ತಪ್ಪು ನಿಂದಲ್ಲ! ಹಾಸ್ಟೆಲಿನ ಬೆಸ್ಟ್‌ ಸಿಂಗರ್‌ ಬರೆದ ಸ್ನೇಹ ನಿವೇದನೆ

By Kannadaprabha News  |  First Published Aug 8, 2019, 11:10 AM IST

ಮೂರು ವರ್ಷದ ಪದವಿ ಮುಗಿಯಲು ಇನ್ನೇನು ಕೊನೇ ಸೆಮಿಸ್ಟರಿನ ಪರೀಕ್ಷೆಯೊಂದೇ ಬಾಕಿ. ಆ ಪರೀಕ್ಷೆ ಬರೆಯಲು ಹಾಲ್‌ ಟಿಕೇಟ್‌ ಕೊಡಲು ನಿರಾಕರಿಸಿದ ಕ್ಷಣ ನಿನಗೆ ಎಷ್ಟುನೋವು ಅನ್ನಿಸಿದೆಯೋ ಗೊತ್ತಿಲ್ಲ. ಆದ್ರೆ ನನಗೆ ಮಾತ್ರ ತುಂಬಾ ಬೇಜಾರು ಅನ್ನಿಸಿತು. ಮೂರು ವರ್ಷ ಕಾಲೇಜಿಗೆ ಹೋಗಿ ಕೊನೆಗೆ ಪರೀಕ್ಷೆ ಬರೆಯಲು ಅವಕಾಶ ನೀಡ್ಲಿಲ್ಲ ಅಂದ್ರೆ...


ಕಾಲೇಜಿಗೆ ದಿನವು ಬಂದಿದೀಯಾ, ಅಧ್ಯಾಪಕರು ಹೇಳಿದ ಎಲ್ಲ ಕೆಲಸ ಮಾಡಿದೀಯಾ, ಎಲ್ಲ ಸೆಮ್‌ನಲ್ಲೂ ಫಸ್ಟ್‌ ಕ್ಲಾಸ್‌ನಲ್ಲೇ ಉತ್ತೀರ್ಣಳಾಗಿದ್ದೀಯಾ, ಹಾಲ್‌ ಟಿಕೇಟ್‌ ನೀಡದಿರಲು ಯಾವುದೇ ಕಾರಣಗಳಿಲ್ಲ. ಆದರೆ ನೀ ಆ ಮಾತು ಹೇಳದೆ ಇದ್ದಿದ್ದರೆ ನಿನಗೆ ಹಾಲ್‌ ಟಿಕೇಟ್‌ ಸಿಗುತ್ತಿತ್ತು, ಪದವಿಯೂ ಮುಗಿಯುತ್ತಿತ್ತು.

ವೈದ್ಯಕಿಯ ಸೇವೆ ಮಾಡಬೇಕೆಂಬ ನಿನ್ನ ನಿಮ್ಮ ಮನೆಯವರ ಆಸೆ ಈಡೇರಿಕೆಗಾಗಿ ನರ್ಸಿಂಗ್‌ ವಿದ್ಯಾಭ್ಯಾಸಕ್ಕೆ ಹೋಗಿದ್ದು ಸಂತೋಷವೇ. ಆದರೆ ಆ ಕ್ಷಣದಲ್ಲಿ ನಾನು ನರ್ಸಿಂಗ್‌ಗೆ ಜಾಯಿನ್‌ ಆಗಿದ್ದೇನೆ ಸರ್‌ ಎಂದು ಹೇಳಿದ್ದೆ ತಪ್ಪಾಯಿತಾ? ಅದರಿಂದ ಹಾಲ್‌ ಟಿಕೇಟ್‌ ಸಿಗದೆ ನಿನ್ನ ಪದವಿ ಇನ್‌ಕಂಪ್ಲೀಟ್‌ ಆಯ್ತಲ್ಲ. ಆ ಕೊರಗು ಇಂದಿಗೂ ನನಗೆ ಕಾಡುತ್ತಿದೆ.

Tap to resize

Latest Videos

undefined

ಪರೀಕ್ಷೆ ಮುಗಿಸಿಕೊಂಡು ಕಾಲೇಜಿಗೆ 15 ದಿನ ತಡವಾಗಿ ಹೋಗಿದ್ದರೆ ಆಗಿರುತ್ತಿತ್ತು. ಸರ್‌ಗೆ ಆ ಮಾತು ಹೇಳದೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಹಾಗಂತ ಕಾಲೇಜಿನಿಂದ ಹಾಲ್‌ ಟಿಕೇಟ್‌ ನಿರಾಕರಣೆ ಮಾಡಿದ್ದು ಕೂಡಾ ತಪ್ಪೇ ಅನ್ನಿಸುತ್ತೆ.

ನೀನು ಅಲ್ಲಿಗೆ ಹೋಗಿ ನಾಲ್ಕು ತಿಂಗಳಾಯ್ತು. ನೀನು ಸಂತೋಷವಾಗಿದ್ದೀಯಾ? ದಿನವು ಜತೇಲಿ ಕಾಲೇಜಿಗೆ ಹೋಗುವ ದಾರಿಯಲ್ಲಿ ನೀ ಮಾಡುತ್ತಿದ್ದ ಕುಚೇಷ್ಠೆ, ಕಾಲೇಜಿನಲ್ಲಿ ನೀ ಮಾಡುತ್ತಿದ್ದ ಮಿಮಿಕ್ರಿ, ನಾವಿಬ್ಬರು ಸೆಲೆಬ್ರಿಟಿ ಸಿಂಗರ್‌ಗಳಂತೆ ಹಾಸ್ಟೆಲಿನಲ್ಲಿ ಹಾಡುತ್ತಿದ್ದ ಸಾಂಗು, ಅದನ್ನು ರೆಕಾರ್ಡ್‌ ಮಾಡಿ ಮತ್ತೆ ಮತ್ತೆ ಕೇಳಿ ಸಂತೋಷ ಪಟ್ಟಿದ್ದು, ನನ್ನ ಹಾವಭಾವ, ನಮ್ಮ ಮನೆಯವರ ಜತೆಯಲ್ಲಿ, ಸ್ನೇಹಿತರ ಜತೆಯಲ್ಲಿ ಮಾತನಾಡುತ್ತಿದ್ದ ಶೈಲಿಯನ್ನು ಅನುಕರಣೆ ಮಾಡಿ ನೀನು ನನ್ನ ಆಡಿಕೊಳ್ಳುತ್ತಿದ್ದದ್ದು- ಹೀಗೆ ಒಂದಲ್ಲ ಎರಡರಲ್ಲ ಹೇಳಿದರೆ ಪುಸ್ತಕವೇ ಬರಿಯಬಹುದು ಎನ್ನಿಸುತ್ತೆ.

ಕಾಲೇಜಿನಲ್ಲಿ ಮಿಮಿಕ್ರಿ ರಾಣಿ ಎಂದು ನಿನಗೆ ಕರೆದು ನಗಿಸುತ್ತಿದ್ದ ಕ್ಷಣಗಳು ತುಂಬಾ ನೆನಪಿಗೆ ಬರ್ತಿವೆ. ನರ್ಸಿಂಗ್‌ಗೆ ಜಾಯಿನ್‌ ಆದಾಗಿನಿಂದ ಸರಿಯಾಗಿ ಕಾಲ್‌ ಮಾಡ್ತಿಲ್ಲ, ಮೆಸೇಜ್‌ ಮಾಡ್ತಿಲ್ಲ ತುಂಬಾ ಬೋರು ಅನ್ನಿಸ್ತಿದೆ ಕಣೆ ಮಿಮಿಕ್ರಿ ರಾಣಿ ಶ್ವೇತಾ.

ನೀನು ಹೋದಾಗ ಪರೀಕ್ಷೆ ಇದ್ದ ಕಾರಣ ಓದಿನ ಗುಂಗಲ್ಲಿ ದಿನ ಕಳೆದೆ. ಬಳಿಕ ಊರಿನಲ್ಲಿ ರಜೆ ಕಳೆದೆ. ಆದರೀಗ ಮತ್ತೆ ಕಾಲೇಜು ಪ್ರಾರಂಭವಾಗಿದೆ, ಹಾಸ್ಟೆಲ್‌ಗೆ ಹೋಗ್ಬೇಕು. ನೀ ಇಲ್ಲದೆ ಹೇಗೆ ಹಾಸ್ಟೆಲ್‌ನಲ್ಲಿ ಕಾಲ ಕಳೀಲಿ, ಹೇಗೆ ಒಬ್ಬಳೆ ಕಾಲೇಜಿಗೆ ನಡೆದುಕೊಂಡು ಹೋಗಲಿ, ದಿನವು ಯಾರ ಜೊತೆ ಸಾಂಗು ಹಾಡಲಿ, ನಿನ್ನಂತೆ ಸಲುಹೆ ಕೊಡುವವರ್ಯಾರು, ನನಗೆ ದಿನವು ರೇಗಿಸಿ ನಂತರ ನಗಿಸುವವರ್ಯಾರು.ಊಹಿಸುವುದೂ ಕಷ್ಟ.

- ಎಸ್‌.ಎನ್‌. ಮಾನಸ ,ತೃತೀಯ ಬಿ.ಎ.(ಜೆ.ಕೆ.ಪಿ)

ವಿಶ್ವವಿದ್ಯಾನಿಲಯ ಕಲಾ ಕಾಲೇಜು, ತುಮಕೂರು.

click me!