ಕಾರ್ಪೋರೇಟರ್‌ ಆಗಿ ಜನ ಮನ ಗೆದ್ದಿರುವ ಮಂಗಳಮುಖಿ!

By Web DeskFirst Published Feb 26, 2019, 10:27 AM IST
Highlights

ಸಮಾಜಸೇವೆ ಎಂಬುದು ಕೆಲವರಿಗೆ ಹೊಟ್ಟೆಪಾಡಿಗಾಗಿ ಕಂಡುಕೊಂಡ ದಾರಿ. ಮತ್ತೆ ಕೆಲವರಿಗೆ ಅದು ಘನತೆ. ಹಲವರಿಗೆ ಪ್ರತಿಷ್ಠೆ. ಅನೇಕರಿಗೆ ರಾಜಕೀಯ ಪ್ರವೇಶಕ್ಕೆ ಮುನ್ನುಡಿ. ಹೀಗೆ ‘ಸೇವೆ’ ಹೆಸರಿನಲ್ಲಿ ಅನೇಕ ಮುಖಗಳು ಸಮಾಜದಲ್ಲಿ ಆಗಾಗ್ಗೆ ಅನಾವರಣಗೊಳ್ಳುತ್ತಲೇ ಇರುತ್ತವೆ. ಆದರೆ, ಇಲ್ಲೊಬ್ಬರು ಮಂಗಳಮುಖಿ ತನ್ನ ಇಡೀ ಬದುಕನ್ನೇ ಸಮಾಜಮುಖಿ ಕಾರ್ಯಕ್ಕೆ ಮುಡಿಪಿಟ್ಟು ಕಳೆದ 20 ವರ್ಷಗಳಿಂದ ಸದ್ದಿಲ್ಲದೆ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಗಳಮುಖಿಯರು ಸೇರಿ ನೂರಾರು ಜನರ ನೋವು-ನಲಿವಿಗೆ ಸ್ಪಂದಿಸುತ್ತಲೇ ಜನಾನುರಾಗಿಯಾಗಿದ್ದಾರೆ ಬಳ್ಳಾರಿಯ ಬಂಡಿಮೋಟ್‌ ಪ್ರದೇಶದ ನಿವಾಸಿ ಪರ್ವಿನ್‌ ಬಾನು.

ಕೆ. ಎಂ. ಮಂಜುನಾಥ್ ಬಳ್ಳಾರಿ 

ಯಾರೀ ಪರ್ವಿನ್‌ ಬಾನು?

ಯಾವ ಕನಸು ಹೊತ್ತುಕೊಳ್ಳದೆ ಬರೀ ಜನ ಸೇವೆಯ ಮಂತ್ರ ಜಪಿಸುತ್ತಿದ್ದವರು ಪರ್ವಿನ್‌ ಬಾನು. ಇದವರು ಸದ್ಯ ಮಹಾನಗರ ಪಾಲಿಕೆಯ 4ನೇ ವಾರ್ಡ್‌ನ ಕಾರ್ಪೊರೇಟರ್‌ ಆಗಿದ್ದಾರೆ. ರಾಜಕೀಯಕ್ಕೆ ಬರಬೇಕೆಂದು ಜನ ಸೇವೆಯಲ್ಲಿ ತೊಡಗಿಸಿಕೊಂಡವರಲ್ಲ. ರಾಜಕೀಯಕ್ಕೆ ಬರಬೇಕೆಂದು ಒತ್ತಡಕ್ಕೆ ತಳ್ಳಿದವರು ಜನರೇ. ಚುನಾವಣೆ ಬಳಿಕ ಮುಖ ತೋರಿಸದ ರಾಜಕಾರಣಿಗಳು ನಮಗೆ ಬೇಕಿಲ್ಲ. ಸದಾ ನಮ್ಮ ಜೊತೆ ಇದ್ದು ನಮ್ಮ ಕಷ್ಟ-ಸುಖಗಳನ್ನು ಆಲಿಸುವವರು ಬೇಕು ಎಂದು ತೀವ್ರ ಒತ್ತಡ ಹೇರಿದ ಬಳಿಕವೇ ಜನರ ಆಸೆಗೆ ಅಸ್ತು ಎಂದವರು ಈ ಪರ್ವಿನ್‌ಬಾನು.

ಪರ್ವಿನ್‌ ಸೇವೆಯ ಹಿನ್ನೋಟ

ಬಂಡಿಮೋಟ್‌ ಪ್ರದೇಶದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿವರೆಗೆ ವಿದ್ಯಾಭ್ಯಾಸ. ಮನೆಯ ಬಡತನದಿಂದ ಅಕ್ಷರ ಕಲಿಕೆಯಿಂದ ಹಿಂದೆ ಸರಿದು ಓಣಿ ಓಣಿ ತಿರುಗಾಟ ನಡೆಸಿ ಮೊಟ್ಟೆಗಳನ್ನು ಮಾರಾಟ ಮಾಡಿ ಅದರಿಂದ ಬಂದ ಲಾಭದಲ್ಲಿ ತಂದೆ-ತಾಯಿಯ ಪೋಷಣೆಗೆ ನಿಂತರು. ಮೊಟ್ಟೆಮಾರುತ್ತಿದ್ದಾಗ ಜನರ ಸಂಕಷ್ಟಗಳನ್ನು ಕಣ್ಣಾರೆ ನೋಡಿ, ಕೈಲಾದಷ್ಟುಜನರಿಗೆ ಸಹಾಯ ಮಾಡಲು ಮುಂದಾದರು. ಅಂತೆಯೇ ಮೊಟ್ಟೆಮಾರಿ ಬಂದ ನಂತರ ಉಳಿದ ಸಮಯವನ್ನು ಜನ ಸೇವೆಗಾಗಿ ತೊಡಗಿಸಿಕೊಳ್ಳುತ್ತಾರೆ.

ಜನರಿಗೆ ಸಮಸ್ಯೆ ಬಂದಾಗ ಹೋರಾಟದ ಹೆಜ್ಜೆ

ವೃದ್ಧರಿಗೆ ಪಿಂಚಣಿ, ಬಡವರಿಗೆ ಪಡಿತರ ಕಾರ್ಡ್‌, ವಿಧವಾ ವೇತನ, ಮನೆ ಇಲ್ಲದವರಿಗೆ ಸರ್ಕಾರಿ ಯೋಜನೆಯಡಿ ಆಶ್ರಯ ಮನೆಗಳು, ಬಡವರಿಗೆ ಪಟ್ಟಾಕೊಡಿಸುವುದು ಹೀಗೆ ನಾನಾ ಸಮಸ್ಯೆಗಳನ್ನು ಹೊತ್ತ ಜನರಿಗೆ ಸಂಬಂಧಿಸಿದ ಇಲಾಖೆಗೆ ತೆರಳಿ ಅವರಿಗೆ ಸಹಾಯ. ತನ್ನ ಸೇವೆಗೆ ಯಾರೊಬ್ಬರಿಂದ ಒಂದೇ ಒಂದು ಪೈಸೆಯ ಹಣ ಪಡೆಯದೆ ತನ್ನಿಂದಾದ ಆರ್ಥಿಕ ನೆರವು ನೀಡುತ್ತಾ, ಸುಮಾರು 20 ವರ್ಷಗಳಿಂದ ಜನಪರ ಸೇವೆಯಲ್ಲಿ ತೊಡಗಿಸಿಕೊಂಡು, ತಮ್ಮ ಕಾಲೋನಿಯಲ್ಲಿ ಸಮಸ್ಯೆ ಬಂದಾಗ ಜನರಿಗಾಗಿ ಹೋರಾಟದ ಹೆಜ್ಜೆಯೂ ಹಾಕಿದ್ದಾರೆ. ಹೀಗೆ ಬದುಕನ್ನು ಜನರಿಗಾಗಿ ಮುಡಿಪಿಟ್ಟು ಕೆಲಸ ಮಾಡುತ್ತಿರುವ ಪರ್ವಿನ್‌ ಕಾರ್ಪೊರೇಟರ್‌ ಆದರೆ ನಮಗೆ ಮತ್ತಷ್ಟೂಸೇವೆ ಪಡೆಯಲು ಅವಕಾಶವಾಗುತ್ತದೆ ಎಂದು ಕಳೆದ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಅಲ್ಲಿನ ಜನರು ಮನವಿ ಮಾಡುತ್ತಾರೆ. ಇದಕ್ಕೆ ಪರ್ವಿನ್‌ ತಿರಸ್ಕರಿಸುತ್ತಾರಲ್ಲದೆ, ನನ್ನ ಕೈಲಾದ ಸಹಾಯ ಮಾಡಿಕೊಂಡು ಇರುತ್ತೇನೆ ಎಂದಾಗ ಅದಕ್ಕೆ ಜನರೂ ಒಪ್ಪದಿದ್ದಾಗ ಕೊನೆಗೂ ಜನರ ಒತ್ತಾಸೆಗೆ ಮಣಿದು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆಯುತ್ತಾರೆ.

ನಾನು ಬಡತನದಿಂದ ಬಂದಿದ್ದೇನೆ. ಹೀಗಾಗಿ ಬಾಲ್ಯದಿಂದಲೂ ಬಡವರು ಎಂದರೆ ನನಗೆ ಪ್ರಾಣ. ಅವರಿಗೆ ಸಾಧ್ಯವಾದಷ್ಟುನೆರವಾಗಬೇಕು. ಅದರಿಂದ ಬದುಕಿನ ಸಾರ್ಥಕತೆ ಕಂಡುಕೊಳ್ಳಬೇಕು. ಪಾಲಿಕೆ ಸದಸ್ಯಳಾಗಿರುವುದರಿಂದ ಗೌರವಧನವಾಗಿ 5 ಸಾವಿರ ರು. ಕೊಡುತ್ತಾರೆ. ಮನೆಯ ಮುಂದೆ ದೋಸೆ, ಮಿರ್ಚಿ ಮಾರಾಟದಿಂದ ಒಂದಷ್ಟುಹಣ ಬರುತ್ತದೆ. ಇದರಲ್ಲಿ ಒಂದಷ್ಟುಪಾಲು ಕುಟುಂಬ ನಿರ್ವಹಣೆಗೆ ಬಳಸಿ, ಉಳಿದದ್ದನ್ನು ಜನರಿಗಾಗಿ ಖರ್ಚು ಮಾಡುತ್ತೇನೆ.- ಪರ್ವಿನ್‌ ಬಾನು

ಅಧಿಕಾರ ಜನರ ಕಲ್ಯಾಣಕ್ಕೆ ಬಳಕೆ

ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು, ಸ್ಥಳೀಯ ಸಮಸ್ಯೆಗಳ ನಿವಾರಣೆಗೆ ಕ್ರಮ ಹೀಗೆ ಪಟ್ಟಿಮಾಡಿಕೊಂಡು ಕನಿಷ್ಠ ಸೌಲಭ್ಯವಿಲ್ಲದೆ ಬಳಲುತ್ತಿದ್ದ ಬಂಡಿಮೋಟ್‌ ಪ್ರದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ದಿದ್ದಾರೆ. 20 ವರ್ಷದಿಂದ ಜನಸೇವೆ ನಂತರ ಅಂದರೆ ಪಾಲಿಕೆ ಸದಸ್ಯರಾದ ಬಳಿಕ ಹತ್ತಪಟ್ಟು ಹೆಚ್ಚು ಕೆಲಸ ಮಾಡಲು ಸಾಧ್ಯವಾಯಿತು. ಸ್ಲಂ ಪ್ರದೇಶವೊಂದು ಜನರ ಸಹಕಾರದಿಂದ ಸಮಗ್ರ ಅಭಿವೃದ್ಧಿಗೊಂಡಿದೆ ಎನ್ನುತ್ತಾರೆ ಪರ್ವಿನ್‌ಬಾನು.

ನಬಿಸಾಬ್‌ ಪರ್ವಿನ್‌ಬಾನು ಆಗಿ ಬದಲಾದದ್ದು....

ಬಾಲ್ಯದಲ್ಲಿ ಎಲ್ಲ ಮಕ್ಕಳಂತೆ ಬೆಳೆದ ನಬೀಸಾಬ್‌ 6ನೇ ತರಗತಿ ಬಳಿಕ ಆತನ ದೇಹದಲ್ಲಾದ ಬದಲಾವಣೆಗಳಿಂದ ಪರ್ವಿನ್‌ಬಾನು ಆಗಿ ಬದಲಾಗುತ್ತಾರೆ. ಮಗನ ಬೆಳವಣಿಗೆಯಿಂದ ಪೋಷಕರು ಆಘಾತಗೊಳ್ಳದೆ ಎಲ್ಲವೂ ದೇವರ ಇಚ್ಛೆ ಎಂದು ಪರ್ವಿನ್‌ಬಾನುರ ಆಸರೆಗೆ ನಿಲ್ಲುತ್ತಾರೆ. ತಂದೆ-ತಾಯಿ ಜೊತೆಯಲ್ಲಿಯೇ ಅವರ ನಿರ್ಮಿಸಿದ ಪುಟ್ಟಗೂಡಿನಲ್ಲಿಯೇ ಪರ್ವಿನ್‌ಬಾನು ಜೀವನ ನಡೆಸುತ್ತಾರೆ. ಮೊದಲು ಮೊಟ್ಟೆಮಾರಾಟದಿಂದ ಬಂದ ಒಂದಷ್ಟುಲಾಭದಿಂದ ಮನೆ ನಿರ್ವಹಣೆ. ಬಳಿಕ ಮೊಟ್ಟೆಮಾರಾಟ ಬಿಟ್ಟು ಪುಟ್ಟಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಾರೆ. ಪಾಲಿಕೆ ಸದಸ್ಯರಾದ ಬಳಿಕ ಜನರ ಕಷ್ಟಗಳಿಗೆ ಓಡಾಟ ಹೆಚ್ಚಾಗಿದ್ದರಿಂದ ಅಂಗಡಿಯನ್ನು ತೆಗೆದು ಸಂಜೆ ವೇಳೆ ಮನೆಯ ಮುಂದೆ ಮಿರ್ಚಿ, ದೋಸೆ ಹಾಕಿ ಅದರಿಂದ ಬಂದ ಒಂದಷ್ಟುಲಾಭದಿಂದ ಜೀವನ ನಡೆಸುತ್ತಿದ್ದಾರೆ. ತಂದೆ-ತಾಯಿ ಮೃತಪಟ್ಟಬಳಿಕ ತಮ್ಮನೂ ಮೃತಪಡುತ್ತಾನೆ. ಹೀಗಾಗಿ ತಮ್ಮನ ಮಕ್ಕಳ ಜವಾಬ್ದಾರಿ ಪರ್ವಿನ್‌ಬಾನುಳ ಮೇಲೆ ಇದ್ದು ತಮ್ಮನ ಹೆಂಡತಿ ಹಾಗೂ ಇಬ್ಬರು ತಮ್ಮನ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾಳೆ ಪರ್ವಿನ್‌ಬಾನು.

ಪರ್ವಿನ್‌ ಸೇವೆ

ಬೆಳಗ್ಗೆ 5 ಗಂಟೆಗೆ ಎದ್ದು ಪರ್ವಿನ್‌, 4ನೇ ವಾರ್ಡ್‌ನ ಮನೆಮನೆ ಭೇಟಿ ಶುರುವಾಗುತ್ತದೆ. 9 ಗಂಟೆವರೆಗೆ ಜನರ ಸಮಸ್ಯೆ ಕೇಳಿ ಬಳಿಕ ಮನೆಗೆ ಆಗಮಿಸುತ್ತಾರೆ. ಬಳಿಕ ಮಹಾನಗರ ಪಾಲಿಕೆಗೆ ತೆರಳಿ ಜನರ ಸಮಸ್ಯೆಗಳ ನಿವಾರಣೆಗೆ ಕ್ರಮ ವಹಿಸುತ್ತಾರೆ. ಮಧ್ಯರಾತ್ರಿಯಲ್ಲಿ ಕುಡಿವನೀರು ಬಿಟ್ಟರೂ ಇಡೀ ಪ್ರದೇಶದಲ್ಲಿ ರಾತ್ರಿ ಹೊತ್ತು ಓಡಾಡಿ ‘ನೀರು ಬಂದವು ಹಿಡಿದುಕೊಳ್ಳಿ’ ಎಂದು ಜನರಿಗೆ ತಿಳಿಸುತ್ತಾರೆ. ಕೆಲವು ಪ್ರಕರಣಗಳು ಪೊಲೀಸ್‌ ಠಾಣೆ ಮೆಟ್ಟಿಲೇರಿದರೂ ಜೊತೆಗೆ ಈಕೆ ಇರಲೇಬೇಕು. ಪರ್ವಿನ್‌ ಬಾನು ಪಾಲಿಕೆಯ ಸದಸ್ಯೆಯಾದ ಬಳಿಕ ಬಂಡಿಮೋಟ್‌ ಪ್ರದೇಶ ಬದಲಾಗಿದೆ. ಕೊಳಚೆ ಪ್ರದೇಶದಂತಿದ್ದ ಇದನ್ನು ಜನರ ಸಹಕಾರದಿಂದ ಬದಲಾಯಿಸಿದ್ದಾರೆ. ಕುಡಿವನೀರು, ಶೌಚಾಲಯ, ಚರಂಡಿ ನಿರ್ಮಾಣ, ಮನೆಮನೆಗೆ ಶೌಚಾಲಯ, ಆಶ್ರಯ ಯೋಜನೆಯಡಿ ಬಡವರಿಗೆ ಮನೆ ನಿರ್ಮಾಣ, ಇದಕ್ಕಾಗಿ 1.50 ಲಕ್ಷ ರು.ಗಳ ಸರ್ಕಾರದ ನೆರವು, ಬೀದಿ ಬದಿಯ ವ್ಯಾಪಾರಿಗಳಿಗೆ ಪಾಲಿಕೆಯಿಂದ 12 ಸಾವಿರ ರು.ಗಳ ಪ್ರೋತ್ಸಾಹಧನ. ಬಂಡಿಮೋಟ್‌ನ ಅಭಿವೃದ್ಧಿಯ ಬಗ್ಗೆ ಒಂದಷ್ಟೂಕೊಚ್ಚಿಕೊಳ್ಳದ ಪರ್ವಿನ್‌ ಎಲ್ಲವೂ ಜನರ ಸಹಕಾರದಿಂದ ಆಗುತ್ತದೆ. ನನ್ನದೇನೂ ಇಲ್ಲ ಎಂದು ಹೇಳುತ್ತಾರೆ.

ಪರ್ವಿನ್‌ ಸೇವೆ ಬಂಡಿಮೋಟ್‌ ಪ್ರದೇಶಕ್ಕಷ್ಟೇ ಸೀಮಿತವಾಗಿಲ್ಲ. ಮಂಗಳಮುಖಿಯರ ಕಲ್ಯಾಣಕ್ಕಾಗಿ ಈಕೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಮಂಗಳಮುಖಿಯರಿಗೆ ಆಧಾರ್‌ ಕಾರ್ಡ್‌, ಪಡಿತರ ಕಾರ್ಡ್‌ ಸೇರಿ ಅನೇಕ ಸೌಲಭ್ಯಗಳನ್ನು ಕಲ್ಪಿಸಲು ಸಾಕಷ್ಟುಶ್ರಮಿಸಿರುವ ಅವರು, ಮಂಗಳಮುಖಿಯರು ಸರ್ಕಾರದ ಅನೇಕ ಯೋಜನೆಗಳ ಲಾಭ ಪಡೆಯುವಂತಾಗಬೇಕು. ಈ ಮೂಲಕ ಭಿಕ್ಷಾಟನೆಯಿಂದ ದೂರ ಉಳಿಯಬೇಕು. ಸ್ವಾವಲಂಬಿ ಬದುಕು ಸಾಗಿಸಬೇಕು ಎಂಬ ಕಾರಣಕ್ಕಾಗಿಯೇ ಮಂಗಳಮುಖಿಯರ ಪರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಅರ್ಧನಾರೀಶ್ವರ ಸಂಘ ಹುಟ್ಟಿಹಾಕಿ ಈ ಸಂಸ್ಥೆಯ ಮೂಲಕ ಮಂಗಳಮುಖಿಯರಿಗೆ ನೆರವಾಗುವ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

 

click me!