ಒಂದು ಮುತ್ತಿನ ಕತೆ ; ಅರ್ಧ ಮುಗಿದ ದಾರಿ

By Kannadaprabha NewsFirst Published Aug 8, 2019, 12:24 PM IST
Highlights

ನೆನಪುಗಳು ಕಾಡುತ್ತಿದೆ. ನಾನು ನಿನ್ನೊಂದಿಗೆ ಕಳೆದ ಸಿಹಿಯಾದ ಕ್ಷಣಗಳನ್ನು ನೆನೆಸಿಕೊಂಡಾಗಲೆಲ್ಲಾ ಮನಸ್ಸು ಭಾರವಾಗುತ್ತಿದೆ. ನೀನಂದು ಮುತ್ತಿಟ್ಟಕೆನ್ನೆಗಳ ಮೇಲೆ ಇಂದು ಕಂಬನಿ ಹರಿಯುತ್ತಿದೆ. ನಾನೆಂದಿಗೂ ನಿನ್ನ ಬಿಟ್ಟು ಹೋಗಲಾರೆ ಎಂದು ನನ್ನ ಕೈಗಳನ್ನು ಹಿಡಿದು ನೀನು ಆಡಿದ ಮಾತು ಮಾರ್ದನಿಸುತ್ತಿದೆ. ನನಗೆ ತುಂಬಾ ಬೇಸರವಾದಾಗಲೆಲ್ಲಾ ಕಣ್ಣೀರನ್ನು ಒರೆಸುತ್ತಿದ್ದ ನೀನು, ಇಂದು ನನ್ನ ಖಿನ್ನತೆಗೆ ಕಾರಣನಾಗಿರುವಿ.

ಅಷ್ಟಕ್ಕೂ ನೀನೇಕೆ ನನ್ನ ದೂರ ಮಾಡಿದೆ? ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ವಿನಮ್ರನಾಗಿ ಪ್ರೇಮ ನಿವೇದನೆಯನ್ನು ಮಾಡಿದಾಗ, ನಾನು ಅರೆಕ್ಷಣವೂ ಯೋಚಿಸದೆ ನಿನ್ನನ್ನು ಸ್ವೀಕರಿಸಿದೆ. ನಿನ್ನ ಮಾತುಗಳಿಗೆ ಮಾರುಹೋದೆ. ಐ ಲವ್‌ ಯು ಎಂಬ ಆ ಮೂರು ಶಬ್ದಗಳನ್ನು ನೀನು ಹೇಳಿದಾಗಲೆಲ್ಲಾ ನನ್ನೆದೆಯಲ್ಲಿ ಸಂಚಲನವಾಗುತ್ತಿತ್ತು. ನಿನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ಎದೆ ಬಡಿತವನ್ನು ಆಲಿಸುವಾಗ, ಪ್ರತಿ ಬಡಿತದಲ್ಲೂ ನನ್ನ ಹೆಸರು ಕೇಳುತ್ತಿತ್ತು. ನನ್ನ ಕೆನ್ನೆಯನ್ನು ಹಿಂಡಿ, ಕೂದಲನ್ನು ಎಳೆಯುತ್ತಾ ಮಾಡುತ್ತಿದ್ದ ತರಲೆಗಳು ನನ್ನಲ್ಲಿ ಮುಗುಳ್ನಗೆ ಹುಟ್ಟಿಸುತ್ತಿತ್ತು.

ನಿನ್ನ ಕುರುಚಲು ಗಡ್ಡದಲ್ಲಿ ನಾನು ಆಡುತ್ತಿದ್ದಾಗ ತಟ್ಟನೆ ನನ್ನ ಕೈಗಳನ್ನು ಹಿಡಿದು ಮುತ್ತಿಟ್ಟಕ್ಷಣವನ್ನು ನಾನು ಹೇಗೆ ಮರೆಯಲಿ? ನನ್ನ ಕತ್ತಿನಲ್ಲಿ ನೀನು ಪೆನ್ನಿನಿಂದ ಗೀಚುತ್ತಿದ್ದಾಗ ಕಚಗುಳಿಯಾಗಿ ನಾನು ನಗುತ್ತಿದ್ದೆ. ನಿನ್ನ ಕಣ್ಣನ್ನು ದಿಟ್ಟಿಸಿ ನೋಡುತ್ತಿದ್ದಾಗ ನಾನು ಎಲ್ಲವನ್ನು ಮರೆಯುತ್ತಿದ್ದೆ. ನಿನ್ನ ಜೊತೆ ಕಳೆಯುತ್ತಿದ್ದ ಕ್ಷಣಗಳೆಲ್ಲಾ ಮತ್ತೊಂದು ಲೋಕಕ್ಕೆ ಒಯ್ದಂತ್ತಿತ್ತು.

ನೀನು ಪ್ರೀತಿಯಿಂದ ಕೊಟ್ಟಉಡುಗೊರೆಗಳು ನೀನೆಲ್ಲಿ ಎಂದು ನನ್ನ ಪ್ರಶ್ನಿಸುತ್ತಿದೆ.. ನೀನಿಲ್ಲದ ಜೀವನ ಖಾಲಿ ಖಾಲಿ ಅನಿಸುತ್ತಿದ್ದೆ. ಕೈಗಳು ನಿನ್ನ ಸ್ಪರ್ಶವನ್ನು ಬಯಸುತ್ತಿದೆ. ಮನಸ್ಸು ನಿನ್ನಆಲಿಂಗನದ ಸುಖವನ್ನು ಬಯಸುತ್ತಿದೆ. ಪ್ರೀತಿಯಿಂದ ಕೂದಲಿನ ಮುಂದೆಳೆಯನ್ನು ನೇವರಿಸಿದ ಕ್ಷಣಗಳು ಕಣ್ಣೆದುರು ಬರುತ್ತಿದೆ. ನಿನ್ನ ಬಿಟ್ಟಿರಲಾರೆ ಅನುಕ್ಷಣವೂ. ಈ ವಿರಹಯಾತನೆಯನ್ನು ಸಹಿಸಲಾರೆ. ಮರಳಿ ಬರುವೆಯಾ ಚಿನ್ನ.

-- ಪ್ರಜ್ಞಾ ಹೆಬ್ಬಾರ್‌

ಇಂಗ್ಲಿಷ್‌ ವಿಭಾಗ,ಜ್ಯೋತಿ ನಿವಾಸ್‌ ಕಾಲೇಜು,

click me!