ಬದಲಾದ ಟ್ರಾವೆಲ್ ಟ್ರೆಂಡ್ಸ್; ನೀವ್ಯಾದ್ದನ್ನು ಫಾಲೋ ಮಾಡ್ತಿದೀರಾ?

By Web Desk  |  First Published Jul 26, 2019, 3:13 PM IST

ಟ್ರಾವೆಲ್ ಟ್ರೆಂಡ್ ಬದಲಾಗಿದೆ. ಇಂದಿನ ಟ್ರಾವೆಲ್ಲರ್‌ಗೆ ಫ್ರೆಂಡ್ಸ್ ಜೊತೆ ಸುತ್ತುವ ಮಜವೂ ಬೇಕು, ಒಬ್ಬರೇ ಸುತ್ತುವ ಅನುಭವವೂ ಬೇಕು. ಎಕೋ ಫ್ರೆಂಡ್ಲಿಯಾಗಿಯೂ ಇರಬೇಕು, ಹೋದಲ್ಲಿ ಒಂದಿಷ್ಟನ್ನು ಕಲಿಯಬೇಕು. ಸ್ಥಳ ನೋಡುವುದರೊಂದಿಗೆ ಸ್ಥಳೀಯ ತಿನಿಸುಗಳ ಸವಿದು, ಸ್ಥಳೀಯರ ಬದುಕನ್ನು ಹೊಕ್ಕಿ ನೋಡಬೇಕು. 


ಟ್ರಾವೆಲ್ ಎಂದರೆ ಯಾರಿಗೆ ಇಷ್ಟವಿಲ್ಲ? ಲಾಂಗ್ ವೀಕೆಂಡನ್ನು ಕ್ಯಾಲೆಂಡರಿನಲ್ಲಿ ಮಾರ್ಕ್ ಮಾಡಿ, ಎಲ್ಲೆಲ್ಲಿಗೆ ಹೋಗಬಹುದೆಂದು ಯೋಜಿಸಿ, ಗೆಳೆಯರನ್ನು ಒಟ್ಟು ಮಾಡಿ, ಇದುವರೆಗೂ ಕೇಳಿದ್ದ ಸ್ಥಳವೊಂದನ್ನು ನೋಡಲು ಹೋಗುವ ಕುರಿತು ಎಡೆಬಿಡದೆ ಕನಸು ಕಾಣಲಾರಂಭಿಸಿ, ಅದಕ್ಕಾಗಿ ಶಾಪಿಂಗ್ ಮಾಡಿ, ಇನ್ಸ್ಟಾದಲ್ಲಿ ಫೋಟೋ ಅಪ್ಲೋಡ್ ಮಾಡುವ ಕನಸು ಕಂಡು... ಹೋಗುವ ಮುಂಚೆಯೇ ಎಷ್ಟೆಲ್ಲ ಸಂಭ್ರಮ....!

ಪಾತಾಳದಲ್ಲಿ ವಾಸಿಸೋ ಮಂದಿ, ಇದೇನು ಅಜ್ಜಿ ಕಥೆಯಲ್ಲ ಬಿಡಿ!

Tap to resize

Latest Videos

ಬದುಕು ಬೋರೆಂದಾಗಲೆಲ್ಲ ತಿರುಗಾಟ ಅದಕ್ಕೆ ಹೊಸ ಚೈತನ್ಯ ತುಂಬಬಲ್ಲದು. ಈ ಟ್ರಾವೆಲ್ ಟ್ರೆಂಡ್ ಈಗೀಗ ಬಹಳಷ್ಟು ಬದಲಾಗಿದೆ. ಟೂರಿಸ್ಟ್ ಸ್ಥಳವಲ್ಲದ ಜಾಗ ಹುಡುಕಿ ಹೊರಡುವುದರಿಂದ ಹಿಡಿದು, ಒಬ್ಬರೇ ತಿರುಗುವವರೆಗೆ, ಎಕೋ ಫ್ರೆಂಡ್ಲಿ ಟ್ರಿಪ್‌ನಿಂದ ಹಿಡಿದು, ಟೆಕ್ ಸ್ಯಾವಿ ತಿರುಗಾಟದವರೆಗೆ ಟ್ರೆಂಡ್ ಬದಲಾಗಿದೆ. ಒಬ್ಬೊಬ್ಬರೂ ತಮ್ಮ ಇಷ್ಟ, ಅನುಕೂಲದ ಪ್ರಕಾರ ಟ್ರಿಪ್ ಕೈಗೊಳ್ಳುತ್ತಿದ್ದಾರೆ. ಈ ವರ್ಷದ ಟ್ರಾವೆಲ್ ಟ್ರೆಂಡ್ ಏನೆಲ್ಲ ಇದೆ ನೋಡೋಣ.

ಸೋಲೋ ಟ್ರಾವೆಲ್

ಭಾರತೀಯ ಮಹಿಳೆ ಕೂಡಾ ಹಿಂದೆಂದೂ ಇಲ್ಲದಂತೆ ಈಗ ತಾನೊಬ್ಬಳೇ ತಿರುಗಾಡುತ್ತಿದ್ದಾಳೆ. ಎಲ್ಲೇ ಹೋಗಬೇಕೆಂದರೂ ಸುರಕ್ಷತೆ ಭಯದಿಂದ ಗಂಡನಿಗೋ, ಗೆಳೆಯರಿಗೋ ಕಾಯುತ್ತಿದ್ದ ಮಹಿಳೆ ಈಗಿಲ್ಲ. ಈಗೇನಿದ್ದರೂ, ಬೋಲ್ಡ್ ಹುಡುಗಿಯರ ಜಮಾನಾ. ಕಾಯುತ್ತಾ ಕೂರುವ ಪ್ರಶ್ನೆಯೇ ಇಲ್ಲ, ತಿರುಗಬೇಕಿನಿಸಿತೇ, ಎಲ್ಲ ಆನ್ಲೈನ್‌ನಲ್ಲಿ ಬುಕ್ ಮಾಡಿಕೊಂಡು ಬ್ಯಾಕ್‌ಪ್ಯಾಕ್ ಏರಿಸಿಕೊಂಡು ಹೊರಟೇಬಿಡುತ್ತಾಳೆ. ಇಷ್ಟಕ್ಕೂ ಇದು ಕೇವಲ 20-30 ವರ್ಷದ ಯುವತಿಯರ ಕತೆಯಲ್ಲ, 40 ದಾಟಿದ ಮಹಿಳೆಯರೂ ಹದಿಹರೆಯದ ಹುಮ್ಮಸ್ಸಿನಲ್ಲಿ ತಿರುಗಾಡಲಾರಂಭಿಸಿದ್ದಾರೆ. ದೇಶದೊಳಗೆ ಸಿಕಂದರಾಬಾದ್, ದೆಲ್ಲಿ, ಚೆನ್ನೈ, ಪುಣೆ, ಅಲಹಾಬಾದ್, ವಿಶಾಖಪಟ್ಟಣಂ, ಹೌರಾ ಹಾಗೂ ತಿರುಪತಿ ಸೋಲೋ ಟ್ರಾವೆಲ್ ಮಾಡುವ ಮಹಿಳೆಯರ ಫೇವರೇಟ್ ಸ್ಥಳಗಳಾಗಿದ್ದರೆ, ಅಂತಾರಾಷ್ಟ್ರೀಯ ಟ್ರಿಪ್‌ಗೆ ಸಿಂಗಾಪುರ, ಸ್ವಿಟ್ಜರ್‌ಲ್ಯಾಂಡ್, ನ್ಯೂಜಿಲ್ಯಾಂಡ್ ಹಾಗೂ ಅಮೆರಿಕ ಭಾರತೀಯ ಮಹಿಳೆಯರ ಇಷ್ಟದ ತಾಣಗಳು. 
ಶಿಕ್ಷಣ, ಉದ್ಯೋಗ, ಜಾಗೃತಿ, ಸ್ವಾತಂತ್ರ್ಯ ಹಾಗೂ ಆಧುನಿಕ ಟೆಕ್ನಾಲಜಿಯ ಕಾರಣದಿಂದಾಗಿ ಇಂದು ಯುವತಿಯರು ಎಲ್ಲಿಂದ ಎಲ್ಲಿಗೆ ಬೇಕಾದರೂ ಒಬ್ಬರೇ ಹೋಗಿ ಬರಬಲ್ಲರು. ಕಾರ್ಪೋರೇಟ್ ಬ್ಯುಸಿನೆಸ್ ಟ್ರಿಪ್‌ಗಳು ಕೂಡಾ ಮಹಿಳೆಯರಿಗೆ ಸೋಲೋ ಟ್ರಿಪ್‌ಗೆ ಪ್ರೇರೇಪಿಸುತ್ತಿದೆ. 

ರಾಕ್ಷಸಿ ಹಿಡಿಂಬಿಗೂ ಇದೆ ಮನಾಲಿಯಲ್ಲಿ ದೇವಸ್ಥಾನ!

ಎಕೋ ಫ್ರೆಂಡ್ಲಿ ಟ್ರಾವೆಲ್

ಸುತ್ತಾಟವು ಪರಿಸರದ ಮೇಲೆ ಮಾರಕ ಪರಿಣಾಮಗಳನ್ನು ಬೀರಬಹುದು. ಇತ್ತೀಚಿನ ಸಂಶೋಧನೆಯ  ಪ್ರಕಾರ 10ರಲ್ಲಿ 1ರಷ್ಟು ವಿಶ್ವದ ಕಾರ್ಬನ್ ವಿಸರ್ಜನೆ ಪ್ರಮಾಣ ಟ್ರಾವೆಲ್‌ನಿಂದಾಗುತ್ತದೆ. ವಾಹನಗಳು ಸೇರಿದಂತೆ ಏರ್‌ಲೈನ್‌ಗಳು ಈ ಸಂಬಂಧ ಬಹುದೊಡ್ಡ ಅಪರಾಧಿಗಳು. ಇನ್ನು ಪ್ರವಾಸಿಯು ತಾನು ಹೋದಲೆಲ್ಲ ಎಸೆವ ಕಸ, ಕೊಳಕಿನಿಂದಾಗಿ ಮಾಲಿನ್ಯ ಪ್ರಮಾಣ ಮತ್ತಷ್ಟು ಹೆಚ್ಚುತ್ತದೆ. ಆದರೆ, ಒಂದು ಸಂತಸದ ಸುದ್ದಿಯೆಂದರೆ, ಈಗಿನ ತಲೆಮಾರಿನಲ್ಲಿ ಕಾರ್ಬನ್ ವಿಸರ್ಜನೆ ಕಡಿಮೆಗೊಳಿಸಲು ಸಾಧ್ಯವಾದುದನ್ನೆಲ್ಲ ಮಾಡುವ ಮನಸ್ಸಿರುವ ಎಕೋ ಫ್ರೆಂಡ್ಲಿ ಟ್ರಾವೆಲ್ಲರ್ಸ್ ಹೆಚ್ಚಾಗುತ್ತಿದ್ದಾರೆ. 

ಬುಕಿಂಗ್ ಡಾಟ್ ಕಾಮ್ ನಡೆಸಿದ ಸರ್ವೆಯೊಂದರಲ್ಲಿ ಶೇ.97ರಷ್ಟು ಭಾರತೀಯ ಯಾತ್ರಿಕರು, ತಾವು ಹೋದ ಸ್ಥಳದಲ್ಲಿ ಪರಿಸರಕ್ಕೆ ಮಾರಕವಾಗದಂತ ಚಟುವಟಿಕೆಗಳಲ್ಲಿ ಭಾಗವಹಿಸಲು ಆಸಕ್ತಿ ಇರುವುದಾಗಿ ಹೇಳಿದ್ದರೆ, ಸುಮಾರು ಶೇ.46ರಷ್ಟು ಜನ ತಾವು ರಜೆಯಲ್ಲಿ ತಿರುಗಾಡಲು ಹೋದ ಸ್ಥಳದ ಕಸ, ಪ್ಲಾಸ್ಟಿಕ್‌ಗಳನ್ನು ಎತ್ತಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಶೇ.70ರಷ್ಟು ಮಂದಿ, ಸ್ಥಳೀಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಾದರೆ ಅಂಥ ಸ್ಥಳಕ್ಕೆ ತಾವು ಹೋಗುವುದಿಲ್ಲ ಎಂದಿದ್ದಾರೆ. 

ಮುಂದಿನ ಬಾರಿ ನಿಮ್ಮ ಹಾಲಿಡೇ ಎಕೋ ಫ್ರೆಂಡ್ಲಿಯಾಗಿರುವಂತೆ ನೋಡಿಕೊಳ್ಳಲು ಏನು ಮಾಡಬೇಕು? ವಿಮಾನ ಪ್ರಯಾಣ  ಆದಷ್ಟು ಕಡಿಮೆ ಮಾಡಿ, ಪ್ಲ್ಯಾಸ್ಟಿಕ್ ಬಳಕೆ ಸಂಪೂರ್ಣ ತ್ಯಜಿಸಿ, ಸ್ಥಳೀಯರ ಗೆಸ್ಟ್ ಹೌಸ್‌ಗಳಲ್ಲಿಉಳಿಯಿರಿ. ಮರುಬಳಕೆಗೆ ಯೋಗ್ಯ ಬಾಟಲ್ ತೆಗೆದುಕೊಂಡು ಹೋಗಿ. ಶಾಪಿಂಗ್ ಬ್ಯಾಗ್‌ಗಳನ್ನು ಕೂಡಾ ಮನೆಯಿಂದಲೇ ಕೊಂಡೊಯ್ಯಿರಿ. ಸ್ಥಳೀಯವಾಗಿ ತಯಾರಿಸಿದ ಕ್ರಾಫ್ಟ್ಸ್, ಸ್ಥಳೀಯರು ಗೈಡ್ ಆಗಿ ಕರೆದುಕೊಂಡು ಹೋಗುವ ವಾಕಿಂಗ್ ಟೂರ್ ಆಯ್ಕೆ ಮಾಡಿ. ಅಷ್ಟೇನು ಕಷ್ಟವಲ್ಲ ಅಲ್ಲವೇ?

ತಂತ್ರಜ್ಞಾನ ಪ್ರೇರಿತ ಟ್ರಾವೆಲ್

ಅಭಯಾರಣ್ಯದಲ್ಲಿ ಕೂಡಾ ಅದೃಷ್ಟವಿದ್ದರೆ ಮಾತ್ರ ಹುಲಿ ಕಣ್ಣಿಗೆ ಬಿದ್ದೀತು. ಆದರೆ, ಈ ದಿನಗಳಲ್ಲಿ ವೈಲ್ಡ್‌ಟ್ರಯಲ್ಸ್‌ನಂಥ ಆ್ಯಪ್‌ಗಳು ದೇಶದ ಬಹುತೇಕ ಅಭಯಾರಣ್ಯಗಳಲ್ಲಿ ಯಾವ ಸಮಯದಲ್ಲಿ ಎಷ್ಟು ಹೊತ್ತಿಗೆ ಯಾವ ಜಾಗದಲ್ಲಿ ಯಾವೆಲ್ಲ ಪ್ರಾಣಿಗಳಿರಬಹುದು ಎಂಬುದರ ಸಂಪೂರ್ಣ ವಿವರ ನೀಡುತ್ತದೆ. ಇದರಿಂದ ನೀವು ಹುಲಿ ನೋಡದೆ ಅಭಯಾರಣ್ಯದಿಂದ ವಾಪಸ್ ಬರುವ ಸಾಧ್ಯತೆಗಳನ್ನು ತಪ್ಪಿಸಿಕೊಳ್ಳಬಹುದು. ಇದೊಂದು ಉದಾಹರಣೆಯಷ್ಟೇ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಟೆಕ್ನಾಲಜಿ ನಾವು ಟ್ರಾವೆಲ್ ಮಾಡುವ ರೀತಿಯನ್ನು ಬಹಳಷ್ಟು ಬದಲಿಸಿವೆ. ಬಯೋಮೆಟ್ರಿಕ್ ಬಳಕೆ, ಸೆಲ್ಫ್ ಚೆಕ್ ಇನ್, ಹೋಟೆಲ್ ಬುಕಿಂಗ್, ಆನ್ಲೈಲ್ ಟ್ರಾನ್ಸ್ಯಾಂಕ್ಷನ್, ಟಿಕೆಟ್ ಬುಕಿಂಗ್ ಎಲ್ಲವನ್ನೂ ಇಂದಿನ ಟ್ರಾವೆಲರ್ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾನೆ. 

ಕೇರಳದಲ್ಲಿದೆ ವಿಶ್ವದ ಅತಿ ದೊಡ್ಡ ಪಕ್ಷಿ ಶಿಲ್ಪ!

ಎಕ್ಸ್‌ಪೀರಿಯನ್ಸ್ ಟ್ರಾವೆಲ್

ಈಗ ಸುತ್ತಾಟವೆಂದರೆ ಯಾವುದೋ ಸ್ಥಳಕ್ಕೆ ಹೋಗಿ, ಅಲ್ಲಿ ನೋಡಲು ಚೆನ್ನಾಗಿರುವುದನ್ನೆಲ್ಲ ಕಂಡುಬರುವುದಷ್ಟೇ ಅಲ್ಲ, ಹೊಸ ಸ್ಥಳಕ್ಕೆ ಹೋಗಿ, ಸ್ಥಳೀಯರಂತೆ ಬದುಕುವುದು ಕೂಡಾ ಹೊಸ ಟ್ರೆಂಡ್. ನಗರವೊಂದಕ್ಕೆ ಹೋಗಿ ಅಲ್ಲಿನ ಫೇಮಸ್ ಹೋಟೆಲ್‌ಗಳಿಗೆಲ್ಲ ಭೇಟಿ ಕೊಟ್ಟು, ಹೊಸ ರುಚಿಗಳನ್ನೆಲ್ಲ ಸವಿಯುವುದು, ಹತ್ತಿರದ ಹಳ್ಳಿಗಳು, ಬೆಟ್ಟಗಳಿಗೆ ಟ್ರೆಕಿಂಗ್ ಮಾಡುವುದು, ಸ್ಥಳೀಯ ಕೃಷಿಕರ ಮನೆಯಲ್ಲಿದ್ದು, ಕೃಷಿ ಕೆಲಸಗಳನ್ನು ಕಲಿಯುವುದು, ಬುಡಕಟ್ಟು ಸಂಸ್ಕೃತಿ ನೋಡಿ ತಿಳಿಯುವುದು ಇತ್ಯಾದಿ ಹಪಹಪಿಗಳು ಇಂದಿನ ಯುವಕರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಕಲಿಯುವುದಕ್ಕಾಗಿ, ತಿಳಿಯುವುದಕ್ಕಾಗಿ, ಕಲಿಸುವುದಕ್ಕಾಗಿ, ಪ್ರೇರಣೆಗಾಗಿ, ಶಾಂತಿಗಾಗಿ ಇಂದಿನ ಟ್ರಾವೆಲ್ಲರ್ ಸುತ್ತಾಡುತ್ತಿದ್ದಾನೆ.  ಇವೇ ಅಲ್ಲದೆ ವೀಕೆಂಡ್ ಟ್ರಾವೆಲ್, ಕಾನ್ಷಿಯಸ್ ಟ್ರಾವೆಲ್, ಸ್ಕಿಲ್ ಟ್ರಾವೆಲಿಂಗ್ ಮುಂತಾದ ಟ್ರೆಂಡ್‌ಗಳು ಇಂದು ಜನಪ್ರಿಯವಾಗಿವೆ. 

click me!