
ಕೇವಲ 60 ದಿನಗಳಲ್ಲಿ 22 ಕೆಜಿ ತೂಕ ಇಳಿಸಿಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಆದರೆ ಕೇರಳದ ಉದ್ಯಮಿ ಡಾ. ಶಿಬಿನ್ ಮ್ಯಾಥ್ಯೂ ಅವರ ಕಟ್ಟುನಿಟ್ಟಾದ ಶಿಸ್ತು ಮತ್ತು ಕಠಿಣ ಪರಿಶ್ರಮ ಇದನ್ನು ಸಾಧ್ಯವಾಗಿಸಿದೆ. ಅತ್ಯಂತ ಕಟ್ಟುನಿಟ್ಟಾದ ಕ್ಯಾಲೋರಿ ನಿಯಂತ್ರಣ (calorie deficit) ಮತ್ತು ಹೆಚ್ಚಿನ ಪ್ರೋಟೀನ್ ಒಳಗೊಂಡ ಆಹಾರ ಪದ್ಧತಿಯನ್ನು ದಿನವೂ ಪಾಲಿಸುವ ಮೂಲಕ ಅವರು ಈ ಗಮನಾರ್ಹ ಬದಲಾವಣೆ ಕಂಡುಕೊಂಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಾವೂ ಹೇಗೆ 110 ಕೆಜಿಯಿಂದ 88 ಕೆಜಿಗೆ ತೂಕ ಇಳಿಸಿಕೊಂಡೆ ಎಂಬುದನ್ನು ಹಂಚಿಕೊಂಡಿರುವ ಡಾ. ಶಿಬಿನ್ ಮ್ಯಾಥ್ಯೂ, ಈ ಯಶಸ್ಸಿನ ಹಿಂದಿನ ನಿಖರವಾದ ದಿನಚರಿಯನ್ನು ಬಹಿರಂಗಪಡಿಸಿದ್ದಾರೆ. ಆದರೆ ಜೊತೆಯಲ್ಲೇ ಒಂದು ಪ್ರಮುಖ ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ಕಠಿಣ ಆಹಾರ ಕ್ರಮವನ್ನು ಯಾರೂ ಕುರುಡಾಗಿ ಅನುಕರಿಸಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಮ್ಮ ಈ ಯಶಸ್ಸಿನ ಬಗ್ಗೆ ಬರೆದುಕೊಂಡಿರುವ ಶಿಬಿನ್ ಈ ಕಠಿಣ ಶಿಸ್ತನ್ನು ಪಾಲಿಸುವುದು ಕಷ್ಟವಾಗಿತ್ತು, ಆದರೆ ಫಲಿತಾಂಶ ನಿಮ್ಮ ಕಣ್ಣಮುಂದಿದೆ. ಇದನ್ನು ಸಾಧ್ಯವಾಗಿಸಲು ನಾನು ದಿನವೂ ತಪ್ಪದೇ ಪಾಲಿಸಿದ ಹೈ-ಪ್ರೋಟೀನ್ ಆಹಾರ ಕ್ರಮ ಇಲ್ಲಿದೆ ಎಂದು ಬರೆದಿದ್ದಾರೆ. ಅವರ ದಿನನಿತ್ಯದ ಆಹಾರವು ಅತ್ಯಂತ ಸರಳವಾಗಿದ್ದು, ಮೊಟ್ಟೆ, ಚಿಕನ್ ಹಾಗೂ ಹೈ-ಪ್ರೋಟೀನ್ ಮೊಸರನ್ನು ಒಳಗೊಂಡಿತ್ತು.
ತಮ್ಮ ಈ 60 ದಿನಗಳ ಆಹಾರ ಪದ್ಧತಿಯ ಹಿಂದಿನ ಮನಸ್ಥಿತಿಯನ್ನು ವಿವರಿಸಿದ ಅವರು, ಕಟ್ಟುನಿಟ್ಟಾದ ಕ್ಯಾಲೋರಿ ಕೊರತೆ, ಹೆಚ್ಚಿನ ಪ್ರೋಟೀನ್ ಮತ್ತು ಯಾವುದೇ ನೆಪಗಳಿಲ್ಲ (Strict deficit, high protein, zero excuses). ನಿಮ್ಮ ಬದಲಾವಣೆಯ ಪಯಣಕ್ಕೆ ನೀವು ಸಿದ್ಧರಿದ್ದೀರಾ? ಎಂದು ಕೇಳಿದ್ದಾರೆ. ತಮ್ಮ ಸಂಪೂರ್ಣ ಆಹಾರ ಯೋಜನೆಯನ್ನು ಹಂಚಿಕೊಂಡಿದ್ದರೂ, ಇದನ್ನು ಇತರರು ನೇರವಾಗಿ ಕಾಪಿ ಮಾಡಬಾರದು ಎಂದು ಡಾ. ಶಿಬಿನ್ ಎಚ್ಚರಿಸಿದ್ದಾರೆ.
ಇದು ನನ್ನ ವೈಯಕ್ತಿಕ ಗುರಿಗಳಿಗಾಗಿ ರೂಪಿಸಲಾದ ಅತ್ಯಂತ ಕಠಿಣ ಮತ್ತು ಆಕ್ರಮಣಕಾರಿ (aggressive) ಡಯಟ್ ಆಗಿತ್ತು. ಯಾವುದೇ ಕಠಿಣ ಕ್ಯಾಲೋರಿ ನಿಯಂತ್ರಣದ ಕ್ರಮವನ್ನು ಕೈಗೊಳ್ಳುವ ಮುನ್ನ ನಿಮ್ಮ ದೇಹದ ಸ್ಥಿತಿಯನ್ನು ಅರ್ಥಮಾಡಿಕೊಳ್ಳಿ ಮತ್ತು ತಜ್ಞರ ಸಲಹೆ ಪಡೆಯಿರಿ" ಎಂದು ಅವರು ಬರೆದಿದ್ದಾರೆ.
ಆರೋಗ್ಯ ತಜ್ಞರ ಪ್ರಕಾರ ಇಷ್ಟು ಕಡಿಮೆ ಅವಧಿಯಲ್ಲಿ ತೀವ್ರ ಪ್ರಮಾಣದಲ್ಲಿ ತೂಕ ಇಳಿಸುವ ಇಂತಹ ಕಟ್ಟುನಿಟ್ಟಾದ ಆಹಾರ ಕ್ರಮಗಳು ಎಲ್ಲರಿಗೂ ಸೂಕ್ತ ಅಥವಾ ಸುರಕ್ಷಿತವಾಗಿರುವುದಿಲ್ಲ. ಪ್ರತಿಯೊಬ್ಬರ ದೇಹದ ಅಗತ್ಯತೆಗಳು ಬೇರೆಯದೇ ಆಗಿರುತ್ತವೆ. ತೂಕ ಇಳಿಸಲು ಹಠಾತ್ ಬದಲಾವಣೆಗಳನ್ನು ಮಾಡುವ ಬದಲು, ಸಮತೋಲಿತ ಆಹಾರ, ನಿಯಮಿತ ಪ್ರೋಟೀನ್ ಸೇವನೆ ಹಾಗೂ ದೀರ್ಘಕಾಲದವರೆಗೆ ಕಾಯ್ದುಕೊಳ್ಳಬಹುದಾದ ಸುಲಭ ಕ್ಯಾಲೋರಿ ನಿಯಂತ್ರಣದ ಪದ್ಧತಿಯನ್ನು ಅನುಸರಿಸುವುದು ಉತ್ತಮ. ಯಾವುದೇ ಹೊಸ ಡಯಟ್ ಪ್ಲಾನ್ ಆರಂಭಿಸುವ ಮುನ್ನ ವೈದ್ಯರು ಅಥವಾ ಪ್ರಮಾಣೀಕೃತ ಆಹಾರ ತಜ್ಞರ (Dietitian) ಸಲಹೆ ಪಡೆಯುವುದು ಅಗತ್ಯವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.