ಚಿಕ್ಕ ವಯಸ್ಸಿನಲ್ಲಿಯೇ ಕಳ್ಳತನ ಮಾಡಿ, ಜೈಲು ಸೇರಿದ್ದ ವ್ಯಕ್ತಿ ಇಂದು ಸಾವಿರಾರು ಜನರ ಪಾಲಿಗೆ ಅನ್ನದಾತ, ಆಶ್ರಯದಾತ. ಬೆಂಗಳೂರು ಉತ್ತರದ ದೊಡ್ಡಗುಬ್ಬಿಯಲ್ಲಿ ನ್ಯೂ ಆರ್ಕ್ ಮಿಷನ್ ಆಫ್ ಇಂಡಿಯಾ ಎನ್ನುವ ಟ್ರಸ್ಟ್ ಸ್ಥಾಪನೆ ಮಾಡಿ 800ಕ್ಕೂ ಹೆಚ್ಚು ಮಂದಿಗೆ ನಿತ್ಯವೂ ಆಹಾರ, ಆಶ್ರಯ, ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದಾರೆ ಈ ಆಟೋ ರಾಜ. ಅವರ ಕತೆಯನ್ನು ಕೇಳಿ.
ನಾನು ಹುಟ್ಟಿದ್ದು ಬೆಂಗಳೂರಿನ ಮಾಗಡಿ ರೋಡಿನಲ್ಲಿ. ನಮ್ಮದು ಸಾಧಾರಣ ಕುಟುಂಬ. ನಾನು ಬೆಳೆಯುತ್ತಾ ಬೆಳೆಯುತ್ತಾ ಕೆಟ್ಟ ವಿಚಾರಗಳಿಂದಲೇ ಪ್ರಭಾವಿತನಾದೆ. ಅಂದು ಮಾಗಡಿ ರೋಡ್, ಶ್ರೀರಾಂಪುರ ಎಲ್ಲವೂ ರೌಡಿಗಳ ಅಡ್ಡವಾಗಿದ್ದವರು. ಅವರನ್ನೆಲ್ಲಾ ನೋಡಿ ನಾನೂ ರೌಡಿಯಾಗಬೇಕು, ಎಲ್ಲರೂ ನನ್ನನ್ನು ಕಂಡರೆ ಭಯಪಡಬೇಕು ಎನ್ನುವ ಆಸೆಗಳಿದ್ದವು. ಅದಕ್ಕೆ ತಕ್ಕಂತೆಯೇ ಸಿಕ್ಕ ಸಿಕ್ಕವರಿಗೆ ಬಡಿಯುತ್ತಿದ್ದೆ. ಸಣ್ಣ ಪುಟ್ಟ ಕಳ್ಳತನ ಮಾಡುತ್ತಿದ್ದೆ. ಇದು ದಿನೇ ದಿನೇ ಹೆಚ್ಚುತ್ತಲೇ ಹೋಯಿತು. ಅಪ್ಪನ ಏಟು, ಅಮ್ಮನ ಕಣ್ಣೀರು ನನ್ನನ್ನು ಬದಲಿಸಲೇ ಇಲ್ಲ.
ಸುಂದರ ಬಾಲ್ಯದಿಂದ ವಂಚಿತ
undefined
ಓದುವಾಗಲೇ ಮುಖ್ಯ ಶಿಕ್ಷಕಿಯ ಬ್ಯಾಗ್‌ನಿಂದ ನಾಲ್ಕು ಸಾವಿರ ರುಪಾಯಿ ಕದ್ದು ಸಿಕ್ಕಿಕೊಂಡಿದ್ದೆ. ಆಗಿನ್ನೂ ಮೂರನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಶಾಲೆಯಿಂದ ಹೊರಹಾಕಿದರು. ಅಲ್ಲಿಗೆ ನನ್ನ ಶಾಲಾ ದಿನಗಳಿಗೆ ಕೊನೆ ಬಿತ್ತು. ಆಮೇಲೆ ರೌಡಿಗಳಿಗೆ ಸಹಾಯ ಮಾಡುವುದು, ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡಿದ್ದೆ. ಇದು ಅತಿಯಾದಾಗ ನನ್ನ ತಂದೆ ನನ್ನನ್ನು ಮನೆಯಿಂದಲೂ ಹೊರ ಹಾಕಿದರು. ಅಲ್ಲಿಗೆ ನನಗೆ, ನನ್ನ ಕೆಟ್ಟತನಕ್ಕೆ ಮತ್ತಷ್ಟು ರೆಕ್ಕೆ ಬಂದವು.
ಮೊದಲ ಬಾರಿ ಜೈಲು ಸೇರಿದೆ
ಮಾಡಿದ ಕಳ್ಳತನಕ್ಕಾಗಿ ಬಾಲಾಪರಾಧಿಯಾಗಿ ಜೈಲು ಸೇರಿದ್ದೆ. ನನಗೆ ನಿಜವಾದ ನರಕ ಗೊತ್ತಾಗಿದ್ದು ಅಲ್ಲಿಯೇ, ನಾನು ಬದಲಾಗಿದ್ದೂ ಅಲ್ಲಿಯೇ. ನನ್ನ ಪಾಲಿಗೆ ಈಗಲೂ ಅನ್ನಿಸುವುದು ಜೈಲು ಮನಸ್ಸು ಪರಿವರ್ತನೆ ಮಾಡಿಕೊಳ್ಳಲು ಇರುವ ಅದ್ಭುತ ತಾಣ. ಅಲ್ಲಿನ ಕಷ್ಟ, ಕೊಳಕು ವಾಸನೆ, ಊಟ, ನಿದ್ದೆ ಬಾರದ ರಾತ್ರಿಗಳು, ಸಹ ಖೈದಿಗಳ ಲೈಂಗಿಕ ಹಿಂಸೆ ಎಲ್ಲವನ್ನೂ ಕಂಡು ದೇವರೇ ನಾನು ಮತ್ತೆ ಇಲ್ಲಿಗೆ ಬರುವುದು ಬೇಡ. ಇನ್ನಾದರೂ ನಾನು ಒಳ್ಳೆಯವನಾಗಿ ಬದುಕಬೇಕು ಎಂದು ಹಪಹಪಿಸುತ್ತಿದ್ದೆ.
ಆಟೋ ಓಡಿಸಿಕೊಂಡು ಇದ್ದೆ
ಜೈಲಿನಿಂದ ಬಂದವನನ್ನು ಸಮಾಜ ಬೇರೆಯದ್ದೇ ರೀತಿ ಕಾಣುತ್ತೆ. ನಾನು ಬದಲಾಗಿದ್ದೇನೆ ಎಂದು ಹೇಳಿದರೆ ಯಾರೂ ನಂಬುತ್ತಿರಲಿಲ್ಲ. ಅದು ಸಹಜ ಕೂಡ. ಅದಕ್ಕೆ ನನ್ನ ಜೀವನ ಶೈಲಿಯಿಂದಲೇ ಉತ್ತರ ಕೊಡಬೇಕು ಎಂದುಕೊಂಡು ಆಟೋ ಓಡಿಸಲು ಮುಂದಾದೆ.
ಇಲ್ಲದವರ ಕಷ್ಟ ಗೊತ್ತಿತ್ತು
ಮನೆಯಿಂದ ಹೊರಬಿದ್ದಿದ್ದ ನಾನು ರೈಲ್ವೇ ಸ್ಟೇಷನ್, ಬಸ್ ಸ್ಟ್ಯಾಂಡ್, ಫ್ಲೈ ಓವರ್‌ಗಳ ಕೆಳಗೆ ಮಲಗುತ್ತಿದ್ದೆ. ಆಗ ನನ್ನ ಪಕ್ಕದಲ್ಲೇ ಮಲಗುತ್ತಿದ್ದ ವೃದ್ಧರು, ಕೈಲಾಗದವರನ್ನು ಕಂಡು ಮರುಕ ಹುಟ್ಟುತ್ತಿತ್ತು. ಆಮೇಲೆ ಆಟೋ ಓಡಿಸಲು ಶುರು ಮಾಡಿದಾಗ ಯಾರಾದರೂ ಅನಾಥವಾಗಿ ಬಿದ್ದಿದ್ದರೆ ನನಗೆ ನೋಡಲು ಆಗುತ್ತಿರಲಿಲ್ಲ. ಯಾಕೆಂದರೆ ನಾನೂ ಅದೇ ಜಾಗದಲ್ಲಿ ಇದ್ದವನು ಅಲ್ಲವೇ. ಹಾಗಾಗಿಯೇ ಸಿಕ್ಕವರನ್ನೆಲ್ಲಾ ಮನೆಗೆ ಕರೆತಂದು ಜೋಪಾನ ಮಾಡತೊಡಗಿದೆ.
ಮದರ್ ತೆರೇಸಾ ಸ್ಫೂರ್ತಿ
ಇದು 21 ವರ್ಷದ ಹಿಂದಿನ ಮಾತು. ಆಗ ನಾನು ಆಟೋ ಓಡಿಸಿಕೊಂಡಿದ್ದೆ. ಅದೇ ವೇಳೆಗೆ ಮದರ್ ತೆರೇಸಾ ಸಾವನ್ನಪ್ಪಿದ್ದರು. ದೇಶದ ಎಲ್ಲಾ ಕಡೆ ಅವರ ಬಗ್ಗಯೇ ಮಾತು. ಅವರ ಸಾವಿಗೆ ನನ್ನ ಮನೆಯ ಪಕ್ಕದ ಹುಡುಗರೂ ಕಂಬನಿ ಮಿಡಿದರು. ಇದನ್ನೆಲ್ಲಾ ನೋಡಿದ ನನಗೆ ಬದುಕಿದ್ದರೆ ಹೀಗೆ ಬದುಕಬೇಕು. ನಾಲ್ಕೇ ನಾಲ್ಕು ಜನಕ್ಕೆ ನನ್ನ ಬದುಕು ಉಪಕಾರವಾದರೆ ಸಾಕು ಎಂದುಕೊಂಡು ನಾಲ್ಕು ಜನ ಅಸಹಾಯಕರನ್ನು ನನ್ನ ಮನೆಗೆ ಕರೆ ತಂದು ಸಾಕಿದೆ.
ಹರಿದು ಬಂದ ಸಹಾಯ
ಹೀಗೆ ಕೈಲಾದಷ್ಟು ಸಹಾಯ ಮಾಡುತ್ತಿದ್ದಾಗಲೇ ಎಸ್.ಆರ್. ಮನೋಹರ್, ಡೇವಿಡ್ ದಾಸ್ ಎಂಬವವರು ನನ್ನ ಸೇವೆ ನೋಡಿ ಅವರಾಗಿಯೇ ಬಂದು ಸಹಾಯ ಮಾಡಿದರು. ಆಗ ಕಾವಲ್ ಭೈರಸಂದ್ರದಲ್ಲಿ ಬಾಡಿಗೆ ಮನೆ ಮಾಡಿ ೧೩ ಜನರಿಗೆ ಊಟ ನೀಡಿ, ಆರೋಗ್ಯದ ಖರ್ಚು ನೋಡಿಕೊಳ್ಳುತ್ತಿದ್ದೆ. ಇದೆಲ್ಲಾ ಆಗುವಾಗಲೇ ಇಂಡಿಯಾ ಕ್ಯಾಂಪಸ್ ಕ್ರೂಸೈಟ್ ಫಾರ್ ಕ್ರೈಸ್ಟ್ ಸಂಸ್ಥೆ ದೊಡ್ಡಗುಬ್ಬಿಯಲ್ಲಿ ಅರ್ಧ ಎಕರೆ ಜಮೀನು ಕೊಟ್ಟು ಬಿಲ್ಡಿಂಗ್ ಕಟ್ಟಿಸಿಕೊಟ್ಟರು. ಇದೇ ನನ್ನ ಸೇವೆಗೆ ದೊಡ್ಡ ತಿರುವು ನೀಡಿತು. ಅಮೇಲೆ ಅಲ್ಲಿಗೆ ನೂರು ಜನರನ್ನು ಕರೆತಂದೆ. ಇಂದು ೮೦೦ ಜನ ಇದ್ದಾರೆ. ಇದಾದ ಮೇಲೆ ನಮ್ಮ ಸೇವೆಯನ್ನು ವ್ಯವಸ್ಥಿತವಾಗಿ ಮಾಡಬೇಕು ಎಂದುಕೊಂಡು ನ್ಯೂ ಆರ್ಕ್ ಮಿಷನ್ ಆಫ್ ಇಂಡಿಯಾ ಎನ್ನುವ ಟ್ರಸ್ಟ್ ಶುರು ಮಾಡಿದೆವು. ಚಾಲ್ಸ್ ಪ್ರಭಾಕರ್. ಚಾರ್ಲಿ ಸಾಮ್ಯುಯಲ್, ಅಬ್ರಹಾಂ ನೈನೆಲ್, ಜಾನ್ ಪೀಟರ್ ಕೃಪಕರನ್ ಮತ್ತು ನಾನು ಸೇರಿ ೨೧ ವರ್ಷದಲ್ಲಿ ಆಶ್ರಯ ನೀಡಿದವರ ಸಂಖ್ಯೆ ೧೧ ಸಾವಿರಕ್ಕೂ ಅಧಿಕ. ಇವರೊಂದಿಗೆ ನೀವೂ ಮಾತನಾಡಿ ದೂ.9900120100