ವಾನ್ಲಿ; ಒನ್ ಆ್ಯಂಡ್ ಓನ್ಲಿ, ಸಖತ್ ಲೋನ್ಲಿ, ಇದು ಏಲಿಯನ್ ಮನೆಗಳ ನಿಗೂಢ ಪಟ್ಟಣ!

By Web Desk  |  First Published Aug 1, 2019, 3:54 PM IST

ಥೈವಾನ್‌ನ ಈ ಪಟ್ಟಣದಲ್ಲಿ ಮಂಗಳ ಗ್ರಹದಿಂದ ಒಂದಿಷ್ಟು ಜೀವಿಗಳು ಬಂದು ತಮ್ಮ ಫ್ಲೈಯಿಂಗ್ ಸಾಸರ್‌ಗಳನ್ನು ಇಲ್ಲೇ ಬಿಟ್ಟು ಭೂಮಿಯನ್ನು ಸುತ್ತಿಬರಲು  ಹೋದಂತಿದೆ. ಜನರಿಲ್ಲದ ಊರೀಗ ದೆವ್ವಗಳ ನಗರಿ ಎನಿಸಿಕೊಂಡಿದೆ. 
 


ಈ ಊರಿನಲ್ಲಿ ಜನರೇ ಇಲ್ಲ, ಆದರೆ ಸಾಕಷ್ಟು ಮನೆಗಳಿವೆ. ಅವೂ ಸಾಮಾನ್ಯವಾದ ಮನೆಗಳಲ್ಲ. ಏಲಿಯನ್‌ಗಳ ವಾಹನವೆಂದೇ ನಂಬುವ ಯುಎಫ್ಒ ಆಕಾರದ ಮನೆಗಳು. ಕಟ್ಟಿದ್ದು ಯಾವಾಗ ಗೊತ್ತಿಲ್ಲ, ಎಲ್ಲಿಂದ ಬಂದವು ತಿಳಿದಿಲ್ಲ... ಇಂಥದೊಂದು ರಹಸ್ಯಗಳ ಕಟ್ಟನ್ನೇ ಹೊತ್ತ ಪಟ್ಟಣವೇ ಥೈವಾನ್‌ನ ವಾನ್ಲಿ. ಇಂಥಾ ಈ ವಾನ್ಲಿ ದೆವ್ವಗಳ ಪಟ್ಟಣ ಎಂದು ಹೆಸರು ಪಡೆದದ್ದು ವಿಶೇಷವೇನಲ್ಲ ಬಿಡಿ. 

ವಾನ್ಲಿಯಲ್ಲಿ ಎರಡು ರೀತಿಯ ಮನೆಗಳಿವೆ; ಬಾಕ್ಸ್‌ನಂಥ ಚೌಕಾಕಾರದ ವೆಂಚುರೋಸ್. ಮತ್ತೊಂದು ಫ್ಲೈಯಿಂಗ್ ಸಾಸರ್ ಆಕಾರದ ಫ್ಯೂಚುರೋಸ್. ಕೆಲ ಮೂಲಗಳ ಪ್ರಕಾರ, ಫಿನ್ಲ್ಯಾಂಡ್‌ನ ಆರ್ಕಿಟೆಕ್ಟ್ ಮ್ಯಾಟಿ ಸುರೋನೆನ್ ಈ ಮನೆಗಳ ವಿನ್ಯಾಸ ರಚಿಸಿದ್ದಾರೆ. ಆದರೆ, ಸುರೋನನ್ ಈ ಮನೆಗಳ ನಿರ್ಮಾಣಕ್ಕೆ ಯಾವುದೇ ಅನುಮತಿ ನೀಡಿಲ್ಲ. ಅದಕ್ಕಿಂತಾ ನಿಗೂಢವೆಂದರೆ ಈ ಮನೆಗಳನ್ನು ಯಾರು ತಂದು ಇಲ್ಲಿಟ್ಟರು ಎಂಬುದೂ ಯಾರಿಗೂ ಗೊತ್ತಿಲ್ಲ, ಯಾರು ಕಟ್ಟಿದರು ಎಂಬುದೂ ಗೊತ್ತಿಲ್ಲ!

Tap to resize

Latest Videos

ಭಾರತದ ಉತ್ತುಂಗ ಸ್ಥಳಗಳು: ಜೊತೆಯಾಗಿ ಭೇಟಿಯಿತ್ತರೆ ಅಳಿಯದಿರಲಿ ಹೆಜ್ಜೆಗಳು!

1970ರಲ್ಲಿ ಇಲ್ಲಿ ಜನರು ಊರು ತೊರೆದರು ಎನ್ನಲಾಗುತ್ತದೆ. ಆದರೆ, ಹಾಗೆ ತೊರೆದವರು ಎಲ್ಲಿ ಹೋದರು, ಏನಾದರು, ಕಡೆಯ ಪಕ್ಷ ಯಾಕೆ ತೊರೆದರು ಎಂದೂ ತಿಳಿದಿಲ್ಲ. ಹತ್ತಿರದ ಯಾವುದೋ ಆಸ್ತಿ ಅಭಿವೃದ್ಧಿ ಸಂದರ್ಭದಲ್ಲಿ ಜನರು ಊರು ತೊರೆದಿರಬೇಕು, ಇಲ್ಲಿ ಮನೆ ನಿರ್ಮಾಣ ಬಹಳ ದುಬಾರಿ ಎಂದು ಬಿಟ್ಟಿರಬೇಕು ಎಂಬೆಲ್ಲ ಅನುಮಾನಗಳಿವೆ. ಆದರೆ ಅವುಗಳನ್ನು ಪರಿಹರಿಸುವವರಾರು? 

ದೆವ್ವಗಳ ನಗರಿ

ಇಲ್ಲಿ ಯುಎಫ್ಒ ಆಕಾರದ ಮನೆಗಳಿರುವುದರಿಂದ ಕೆಲವರು ಇದನ್ನು ಯುಎಫ್ಒ(ಗುರುತಿಸಲಾಗದ ಹಾರುವ ವಸ್ತು) ಪಟ್ಟಣ ಎಂದೇ ಕರೆಯುತ್ತಾರೆ. ಇದು ದೆವ್ವಗಳ ಊರು ಎಂದೂ ಹೇಳುವವರಿದ್ದಾರೆ. ಹತ್ತಿರದ ಆಸ್ತಿ ಅಭಿವೃದ್ಧಿ ಸಂದರ್ಭದಲ್ಲಿ ಹಲವಾರು ಜನ ಆತ್ಮಹತ್ಯೆ ಮಾಡಿಕೊಂಡಿರುವುದು, ಹಲವು ಆ್ಯಕ್ಸಿಡೆಂಟ್‌ಗಳಾಗಿರುವುದು- ಈ ದೆವ್ವಗಳ ಥಿಯರಿಗೆ ಮತ್ತಷ್ಟು ಬಲ ನೀಡಿವೆ. ಈ ಯುಎಫ್ಒ ಮನೆಗಳ ಮೇಲೆ 'ವಿ ವಾಂಟ್ ಪೀಸ್' ಎಂದು ಬರೆದಿದೆ. ಆದರೆ ಅಲ್ಲಿ ತುಕ್ಕು ಹಿಡಿಯುತ್ತಿರುವ ಮನೆಗಳು, ಮುರಿದ ಬಾಗಿಲು, ಹರಿದ ಕರ್ಟನ್ಸ್, ಖಾಲಿ ಬಿದ್ದ ರೋಡುಗಳನ್ನು ನೋಡುತ್ತಿದ್ದರೆ ಜನರಿಗೆ ಹೋಗಲಿ, ಮನೆಗಳಿಗೂ ಶಾಂತಿ ಸಿಕ್ಕಿರಬಹುದು ಎಂಬುದು ಅನುಮಾನವೇ. ಇನ್ನು ದೆವ್ವಗಳಿಗೆ ಶಾಂತಿ ಸಿಕ್ಕಿದೆಯೇ? ಅವೇ ಹೇಳಬೇಕು. ಅವು ಹೇಳಿದರೂ ಕೇಳುತ್ತಾ ನಿಲ್ಲುವವರಾದರೂ ಯಾರು?

ಈ ಮೋಸ್ಟ್ ಹಾಂಟೆಡ್ ದ್ವೀಪಕ್ಕೆ ಹೋದ್ರೆ ಕಥೆ ಅಷ್ಟೇ....

ಮತ್ತೊಂದು ಥಿಯರಿ

ಇಲ್ಲಿ ಸುಮಾರು 13 ಫ್ಯುಚುರೋ ಹಾಗೂ ಅದಕ್ಕಿಂತ ಹೆಚ್ಚು ವೆಂಚುರೋ ಹೌಸ್‌ಗಳಿವೆ. ಒಳಗೆ ವಾಷಿಂಗ್ ಮೆಷಿನ್, ಹಾಸಿಗೆಗಳು ಹಾಗೂ ಟಿವಿಗಳಿವೆ. ಇನ್ನೊಂದು ಥಿಯರಿಯ ಪ್ರಕಾರ, ಥೈವಾನ್‌ನ ಉದ್ಯಮಿ ಮಿ. ಸು ಮಿಂಗ್ ಇಲ್ಲಿ ಹಾಲಿಡೇ ವಿಲೇಜ್ ನಿರ್ಮಿಸುವ ಆಸೆಯಿಂದ ಈ ಫ್ಯುಚುರೋ ಹಾಗೂ ವೆಂಚುರೋಗಳನ್ನು ನಿರ್ಮಿಸಿದ್ದಾರೆ. ಇಲ್ಲೇ ನಿರ್ಮಿಸಿದರೋ ಅಥವಾ ಮ್ಯಾಟಿ ಸುರೋನೆನ್ ಫ್ಯಾಕ್ಟರಿಯಿಂದ ಕೊಂಡು ತಂದರೋ ಯಾರಿಗೂ ಗೊತ್ತಿಲ್ಲ. ಆದರೆ, ಹಾಗೆ ಕೊಂಡು ತಂದಿದ್ದೇ ಆದಲ್ಲಿ ಫಿನ್‌ಲ್ಯಾಂಡ್ನಿಂದ ಥೈವಾನ್‌ಗೆ ಈ ಮನೆಗಳು ಪ್ರಯಾಣ ಬೆಳೆಸಿರಬೇಕು. ಈ ಅರ್ಧ ಪ್ರಪಂಚ ಸುತ್ತುವಷ್ಟು ಖರ್ಚು ಮಾಡಿ ತರಿಸಿ, ಅವನ್ನು ಹಾಳು ಬಿಟ್ಟಿದ್ದೇಕೆ ಎಂಬುದೂ ಕಾಡುವ ಪ್ರಶ್ನೆಯೇ. ಅತ್ಯಂತ ಬಿಸಿಯಾದ ಬೇಸಿಗೆ, ಅತ್ಯಂತ ಚಳಿಯ ಚಳಿಗಾಲ ಹಾಗೂ ಗಗನಕ್ಕೇರಿದ ತೈಲ ಬೆಲೆಯಿಂದಾಗಿ ಈ ರೆಸಾರ್ಟ್ ಐಡಿಯಾ ಫ್ಲಾಪ್ ಆಗಿರಬಹುದು. ಆದರೆ ಇಂದು ಮಾತ್ರ ಈ ಎಲ್ಲ ನಿಗೂಢತೆಯ ಕಾರಣಗಳಿಂದಲೇ ಸಾಕಷ್ಟು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ವಾನ್ಲಿ. 

click me!