ಕಾಂತಿಯುತ ಕೂದಲಿಗೆ ಕೆಫಿನ್ ಟ್ರೀಟ್ಮೆಂಟ್!

By Web Desk  |  First Published Jun 13, 2019, 1:30 PM IST

ಕಾಫಿ ಲವರ್‌ಗಳಿಗೆ ಇಲ್ಲಿದೆ ನೀವು ಕಾಫಿಯಲ್ಲಿ ತೋಯ್ದೇಳುವಂಥ ಸುದ್ದಿ. ಕಾಫಿ ನಿಮ್ಮ ಮೂಡನ್ನು ಮಾತ್ರವಲ್ಲ, ಕೂದಲನ್ನೂ ಚೆನ್ನಗಾಗಿಸುತ್ತದೆ. ಇನ್ನು ಮುಂದೆ ಹೊಟ್ಟೆಗೆ ಮಾತ್ರವಲ್ಲ, ತಲೆಗೂ ಬೇಕು ಕಾಫಿ ಟ್ರೀಟ್ಮೆಂಟ್.


ಕಾಫಿಯು ನ್ಯೂಟ್ರಿಯೆಂಟ್ಸ್ ಹಾಗೂ ಆ್ಯಂಟಿ ಆಕ್ಸಿಡೆಂಟ್ಸ್‌ಗಳ ಖನಿಜ. ಇದರ ಲಾಭವನ್ನು ಮನಸ್ಸಿಗೆ, ಆರೋಗ್ಯಕ್ಕೆ ಮಾತ್ರವಲ್ಲ, ಕೂದಲಿನ ಆರೋಗ್ಯಕ್ಕೂ ಕೊಡಬಹುದು. ಕೂದಲಿನ ಉದ್ದ ಹಾಗೂ ಆರೋಗ್ಯ ಹೇರ್ ಫೋಲಿಕಲ್‌ಗಳ ಆರೋಗ್ಯದ ಮೇಲೆ ಡಿಪೆಂಡ್ ಆಗಿರುತ್ತದೆ. ಕಾಫಿ ಈ ಹೇರ್ ಫೋಲಿಕಲ್‌ಗಳನ್ನು ಬಲಶಾಲಿಗೊಳಿಸುತ್ತದೆ. ಕಾಫಿಯಿಂದ ಕೂದಲಿಗೆ ಏನೇನು ಲಾಭಗಳಿವೆ ನೋಡೋಣ. 

ಕೂದಲ ಬೆಳವಣಿಗೆಗೆ ಉತ್ತೇಜನ

ಕಾಫಿಯಿಂದ ಕೂದಲಿಗೆ ಅನೇಕ ಲಾಭಗಳಿವೆ. ಪುರುಷರು ಮತ್ತು ಮಹಿಳೆಯರಿಬ್ಬರಲ್ಲೂ ಮಿತಿ ಮೀರಿದ ಕೂದಲುದುರುವಿಕೆಗೆ ಹಾಗೂ ಕೂದಲ ಬುಡ ಹಾನಿಗೀಡಾಗುವುದಕ್ಕೆ ಕಾರಣವಾಗುವ ಡಿಎಚ್‌ಟಿಯ ಪರಿಣಾಮಗಳನ್ನು ಇದು ತಡೆಯುತ್ತದೆ. ಕೂದಲು ತುಂಡಾಗುವುದನ್ನು ತಪ್ಪಿಸಿ, ಬೆಳವಣಿಗೆಗೆ ಕಾರಣವಾಗುತ್ತದೆ.

Latest Videos

ಕಾಫಿ ಮಾಡುತ್ತೆ ಕೂದಲನ್ನು ಸ್ಟ್ರಾಂಗ್...

ಕೂದಲುದುರುವಿಕೆ ವಿರುದ್ಧ ಹೋರಾಟ

ಕೂದಲುದುರುವಿಕೆ ವ್ಯಕ್ತಿಯ ಆತ್ಮವಿಶ್ವಾಸಕ್ಕೇ ಪೆಟ್ಟು ನೀಡುತ್ತದೆ. ಕೂದಲಿನ ಬುಡದ ಫೋಲಿಕಲ್‌ಗಳು ತೆಳ್ಳಗಾಗುವುದರಿಂದ ಬಾಚಿದರೂ, ಬಗ್ಗಿದರೂ ಕೂದಲುದುರಿ ಬಾಣಲೆ ತಲೆಯಾಗುತ್ತದೆ. ಕಾಫಿಯು ಈ ಹೇರ್ ಫೋಲಿಕಲ್‌ಗಳನ್ನು ಗಟ್ಟಿಗೊಳಿಸಿ, ಕೂದಲುದುರುವಿಕೆ ವಿರುದ್ಧ ಹೋರಾಡುವಂತೆ ಮಾಡುತ್ತದೆ. ಬಲಶಾಲಿ ಕೂದಲು ಯಾವಾಗಲೂ ಆರೋಗ್ಯವಂತವಾಗಿ, ದಪ್ಪವಾಗಿ ಕಾಣಿಸುತ್ತದೆ. 

ಉತ್ತಮವಾಗುವ ಕೂದಲಿನ ಟೆಕ್ಸ್ಚರ್ 

ಕಾಫಿಯು ಕೂದಲನ್ನು ಒಳಗಿನಿಂದ ಬಲಶಾಲಿ ಮಾಡುವುದರಿಂದ ಕೂದಲು ಹೆಚ್ಚು ಸಾಫ್ಟ್ ಆಗಿಯೂ, ಸ್ಮೂತ್ ಆಗಿಯೂ ಟೋನಿಂಗ್ ಪಡೆಯುತ್ತದೆ. ಒಣಗಿದ, ಹಾನಿಗೊಳಗಾದ ಹಾಗೂ ಗುಂಗುರು ಕೂದಲಿನ ನಿರ್ವಹಣೆಗೆ ಕಾಫಿ ಸಹಾಯ ಮಾಡುತ್ತದೆ. 

ರಕ್ತ ಸಂಚಲನ ಹೆಚ್ಚಳ

ಕಾಫಿಯ ಸ್ಕ್ರಬ್ಬಿಂಗ್ ನೇಚರ್ ನೆತ್ತಿಯ ಭಾಗಕ್ಕೆ ಚೆನ್ನಾಗಿ ಮಸಾಜ್ ಮಾಡಿ ರಕ್ತ ಸಂಚಲನ ಹೆಚ್ಚಿಸುತ್ತದೆ. ಆ ಮೂಲಕ ಕೂದಲು ಬುಡದಿಂದ ಆರೋಗ್ಯ ಪಡೆಯುತ್ತದೆ.

ನೆತ್ತಿಯ ಒಣಚರ್ಮಕ್ಕೆ ಔಷಧ

ನೆತ್ತಿಯಲ್ಲಿ ಚರ್ಮ ಒಣಗಿ ಹೊಟ್ಟು ಏಳುತ್ತಿದ್ದರೆ, ಕಾಫಿಯಿಂದ ಸ್ಕ್ರಬ್ ಮಾಡಿದರೆ, ಅದು ಸತ್ತಚರ್ಮ ಕೋಶಗಳನ್ನು ತೆಗೆದು ನೆತ್ತಿಯನ್ನು ಸ್ವಚ್ಛವಾಗಿಸುತ್ತದೆ. ತಲೆಹೊಟ್ಟು ಕಡಿಮೆಯಾದರೆ ಮುಖದ ಗುಳ್ಳೆಗಳೂ ಕಡಿಮೆಯಾಗುತ್ತದೆ. 

ಬೀಟ್‌ರೂಟ್ ಚಹಾ ಎಂಬ ಗರ್ಭಿಣಿಗೆ ಅದ್ಭುತ ಮದ್ದು!

ಕೂದಲಿನ ಬಣ್ಣಕ್ಕೆ ಕಾಂತಿ

ಕೆಮಿಕಲ್ ರಹಿತವಾಗಿ ಕೂದಲನ್ನು ಕಪ್ಪು ಮಾಡಲು ಕಾಫಿ ಪರಿಣಾಮಕಾರಿ ಅಸ್ತ್ರ. ನೀವು ಕಪ್ಪು ಅಥವಾ ಕಂದು ಬಣ್ಣದ ಕೂದಲನ್ನು ಹೊಂದಿದ್ದರೆ, ಆ ಬಣ್ಣಕ್ಕೆ ಮತ್ತಷ್ಟು ಮೆರುಗು ತುಂಬುತ್ತದೆ ಕಾಫಿ.

ಕಾಫಿಯನ್ನು ಕೂದಲಿಗೆ ಬಳಸುವುದು ಹೇಗೆ?

1. ಕಾಫಿ ಆಯಿಲ್

2 ಕಪ್ ಕೊಬ್ಬರಿ ಎಣ್ಣೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿ ಅದಕ್ಕೆ ಕಾಲು ಬಟ್ಟಲು ರೋಸ್ಟೆಡ್ ಕಾಫಿ ಬೀಜಗಳನ್ನು ಹಾಕಿ, ಮೇಲಿನಿಂದ ತಟ್ಟೆ ಮುಚ್ಚಿ. ಇದನ್ನು ಸುಮಾರು 8 ಗಂಟೆಗಳ ಕಾಲ ಸಣ್ಣ ಉರಿಯಲಿ ಬೇಯಲು ಬಿಡಿ. ಮಧ್ಯೆ ಮಧ್ಯೆ ಕಾಫಿ ಸುಟ್ಟುಹೋಗುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸೌಟಾಡಿಸುತ್ತಿರಿ. 8 ಗಂಟೆಯ ಬಳಿಕ ಎಣ್ಣೆ ತಣಿದ ಮೇಲೆ ಅದನ್ನು ಬಾಟಲ್‌ಗೆ ಹಾಕಿ ತೆಗೆದಿಟ್ಟುಕೊಳ್ಳಿ. ಇದನ್ನು ಸ್ನಾನಕ್ಕೂ ಮುಂಚೆ ತಲೆಗೆ ಹಚ್ಚಿಕೊಳ್ಳುವುದನ್ನು ರೂಢಿಸಿಕೊಳ್ಳಿ.

2. ಕಾಫಿ ಹೇರ್ ಮಾಸ್ಕ್

1 ಚಮಚ ಜೇನು ಹಾಗೂ 1 ಚಮಚ ಆಲಿವ್ ಆಯಿಲ್‌ಗೆ ಕಾಫಿ ಪೌಡರ್ 1 ಚಮಚ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಕೂದಲಿನ ಬುಡಕ್ಕೂ ಸೇರಿಸಿ ಕೂದಲಿಗೆ ಮಾಸ್ಕ್ ಹಾಕಿಕೊಂಡು 20 ನಿಮಿಷ ಬಿಡಿ. ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. 

3. ಕಾಫಿ ಕಂಡೀಶನರ್

ತಲೆಕೂದಲಿಗೆ ಶಾಂಪೂವಾದ ಬಳಿಕ ಡಿಕಾಕ್ಷನ್ ಹಚ್ಚಿ 5 ನಿಮಿಷ ಬಿಡಿ.  ಆ ಬಳಿಕ ಚೆನ್ನಾಗಿ ತೊಳೆದು ತೆಗೆಯಿರಿ. 

click me!