ನಿಮ್ಮ ಲೈಫ್‌ನ ಈ ಆರು ಸೀಕ್ರೆಟ್‌ಗಳನ್ನು ಯಾರೊಟ್ಟಿಗೂ ಶೇರ್ ಮಾಡ್ಬೇಡಿ!

By Web Desk  |  First Published Jun 11, 2019, 1:47 PM IST

ಎಲ್ಲರ ಬದುಕಿನಲ್ಲಿಯೂ ಒಂದಿಷ್ಟು ಸೀಕ್ರೆಟ್ಸ್‌ ಇರುತ್ತವೆ. ಅದು ಹಾಗಿದ್ದಾಗಲೇ ಇತರರು ಕುತೂಹಲದಿಂದ ನಮ್ಮತ್ತ ನೋಡಲು ಸಾಧ್ಯ. ಇರೋಬರೋದನ್ನೆಲ್ಲ ಎಲ್ಲರಿಗೂ ಸಾರಿಕೊಂಡು ಬಂದು ನಿಮ್ಮ ಬಾಯಿ ಬೊಂಬಾಯಿ ಎಂದು ತೋರಿಸಿಕೊಳ್ಳುವುದು ಸರಿಯಲ್ಲ. 


ಹಲವರ ಬಾಯಲ್ಲಿ ಗುಟ್ಟೆನ್ನುವುದು ನಿಲ್ಲುವುದಿಲ್ಲ. ಯಾರ ಬಳಿ ಏನು ಹೇಳಬೇಕು, ಏನು ಹೇಳಬಾರದು ಎಂಬ ಪ್ರಜ್ಞೆಯಿಲ್ಲದೆ ಮಾತನಾಡುತ್ತಾರೆ. ತಮ್ಮೆಲ್ಲ ಗುಟ್ಟುಗಳನ್ನು ಹೇಳಿಕೊಂಡರೆ ಎದುರಿನವರು ತಮಗೆ ಕ್ಲೋಸ್ ಆಗುತ್ತಾರೆ ಎಂಬ ನಂಬಿಕೆಯೂ ಕೆಲವರದು. ಆದರೆ, ಎಲ್ಲರೂ ನೀವಂದುಕೊಂಡಷ್ಟು ಒಳ್ಳೆಯವರಿರುವುದಿಲ್ಲ. ನೀವು ಹಂಚಿಕೊಂಡ ರಹಸ್ಯ ನಿಮ್ಮನ್ನೇ ನೋಯಿಸಲು ಕಾರಣವಾಗಬಹುದು. ಇವೆಲ್ಲದರ ಹೊರತಾಗಿಯೂ ಬದುಕಿನಲ್ಲಿ ಕೆಲವಷ್ಟು ಸೀಕ್ರೆಟ್‌ಗಳಿರಬೇಕು. ಪರ್ಸನಲ್ ಎಂಬಂಥ ಸಂಗತಿಗಳಿರಬೇಕು. ಈ ಆರು ವಿಷಯಗಳನ್ನು ಯಾರ ಬಳಿಯೂ ಹಂಚಿಕೊಳ್ಳಬಾರದು. 

1. ಗತ ನಕಾರಾತ್ಮಕ ಸಂಗತಿಗಳು
ನಮ್ಮೆಲ್ಲರ ವೈಯಕ್ತಿಕ ಬದುಕಿನಲ್ಲೂ ಕೆಲವೊಂದು ನೆಗೆಟಿವ್ ಕತೆಗಳಿರುತ್ತವೆ. ಅಲ್ಲಿ ನಮಗಿಷ್ಟದ ಕೆಲ ವ್ಯಕ್ತಿಗಳಿರುತ್ತಾರೆ. ಅಂಥವರನ್ನು, ಆ ಕತೆಗಳನ್ನು ಅವರ ಪಾಡಿಗೆ ಬಿಟ್ಟುಕೊಟ್ಟು, ಆ ಸಂಬಂಧ ಮಾತನಾಡದಿರುವುದು ಯಾವಾಗಲೂ ಒಳ್ಳೆಯದು. ನಿಮಗೇ ಆಗಲಿ, ಇತರರಿಗೇ ಆಗಲಿ ನೆಗೆಟಿವ್ ಕತೆಗಳು ಮನಸ್ಸಿಗೆ ಕಿರಿಕಿರಿ ಉಂಟುಮಾಡುವ ಹೊರತಾಗಿ ಅದರಿಂದ ಬೇರೇನೂ ಪ್ರಯೋಜನಗಳಿಲ್ಲ. ಜನರು ಯಾವಾಗಲೂ ಹಳೆಯದನ್ನೇ ಹೇಳಿ ಕೊರಗುವವರಿಗಿಂತ, ದ್ವೇಷ ಸಾಧಿಸುವವರಿಗಿಂತ, ಹೊಸತೇನಾದರೂ ಕಲಿತು, ಅರಿತು ಚರ್ಚಿಸುವಂಥವರತ್ತ ಆಕರ್ಷಿತರಾಗುತ್ತಾರೆ. ಸಕಾರಾತ್ಮಕ ಸಂಗತಿಗಳಿಗೆ ಚೆನ್ನಾಗಿ ಸ್ಪಂದಿಸುತ್ತಾರೆ. ನಿಮ್ಮನ್ನು ಬಾಧಿಸುವ ವಿಷಯಗಳನ್ನು ಬಿಟ್ಟುಬಿಡಿ. ವರ್ತಮಾನದತ್ತ ಚಿತ್ತ ಹರಿಸಿ, ಸಂತೋಷದಿಂದ ಜೀವಿಸಿ.

ನಿಮ್ಮ ವ್ಯಕ್ತಿತ್ವಕ್ಕೆ ಹೊಳಪು ನೀಡುವ 8 ಹವ್ಯಾಸಗಳು

2. ಆಸ್ತಿ ಅಂತಸ್ತು
ಕೆಲವೊಮ್ಮೆ ನಮ್ಮ ಹೊಸ ಕಾರು, ಬಟ್ಟೆ, ಒಡವೆ, ಮನೆ, ಕಾಸ್ಟ್ಲಿ ಫೋನ್‌ ಬಗ್ಗೆ ಕೊಚ್ಚಿಕೊಳ್ಳದೆ ಇರುವುದು ನಮಗೆ ಕಷ್ಟವಾದೀತು. ಆದರೆ, ಇದರಿಂದ ಇನ್ನೊಬ್ಬರ ಕಣ್ಣಲ್ಲಿ ನಿಮ್ಮ ಬೆಲೆ ಹೆಚ್ಚಾಗುವುದಕ್ಕಿಂತ ಇಳಿಯುವ ಸಾಧ್ಯತೆಯೇ ಹೆಚ್ಚು. ಜೀವನದಲ್ಲಿ ಬೆಲೆ ಕಟ್ಟುವ ವಸ್ತುಗಳಿಗಿಂತ ಬೆಲೆ ಕಟ್ಟಲಾಗದ ಸಂಗತಿಗಳೇ ಮುಖ್ಯ. ನಮ್ರತೆಯುಳ್ಳ ವ್ಯಕ್ತಿತ್ವಕ್ಕಿಂತ ಉತ್ತಮ ಆಸ್ತಿ ಇನ್ನೊಂದಿಲ್ಲ. ನಿಮ್ಮ ಸಂಭಾಷಣೆಯುದ್ದಕ್ಕೂ ಅದು ವ್ಯಕ್ತವಾಗಲಿ.

3. ಭವಿಷ್ಯದ ಗುರಿ
ನಿಮ್ಮ ಧೀರ್ಘಕಾಲೀನ ಯೋಜನೆಗಳನ್ನು ಯಾರ ಬಳಿಯೂ ಹೇಳಿಕೊಂಡಿಲ್ಲವೆಂದಾಗಲೇ ಸಾಧಿಸುವ ಸಾಧ್ಯತೆಗಳು ಹೆಚ್ಚು ಎನ್ನುತ್ತದೆ ವಿಜ್ಞಾನ. ನಿಮ್ಮ ಗುರಿಗಳ ಬಗ್ಗೆ ಹೇಳಿಕೊಂಡಾಗ, ಆ ಗುರಿಗಳನ್ನು ಸಾಧಿಸಿದಾಗ ದೊರೆಯುವಂಥ ಖುಷಿ ನಿಮ್ಮಿಂದ ಕಳೆದುಹೋಯಿತು ಎಂಬ ಭಾವ ಬರುತ್ತದೆ. ಈ ಕಾರಣದಿಂದ ಅದನ್ನು ಸಾಧಿಸಲು ಬೇಕಾದ ಪ್ರಯತ್ನವನ್ನು ನೀವು ಹಾಕುವುದಿಲ್ಲ. ಒಮ್ಮೆ ನೀವು ಗುರಿ ಸಾಧಿಸಿದ ಬಳಿಕ, ಇಡೀ ಜಗತ್ತಿಗೆ ಬೇಕಿದ್ದರೆ ಅದರ ಬಗ್ಗೆ ಕೂಗಿ ಹೇಳಿ. 

4. ನಿಮ್ಮ ಆದಾಯ
ಹಣಕಾಸಿನ ವಿಚಾರ ಯಾವತ್ತೂ ಗೌಪ್ಯವಾಗಿರಬೇಕು. ಹಣವು ಸಾರ್ವಜನಿಕ ಚರ್ಚೆಯ ವಿಷಯವಲ್ಲ. ಇನ್ನೊಬ್ಬರ ಸಂಬಳ ಕೇಳಬಾರದು ಎಂಬುದು ಮ್ಯಾನರ್ಸ್ ಆದರೆ, ನಮ್ಮ ಸಂಬಳ ಹೇಳಬಾರದು ಎಂಬುದು ಕಾಮನ್‌ಸೆನ್ಸ್. ನಿಮ್ಮ ಆದಾಯದ ಗುಟ್ಟು ರಟ್ಟಾದ ಮೇಲೆ ಜನ ನಿಮ್ಮನ್ನು ನೋಡುವ ರೀತಿಯೇ ಬೇರೆ. ಆದಾಯ ಹೆಚ್ಚಿರಲಿ, ಕಮ್ಮಿಯಿರಲಿ, ಅದರೆಡೆ ತುಟ್ಟಿ ಬಿಚ್ಚದಿರುವುದು ನಿಮ್ಮನ್ನು ಸಭ್ಯರನ್ನಾಗಿಸುತ್ತದೆ.

Tap to resize

Latest Videos

ನಂಬಿ ಕೆಟ್ಟವರೂ ಇಲ್ಲ, ಬಿದ್ದವರೂ ಇಲ್ಲ!

5. ಪರೋಪಕಾರ
ಒಳ್ಳೆಯ ಕೆಲಸಗಳಿಗೆ ಒಳ್ಳೆಯ ಫಲ ಇದ್ದೇ ಇದೆ. ನೀವು ಒಳ್ಳೆಯದನ್ನು ಮಾಡುವುದನ್ನು ಎಂದಿಗೂ ನಿಲ್ಲಿಸಬಾರದು. ಆದರೆ, ಮಾಡಿದ್ದನ್ನು ಹೇಳಿಕೊಂಡು ತಿರುಗುವುದು ಮಾತ್ರ ಆ ಒಳ್ಳೆಯ ಕೆಲಸದ ಮೌಲ್ಯವನ್ನು ಕಡಿಮೆ ಮಾಡುತ್ತದೆ. ಬಲಗೈಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುವುದಿಲ್ಲವೇ ಹಿರಿಯರು? ನಿಮ್ಮ ಪರೋಪಕಾರದ ಬಗ್ಗೆ ಹೇಳಿಕೊಂಡರೆ ಅದು ನಿಮ್ಮ ಬಗ್ಗೆ ಕೊಚ್ಚಿಕೊಂಡಂತಾಗುತ್ತದೆ. ಆ ಮೂಲಕ ಮಾಡಿದ ಉಪಕಾರದ ಬೆಲೆ ಇಳಿಸಿದಂತಾಗುತ್ತದೆ. ಏನಾದರೂ ಉತ್ತಮವಾದುದನ್ನು ಮಾಡಿದರೆ ಜನರ ಗಮನ ಆ ಕೆಲಸದೆಡೆ, ಅದರಿಂದಾದ ಉಪಯೋಗದ ಬಗ್ಗೆ ಹರಿಯಬೇಕೇ ಹೊರತು ನಿಮ್ಮ ಬಗ್ಗೆಯಲ್ಲ.

6. ಕೌಟುಂಬಿಕ ಸಮಸ್ಯೆಗಳು
ನಿಮ್ಮ ರಕ್ತ ಸಂಬಂಧಿಗಳಿರಲಿ ಅಥವಾ ವಿಸ್ತರಿತ ಕುಟುಂಬವೇ ಇರಲಿ, ಅಲ್ಲಿನ ಸಮಸ್ಯೆಗಳು ಹೊರ ಹೋಗಬಾರದು. ಅವುಗಳನ್ನು ಊರೆಲ್ಲ ಹೇಳಿಕೊಂಡು ತಿರುಗುವುದರಿಂದ ಯಾರೂ ಮನೆಗೆ ಬಂದು ಆ ಸಮಸ್ಯೆಗಳಿಗೆ ಪರಿಹಾರ ಕೊಡಲಾರರು. ಬದಲಿಗೆ ಮನೆಯವರ ನಂಬಿಕೆಯನ್ನು ನೀವು ಕಳೆದುಕೊಳ್ಳುತ್ತೀರಿ ಅಷ್ಟೆ. ಕುಟುಂಬವೊಂದು ಒಡೆದಿದೆ ಎಂಬುದು ಹೊರಗಿವರಿಗೆ ಗೊತ್ತಾದರೆ, ಅವರದನ್ನು ತಮ್ಮ ಲಾಭಕ್ಕೆ ಬಳಸಬಹುದು. ಒಗ್ಗಟ್ಟಿನ ಸಂಸಾರದತ್ತ ಸುಳಿಯಲೂ ಯಾರು ಧೈರ್ಯ ತೋರುವುದಿಲ್ಲ.

 ಎಲ್ಲರೂ ನಮ್ಮ ಬದುಕಿನ ಎಲ್ಲ ಸಂಗತಿಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂದು ತಿಳಿಯುವುದು ಮೂರ್ಖತನ. ಯಾರ ಮೇಲೆ ಎಷ್ಟೇ ನಂಬಿಕೆ ಇದ್ದರೂ, ಗುಟ್ಟುಗಳು ಗುಟ್ಟಾಗೇ ಉಳಿಯುವುದು ಒಳಿತು. 

click me!