ಬಳ್ಳಾ​ರಿ: ಭಯ ಬಿಟ್ಟರೆ ರೋಗ ವಾಸಿ​ಯಾ​ಗೋದು ಗ್ಯಾರಂಟಿ: ಕೊರೋನಾ ಗೆದ್ದು ಬಂದ ವೃದ್ಧೆಯರು..!

By Kannadaprabha NewsFirst Published Aug 28, 2020, 10:40 AM IST
Highlights

ಸೋಂಕು ಸೋಲಿಸಿ ವಿಶ್ವಾಸ ಮೂಡಿ​ಸಿದ ವೃದ್ಧೆ​ಯ​ರು| ವಿನಾಕಾರಣ ಸೋಂಕಿನ ಬಗ್ಗೆ ಆತಂಕ ಪಡದೆ ಧೈರ್ಯವಾಗಿದ್ದರೆ ಜೀವ ಸುರಕ್ಷತೆ ಖಚಿತ ಎಂಬ ಸಂದೇಶ ಸಾರಿದ 94 ವರ್ಷದ ಗಂಗಮ್ಮ| ಏಳು ದಿನಗಳ ಕಾಲ ಚಿಕಿತ್ಸೆ ಪಡೆದೆ. ಆರಾಮವಾಗಿ ಮನೆಗೆ ಬಂದೆ ಎಂದ 76 ವರ್ಷದ ವೃದ್ಧೆ ಆರ್‌.ಎಸ್‌.ಗೌರಮ್ಮ|

ಕೆ.ಎಂ. ಮಂಜುನಾಥ್‌

ಬಳ್ಳಾ​ರಿ(ಆ.28): ಭಯ ಬಿಟ್ಟರೆ ರೋಗ ವಾಸಿಯಾಗೋದು ಗ್ಯಾರಂಟಿ...ಮನೆಯ ಸದಸ್ಯರಿಗೆ ಜ್ವರ ಬಂದಾಗ ನನಗೂ ತಪಾಸಣೆ ಮಾಡಿಸಿದರು. ಪಾಸಿಟಿವ್‌ ಇದೆ ಎಂದು ಗೊತ್ತಾಯಿತು. ಕೊರೋನಾ ಬಂದ್ರೆ ಬಹಳಷ್ಟು ಜನ ಭಯಪಡುತ್ತಾರಂತೆ, ಆದರೆ, ನನಗ್ಯಾವ ಭಯವಾಗಲಿಲ್ಲ. ಬಳ್ಳಾರಿಯ ಘೋಷ್‌ ಆಸ್ಪತ್ರೆಗೆ ನನ್ನ ಸೇರಿಸಿದ್ರು.

ಏಳು ದಿನಗಳ ಕಾಲ ಚಿಕಿತ್ಸೆ ಪಡೆದೆ. ಆರಾಮವಾಗಿ ಮನೆಗೆ ಬಂದೆ’ ತನ್ನ ಕೊರೋನಾ ವಿರುದ್ಧದ ಏಳು ದಿನಗಳ ಹೋರಾಟ ಕುರಿತು ಹೀಗೆ ನಿರಮ್ಮಳದ ಉತ್ತರ ನೀಡುತ್ತಾರೆ ಇಲ್ಲಿನ ಕಪ್ಪಗಲ್‌ ರಸ್ತೆ ಸರ್‌ ಎಂ.ವಿ. ನಗರದ 76 ವರ್ಷದ ವೃದ್ಧೆ ಆರ್‌.ಎಸ್‌.ಗೌರಮ್ಮ.

ಇನ್ನು ಗೌರಮ್ಮ ಅವರ ತಾಯಿ 94 ವರ್ಷದ ಗಂಗಮ್ಮ ಸಹ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆರೋಗ್ಯವಾಗಿ ಮನೆಗೆ ಮರಳಿದ್ದು, ವಿನಾಕಾರಣ ಸೋಂಕಿನ ಬಗ್ಗೆ ಆತಂಕ ಪಡದೆ ಧೈರ್ಯವಾಗಿದ್ದರೆ ಜೀವ ಸುರಕ್ಷತೆ ಖಚಿತ ಎಂಬ ಸಂದೇಶ ಸಾರಿದ್ದಾರೆ.

ರೆಡ್ಡಿಗೆ 2 ದಿನ ಬಳ್ಳಾರಿಗೆ ತೆರಳಲು ಅವಕಾಶ

‘ಘೋಷ್‌ ಆಸ್ಪತ್ರೆಯಲ್ಲಿ ಮಕ್ಕಳಂತೆ ನೋಡಿಕೊಂಡರು. ನಮ್ಮ ಮನೆಗಳಲ್ಲೂ ಸಿಗದ ಗುಣಮಟ್ಟದ ಊಟ, ಉಪಾಹಾರ ಅಲ್ಲಿ ಸಿಗುತ್ತಿತ್ತು. ಆಸ್ಪತ್ರೆಯ ಪ್ರತಿಯೊಬ್ಬರೂ ಸಹ ನಮ್ಮನ್ನು ಮನೆಯ ಸದಸ್ಯರಂತೆ ಆಪ್ತತೆಯಿಂದ ನೋಡಿಕೊಂಡರು. ನಾವಿಬ್ಬರು ಆಸ್ಪತ್ರೆಯಲ್ಲಿದ್ದೆವು ಎಂಬುದನ್ನೇ ಮರೆತು ಹೋಗಿದ್ದೆವು ಎಂದು ತಮ್ಮದೇ ಗ್ರಾಮ್ಯ ಭಾಷೆಯ ಶೈಲಿಯಲ್ಲಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು ಗೌರಮ್ಮ ಮತ್ತು ಗಂಗಮ್ಮ.

ನಿರ್ಲಕ್ಷ್ಯದಿಂದ ಸಾವಿನ ಸಂಖ್ಯೆ ಹೇರಳ

40ರಿಂದ 50 ವರ್ಷದೊಳಗಿನ ಅನೇಕರು ನಿರ್ಲಕ್ಷ್ಯ ಮಾಡಿಯೇ ಜೀವ ಕಳೆದುಕೊಂಡಿದ್ದಾರೆ ಎನ್ನುತ್ತಾರೆ ಜಿಲ್ಲೆಯ ತಜ್ಞ ವೈದ್ಯರು. ರೋಗ ನಿಯಂತ್ರಣಕ್ಕೆ ಬೇಕಾದ ಎಲ್ಲ ಸೌಲಭ್ಯ, ಪರಿಕರಗಳು ಹಾಗೂ ವೈದ್ಯಕೀಯ ವ್ಯವಸ್ಥೆ ಬಳ್ಳಾರಿ ಜಿಲ್ಲೆಯಲ್ಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಚಿಕಿತ್ಸೆ ದೊರೆಯುತ್ತಿದೆ. ಇಷ್ಟಾಗಿಯೂ ಜನರು ಸೋಂಕಿನ ಲಕ್ಷಣವಿದ್ದರೂ ಆಸ್ಪತ್ರೆಗೆ ಬರದೆ ನಿರ್ಲಕ್ಷ್ಯ ವಹಿಸುತ್ತಾರೆ ಎಂದು ವೈದ್ಯರು ಬೇಸರದಿಂದ ನುಡಿಯುತ್ತಾರೆ.

ನಮ್ಮ ತಾಯಿ, ಅಕ್ಕ, ನನ್ನ ಪತ್ನಿ ಹಾಗೂ ನನಗೂ ಸೋಂಕು ಕಾಣಿಸಿಕೊಂಡಿತು. ಆದರೆ, ನನಗೆ ಯಾವ ಭಯವಿರಲಿಲ್ಲ. ಬಳ್ಳಾರಿಯಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದೆ ಎಂದು ಗೊತ್ತಿತ್ತು. ಹೀಗಾಗಿ ನಮ್ಮ ಅಕ್ಕ ಗೌರಮ್ಮ ಹಾಗೂ ತಾಯಿ ಗಂಗ​ಮ್ಮಳನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆ (ಘೋಷ್‌ ಆಸ್ಪತ್ರೆ) ಸೇರಿಸಿದೆ. ವಾರದಲ್ಲಿ ಆರೋಗ್ಯವಾಗಿ ಮನೆಗೆ ಮರಳಿದ್ದಾರೆ ಎಂದು ಆರ್‌.ಎಸ್‌.ನಾರಾಯಣರೆಡ್ಡಿ ಎಂದು ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ವಹಿಸಿದರೆ ಕೊರೋನಾ ಸಾವು ತರುವ ಕಾಯಿಲೆಯಲ್ಲ. ಆದರೆ, ಅನೇಕರು ಸೋಂಕಿನ ಲಕ್ಷಣವಿದ್ದರೂ ಚಿಕಿತ್ಸೆಗೆ ಒಳಗಾಗದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದುವೇ ಸಾವಿನ ಸಂಖ್ಯೆ ಏರಿಕೆಯಾಗಲು ಕಾರಣ. ಸೋಂಕಿತರನ್ನು ನೋಡುವ ದೃಷ್ಟಿಈ ಮೊದಲಿನಂತಿಲ್ಲ. ಅಷ್ಟಕ್ಕೂ ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಅವಕಾಶವಿದೆ. ಇಷ್ಟೆಲ್ಲ ಸೌಕರ್ಯ ವಿದ್ದಾಗಲೂ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಈ ಸಂಬಂಧ ‘ಕನ್ನಡಪ್ರಭ’ ಆರಂಭಿಸುತ್ತಿರುವ ಸರಣಿ ವರದಿ ಪ್ರಸ್ತುತ ಸಂದರ್ಭದಲ್ಲಿ ಅಗತ್ಯವಿದೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರ್ನಾಟಕ ಶಾಖೆಯ ಅಧ್ಯಕ್ಷ ಡಾ. ಮಧುಸೂದನ್‌ ಕಾರಿಗನೂರು ಅವರು ತಿಳಿಸಿದ್ದಾರೆ.

ಜನರಲ್ಲಿ ಜಾಗೃತಿ ಮೂಡಿಸಲು ಸರಣಿ ಆರಂಭಿಸುತ್ತಿರುವುದಕ್ಕೆ ಮೊದಲು ‘ಕನ್ನಡಪ್ರಭ’ಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕೊರೋನಾ ನಿಯಂತ್ರಣಕ್ಕೆ ಸಂಬಂಧ ಜಿಲ್ಲಾಡಳಿತ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಯಾವುದೇ ರೀತಿಯ ಸೌಕರ್ಯಗಳ ಕೊರತೆಯಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಲ್‌. ಜನಾರ್ದನ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಏತನ್ಮಧ್ಯೆ ಸಾವಿನ ಮನೆಯ ಕದ ತಟ್ಟುತ್ತಿರುವವರು ಸಹ ಹೆಚ್ಚುತ್ತಿದ್ದಾರೆ. ಇದಕ್ಕೆ ಭಾಗಶಃ ಕಾರಣ ಸೋಂಕಿನ ತೀವ್ರತೆಯ ಅಪಾಯವಲ್ಲ. ಬದಲಿಗೆ ಸೋಂಕಿದೆ ಎಂಬ ಭೀತಿಯೇ ಅನೇಕರ ಪ್ರಾಣಾಪಾಯಕ್ಕೂ ಕಾರಣವಾಗಿದೆ ಎಂಬಂಶ ಬೆಳಕಿಗೆ ಬಂದಿದೆ. ಈ ನಡುವೆ 70 ರಿಂದ 90 ವರ್ಷದ ವೃದ್ಧರೂ ಕೊರೋನಾದಿಂದ ಗೆದ್ದು ಬದುಕಿನ ವಿಶ್ವಾಸ ಮೂಡಿಸಿದ್ದಾರೆ. ಜಿಲ್ಲೆಯಲ್ಲಿ ಹತ್ತಾರು ವೃದ್ಧರು ಕೊರೋನಾ ಸೋಂಕಿನಿಂದ ಗುಣಮುಖರಾಗಿ ‘ಸೋಂಕಿಗೆ’ ಎದುರೇಟು ನೀಡಿದ್ದಾರೆ ! ನಿಜಕ್ಕೂ ಕೊರೋನಾ ಪ್ರಾಣಾಂತಕಾರಿಯೇ? ವೈದ್ಯರು ಏನು ಹೇಳುತ್ತಾರೆ ? ಸೋಂಕಿನಿಂದ ಗುಣಮುಖರಾದ ವೃದ್ಧರು ಅನುಭವ ಎಂತಹದ್ದು? ಈ ಕುರಿತು ‘ಕನ್ನಡಪ್ರಭ’ ಇಂದಿನಿಂದ ಸರಣಿ ವರದಿ ಆರಂಭಿಸಲಿದೆ.
 

click me!