ತಿರುಗಾಟಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ವಿಶೇಷಗಳಿಗೆ ಕೊರತೆಯಿಲ್ಲ. ಇಲಿಯನ್ನು ಪೂಜಿಸುವ ದೇಗುಲಗಳಿಂದ ಹಿಡಿದು ಜೀವಂತ ಸೇತುವೆವರೆಗೆ, ಹಕ್ಕಿಗಳ ಸಾಮೂಹಿಕ ಆತ್ಮಹತ್ಯೆ ತಾಣದಿಂದ ಹಿಡಿದು ಸಂಗೀತ ಹಾಡುವ ಕಲ್ಲುಗಳವರೆಗೆ ಅಚ್ಚರಿಗಳಿವೆ, ವೈಪರೀತ್ಯಗಳಿವೆ. ಇನ್ನು ಭೂಮಿಯಲ್ಲೇ ವಿಶೇಷತೆ ಹೊಂದಿದ ಎತ್ತರದ ಪ್ರದೇಶಗಳಲ್ಲಿ ಕೆಲವು ಭಾರತದಲ್ಲೂ ಇವೆ. ಯಾವುದಪ್ಪಾ ಅಂದ್ರಾ?
ಟ್ರಾವೆಲಿಂಗ್ ವಿಷಯಕ್ಕೆ ಬಂದರೆ ಭಾರತದಲ್ಲಿ ಹತ್ತು ಹಲವು ವಿಶೇಷಗಳನ್ನು ಹುಡುಕಿಕೊಳ್ಳಬಹುದು. ಧಾರ್ಮಿಕ, ಆಧ್ಯಾತ್ಮಿಕ, ವೈಜ್ಞಾನಿಕ, ಸಾಂಸ್ಕೃತಿಕ, ಪ್ರಾಕೃತಿಕ, ಐತಿಹಾಸಿಕ, ಸಾಹಸಿ- ಹೀಗೆ ಯಾತ್ರಿಕನ ಮನೋಭಾವ, ಆಸಕ್ತಿಗಳು ಯಾವುದೇ ಇರಲಿ, ಅವಕ್ಕೆ ಹೊಂದುವಂಥ ತಾಣಗಳನ್ನು ಹುಡುಕಿಕೊಂಡು ಸುತ್ತಬಹುದು. ಇದರಲ್ಲಿ ನಿಮ್ಮದು ಸಾಹಸೀ ಪ್ರವೃತ್ತಿಯಾಗಿದ್ದಲ್ಲಿ ಭೂಮಿಯಲ್ಲೇ ಎತ್ತರದ ಪ್ರದೇಶದಲ್ಲಿರುವ ಈ ವಿಶೇಷ ಸ್ಥಳಗಳಿಗೆ ಪ್ರಯಾಣ ಬೆಳೆಸಬಹುದು. ಅಂದ ಹಾಗೆ ಇವೆಲ್ಲವೂ ಭಾರತದಲ್ಲೇ ಇರುವುದು ನಮ್ಮ ಹೆಗ್ಗಳಿಕೆ.
ಭಾರತದ ನಗರಗಳ ಹೆಸರನ್ನೇ ಹೊತ್ತ ವಿದೇಶಿ ನಗರಗಳು
undefined
ಖಾರ್ದುಂಗ್ ಲಾ, ವಿಶ್ವದಲ್ಲೇ ಅತಿ ಎತ್ತರದ ವಾಹನ ಸಂಚರಿಸಬಹುದಾದ ರಸ್ತೆ
ಲಡಾಕ್‌ನ ಈ ಪರ್ವತ ಪ್ರದೇಶದ ರಸ್ತೆ ಇರುವುದು ಸಮುದ್ರ ಮಟ್ಟದಿಂದ ಬರೋಬ್ಬರಿ 18,380 ಅಡಿಗಳ ಮೇಲೆ. ರೋಡ್ ಟ್ರಿಪ್ ಇಷ್ಟಪಡುವವರನ್ನು, ಸಾಹಸಿ ಬೈಕರ್‌ಗಳನ್ನು ನಿರಂತರ ಆಕರ್ಷಿಸುವ ಖಾರ್ದುಂಗ್ ಲಾ 1988ರಲ್ಲಿ ಸಾರ್ವಜನಿಕರ ಓಡಾಟಕ್ಕೆ ತೆರೆದುಕೊಂಡಿದೆ. ಸುರಕ್ಷತೆಯೇ ಮಾನದಂಡವಾಗಿರುವ ಪ್ಯಾಕೇಜ್ ಡೀಲ್ಸ್‌ಯಿಂದ್ ಹೊರ ಬಂದು ಸ್ವಲ್ಪ ಸಾಹಸೀ ವೈವಿಧ್ಯತೆ ಬೇಕೆನ್ನುವವರಿಗೆ ಹೇಳಿ ಮಾಡಿಸಿದ ತಾಣ. ವಿಶ್ವದ ಎತ್ತರದ ವಾಹನ ಸಂಚಾರಿ ರಸ್ತೆಯಲ್ಲಿ ಸಾಗಿದ ಖುಷಿಯೊಂದಿಗೆ ಕಣಿವೆ, ಪರ್ವತಗಳ ಮನಮೋಹಕ ದೃಶ್ಯವೈಭವವನ್ನೂ ಕಣ್ತುಂಬಿಕೊಳ್ಳಬಹುದು.
ರಿಂಚೆನ್ ಕೆಫೆಟೇರಿಯಾ, ಭೂಮಿ ಮೇಲೆ ಅತಿ ಎತ್ತರದಲ್ಲಿರುವ ಕೆಫಿಟೇರಿಯಾ
ಲಡಾಕ್‌ನ ಖಾರ್ದುಂಗ್ ಲಾದಲ್ಲೇ ಇರುವ ರಿಂಚೆನ್ ಕೆಫೆಟೇರಿಯಾ ಕೂಡಾ ಜಗತ್ತಿನ ಅತಿ ಎತ್ತರ ಪ್ರದೇಶದಲ್ಲಿರುವ ಕೆಫಿಟೇರಿಯಾ ಎಂದು ಪ್ರಸಿದ್ಧಿ ಪಡೆದಿದೆ. ಅದೇ ಕಾರಣಕ್ಕೆ ಬಹಳಷ್ಟು ಪ್ರವಾಸಿಗರನ್ನು ಸೆಳೆಯುತ್ತದೆ. ಸ್ಥಳೀಯ ಯೋಧ, ಮಹಾವೀರ ಚಕ್ರ ಗೌರವ ಪಡೆದ ಕರ್ನಲ್ ಶಿವಾಂಗ್ ರಿಂಚೆನ್ ಹೆಸರನ್ನೇ ಈ ಫುಡ್ ಜಾಯಿಂಟ್‌ಗೆ ಇಡಲಾಗಿದೆ. ಇಲ್ಲಿ ಹಲವಾರು ವಿವಿಧ ಚಹಾ ಹಾಗೂ ನೂಡಲ್ಸ್ ದೊರೆಯುತ್ತದೆ. 18,380 ಅಡಿ ಎತ್ತರದಲ್ಲಿ ಕೊರೆಯುವ ಚಳಿಯಲ್ಲಿ ಗಡಗಡ ಎನ್ನುವಾಗ ಬಿಸಿ ಬಿಸಿ ಚಹಾ ಸೇವಿಸುವ ಸ್ವರ್ಗಸುಖವೇ ಸುಖ. ಈ ಅನುಭವ ಕೊಡುವ ರಿಂಚೆನ್ ಕೆಫೆಟೇರಿಯಾವನ್ನು ಒಮ್ಮೆ ಹೊಕ್ಕವರು ಮರೆಯಲಾರರು.
ನಮ್ಗಿಂತ ಮೊದಲೇ ಸಾಯೋ ಈ ಸ್ಥಳವನ್ನ ಈಗಲೇ ನೋಡೋದು ಒಳ್ಳೇದು..
ಸಿಯಾಚಿನ್, ವಿಶ್ವದ ಎತ್ತರದ ಯುದ್ಧಭೂಮಿ
ಈ ಪಾಕ್ ಎಂಬ ಪಾಪಿಸ್ತಾನದ ಕಾಟ ಒಂದೆರಡಲ್ಲ. ಇದು ಛೂ ಬಿಡುವ ನುಸುಳುಕೋರರನ್ನು ತಡೆಯಲು ನಮ್ಮ ಯೋಧರು ಮೈನಸ್ 50 ಡಿಗ್ರಿ ಸೆಲ್ಶಿಯಸ್‌ನಲ್ಲಿ ಮಂಜುಗಡ್ಡೆಯ ಮಧ್ಯೆ ನಿಂತು ದೇಶಭಕ್ತಿಯನ್ನು ಪಣಕ್ಕಿಡುತ್ತಾರೆ. ಇಂಥ ಭಯಾನಕವಾದರೂ ಮನಮೋಹಕತಾಣವೇ ಸಿಯಾಚಿನ್. ಇಲ್ಲಿನ ಪರ್ವತಗಳು ಭಾರತೀಯ ಯೋಧರ ಧೈರ್ಯ, ಸಾಹಸವನ್ನು ಮೆಚ್ಚುಗೆಯಿಂದ ನೋಡುತ್ತಾ ನಿಂತಿವೆ. 5400 ಮೀಟರ್ ಎತ್ತರದಲ್ಲಿರುವ ಈ ಪ್ರದೇಶ ಹಿಮಾಲಯದ ಪೂರ್ವ ಕೋರಕೋರಂ ರೇಂಜ್‌ನಲ್ಲಿದೆ.
ಹಿಕ್ಕಿಂ, ವಿಶ್ವದ ಅತಿ ಎತ್ತರದಲ್ಲಿರುವ ಅಂಚೆಕಚೇರಿ
ಖಾಸಗೀಕರಣ ಹಾಗೂ ಜಾಗತೀಕರಣ ಭಾರತದಲ್ಲಿ ಹೊಸ ಹೊಸ ಬದಲಾವಣೆಗಳನ್ನು ತಂದಿವೆ. ಆದರೆ, ದೇಶದ ಸಣ್ಣ ಪುಟ್ಟ ಪ್ರದೇಶಗಳನ್ನು ಬಿಡದೆ ತಲುಪುವಲ್ಲಿ ಆಲ್ ಇಂಡಿಯಾ ರೇಡಿಯೋ, ಭಾರತೀಯ ರೈಲ್ವೇಸ್ ಹಾಗೂ ಭಾರತೀಯ ಅಂಚೆ ವ್ಯವಸ್ಥೆಗೆ ಸರಿಸಾಟಿಯಾದ ಮತ್ತೊಂದು ಉದಾಹರಣೆ ಸಿಗಲಿಕ್ಕಿಲ್ಲ. ಹಿಮಾಚಲ ಪ್ರದೇಶದ ಹಿಕ್ಕಿಂ ಎಂಬ ಹಳ್ಳಿಯಲ್ಲಿ ಪೋಸ್ಟ್ ಆಫೀಸ್ ಇರದೆ ಹೋಗಿದ್ದರೆ, ಇಂಥದೊಂದು ಹಳ್ಳಿ ಇರುವ ಪರಿಚಯವೂ ಯಾರಿಗೂ ಇರಲು ಸಾಧ್ಯವಿರುತ್ತಿರಲಿಲ್ಲ. ಭೂಮಿಯ ಮೇಲೆ ಅತಿ ಎತ್ತರದಲ್ಲಿ ಅಂದರೆ, 4440 ಮೀಟರ್ ಎತ್ತರದಲ್ಲಿ ನಿರ್ಮಿತವಾದ ಪೋಸ್ಟ್ ಆಫೀಸ್ ಎಂಬ ಹೆಗ್ಗಳಿಕೆಯ ಕಾರಣದಿಂದಲೇ ಹಿಕ್ಕಿಂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಕೊಲುಕ್ಕುಮಲೈ ಟೀ ಎಸ್ಟೇಟ್, ಭೂಮಿಯ ಅತಿ ಎತ್ತರದ ಟೀ ಪ್ಲ್ಯಾಂಟೇಶನ್
ಅಸ್ಸಾಂನ ಟೀ ಜಗತ್ಪ್ರಸಿದ್ಧಿ ಪಡೆದಿರಬಹುದು. ಆದರೆ, ಭಾರತದ ಟೀ ಇಂಡಸ್ಟ್ರಿಯ ವಿಶೇಷಗಳು ಅಷ್ಟಕ್ಕೇ ಸೀಮಿತವಾಗಿಲ್ಲ. ಕೇರಳದ ಮುನ್ನಾರ್‌ನಿಂದ 38 ಕಿಲೋಮೀಟರ್ ದೂರದಲ್ಲಿರುವ ಕೊಲುಕ್ಕುಮಲೈ ಟೀ ಎಸ್ಟೇಟ್, ಸಮುದ್ರ ಮಟ್ಟದಿಂದ 7900 ಅಡಿ ಎತ್ತರದಲ್ಲಿದೆ. ಇಷ್ಟು ಎತ್ತರದಲ್ಲಿ ಜಗತ್ತಿನ ಬೇರೆಲ್ಲೂ ಟೀ ಎಸ್ಟೇಟ್ ಇಲ್ಲ. ಇಲ್ಲೊಂದು ಹಳೆಯ ಟೀ ಫ್ಯಾಕ್ಟರಿ ಕೂಡಾ ಇದೆ.
ಭಾರತದ ಈ ಸುಂದರ ತಾಣಗಳೀಗ ದೆವ್ವ ನಗರಿ...!
ಚೈಲ್ ಕ್ರಿಕೆಟ್ ಮೈದಾನ, ಭೂಮಿಯಲ್ಲೇ ಅತಿ ಎತ್ತರದಲ್ಲಿರುವ ಕ್ರಿಕೆಟ್ ಮೈದಾನ
ಭಾರತೀಯರಿಗೆ ಕ್ರಿಕೆಟ್ ಹುಚ್ಚು ಹೆಚ್ಚು. ಕ್ರಿಕೆಟ್ ಆಟದಲ್ಲಿ ಭಾರತದ ರಾಷ್ಟ್ರೀಯ ತಂಡದಿಂದ ಹಿಡಿದು ಬೀದಿಬದಿಯ ಚಡ್ಡಿ ಏರಿಸಲು ಬಾರದ ಪುಟ್ಟ ಮಕ್ಕಳೂ ಪಂಟರೇ. ಆದರೆ, ಕ್ರಿಕೆಟ್ ವಿಷಯದಲ್ಲಿ ಭಾರತಕ್ಕೆ ಹೇಳಿಕೊಳ್ಳಲು ಇನ್ನೂ ಹತ್ತು ಹಲವು ಸಂಗತಿಗಳಿವೆ. ಅವುಗಳಲ್ಲಿ ಭೂಮಿಯಲ್ಲೇ ಅತಿ ಎತ್ತರದಲ್ಲಿ ನಿಂತ ಚೈಲ್ ಕ್ರಿಕೆಟ್ ಮೈದಾನವೂ ಒಂದು. 1893ರಲ್ಲೇ ಪಟಿಯಾಲದ ಮಹಾರಾಜ ಭೂಪಿಂದರ್ ಸಿಂಗ್ ಇದನ್ನು ನಿರ್ಮಿಸಿದ್ದು, ಸಮುದ್ರ ಮಟ್ಟಕ್ಕಿಂತ 2250 ಮೀಟರ್ ಎತ್ತರದಲ್ಲಿ ಮೈದಾನವಿದೆ. ಇಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯದೆ ಇರಬಹುದು, ಆದರೆ, ಟೆಸ್ಟ್ ಪ್ಲೇಯರ್‌ಗಳು ಇದನ್ನು ಪ್ರಾಕ್ಟೀಸ್‌ಗಾಗಿ ಬಳಸಿಕೊಳ್ಳುತ್ತಾರೆ.
ಯಾಕ್ ಗಾಲ್ಫ್ ಕೋರ್ಸ್, ಜಗತ್ತಿನ ಅತಿ ಎತ್ತರದ ಗಾಲ್ಫ್ ಕೋರ್ಸ್
ಭಾರತದಲ್ಲಿ ಗಾಲ್ಫ್ ಏನು ಅಷ್ಟೊಂದು ಹೆಸರುವಾಸಿಯಲ್ಲ. ಆದರೂ, ಜಗತ್ತಿನಲ್ಲೇ ಎತ್ತರದಲ್ಲಿರುವ ಗಾಲ್ಫ್ ಅಂಗಳ ಭಾರತದಲ್ಲಿರುವುದು ಅಚ್ಚರಿಯ ವಿಷಯ. ಸಿಕ್ಕಿಂನ ಕುಪುಪ್ ಕಣಿವೆಯಲ್ಲಿ ಈ ಯಾಕ್ ಗಾಲ್ಫ್ ಕೋರ್ಸ್ ಇದ್ದು, ಇದು 13,025 ಅಡಿ ಎತ್ತರದಲ್ಲಿದೆ. 6026 ಯಾರ್ಡ್ಸ್ ಅಗಲವಿರುವ ಈ ಮೈದಾನ ಚಳಿಗಾಲದಲ್ಲಿ ಸ್ಕಿಯಿಂಗ್‌ಗೆ ಬಳಕೆಯಾಗುತ್ತದೆ.