನೀರು ಹಾಕಿದರೆ ಸಾಕು.
ಗೊಬ್ಬರ
ಹೂವುಗಳು ಮತ್ತು ಹಣ್ಣುಗಳನ್ನು ಉತ್ಪಾದಿಸುವುದರಿಂದ ದ್ರವ ರೂಪದ ಗೊಬ್ಬರವನ್ನು ಬಳಸುವುದು ಒಳ್ಳೆಯದು. ನೀರು ಮತ್ತು ಗೊಬ್ಬರವನ್ನು ಮಿಶ್ರಣ ಮಾಡಿ ಗಿಡಕ್ಕೆ ಹಾಕಬಹುದು. ಅಥವಾ ಸಾವಯವ ಕಾಂಪೋಸ್ಟ್ ಅನ್ನು ಸಹ ಹಾಕಬಹುದು.
ಕತ್ತರಿಸಿ ತೆಗೆಯಿರಿ
ಕೊಳೆತ ಅಥವಾ ಒಣಗಿ ಎಲೆಗಳಿದ್ದರೆ ಅವುಗಳನ್ನು ಕತ್ತರಿಸಿ ತೆಗೆಯಬೇಕು. ಇದು ಹೊಸ ಎಲೆಗಳು ಬರಲು ಸಹಾಯ ಮಾಡುತ್ತದೆ.
ಹೂವು
ಕತ್ತರಿಸಿದ ಗಿಡ ಬೆಳೆದ ನಂತರ ಅದರಿಂದ ದೊಡ್ಡ ಹೂವು ಬರುತ್ತದೆ. ಇದು 7-8 ತಿಂಗಳುಗಳಲ್ಲಿ ಬರುತ್ತದೆ. ಹೂವು ಬಂದ ನಂತರ ಅದು ಬಾಡಿ ಹೋಗುತ್ತದೆ ಮತ್ತು ಅದರಿಂದ ಹಣ್ಣು ಆಗಲು ಶುರುವಾಗುತ್ತದೆ.
ಡ್ರ್ಯಾಗನ್ ಫ್ರೂಟ್ ಹಣ್ಣು
ಹೂವು ಬಂದ ನಂತರ ಹಣ್ಣು ಬರಲು 30 ರಿಂದ 50 ದಿನಗಳು ಬೇಕಾಗುತ್ತದೆ. ಹೂವು ಬಾಡಿದ ನಂತರ ಅದರಿಂದ ಹಣ್ಣು ಬರುತ್ತದೆ ಮತ್ತು ಅದು ಬೆಳೆಯಲು ಪ್ರಾರಂಭಿಸುತ್ತದೆ. ಇದು ಗಾಢ ಗುಲಾಬಿ ಅಥವಾ ಹಳದಿ ಬಣ್ಣಕ್ಕೆ ತಿರುಗಿದಾಗ ಕೊಯ್ಲು ಮಾಡಬೇಕು.