ತಮಿಳುನಾಡಿಗೆ ನೀರು ಹರಿಯುವಿಕೆ ಸ್ಥಗಿತ

By Kannadaprabha News  |  First Published Aug 26, 2023, 11:30 PM IST

ನದಿಗೆ 5038 ಕ್ಯುಸೆಕ್‌ ನೀರು, ಒಟ್ಟಾರೆ ಹೊರಹರಿವು 7654 ಕ್ಯುಸೆಕ್‌ಗೆ ಇಳಿಕೆ, ಆ.9ರಂದು 35.173 ಟಿಎಂಸಿ ಅಡಿ ಇದ್ದ ನೀರಿನ ಸಂಗ್ರಹ ಆ.25ಕ್ಕೆ 25.035 ಟಿಎಂಸಿ ಅಡಿಗೆ ಕುಸಿತ. 


ಮಂಡ್ಯ(ಆ.26):  ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ಹರಿಸಲಾಗುತ್ತಿದ್ದ ನೀರನ್ನು ಗುರುವಾರ ಮಧ್ಯರಾತ್ರಿಯಿಂದ ಸ್ಥಗಿತಗೊಳಿಸಲಾಗಿದೆ. ಕಳೆದ 11 ದಿನಗಳಿಂದ ತಮಿಳುನಾಡಿಗೆ 10 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಲಾಗಿದೆ.

ನಿತ್ಯ ತಮಿಳುನಾಡಿಗೆ 13 ಸಾವಿರ ಕ್ಯುಸೆಕ್‌ನಿಂದ 15,500 ಕ್ಯುಸೆಕ್‌ವರೆಗೆ ಬಿಡುಗಡೆ ಮಾಡಲಾಗುತ್ತಿದ್ದ ನೀರನ್ನು ಶುಕ್ರವಾರ ಬೆಳಗ್ಗೆಯಿಂದ 7654 ಕ್ಯುಸೆಕ್‌ಗೆ ಇಳಿಸಲಾಗಿದೆ. ಕಾವೇರಿ ನದಿಗೆ 5038 ಕ್ಯುಸೆಕ್‌ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಗುರುವಾರ ರಾತ್ರಿಯವರೆಗೆ ನದಿಗೆ ನಿತ್ಯ 11 ಸಾವಿರ ಕ್ಯುಸೆಕ್‌ ನೀರನ್ನು ಹರಿ ಬಿಡಲಾಗುತ್ತಿತ್ತು.

Latest Videos

undefined

ತಮಿಳುನಾಡಿಗೆ ನೀರು ಬಿಟ್ಟಿರುವುದಕ್ಕೆ ಖಂಡನೆ; ಕನ್ನಡಪರ ಸಂಘಟನೆಗಳಿಂದ ಕೆಆರ್‌ಎಸ್‌ ಮುತ್ತಿಗೆ ಯತ್ನ

ಆ.9ರಂದು ಕೃಷ್ಣರಾಜಸಾಗರ ಜಲಾಶಯ ಅಣೆಕಟ್ಟೆಯಲ್ಲಿ 35.175 ಟಿಎಂಸಿ ಅಡಿ ಇದ್ದ ನೀರು ಸಂಗ್ರಹ ಆ.25ಕ್ಕೆ 25.035 ಟಿಎಂಸಿ ಅಡಿಗೆ ಕುಸಿದಿದೆ. ಅಂದು ಜಲಾಶಯದ ನೀರಿನ ಮಟ್ಟ113.30 ಅಡಿ ಇದ್ದರೆ, ಪ್ರಸ್ತುತ ಜಲಾಶಯದಲ್ಲಿ 102.74 ಅಡಿ ನೀರು ಸಂಗ್ರಹವಾಗಿದೆ. ಒಟ್ಟು 10 ಟಿಎಂಸಿ ಅಡಿ ನೀರು ತಮಿಳುನಾಡಿಗೆ ಹರಿದುಹೋದಂತಾಗಿದೆ.

ಹಾಲಿ ಬಿಡುಗಡೆ ಮಾಡಿರುವ 7654 ಕ್ಯುಸೆಕ್‌ ನೀರಿನಲ್ಲಿ ನದಿಗೆ 5038 ಕ್ಯುಸೆಕ್‌, ವಿಶ್ವೇಶ್ವರಯ್ಯ ನಾಲೆಗೆ 2008 ಕ್ಯುಸೆಕ್‌, ಆರ್‌ಬಿಎಲ್‌ಎಲ್‌ ನಾಲೆಗೆ 100 ಕ್ಯುಸೆಕ್‌, ಎಲ್‌ಬಿಎಎಲ್‌ಎಲ್‌ ನಾಲೆಗೆ 58 ಕ್ಯುಸೆಕ್‌, ದೇವರಾಜ ಅರಸು ನಾಲೆಗೆ 400 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಜಲಾಶಯಕ್ಕೆ 3276 ಕ್ಯುಸೆಕ್‌ ನೀರು ಹರಿದುಬರುತ್ತಿದೆ.

ತಮಿಳುನಾಡಿಗೆ ನೀರು ಹರಿಸುತ್ತಿರುವುದರ ವಿರುದ್ಧ ಜಿಲ್ಲೆಯಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದರೂ ಕಾಂಗ್ರೆಸ್‌ ಸರ್ಕಾರ ನಿರ್ಭೀತಿಯಿಂದ ಕೆಆರ್‌ಎಸ್‌ನಿಂದ ನೀರನ್ನು ಹರಿಯಬಿಟ್ಟಿತು. ಮೊನ್ನೆಯಷ್ಟೇ ಸರ್ವಪಕ್ಷ ಸಭೆ ನಡೆಸಿದ ಸರ್ಕಾರ ಸುಪ್ರೀಂಕೋರ್ಚ್‌ಗೆ ಇದೀಗ ಮೇಲ್ಮನವಿ ಸಲ್ಲಿಸಿದೆ. 10 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಿ ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಂಡಿರುವ ರಾಜ್ಯಸರ್ಕಾರ ಬೀಸೋ ದೊಣ್ಣೆಯಿಂದ ಸದ್ಯಕ್ಕೆ ಪಾರಗಿದೆ.

ಮಂಡ್ಯದಲ್ಲಿ ರಾಜ್ಯಮಟ್ಟದ ಸಿರಿಧಾನ್ಯ ಮೇಳ: ಬೆಲ್ಲದ ಪರಿಷೆ ವಿಶೇಷತೆ ಇಲ್ಲಿದೆ ನೋಡಿ..

ತಮಿಳುನಾಡಿಗೆ ನೀರು ಹರಿಸಿದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಸಂಸದರಾದ ಸುಮಲತಾ ಅಂಬರೀಶ್‌, ಪಿ.ಸಿ.ಮೋಹನ್‌ ನೇತೃತ್ವದಲ್ಲಿ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತು. ವಿವಿಧ ರೈತ ಸಂಘಟನೆಗಳು ಕಾಂಗ್ರೆಸ್‌ ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕೂಡ ಸಂಕಷ್ಟ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿತು.

ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿಲ್ಲದೆ ಕೃಷಿ ಚಟುವಟಿಕೆ ಕುಂಠಿತಗೊಂಡಿದೆ. ರೈತರಿಗೆ ಭತ್ತ, ಕಬ್ಬು ಬೆಳೆ ಬೆಳೆಯದಂತೆ ಸೂಚಿಸಿರುವ ಸರ್ಕಾರ, ಅರೆ ಖುಷ್ಕಿ ಬೆಳೆ ಬೆಳೆಯುವಂತೆ ಮನವಿ ಮಾಡಿದೆ. ನಾಲ್ಕು ವರ್ಷಗಳಿಂದ ಸಮೃದ್ಧ ನೀರನ್ನು ಕಂಡಿದ್ದ ಅಚ್ಚುಕಟ್ಟು ಪ್ರದೇಶದ ರೈತರು ಈ ಬಾರಿ ಬರಗಾಲವನ್ನು ಎದುರಿಸುವಂತಾಗಿದೆ.

click me!