ಸ್ವರ್ಗಸೀಮೆಯ ಮಡಿಲು, ಅತಿ ಸುಂದರ ಬೀಚ್, ದ್ವೀಪ ಪ್ರಪಂಚ ಫುಕೆಟ್

By Web DeskFirst Published Feb 6, 2019, 2:09 PM IST
Highlights

ಸದಾ ಸುವರ್ಣ ನ್ಯೂಸ್‌ನಲ್ಲಿ ಸುದ್ದಿ ಓದುವುದರಲ್ಲಿಯೇ ಬ್ಯುಸಿಯಾಗಿರುವ ಭಾವನಾ ಥೈಯ್ಲಾಂಡ್‌ನ ಫುಕೆಟ್‌ಗೆ ಇತ್ತೀಚೆಗೆ ಭೇಟಿ ನೀಡಿದ್ದರು. ರಾಜಕೀಯ, ಕ್ರೈಂ ಸುದ್ದಿಗಳ ಗುಂಗಿನಲ್ಲೇ ಕಳೆದುಹೊಗುವ ಇವರಿಗೆ ಇದೊಂದು ವಿಶೇಷ ಅನುಭವ. ತಮ್ಮ ಪ್ರವಾಸ ಕಥನವನ್ನು ಬಿಚ್ಚಿಟ್ಟಿದ್ದು ಹೀಗೆ...

- ಭಾವನಾ ಎಸ್.ಎನ್.
ಸೂರ್ಯ ರಶ್ಮಿಗೆ ಮುತ್ತಿಡುತ್ತಿರುವ ತಿಳಿ ಹಸಿರಿನ ನೀರು.. ದಿಗಂತವೂ ನನ್ನೊಳಗೆ ಸಂಗಮಿತ ಎಂಬಂತೆ ಹಮ್ಮು ತೋರೋ ಸಮುದ್ರ.. ದೂರ ತೀರದಲ್ಲಿ ಅಲ್ಲಲ್ಲಿ ಇಣುಕಿ ನಮ್ಮಂತೆಯೇ ಬೆರಗುಗಣ್ಣಿನಿಂದ ನೋಡೋ ಬಿಳಿಯ ಹಗಡುಗಳು.. ಈ ಎಲ್ಲದರ ನಡುವೆ ತನ್ನ ಪ್ರಖರತೆ ತೋರುತ್ತಾ ನಮ್ಮ ಬೆವರಿಳಿಸಿ ತುಂಟ ನಗೆ ಬೀರೋ ಸೂರ್ಯ.. ಆಹಾ..  ಯಾವುದೋ ಬೇರೆಯದ್ದೇ ಪ್ರಪಂಚದಲ್ಲಿ ತೇಲಿಹೋಗುತ್ತಿರುವ ಅನುಭವ. 

ಸದಾ ಪ್ರವಾಸ, ಹೊಸ ಪ್ರಪಂಚ, ಪ್ರಕೃತಿಗಾಗಿ ಹಂಬಲಿಸುವ ಮನಕ್ಕೆ ರೆಕ್ಕೆ ಕಟ್ಟಿಬಿಟ್ಟಂತಾಗಿತ್ತು. ಏಕೆಂದರೆ ಈ ಬಾರಿ ನಾವು ಹೊರಟಿದ್ದು ಸಾಗರದಾಚೆಗೆ. ಒಂದು ಹೊಸ ದೇಶ, ವಿಭಿನ್ನ ಸಂಸ್ಕೃತಿ, ವಿಭಿನ್ನ ಜನರನ್ನ ಕಂಡು ಬೆರೆಯುವ ಅವರನ್ನು ಅರಿಯುವ ಅವಕಾಶ ಬದುಕಿನಲ್ಲಿ ಹೊಸದೊಂದು ಆಯಾಮಕ್ಕೆ ನಾಂದಿ ಹಾಡಿತು.

ಸ್ವರ್ಗ ಸೀಮೆಯ ಮಡಿಲಲ್ಲಿ
ಭಾರತದಿಂದ ಸರಿಸುಮಾರು 6000 ಕಿ.ಮೀ ದೂರದಲ್ಲಿರುವ ಥೈಲ್ಯಾಂಡ್‌ನ ಈ ಪುಟ್ಟ ಪುಟ್ಟ ದ್ವೀಪಗಳ ಸಮೂಹ  ಫುಕೆಟ್ ಪ್ರವಾಸಿಗರನ್ನು ಈ ಮಟ್ಟಕ್ಕೆ ಆಕರ್ಷಿಸಲು ಕಾರಣವೇನು ಅನ್ನೋ ಪ್ರಶ್ನೆಯೊಂದಿಗೇ ಪ್ರಯಾಣ ಆರಂಭವಾಯಿತು. ಆದರೆ ಅಲ್ಲಿ ತೆರೆದುಕೊಂಡ ಪ್ರಪಂಚ ಪ್ರತೀ ಪ್ರಶ್ನೆಗೂ ಉತ್ತರಿಸಿತ್ತು.

ಪಟೋಂಗ್ ನಿಂದ ಪ್ರವಾಸ ಆರಂಭ
ನಾವು ತಂಗಲು ಆಯ್ಕೆ ಮಾಡಿಕೊಂಡ ಜಾಗ ಫುಕೆಟ್‌ನ ಪಟೋಂಗ್. ಅತಿಹೆಚ್ಚು ವಿದೇಶೀಯರಿಂದಲೇ ತುಂಬಿ ತುಳುಕುವ ಪಟೋಂಗ್ ನೋಡಿದಾಗ ನಮಗೆ ಒಂದು ಕ್ಷಣ ಗೋವಾ ನೆನಪಾಗೋದು ಗ್ಯಾರೆಂಟಿ. 

ಆ ಪಟ್ಟಣದ ಸ್ವಚ್ಛತೆ ಮತ್ತು ರಸ್ತೆ ವ್ಯವಸ್ಥೆಯಾದಿಯಾಗಿ ಎಲ್ಲವೂ ಮನಸ್ಸಿನಲ್ಲಿ ಎಂದೆಂದಿಗೂ ಉಳಿದುಹೋಗುತ್ತದೆ. ಸುಂದರವಾದ ಪಟೋಂಗ್ ಸಮುದ್ರ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. 

ಮೊದಲ ದಿನವೇ ಇಷ್ಟಪಟ್ಟು ತಿಂದದ್ದು ಡೆರಿಯನ್ ಫ್ರೂಟ್. ಥಾಯ್ಲಾಂಡ್‌ಗೆ ಭೇಟಿ ನೀಡೋ ಪ್ರತಿಯೊಬ್ಬರೂ ಸವಿಯಲೇ ಬೇಕಾದ ಹಣ್ಣಿದು. ನೋಡಲು ಥೇಟ್ ಹಲಸಿನಂತೆ ಕಂಡರೂ ಇದರ ಎಸಳಿನ ಗಾತ್ರ ಮತ್ತು ತೊಳೆ ಬೇರೆ. ರುಚಿ ನಮ್ಮಲ್ಲಿನ ರಾಮ ಸೀತಾಫಲದ ಸವಿಯನ್ನು ನೆನಪಿಸುತ್ತದೆ. ಆದರೆ ಹೋಟೇಲ್‌ಗಳ ಒಳಗೆ ಈ ಹಣ್ಣಿಗೆ ಪ್ರವೇಶವಿಲ್ಲ. ಕಾರಣ ಮಾರು ದೂರಕ್ಕೂ ಹರಡುವ ಇದರ ಘಮ.

ಪೀ-ಪೀ ಡೇ ಟೂರ್
ನಮ್ಮ ಎರಡನೇ ದಿನ ಆರಂಭವಾಗಿದ್ದು ಪೀ-ಪೀ ಡೇ ಟೂರ್‌ನಿಂದ. ಸುಮಾರು 30 ಜನರ ತಂಡ ಹೊರಟೆವು ಹೊಸ ಲೋಕದ ಅನ್ವೇಷಣೆಗೆ. ಸ್ಪೀಡ್ ಬೋಟ್ ಮೂಲಕ ಬಹುದೂರ ಸಾಗಿ ನಾವು ಬಿದ್ದದ್ದು ಸ್ನಾರ್ಕಲಿಂಗ್‌ಗೆ. ನೀರಿನ ಮೇಲ್ಭಾಗದಲ್ಲಿ ತೇಲುತ್ತಾ ನೀರೊಳಗಿನ ಲೋಕ ನೋಡುವ ಅನುಭವ. ಲೈಫ್ ಜಾಕೆಟ್, ಗಾಗಲ್ಸ್ ಎಲ್ಲ ಇದ್ದರೂ ಸ್ವಿಮ್ಮಿಂಗ್ ಬಾರದವರಿಗೆ ಗೈಡ್‌ ಬೇಕೇ ಬೇಕು. ನೀರಿನೊಳಗೆ ಕಾಲು ಬಡೆಯುತ್ತಾ ಜಲಚರಗಳ ವೀಕ್ಷಣೆ.. ಆಹಾ...

ಮುಂದೆ ಸಾಗಿದಂತೆ ದಿ ಬೀಚ್ ಸೇರಿದಂತೆ ಹಲವು ಸಿನೆಮಾ ಚಿತ್ರೀಕರಣವಾಗಿರುವ ಪ್ರಪಂಚದ ಅತ್ಯಂತ ಸ್ವಚ್ಛ ಸಮುದ್ರಗಳಲ್ಲಿ ಒಂದಾದ ಮಾಯಾ ಬೀಚ್, ಕಪ್ಪು ಮೊಗದ ಕೋತಿಗಳ ಮಂಕಿ ಬೀಚ್, ವಿಕಿಂಗ್ ಕೇವ್ ಅಬ್ಬಬ್ಬಾ ಒಂದಕ್ಕಿಂತ ಒಂದು ಸುಂದರ ರಮಣೀಯ ತಾಣಗಳು. ತಿಳಿ ಹಸಿರಿನ ಪಾರದರ್ಶಕ ನೀರು ಅದರೊಳಗೆ ಕಾಣುವ ಜಲಚರ ಲೋಕ, ನೋಡಿದವರು ಮೂಕವಿಸ್ಮಿತ.

ಮಧ್ಯಾಹ್ನದ ಹೊತ್ತಿಗೆ ನಾವು ಸೇರಿಕೊಂಡಿದ್ದು ಜನಪ್ರಿಯ ಪೀ ಪೀ ಐಲ್ಯಾಂಡ್. ಊಟ ಅಷ್ಟು ರುಚಿಸದಿದ್ದರೂ ಕಣ್ಣು ತಂಪಾಯಿತು. ಸುತ್ತಲೂ ಗುಡ್ಡ, ತಿಳಿ ಹಸಿರು ನೀರು. ಸುಮಾರು ಒಂದು ಗಂಟೆ ಸಮಯ ಸಿಕ್ಕಿತ್ತು ಆ ಸುಂದರ ಸೊಬಗನ್ನ ಕಣ್ತುಂಬಿಕೊಳ್ಳಲು.

ಕೊನೆಯದಾಗಿ ನಾವು ತಲುಪಿದ್ದು ಕಹ್ ಖಾಯ್ ನಾಹ್ ಕಿನಾರೆ. ಆಹ್.. ವರ್ಣನೆಗೆ ಮೀರಿದ ಪ್ರಕೃತಿಯ ಸೊಬಗದು. ಸ್ವರ್ಗವೇ ಧರೆಗಿಳಿದಂತೆ ಅಂತಾರಲ್ಲಾ ಅದು ಅಲ್ಲಿ ನಿಜ ಅನ್ನಿಸುತ್ತೆ. ಒಂದು ಫುಟ್ಬಾಲ್ ಪಿಚ್ ಅಷ್ಟು ಸಣ್ಣದಾದ ಈ ದ್ವೀಪ ಪ್ರವಾಸಿಗರ ನೆಚ್ಚಿನ ತಾಣ. ಸ್ನಾರ್ಕಲಿಂಗ್ ಮತ್ತು ಸ್ವಿಮ್ಮಿಂಗ್ ಮಾಡಲು ಹೇಳಿಮಾಡಿಸಿದ ತಾಣ. 


ಬುದ್ಧಂ ಶರಣಂ ಗಚ್ಛಾಮಿ
ಫುಕೆಟ್‌ನ ಮೂರನೇ ಹಾಗೂ ಕೊನೇ ದಿನ ನಾವು ತೆರಳಿದ್ದು ಬುದ್ಧನ ದರ್ಶನಕ್ಕೆ. ಪಟೋಂಗ್ ಬೀಚ್‌ನಿಂದ ಸುಮಾರು 22 ಕಿಮೀ ದೂರವಿರುವ ಬಿಗ್ ಬುದ್ಧ ದೇವಾಲಯ ಬೆಟ್ಟದ ಮೇಲಿದೆ. ದೇವಾಲಯಕ್ಕೆ ಹೋಗಬೇಕಾದರೆ ಹೆಣ್ಣಾಗಲಿ ಗಂಡಾಗಲಿ ಮಂಡಿ ಮತ್ತು ತೋಳು ಮುಚ್ಚಿದ ಬಟ್ಟೆ ಕಡ್ಡಾಯ. ಕೇವಲ ಇಲ್ಲಿ ಮಾತ್ರವಲ್ಲ ಥಾಯ್ಲಾಂಡ್‌ನ ಯಾವುದೇ ದೇವಾಲಯಕ್ಕೆ ಹೋದರೂ ಇದು ಕಡ್ಡಾಯ. ಕಾಟ ಮತ್ತು ಚಲೋಂಗ್ ಬೀಚ್ ನಡುವೆ ಬರುವ ಈ ಬುದ್ಧನ ಮೂರ್ತಿ 45 ಮೀ. ಎತ್ತರ ಮತ್ತು 25 ಮೀ. ಅಗಲವಿದೆ. 2004ರಲ್ಲಿ ಈ ದೇವಾಲಯ ನಿರ್ಮಾಣವಾಗಿದ್ದು. ಬುದ್ಧನ ವಿಗ್ರಹ ನಿರ್ಮಾಣಕ್ಕೆ ಅಮೃತ ಶಿಲೆ ಬಳಸಲಾಗಿದೆ. ಇದರ ಪಕ್ಕದಲ್ಲೇ ಚಿನ್ನದ ಬಣ್ಣದ ಸಣ್ಣ ಬುದ್ಧನ ವಿಗ್ರಹವೂ ಆಕರ್ಷಕ. ಬೆಟ್ಟದಿಂದ ಕೆಳಗೆ ನೋಡಿದರೆ ಕಾಣುವ ಸಮುದ್ರದಂಡೆಯ ವಿಹಂಗಮ ನೋಟ ರುದ್ರರಮಣೀಯ.

ದೇವಾಲಯದ ಸುತ್ತಮುತ್ತ ತಾಮ್ರದ ಸಣ್ಣ ಸಣ್ಣ ಗಂಟೆ ಮತ್ತು ಹರಕೆ ತಾಮ್ರದ ಎಲೆಗಳನ್ನು ಕಟ್ಟಲಾಗಿದೆ. ಗಾಳಿ ಬೀಸಿ ಗಂಟೆ ಹೊಡೆದಾಗ ಹರಕೆ ತೀರುತ್ತದೆ ಎಂಬ ನಂಬಿಕೆ. ಇಡೀ ವಾತಾವರಣ ಅತ್ಯಂತ ಶಾಂತ ಸುಂದರ ಮತ್ತು ಪರಿಶುದ್ಧ. 

ಮುಂದುವರಿದಂತೆ ಕರೂನ್, ಕಾಟ ಸೇರಿದಂತೆ ಹಲವು ಬೀಚ್ ಇದ್ದು, ಇವು ವಿದೇಶಿಗರ ನೆಚ್ಚಿನ ತಾಣ. ಒಟ್ಟಾರೆ ಜೀವನದಲ್ಲಿ ಅಚ್ಚಳಿಯದೆ ಉಳಿದುಹೋಗುವ ಸುಂದರ ನೆನಪುಗಳಲ್ಲಿ ಫುಕೆಟ್‌ನ ಈ ಮೂರು ದಿನಗಳು ಅತ್ಯಂತ ಸಂತೃಪ್ತಿದಾಯಕ. ಮತ್ತೊಮ್ಮೆ ಮಗದೊಮ್ಮೆ ಹೋಗಲು ಮನ ಹಾತೊರೆಯುವುದು ಖಂಡಿತ.  
 

click me!