ಪ್ರೀತಿ, ಪ್ರೇಮದಿಂದ ಎಂಥದ್ದೇ ದುರುಳರನ್ನೂ ಬದಲಾಯಿಸಬಹುದು. ಅದರಲ್ಲಿಯೂ ದೈವೀ ಶಕ್ತಿಗೆ ಕ್ರೂರ ಪ್ರಾಣಿಗಳನ್ನೂ ಸಾಧುವನ್ನಾಗಿ ಮಾಡಬಹುದೆಂಬುದಕ್ಕೆ ಈ ಮೊಸಳೆಯೇ ಸಾಕ್ಷಿ!
ಕೇರಳದ ತಿರುವನಂತಪುರಂನಲ್ಲಿರೋ ಶ್ರೀ ಅನಂತಪದ್ಮನಾಭ ಸ್ವಾಮಿ ಮಂದಿರ ಎಲ್ಲರಿಗೂ ಗೊತ್ತು. ಅದರಷ್ಟೇ ಪ್ರಾಮುಖ್ಯತೆ ಹೊಂದಿರೋ ಸುಂದರ ಪುಟ್ಟ ಕೆರೆಯ ದಡದಲ್ಲಿರುವ ದೇವಾಲಯ ನಮ್ಮ ಗಡಿನಾಡಾದ ಕಸರಗೋಡಿನಲ್ಲಿದೆ. ಪುರಾಣದ ಪ್ರಕಾರ ಈ ಕ್ಷೇತ್ರ ಕೇರಳದ ತಿರುವಂತಪುರ ಅನಂತಪದ್ಮನಾಭ ಸ್ವಾಮಿಯ ಮೂಲ ಸ್ಥಾನ.
ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತಪುರ ಎನ್ನುವ ವಿಶಾಲವಾದ ಪ್ರದೇಶದಲ್ಲಿ ಕೆರೆ ಮಧ್ಯೆ ಇರುವ ದೇವಸ್ಥಾನ ಅನಂತಪುರ ತುಳುನಾಡಿನ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದು. ಇದನ್ನು ಜನರು ಸರೋವರ ಕ್ಷೇತ್ರ ಅನಂತಪುರ ಎಂದೂ ಕರೆಯುತ್ತಾರೆ. ಇಲ್ಲಿ 5 ಹೆಡೆ ಸರ್ಪದ ಮೇಲೆ ಕುಳಿತ ಅನಂತಪದ್ಮನಾಭ ಸ್ವಾಮಿ ಮೂರ್ತಿ ಇದೆ. ನಿರ್ಜನ ಪ್ರದೇಶದಲ್ಲಿ ಇರುವ ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ, ದೇವರಿಗೆ ಸಾಮೀಪ್ಯದಲ್ಲಿರುವಂತೆ ಅನುಭವಕ್ಕೆ ಬರುವುದು ಸುಳ್ಳಲ್ಲ. ಸರ್ಪಕಟ್ಟು ಶೈಲಿಯಲ್ಲಿ ನಿರ್ಮೀಸಿರುವ ಇದರ ಗೋಡೆಯೂ ಎತ್ತರವಾಗಿದೆ.
ಅರಳಿಮರಕ್ಕೇಕೆ ಪ್ರದಕ್ಷಿಣೆ ಬರಬೇಕು?
ದೇವರನ್ನು ನೋಡಬೇಕಾದರೆ ಗೋಪುರದಿಂದ ಕೆಳಗಿಳಿದು ಬರಬೇಕು. ಕೆರೆ ನಡುವೆ ಇರೋ ಗರ್ಭಗುಡಿಯ ಎಡ ಬಲದಲ್ಲಿ ಶ್ರೀದೇವಿ, ಭೂಮಿದೇವಿಯರ ನಡುವೆ ಶ್ರೀಸ್ವಾಮಿಯ ವಿಗ್ರಹವಿದೆ. ಎದುರುಗಡೆ ಗರುಡ, ಹನುಮಂತ ಮೊಣಕಾಲೂರಿ ಕೈ ಮುಗಿದು ಪ್ರಾರ್ಥಿಸುವ ವಿಗ್ರಹಗಳು ಹಾಗು ನಾಗಕನ್ನಿಕೆಯರ ವಿಗ್ರಹಗಳು ಸೇರಿ ಒಟ್ಟು 7 ಕಡುಶರ್ಕರ ಪಾಕದಿಂದ ತಯಾರಿಸಿದ ವಿಗ್ರಹಗಳು ಇಲ್ಲಿವೆ. 64 ಬಗೆಯ ಸಸ್ಯಜನ್ಯ ಹಾಗು ಪ್ರಾಣಿಜನ್ಯ ಮದ್ದಿನ ಗುಣದ ಪಾಕದಿಂದ ಗರ್ಭಗುಡಿಯೊಳಗಿರೋ ವಿಗ್ರಹ ನಿರ್ಮಿತವಾಗಿವೆ.
ಕರೆದರೆ ಬರೋ ಮೊಸಳೆ!
ಈ ಕ್ಷೇತ್ರದ ಇನ್ನೊಂದು ವೈಶಿಷ್ಟ್ಯವೆಂದರೆ ಕೆರೆಯಲ್ಲಿರುವ ಬಬಿಯ ಎನ್ನುವ ಮೊಸಳೆ. ಮೊಸಳೆ ಮಾಂಸಹಾರಿಯಾದರೂ, ಇಲ್ಲಿರುವ ಬಬಿಯ ಸಸ್ಯಹಾರಿ ಎನ್ನುವುದು ವಿಶೇಷ. ಹಿಂದೆ ಬ್ರಿಟಿಷರು ಈ ಜಾಗದಲ್ಲಿ ಟೆಂಟ್ ಹಾಕಿದ್ದಾಗ ಕೆರೆಯಲ್ಲಿ ಮೊಸಳೆಯನ್ನು ಕೊಲ್ಲಲು ಸಂಚು ರೂಪಿಸಿದ್ದರು. ಬಬಿಯಾ ಎಂದು ಕರೆದಾಗ ಮೊಸಳೆ ಹೊರ ಬಂದಿತ್ತು. ಆಗ ಗುಂಡು ಹಾರಿಸಿ, ಮೊಸಳೆಯನ್ನು ಕೊಂದಿದ್ದರು. ಆ ಮೊಸಳೆ ಕೊಂದ ಬ್ರಿಟಿಷ್ ಅಧಿಕಾರಿ ಸ್ವಲ್ಪ ದಿವಸಗಳಲ್ಲಿಯೇ ವಿಷ ಹಾವು ಕಚ್ಚಿ ಅಸುನೀಗಿದ.
ಅಚ್ಚರಿ ಎಂಬಂತೆ ಆ ಕೆರೆಯಲ್ಲಿ ಮತ್ತೊಂದು ಮೊಸಳೆ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಅಲ್ಲಿಯ ಪೂಜಾರಿ ಬಬಿಯಾ ಎಂಬ ಹೆಸರಿನಿಂದ ಕರೆಯುತ್ತಾರೆ. ಆ ಮೊಸಳೆಗೆ ಪ್ರತಿದಿನ ಮಧ್ಯಾಹ್ನ ಮಹಾಪೂಜೆ ಆದ್ಮೇಲೆ ನೈವೇದ್ಯ ಕೊಡುವ ಸಮಯಕ್ಕೆ ಬಬಿಯಾ.... ಎಂದು ಕರೆಯುತ್ತಾರೆ. ಆಗ ಸುರಂಗದಿಂದ ಹೊರಗೆ ಬಂದು ನೈವೇದ್ಯ ಸ್ವೀಕರಿಸುತ್ತದೆ ಈ ಮೊಸಳೆ.
ಮೊಸಳೆಗೆ ಜನರು ಹರಕೆ ರೂಪದಲ್ಲಿಯೂ ನೈವೇದ್ಯ ಸಮರ್ಪಿಸುವ ಪದ್ಧತಿ ಇಲ್ಲಿದೆ. ಮೊಸಳೆ ಮಾಂಸಹಾರಿಯಾದರೂ, ಈ ಬಬಿಯಾ ಯಾರಿಗೂ ತೊಂದರೆಯೇ ಕೊಡುವುದಿಲ್ಲ. ಕೆರೆಯಲ್ಲಿರುವ ಮೀನುಗಳನ್ನೂ ಈ ಮೊಸಳೆ ತಿಂದಿದ್ದೇ ಇಲ್ಲ. ಇದೆಲ್ಲವೂ ಈ ಕ್ಷೇತ್ರದ ಪವಾಡವೇ ಸರಿ.