ಸಗಣಿ ಎಂದು ಸೈಡ್‌ಲೈನ್ ಮಾಡಬೇಡಿ; ಅದರಿಂದ ಇದೆ ಅಮೇಜಿಂಗ್ ಉಪಯೋಗ!

By Web DeskFirst Published Aug 30, 2019, 2:41 PM IST
Highlights

ಅಯ್ಯೋ ಸಗಣಿ ಎಂದು ನಾವು ಅಸಹ್ಯ ಮಾಡಿಕೊಳ್ಳುವ ಸಗಣಿಯು ಎಳ್ಳಷ್ಟೂ ವೇಸ್ಟ್ ಆಗದೆ ಉಪಯೋಗಕ್ಕೆ ಬರುತ್ತದೆ. ಗೊಬ್ಬರ, ಗ್ಯಾಸ್, ಇಟ್ಟಿಗೆ ಇತ್ಯಾದಿಗಳಾಗಿ ಸಗಣಿ ರೂಪಾಂತರ ಹೊಂದಬಲ್ಲದು. 

ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ... ನೀನಾರಿಗಾದೆಯೋ ಎಲೆ ಮಾನವ?
ಸಗಣಿ ಎಂದು ನಾವು ಮೂಗು ಮುರಿಯುವ, ಮೆಟ್ಟಿದರೆ ಕೊಳಕಾದೆವೆಂದು ಕುಂಟುತ್ತಾ ಓಡಿ ಕಾಲು ತೊಳೆದುಕೊಳ್ಳುವಂಥ ಸಗಣಿಯೇ ಹೀಗೆ ಹತ್ತು ಹಲವು ರೀತಿಯಲ್ಲಿ ಪ್ರಯೋಜನಕಾರಿ. ಸಗಣಿಯ ಉಪಯೋಗಗಳನ್ನು ಕೇಳಿದರೆ ನಿಜವಾಗಿಯೂ ನಾನಾರಿಗಾದೆ ಎಂದು ಪ್ರತಿಯೊಬ್ಬರೂ ಯೋಚಿಸಲೇಬೇಕು.

ಬೆರಣಿ ಗಣೇಶ ಬಂದ.. ಪರಿಸರಕ್ಕೆ ತಾನೇ ಪೂರಕ ಎಂದ

ಹಳ್ಳಿಗಳಲ್ಲಿ ಬೆಳೆದವರು ಬೆಳಗ್ಗೆ ಎದ್ದ ಕೂಡಲೇ ನೋಡುತ್ತಿದ್ದ ದೃಶ್ಯ, ಅಮ್ಮಂದಿರು ಬೀದಿ ಬದಿಯಲ್ಲಿ ಬಿದ್ದ ಸಗಣಿಯನ್ನೆಲ್ಲ ಹೆಕ್ಕಿ ತರುತ್ತಿದ್ದುದು. ಅದರಲ್ಲೂ ಕಾಂಪಿಟೇಶನ್ ಬೇರೆ. ಎದುರು ಮನೆ ಮಂಜಿ ಬೆಳಗ್ಗೆ 6ಕ್ಕೇ ಸಗಣಿ ಹೆಕ್ಕಲು ಬಂದುಬಿಡುತ್ತಾಳೆಂದು ಐದು ಗಂಟೆಗೇ ಹೆಕ್ಕುತ್ತಿದ್ದ ಸುಬ್ಬಮ್ಮ! ಹಿಂದೆಲ್ಲ ಅಂಗಳ ಹಾಗೂ ಹಿತ್ತಲ ನೆಲವನ್ನು ಸಪಾಟುಗೊಳಿಸಿ, ಗುಡಿಸಿ, ಸಗಣಿ ಬಳಿದಿಟ್ಟರೆ ಮನೆಯಂಗಳ ಎಷ್ಟು ನೀಟಾಗಿ ಕಾಣುತ್ತಿತ್ತು? ಅದರ ಚೆಂದ ಹೆಚ್ಚಿಸುವ ರಂಗೋಲಿ ಬೇರೆ. ಆದರೆ, ಈಗಿನ ತಲೆಮಾರಿಗೆ ಸಗಣಿ ಎಂಥಹ ಸುಗುಣಿ ಎಂಬುದು ಗೊತ್ತಿಲ್ಲ. ಅದರ ಹತ್ತು ಹಲವು ಪ್ರಯೋಜನಗಳ ಕುರಿತು ತಿಳಿದಿಲ್ಲ. 

ಇಂಧನ ಮತ್ತು ಬಯೋಗ್ಯಾಸ್

ಒಣಗಿಸಿದ ಸಗಣಿಯು ಅತ್ಯುತ್ತಮ ಇಂಧನ. ಕೆಲ ಸಮುದಾಯಗಳು ಒಣಗಿಸಿದ ಸಗಣಿಯನ್ನೇ ಬೆಂಕಿ ಉರಿಯಲು ಬಳಸಿ ಅಡುಗೆ ತಯಾರಿಸುತ್ತವೆ. ಅಂದ ಹಾಗೆ ಸಗಣಿ ಒಣಗಿದ ಮೇಲೆ ಅದಕ್ಕೆ ಯಾವ ವಾಸನೆಯೂ ಇರುವುದಿಲ್ಲ. ಇನ್ನೂ ಕೆಲವರು ಗೋಬರ್ ಗ್ಯಾಸ್ ಘಟಕದಲ್ಲಿ ಸಗಣಿ ಹಾಕಿ ಅದರಿಂದ ಸಿಗುವ ಅನಿಲ ಬಳಸಿ ಅಡುಗೆ ಮಾಡುತ್ತಾರೆ. ಗಾಳಿಯಾಡದ ದೊಡ್ಡ ಕಂಟೇನರ್‌ನಲಲ್ಲಿ ಸಗಣಿ ಹಾಗೂ ನೀರು ಹಾಕಿ ಒಣ ಪ್ರದೇಶದಲ್ಲಿಟ್ಟರೆ, ಬ್ಯಾಕ್ಟೀರಿಯಾಗಳು ಕೆಲಸವಾರಂಭಿಸಿ, ಬಯೋಗ್ಯಾಸ್ ಉತ್ಪಾದಿಸುತ್ತವೆ. ಈ ಅನಿಲವನ್ನು ಟ್ಯೂಬ್ ಮೂಲಕ ಎಳೆದುಕೊಂಡು ಸ್ಟೋರ್ ಮಾಡಬಹುದು. ಇದನ್ನು ಅಡುಗೆಗೆ, ನೀರು ಕಾಯಿಸಲು, ವಿದ್ಯುತ್ ತಯಾರಿಕೆಗೆ, ವಾಹನಗಳಿಗೆ ಬಳಸಬಹುದು.

ಭಾರತದಲ್ಲಿ ಟ್ರೆಂಡ್ ಆಯ್ತು ಕಾರು ಸೆಗಣಿ ಪೈಂಟ್!

ಕಟ್ಟಡ ನಿರ್ಮಾಣದಲ್ಲಿ

ಕೆಸರು ಹಾಗೂ ಸಗಣಿ ಮಿಶ್ರಿತ ಪೇಸ್ಟನ್ನು ಭಾರತದ ಹಳ್ಳಿ ಮನೆಗಳ ನೆಲ ಹಾಗೂ ಗೋಡೆಗಳಿಗೆ ಬಳಿಯುವುದನ್ನು ನೀವು ನೋಡಿರಬಹುದು. ಇದು ಮನೆಗೆ ವಾಟರ್‌ಪ್ರೂಫ್ ಲೇಯರ್ ಆಗುತ್ತದೆ. ಹೊರಗಿನಿಂದ ಬಿಸಿ ಹೊಡೆಯದೆ ಮನೆ ತಂಪಾಗಿರುತ್ತದೆ. ಜೊತೆಗೆ, ಕೀಟಗಳನ್ನು ದೂರವಿರಿಸುತ್ತದೆ ಕೂಡಾ. ಇದೀಗ ಇಟ್ಟಿಗೆಗಳನ್ನು ಕೂಡಾ ಸಗಣಿ ಬಳಸಿ ತಯಾರಿಸಲಾಗುತ್ತಿದೆ. ಇವು ಸಾಮಾನ್ಯ ಇಟ್ಟಿಗೆಗಳಿಗಿಂತ ಹಗುರವಾಗಿರುತ್ತವೆ. ಇನ್ನು ಫರ್ನಿಚರ್ ಹಾಗೂ ಮನೆಯ ನೆಲಕ್ಕೆ ಬಳಸುವ ಫೈಬರ್‌ಬೋರ್ಡ್‌ಗೆ ಕೂಡಾ ಮರದ ಚೂರಿನ ಬದಲು ಸಗಣಿ ಗೊಬ್ಬರ ಬಳಸಲಾಗುತ್ತಿದೆ.

ಪೇಪರ್

ಸಗಣಿಯಲ್ಲಿ ಫೈಬರ್ ಹೆಚ್ಚಾಗಿರುತ್ತದೆ. ಹಾಗಾಗಿ ಇದರಿಂದ ಸುಲಭವಾಗಿ ಪೇಪರ್ ತಯಾರಿಸಬಹುದು. ಹಲವರು ಸಗಣಿಯಿಂದ ಪೇಪರ್ ತಯಾರಿಸುವುದನ್ನು ಹಾಬಿಯಾಗಿಸಿಕೊಂಡಿರುತ್ತಾರೆ. 

ಕೀಟ ರೆಪೆಲ್ಲೆಂಟ್

ಒಣ ಸಗಣಿಯನ್ನು ಸುಡುವುದರಿಂದ ಹೊರಡುವ ಹೊಗೆಯು ಸೊಳ್ಳೆ, ನೊಣ ಸೇರಿದಂತೆ ಕೀಟಗಳನ್ನು ಓಡಿಸುತ್ತದೆ. 

ರಾಖಿ ಸಾವಂತ್ ಬ್ಯೂಟಿ ಸೀಕ್ರೆಟ್ ಸಗಣಿಯಂತೆ?

ಸಗಣಿಯಿಂದ ಗೊಬ್ಬರ

ಸಗಣಿಯು ಅತ್ಯುತ್ತಮ ಗೊಬ್ಬರ ಎನ್ನುವುದು ನಿಮಗೆ ಗೊತ್ತಿರಬಹುದು. ಇದು ನೈಟ್ರೋಜನ್, ಫಾಸ್ಪರಸ್ ಹಾಗೂ ಪೊಟ್ಯಾಶಿಯಂ ಮಿನರಲ್ಸ್‌ನಿಂದ ಶ್ರೀಮಂತವಾಗಿದೆ. ಇದು ಮಣ್ಣಿನೊಂದಿಗೆ ಬೆರೆತಾಗ ಅಗತ್ಯವಿರುವ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯಕ. ಅಲ್ಲದೆ, ಇದು ಮಣ್ಣು ನೀರನ್ನು ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳುವಂತೆ ನೋಡಿಕೊಳ್ಳುತ್ತದೆ. ಆದರೆ, ಸಗಣಿಯಲ್ಲಿ ಅದೆಷ್ಟು ಕೆಮಿಕಲ್ಸ್ ಇವೆಯೆಂದರೆ, ಗಿಡದ ಬುಡಕ್ಕೆ ಹಾಕುವ ಮುನ್ನ ನೀರಿನಲ್ಲಿ ಬೆರೆಸಿ ಡೈಲ್ಯೂಟ್ ಮಾಡುವುದು ಉತ್ತಮ.

ಸೋಪ್

ಮುಂಬಯಿ ಮೂಲದ ಕೌಪತಿ ಎಂಬ ಕಂಪನಿ ಸಗಣಿಯಿಂದ ಸೋಪನ್ನು ಕೂಡಾ ತಯಾರಿಸಿ ಮಾರುತ್ತಿದೆ. ಇದರಲ್ಲಿ ಆರೋಗ್ಯಕಾರಿ ಅಂಶಗಳ ರಾಶಿಯೇ ಇದು ಎಂಬುದು ಕಂಪನಿ ಆಂಬೋಣ. 

ಬೆರಣಿ

ಸಗಣಿಯನ್ನು ಮುದ್ದೆ ಮುದ್ದೆಯಾಗಿಯೇ ಮನೆಯ ಗೋಡೆಗಳಿಗೆ ಬಡಿದು, ಅವು ಅಲ್ಲಿಯೇ ಒಣಗಿ ಬೆರಣಿಯಾಗುತ್ತವೆ. ಇವನ್ನು ಶವ ಸುಡಲು, ಬೆಂಕಿ ಹಚ್ಚಲು, ಇಂಧನಕ್ಕಾಗಿ ಬಳಸಲಾಗುತ್ತದೆ.

ವಿಭೂತಿ

ಹಿಂದೂಗಳಲ್ಲಿ ಒಂದು ಸಮುದಾಯ ಹಣೆಯ ಮೇಲೆ ಧರಿಸುವ ವಿಭೂತಿ ಯಾವುದರಿಂದ ತಯಾರಿಸಿದ್ದು ಗೊತ್ತೇ? ಸಗಣಿಯಿಂದ! ಹೌದು, ಸಗಣಿಯನ್ನು ಒಣಗಿಸಿ ಸುಟ್ಟರೆ ಅದರಿಂದ ಬರುವ ಪುಡಿಯೇ ವಿಭೂತಿ. 
 

click me!