ಕತ್ತೆ ಹಿಂದೆ ಹೋದವ ಇಂದು ಕೋಟ್ಯಾಧಿಪತಿ! ಇವನಿಂದ ಕತ್ತೆ ಹಾಲು ಕೊಳ್ಳೋರ್ಯಾರು ಗೊತ್ತಾ?

By Bhavani BhatFirst Published May 21, 2022, 1:30 PM IST
Highlights

ಡಾಂಕಿ ಪ್ಯಾಲೆಸ್ ಯು ಬಾಬು ಅಂದ್ರೆ ತಮಿಳುನಾಡಿನ ತೆರುವನೆಲ್ವೇಲಿಯಲ್ಲಿ ಯಾರು ಕೇಳಿದ್ರೂ ಹೇಳ್ತಾರೆ. ಓದನ್ನು ಅರ್ಧಕ್ಕೆ ಬಿಟ್ಟು ಕತ್ತೆ ಹಿಂದೆ ಹೋದ ಯುವಕ ಇಂದು ಕೋಟ್ಯಾಧಿಪತಿ. ಆದರೆ ಆತನಿಂದ ಲೀಟರ್‌ಗೆ 7000ರು, ನಂತೆ ಕತ್ತೆ ಹಾಲು ಖರೀದಿಸುತ್ತಿರೋದ್ಯಾರು ಗೊತ್ತಾ?

'ಕತ್ತೆ'(Donkey) ಅನ್ನೋದು ಬೈಗುಳವಾಗಿ ಎಲ್ಲಾ ಕಡೆ ಫೇಮಸ್‌. ಆದರೆ ಈಗ ಕತ್ತೆ ಅಂದ್ರೆ ಕೋಟಿ ಅನ್ನೋ ಹಂಗಾಗಿದೆ. ಇದಕ್ಕೆ ಕಾರಣ ಯು ಬಾಬು(U Babu). ಹೌದು, ತಮಿಳ್ನಾಡಿನ ಈ ಯುವಕ ಕತ್ತೆ ಹಿಂದೆ ಹೋಗಿ ಕೋಟಿ ಕೋಟಿ ಎಣಿಸ್ತಿದ್ದಾನೆ. ಒಂದು ಲೀಟರ್ ಕತ್ತೆ ಹಾಲನ್ನು 7000 ರುಪಾಯಿಗೆ ಮಾರುತ್ತಿದ್ದಾನೆ.

ಈತನ ಡಾಂಕಿ ಪ್ಯಾಲೆಸ್‌(The Donkey Palace) ಕತ್ತೆಗಳ ಸಾಮ್ರಾಜ್ಯ. ಒಂದಲ್ಲ ಎರಡಲ್ಲ ಎಲ್ಲಿ ನೋಡಿದರಲ್ಲಿ ಕತ್ತೆಗಳು ಸ್ವಚ್ಛಂದವಾಗಿ ಇಲ್ಲಿ ವಿಹರಿಸುತ್ತಿರುತ್ತವೆ. ದುಡ್ಡಿನ ಖಜಾನೆಯನ್ನೇ ನೀಡುವ ಕತ್ತೆಗಳಿಗಿಲ್ಲಿ ರಾಜೋಪಚಾರ. ಇಂಥಾ ಕತ್ತೆ ಪ್ಯಾಲೆಸ್ ಮಾಡಿರೋ ಬಾಬು ಹಿನ್ನೆಲೆ ಏನು, ಆತ ಯಾಕೆ ಇಂಥಾ ಕೆಲಸಕ್ಕೆ ಕೈ ಹಾಕಿದ. ಅದರಿಂದ ಕೋಟಿ ಕೋಟಿ ಹಣ ಹೇಗೆ ಪಡೆಯುತ್ತಿದ್ದಾನೆ ಅನ್ನೋದೆಲ್ಲ ಇಂಟರೆಸ್ಟಿಂಗ್(Interesting) ಸ್ಟೋರಿ.

ಬಾಬು ಮೂಲತಃ ವನ್ನಾರ್‌ಪೇಟೆ(Vannarpet)ಯವನು. ಕಾಲೇಜ್‌ಗೇನೋ ಹೋದ, ಆದರೆ ಪಿಯುಸಿ ಮಾಡುವಾಗಲೇ ಈ ವಿದ್ಯೆ ತನಗೆ ಹತ್ತಲ್ಲ ಅಂತ ಪ್ರೂವ್ ಆಯ್ತು. ಕಾಲೇಜ್‌ಗೆ ಗುಡ್‌ ಬೈ ಹೇಳ್ತಾನೆ. ಆದರೆ ಹೊಟ್ಟೆಪಾಡಿಗೆ ಏನಾದರೂ ಆಗ್ಬೇಕಲ್ಲಾ, ಆರಂಭದಲ್ಲಿ ವಿವಿಧ ಔಷಧಗಳ ಸರಬರಾಜು ಮಾಡಲು ಶುರುಮಾಡಿದ. ಆ ಬಗ್ಗೆ ಕೊಂಚ ತಿಳಿದುಕೊಂಡು ತಾನೇ ಔಷಧೀಯ ಉತ್ಪನ್ನಗಳ ಮಾರಾಟಕ್ಕೂ ಮುಂದಾದ. ಅಷ್ಟೊತ್ತಿಗೆ ಒಂದು ಸುದ್ದಿ ಇವನ ಕಿವಿಗೆ ಬೀಳುತ್ತೆ. 28 ಯುನಿಸೆಕ್ಸ್(Unisex) ಎಂಬ ಸೌಂದರ್ಯ ವರ್ಧಕ ಉತ್ಪನ್ನ ತಯಾರಿಸೋ ಕಂಪನಿಗೆ ಪ್ರತೀ ತಿಂಗಳಿಗೆ 1000 ಲೀ. ಕತ್ತೆ ಹಾಲು ಬೇಕಾಗಿದೆ ಅನ್ನೋ ಸುದ್ದಿಯದು. ಬಾಬು ಕಿವಿ ತಲೆ ಎರಡೂ ಚುರುಕಾಗುತ್ತದೆ. ಆತ ತನ್ನ ಔಷಧ ಮಾರಾಟವನ್ನು ಬೇರೆಯವರಿಗೆ ವಹಿಸಿ ತಾನು ಕತ್ತೆ ಹಿಂದೆ ಹೋಗಲು ನಿರ್ಧರಿಸುತ್ತಾನೆ. ಈ ಹಿನ್ನೆಲೆಯಲ್ಲಿ ಬಾಬು ಮಾಡಿದ ಮೊದಲ ಕೆಲಸ ಇಡೀ ತಮಿಳುನಾಡಿನಲ್ಲಿ ಎಷ್ಟು ಕತ್ತೆಗಳಿವೆ, ಎಷ್ಟು ಜನ ಕತ್ತೆ ಸಾಕುತ್ತಿದ್ದಾರೆ ಅಂತ ಸರ್ವೆ ಮಾಡಿದ್ದು. ಆಗ ಸಿಕ್ಕ ಮಾಹಿತಿ ಅಬ್ಬಬ್ಬಾ ಅಂದ್ರೆ ತಮಿಳ್ನಾಡಿನಲ್ಲಿ ಒಂದು 2000 ಕತ್ತೆಗಳಿರಬಹುದು ಅಂತ. ಒಂದು ಕತ್ತೆ ಎಷ್ಟು ಹಾಲು ಕೊಡುತ್ತೆ ಅಂತ ನೋಡಿದ್ರೆ ಜಾಸ್ತಿ ಅಂದ್ರೆ 350 ಮಿಲಿ ಲೀಟರ್ ಕೊಡಬಹುದಷ್ಟೇ ಅನ್ನೋದೂ ಗೊತ್ತಾಯ್ತು.

100 ರೂಪಾಯಿ ಮಾತ್ರೆಯಲ್ಲಿ ವ್ಯಾಪಾರಿಗಳಿಗಿದೆ 1000% ಕ್ಕೂ ಹೆಚ್ಚು ಲಾಭ!

ಈ ಬಾಬುಗೆ ಆಗ ಕತ್ತೆ ಹುಚ್ಚು ಯಾವ ಮಟ್ಟಿಗೆ ಅಡರಿಕೊಂಡಿತ್ತು ಅಂದರೆ ಕನಸಲ್ಲೆಲ್ಲ ಕತ್ತೆಯೇ ಬರುತ್ತಿತ್ತು. ಬೆಳಗಾಗೆದ್ದು ಕತ್ತೆಗಳ ಹುಡುಕಾಟ ಶುರು ಮಾಡುತ್ತಿದ್ದ. ಎಲ್ಲೆಲ್ಲಿಂದಲೋ ಕತ್ತೆಗಳನ್ನು ಸಂಗ್ರಹಿಸಿ ಕತ್ತೆ ಫಾರಂ (Donkey Farm) ಶುರು ಮಾಡಿದ. ಅವರಿವರು ಯಾಕೆ, ಮನೆಯಲ್ಲಿ ಹೆಂಡತಿಯೇ ಈತನ ಹುಚ್ಚು ಸಾಹಸ ನೋಡಿ ಮುಸಿ ಮುಸಿ ನಗ್ತಾಳೆ. ನೆಂಟರೆಲ್ಲ ಈತನಿಗೇನೋ ತಲೆ ಕೆಟ್ಟಿದೆ ಅನ್ನೋ ರೀತಿ ಮಾತಾಡ್ಕೊಳ್ತಾರೆ. ಅವರೆಷ್ಟು ಅಣಕಿಸಿದರೂ ಬಾಬು ಛಲ ಬಿಡದ ತ್ರಿವಿಕ್ರಮನ ಹಾಗೆ ಕತ್ತೆ ಹಿಂದೆ ಅಲೆದಾಡುತ್ತಾನೆ. ಕಡಲೂರು ಜಿಲ್ಲೆಯ ವೃದ್ಧಾಚಲಂನಲ್ಲಿ 100 ಮಿಲಿ ಲೀಟರ್ ಕತ್ತೆ ಹಾಲನ್ನು 50 ರುಪಾಯಿಗೆ ಮಾರುತ್ತಾರೆ ಅಂತ ಸುದ್ದಿ ತಿಳಿಯುತ್ತೆ. ವಿಷಯ ತಿಳಿದು ಅಲ್ಲಿಗೆ ಹೋಗುವ ಬಾಬುಗೆ ಕೆಲವು ಹಿರಿಯರು ಕತ್ತೆ ಹಾಲಿನಲ್ಲಿರುವ ವಿಶೇಷತೆ ಬಗ್ಗೆ ಹೇಳುತ್ತಾರೆ ಇದಕ್ಕೆ ವೃದ್ಧಾಪ್ಯವನ್ನು ತಡೆಯೋ ಶಕ್ತಿ ಇದೆ, ಚಿಕ್ಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಇದರಿಂದ ಹೆಚ್ಚಾಗುತ್ತೆ ಅಂತ ತಿಳಿದುಬರುತ್ತೆ.

ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ದಾಖಲೆ, ಎಫ್‌ಡಿಐ 83.57 ಬಿಲಿಯನ್ ಡಾಲರ್!

ಹೀಗೆಲ್ಲ ಕತ್ತೆ ಮಹಿಮೆ ಗೊತ್ತಾದ ಸ್ವಲ್ಪ ದಿನದಲ್ಲೇ ತಿರನೆಲ್ವೇಲಿ ಸಮೀಪ ಗೆಳೆಯನ ೧೭ ಎಕರೆ ಜಮೀನನ್ನು ಲೀಸ್‌ಗೆ ಪಡೆದು 'ಡಾಂಕಿ ಪ್ಯಾಲೆಸ್' ಶುರು ಮಾಡ್ತಾರೆ ಬಾಬು. ಮೊದಲು 100 ಕತ್ತೆ ಸಾಕುತ್ತಾರೆ. ಬಳಿಕ ಗುಜರಾತ್‌ನ ಹಲಾರಿ(Halari donkeys Gujarath) ತಳಿಯ ಕತ್ತೆ, ಸ್ಥಳೀಯ ಕತ್ತೆಗಳು ಸೇರಿಕೊಳ್ಳುತ್ತವೆ. ಹಲಾರಿ ತಳಿಯ ಕತ್ತೆ ದಿನಕ್ಕೆ 1 ಲೀಟರ್ ಹಾಲು ಕೊಡುತ್ತೆ, ಇದರ ಬೆಲೆ ಸುಮಾರು 1 ಲಕ್ಷ ರುಪಾಯಿ. ದೇಶಿ ಕತ್ತೆಗೆ 40,000 ರುಪಾಯಿ. ಈ ಕತ್ತೆಗಳಿಗೆ ತಮ್ಮ ಜಮೀನಲ್ಲೇ ಮೇವು ಬೆಳೆಸುತ್ತಾರೆ. ಅವುಗಳಿಗೆ ಅನೇಕ ಬಗೆಯ ಸಮೃದ್ಧ ಆಹಾರ ನೀಡುತ್ತಾರೆ.

ಕೇಕ್‌ನಲ್ಲಿ ಮೊಟ್ಟೆಯಿದ್ಯಾ ಎಂದು ಪ್ರಶ್ನಿಸಿದ ವ್ಯಕ್ತಿ, ಬೇಕರಿ ಮಾಲೀಕರು ಉತ್ತರ ಕೊಟ್ಟ ರೀತಿಗೆ ಕಂಗಾಲು !

ಈ ಕತ್ತೆಯ ಹಾಲನ್ನು ಲೀಟರ್‌ಗೆ 7000 ರು. ನಂತೆ ಬೆಂಗಳೂರಿನ ಕಾಸ್ಮೆಟಿಕ್‌ ಕಂಪನಿಗೆ(Cosmetics Company) ಮಾರುತ್ತಿದ್ದಾರೆ. ಯುರೋಪ್‌ಗೂ ಕತ್ತೆ ಹಾಲು ಸರಬರಾಜು ಮಾಡಲು ಪ್ಲಾನ್ ಮಾಡುತ್ತಿದ್ದಾರೆ. ಈ ಕತ್ತೆ ಹಾಲನ್ನು ಔಷಧಕ್ಕೆ ಬಳಸಲಾಗುತ್ತೆ. ಜೊತೆಗೆ ಸ್ನಾನದ ಸೋಪು, ಚರ್ಮದ ಪೋಷಣೆ, ಕೂದಲ ಪೋಷಣೆಗೆ ಸಹಕಾರಿಯಾಗುವ ಉತ್ಪನ್ನಗಳಲ್ಲೂ ಬಳಸುತ್ತಾರೆ. ಕತ್ತೆ ಹಾಲಿಂದ ತಯಾರಾದ ಕಾಸ್ಮೆಟಿಕ್ಸ್‌ಗಳು ದುಬಾರಿ ಬೆಲೆಗೆ ಬಿಕರಿಯಾಗುತ್ತವೆ. ಅಲ್ಲಿಗೆ ಕತ್ತೆ ಹಿಂದೆ ಹೋದ್ರೂ ಕೋಟಿ ಎಣಿಸ್ಬಹುದು ಅನ್ನೋದಕ್ಕೆ ಯು ಬಾಬು ಮಾದರಿ ಆಗ್ತಾರೆ.

click me!