
ಬೆಂಗಳೂರು(ಮಾ.17) ಸಿಲಿಕಾನ್ ಸಿಟಿಯಲ್ಲಿ ಅವಕಾಶಗಳಿಗೆ ಕೊರತೆ ಇಲ್ಲ, ವೇತನ ಕಡಿಮೆ ಇಲ್ಲ. ಏನು ಇಲ್ಲದೆ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡವರು ಇದೀಗ ಉದ್ಯಮ ಸಾಮ್ರಾಜ್ಯವನ್ನೇ ನಿಲ್ಲಿಸಿದ್ದಾರೆ. ಸಣ್ಣ ವ್ಯಾಪಾರ, ಕೆಲಸದಲ್ಲಿ ಖುಷಿ ಕಂಡವರಿದ್ದಾರೆ. ಇನ್ನು ಇದ್ದ ಉದ್ಯಮ, ವ್ಯಾಪಾರ ವಹಿವಾಟುಗಳನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದವರಿದ್ದಾರೆ. ಇದರ ನಡುವೆ ಮತ್ತೊಂದು ವರ್ಗವಿದೆ. ಆರಕ್ಕೇರದ ಮೂರಕ್ಕಿಳಿದ ಮಂದಿ. ಅತ್ತ ಸ್ಯಾಲರಿ ಸಾಲುತ್ತಿಲ್ಲ, ಸಾಲ, ಕಂತು, ಬಾಡಿಗೆ, ಕುಟುಂಬ ನಿರ್ವಹಣೆ, ಪೋಷಕರು, ಊರು ಹೀಗೆ ಪಟ್ಟಿ ಬೆಳೆಯುತ್ತೆ. ಇದ ಸಾಲಿಗೆ ಸೇರಿದ ಬೆಂಗಳೂರಿನ ಟೆಕ್ಕಿ ಬೆಂಗಳೂರು ಬದುಕು ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ತಿಂಗಳಿಗೆ ಬರುತ್ತಿರುವ 1.5 ಲಕ್ಷ ರೂಪಾಯಿ ಸಾಲುತ್ತಿಲ್ಲ. ಕುಟುಂಬ ನಿರ್ವಹಿಸಲು, ಸಾಲ ಕಟ್ಟಲು ಯಾವುದಕ್ಕೂ ಸಾಲುತಿಲ್ಲ. ಕೆಲಸದ ಒತ್ತಡ, ಕೆಲಸ ಇರುತ್ತೋ ಇಲ್ವೋ ಅನ್ನೋ ಭಯ, ಕಳೆದುಕೊಂಡರೆ ಒಂದು ತಿಂಗಳು ದಿನ ದೂಡಲು ಉಳಿತಾಯವೂ ಇಲ್ಲ ಎಂದು ಟೆಕ್ಕಿ ಹೇಳಿದ್ದಾರೆ. ಈ ಟೆಕ್ಕಿ ಬೆಂಗಳೂರು ಡೇಸ್ ಕುರಿತು ಒಂದಷ್ಟು ಕನಸು, ಅಸಲಿ ಬದುಕಿನ ಕುರಿತು ಹೇಳಿದ್ದಾರೆ. ಈ ಟೆಕ್ಕಿ ಹೇಳಿದ ಬದುಕಿನ ಪಯಣದಲ್ಲಿ ನಿಮಗೂ ಹೀಗಾಗುತ್ತಿದೆಯಾ?
onepoint5zero ಅನ್ನೋ ರೆಡ್ಡಿಟ್ ಖಾತೆಯಲ್ಲಿ ಈ ಮಾಹಿತಿಯನ್ನು ಟೆಕ್ಕಿ ಹಂಚಿಕೊಂಡಿದ್ದಾರೆ. ಬೆಂಗಳೂರಿಗೆ ಹೋಗಬೇಕು, ಕೈ ತುಂಬ ಸಂಬಳದ ಕೆಲಸ ಗಿಟ್ಟಿಸಿಕೊಳ್ಳಬೇಕು ಅನ್ನೋದು ಈ ಟೆಕ್ಕಿಯ ಬಾಲ್ಯದ ಕನಸಾಗಿತ್ತು. ಬೆಂಗಳೂರಿನ ಕಲರ್‌ಫುಲ್ ಲೈಫ್, ಕಲ್ಚರ್, ವೀಕೆಂಡ್ ಮಸ್ತಿ ಸೇರಿದಂತೆ ಎಲ್ಲವೂ ದೊಡ್ಡ ಕನಸಾಗಿ ಕುಕ್ಕಿತ್ತು. ಜೊತೆಗೆ ಬೆಂಗಳೂರಿನಲ್ಲೊಂದು ಪ್ರೀತಿ, ಸುತ್ತಾಡಲು ಸಂಗಾತಿಯ ತೋಳಿನ ಆಸರೆ ಎಲ್ಲವೂ ಈ ಟೆಕ್ಕಿಯ ಬದುಕನ್ನು ಮತ್ತಷ್ಟು ಉತ್ಸಾಹಕ್ಕೆ ದೂಡಿದ ಕನಸುಗಳು. ಇದರಂತೆ ಬೆಂಗಳೂರಿಗೆ ಬಂದು ತಿಂಗಲಿಗೆ 1.5 ಲಕ್ಷ ರೂಪಾಯಿ ವೇತನದ ಕೆಲಸವೂ ಸಿಕ್ಕಿತು. ಸಣ್ಣ ಊರಿನಿಂದ ಬೆಂಗಳೂರಿಗೆ ಬಂದು 1.5 ಲಕ್ಷ ರೂಪಾಯಿ ವೇತನ ಗಿಟ್ಟಿಸಿಕೊಂಡ ಖುಷಿ ಎಲ್ಲರಂತೆ ಈತನಲ್ಲೂ ಇತ್ತು.
ನನಗೆ ಒಂದು ರೂಪಾಯಿ ಸಂಬಳ ಬೇಡ, ಬೆಂಗ್ಳೂರು ಟೆಕ್ಕಿ ಮನವಿಯಿಂದ ಹೆಚ್ಚಿದ ಆತಂಕ
ಅತ್ತ ಗ್ರಾಮದಲ್ಲಿ 1.5 ಲಕ್ಷ ಸಂಬಂಳ ಎಂದಾಗ ಹೌಹಾರಿದವರೂ ಇದ್ದಾರೆ. ಅಷ್ಟೊಂದು ವೇತನ, ಲೈಫ್ ಜಿಂಗಾಲಾಲ ಎಂದವರೂ ಇದ್ದಾರೆ. ಆದರೆ ಬೆಂಗಳೂರಿನಲ್ಲಿ ನನ್ನ ಜೀವನ ದುರ್ಬಲವಾದ ಹೂಕುಂಡದಂತಾಗಿದೆ. ತೀವ್ರ ಒತ್ತಡದ ಕಾರಣ ಯಾವುದೇ ಕ್ಷಣದಲ್ಲೂ ಒಡೆದು ಹೋಗಬಹುದು ಎಂದು ಟೆಕ್ಕಿ ರೆಡ್ಡಿಟ್‌ನಲ್ಲಿ ಹೇಳಿಕೊಂಡಿದ್ದಾರೆ.
ತಿಂಗಳ ಸಂಬಳದಲ್ಲಿ ಇರೋ ಸಾಲ ಪಾವತಿ ಮಾಡಬೇಕು, ಕಂತು ಪಾವತಿಸಬೇಕು, ಊರಿನಲ್ಲಿರುವ ಪೋಷಕರ, ಕುಟುಂಬ ನಿರ್ವಹಣೆ ಎಲ್ಲವೂ ಆಗಬೇಕು. ತಿಂಗಳ ಅಂತ್ಯ ಬಂದಾಗ ದುಡ್ಡಿಲ್ಲ. ಉಳಿತಾಯ ಮಾಡಬೇಕು, ಭವಿಷ್ಯದಲ್ಲಿ ಸಮಸ್ಯೆ ಇರಬಾರದು ಎಂದು ಪ್ರತಿ ತಿಂಗಳು ಅಂದುಕೊಂಡರೂ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ತುರ್ತು ಅಗತ್ಯಕ್ಕಾಗಿ ಎಂದು ತಿಂಗಳಲ್ಲಿ 5 ಸಾವಿರ ಅಥವಾ 10 ಸಾವಿರ ರೂಪಾಯಿ ಉಳಿಸಿಕೊಂಡಿದ್ದೇನೆ. ಎಲ್ಲಾ ತಿಂಗಳು ಸಾಧ್ಯವಾಗಿಲ್ಲ. ಒಂದು ವೇಳೆ ಕೆಲಸ ಕಳೆದುಕೊಂಡರೆ 2 ರಿಂದ 3 ತಿಂಗಳಿನಲ್ಲಿ ಈ ಉಳಿತಾಯ ಸಾಲ, ಮನೆ ಬಾಡಿಗೆ ಕಟ್ಟಿ ಮುಗಿಯಲಿದೆ.
ಪಿಜಿ ಯಲ್ಲಿ ಉಳಿದುಕೊಂಡಿರುವ ಈ ಟೆಕ್ಕಿ ತಿಂಗಳ ಬಾಡಿಗೆ ಕಟ್ಟಲು ಕಷ್ಟವಾಗುತ್ತಿದೆ. ಇನ್ನು ಬಾಡಿಗೆ ಫ್ಲ್ಯಾಟ್‌ನಲ್ಲಿ ಉಳಿದುಕೊಳ್ಳುವ ಮಾತು ದೂರ ಎಂದಿದ್ದಾರೆ. ನನ್ನ ವೈಯುಕ್ತಿಕ ಖರ್ಚು ವೆಚ್ಚ ಒಂದಡೆಯಾದರೆ, ಊರಿನಲ್ಲಿರುವ ಪೋಷಕರ ನೋಡಿಕೊಳ್ಳುವ ಜವಾಬ್ದಾರಿ ಮಾತ್ರವಲ್ಲ ಕರ್ತವ್ಯವಿದೆ. ಬೇರೆ ಯಾವುದೇ ಮೂಲದಿಂದ ಆದಾಯ ನಮಗಿಲ್ಲ. ಅವರ ಖರ್ಚು ವೆಚ್ಚ, ಆರೋಗ್ಯ ವೆಚ್ಚಗಳು ಎಲ್ಲವನ್ನೂ ನಿಭಾಯಿಸುತ್ತಿದ್ದೇನೆ. ಪೋಷಕರನ್ನು ನೋಡಿಕೊಳ್ಳುತ್ತಿದ್ದೇನೆ ಅನ್ನೋ ಹೆಮ್ಮೆ ಇದೆ. ಆದರೆ ದಿನ ದೂಡುತ್ತಿದ್ದೇನೆ, ಅಭಿವೃದ್ಧಿಯಾಗಲಿ, ಪ್ರಗತಿಯಾಗಲಿ ಕಾಣುತ್ತಿಲ್ಲ ಅನ್ನೋ ಆತಂಕ, ನೋವು ಪ್ರತಿ ಬಾರಿ ಕಾಡುತ್ತಿದೆ ಎಂದು ಟೆಕ್ಕಿ ಹೇಳಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಎಲ್ಲವು ದುಬಾರಿ. ಹಾಗಂತ ಬೇರೆ ನಗರದಲ್ಲಿ, ಹಳ್ಳಿಯಲ್ಲಿ ಕಡಿಮೆ ಇದೆ ಎಂದಲ್ಲ. ಆದರೆ ಬೆಂಗಳೂರಿನಲ್ಲಿ ಈ ವೇತನ ಸಾಲುತ್ತಿಲ್ಲ ಎಂದಿದ್ದಾರೆ. ಇದೇ ವೇಳೆ ಕೆಲ ಪ್ರಶ್ನೆಗಳನ್ನು ಟೆಕ್ಕಿ ಮುಂದಿಟ್ಟಿದ್ದಾನೆ. ಈ ಪರಿಸ್ಥಿತಿ ನನಗೆ ಮಾತ್ರವೇ? ಅಥವಾ ಬೆಂಗಳೂರಿನಲ್ಲಿ, ಇತರ ನಗರದಲ್ಲಿ ಕೆಲಸ ಮಾಡುತ್ತಿರುವ ಯುವ ಸಮೂಹಕ್ಕಿದೆಯಾ? ಮಧ್ಯಮ ವರ್ಗದ ಜನ ಇದೇ ರೀತಿ ಕಷ್ಟ ಅನುಭವಿಸುತ್ತಿದ್ದಾರಾ? ಇದರಿಂದ ಹೊರಬರಲು ಸಾಧ್ಯವೇ ಇಲ್ಲವೇ? ಬದುಕಿನ ಪಯಣದಲ್ಲಿ ಇದೆಲ್ಲವೂ ಸಹಜವೇ? ಎಂದು ಒಂದಷ್ಟು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
₹60 ಲಕ್ಷಕ್ಕಿಂತ ಕಡಿಮೆ ಸಂಬಳವಿದ್ದವರು ಬಡವರು, ಶೇ.70 ರಷ್ಟು ಟ್ಯಾಕ್ಸ್ ಕತೆ ಬಿಚ್ಚಿಟ್ಟ ಟೆಕ್ಕಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.