
ಮಳೆಗಾಲ ಶುರುವಾಯಿತೆಂದರೆ ಸಾಕು ವಿದ್ಯುತ್ ಅವಘಡಗಳದ್ದೇ ಆತಂಕ. ಮಳೆಗಾಳಿಗೆ ಎಲ್ಲಿ ಕಂಬಗಳು ಬಿದ್ದು ರಸ್ತೆ ಮೇಲೆ ಸರ್ವಿಸ್ ವೈರ್ ಬಿದ್ದಿರುತ್ತವೋ ಎಂಬ ಆತಂಕ. ಇನ್ನು ಕಬ್ಬಿಣ ಲೋಹದಿಂದ ನಿರ್ಮಿಸಿರುವ ಕರೆಂಟ್ ಕಂಬಗಳದ್ದು ಇನ್ನೊಂದು ಚಿಂತೆ. ಆಟವಾಡೋ ಮಕ್ಕಳು, ಶಾಲೆಗೆ ಹೋಗುವ ಕಂದಮ್ಮಗಳು ಕಂಬ ಹಿಡಿದು ಅಸುನೀಗಿದ ಪ್ರಕರಣಗಳು ಎಷ್ಟಿಲ್ಲ? ಸ್ವಲ್ಪ ಯಾಮಾರಿದರೂ ಕ್ಷಣಾರ್ಧದಲ್ಲಿ ಪ್ರಾಣಕ್ಕೆ ಸಂಚಕಾರ. ಇಂತಹ ಸಂದರ್ಭದಲ್ಲಿ ಯಾರಿಗಾದರೂ ಕರೆಂಟ್ ಶಾಕ್ ಹೊಡೆದರೆ ಗಾಬರಿಯಾಗದೆ ಸಮಯಪ್ರಜ್ಞೆಯಿಂದ ವರ್ತಿಸಿದರೆ ಖಂಡಿತಾ ಜೀವ ಉಳಿಸಬಹುದು. ವಿದ್ಯುತ್ ಶಾಕ್ ಹೊಡೆದಾಗ ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿರಬೇಕಾದ್ದು ಅತ್ಯಗತ್ಯ. ಈ ಕೆಲವು ಸರಳ ನಿಯಮಗಳು ಪಾಲಿಸಿದರೆ ನಿಮ್ಮ ಪ್ರೀತಿಪಾತ್ರರ ಜೀವವನ್ನು ಕಾಪಾಡಬಹುದು.
ಕರೆಂಟ್ ಶಾಕ್ ಹೊಡೆದ ವ್ಯಕ್ತಿಯನ್ನು ರಕ್ಷಿಸುವ ಭರದಲ್ಲಿ ಅವರನ್ನು ನೇರವಾಗಿ ಬರಿಗೈಯಲ್ಲಿ ಮುಟ್ಟುವ ಸಾಹಸಕ್ಕೆ ಎಂದಿಗೂ ಕೈಹಾಕಬೇಡಿ. ಹೀಗೆ ಮಾಡಿದರೆ, ಕರೆಂಟ್ ನಿಮ್ಮ ದೇಹಕ್ಕೂ ಹರಿದು ನಿಮಗೂ ಅಪಾಯ ಕಟ್ಟಿಟ್ಟ ಬುತ್ತಿ. ಇದು ಎಲ್ಲರೂ ತಿಳಿದುಕೊಳ್ಳಬೇಕಾದ ಮೊದಲ ಪಾಠ. ಹಾಗಾಗಿ, ಮೊದಲು ಮಾಡಬೇಕಾದ ಕೆಲಸವೆಂದರೆ ತಕ್ಷಣವೇ ಮನೆಯ ಮುಖ್ಯ ವಿದ್ಯುತ್ ಸಪ್ಲೈ (MCB ಅಥವಾ ಮೇನ್ ಸ್ವಿಚ್) ಆಫ್ ಮಾಡುವುದು. ಇದರಿಂದ ವಿದ್ಯುತ್ ಪ್ರವಾಹ ನಿಂತು, ಹೆಚ್ಚಿನ ಅನಾಹುತವನ್ನು ಸುಲಭವಾಗಿ ತಪ್ಪಿಸಬಹುದು.
ಒಂದು ವೇಳೆ ಮೇನ್ ಸ್ವಿಚ್ ಆಫ್ ಮಾಡಲು ಸಾಧ್ಯವಾಗದಿದ್ದರೆ ಅಥವಾ ಅದು ಎಲ್ಲಿದೆ ಎಂದು ತಿಳಿಯದಿದ್ದರೆ, ಕರೆಂಟ್ ಅಥವಾ ವಿದ್ಯುತ್ ಪ್ರವಹಿಸಲಾಗದ ವಸ್ತುಗಳನ್ನು ಬಳಸಿ ಕರೆಂಟ್ ಶಾಕ್ ಹೊಡೆದವರನ್ನ ಎಲ್ಲಿ ಹಿಡಿದಿದೆ ಮೂಲದಲ್ಲೇ ಬೇರ್ಪಡಿಸಬೇಕು. ಉದಾಹರಣೆ ಒಬ್ಬ ವ್ಯಕ್ತಿ ತಂತಿ ತುಳಿದಾಗ ವಿದ್ಯುತ್ ತಂತಿಯ ಮೇಲಿನ ಕಾಲನ್ನ ತಂತಿಯಿಂದ ಬೇರ್ಪಡಿಸಬೇಕು. ಇದಕ್ಕಾಗಿ ಒಣಗಿದ ಮರದ ತುಂಡು, ಪ್ಲಾಸ್ಟಿಕ್ ಪೈಪ್, ಒಣ ಬಟ್ಟೆ ಅಥವಾ ಹಗ್ಗದಂತಹ ಅವಾಹಕಗಳನ್ನು ಬಳಸುವುದು ಅತ್ಯಂತ ಸುರಕ್ಷಿತ ವಿಧಾನ. ಯಾವುದೇ ಕಾರಣಕ್ಕೂ ಕಬ್ಬಿಣದ ರಾಡ್ ಅಥವಾ ಒದ್ದೆಯಾದ ವಸ್ತುಗಳನ್ನು ಬಳಸಬೇಡಿ. ಇವು ವಿದ್ಯುತ್ ವಾಹಕಗಳಾಗಿದ್ದು, ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಈ ವಿಚಾರದಲ್ಲಿ ಎಚ್ಚರವಿರಲಿ.
ಕರೆಂಟ್ ಶಾಕ್ ಹೊಡೆದ ವ್ಯಕ್ತಿಯನ್ನ ರಕ್ಷಿಸಿದ ಬಳಿಕ ಅವರ ಉಸಿರಾಟ ಮತ್ತು ನಾಡಿಬಡಿತವನ್ನು ಪರೀಕ್ಷಿಸಿ. ಒಂದು ವೇಳೆ ಉಸಿರಾಟ ನಿಂತಿದ್ದರೆ ನಿಮಗೆ ತಿಳಿದಿದ್ದರೆ ತಕ್ಷಣವೇ ಸಿಪಿಆರ್ (ಕಾರ್ಡಿಯೋಪಲ್ಮನರಿ ರಿಸಸಿಟೇಶನ್) ನೀಡಲು ಆರಂಭಿಸಬೇಕು. ಇದರ ಜೊತೆಗೆ, ಒಂದು ಕ್ಷಣವನ್ನೂ ತಡಮಾಡದೆ ಆಂಬುಲೆನ್ಸ್‌ಗೆ ಕರೆ ಮಾಡಬೇಕು ಅಥವಾ ಲಭ್ಯವಿರುವ ವಾಹನದಲ್ಲಿ ಹತ್ತಿರದ ಆಸ್ಪತ್ರೆಗೆ ಸಂತ್ರಸ್ತರನ್ನು ಸಾಗಿಸಬೇಕು. ವಿದ್ಯುತ್ ಆಘಾತದ ನಂತರ ವೈದ್ಯಕೀಯ ತಪಾಸಣೆ ಅತ್ಯಗತ್ಯ. ಯಾಕೆಂದರೆ ಬಾಹ್ಯವಾಗಿ ಗಾಯಗಳು ಕಾಣದಿದ್ದರೂ ಆಂತರಿಕವಾಗಿ ಹಾನಿಯಾಗಿರುವ ಸಾಧ್ಯತೆ ಇರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.