ರಾ‍ಷ್ಟ್ರ ರಾಜಧಾನಿಯಲ್ಲಿ ಕೊರೋನಾ ಹೆಚ್ಚಳ, ಕಾರಣವೂ ಬಹಿರಂಗ!

By Suvarna NewsFirst Published Oct 29, 2020, 1:55 PM IST
Highlights

ದಿಲ್ಲಿಯಲ್ಲಿ ಕೊರೋನಾ ಹೆಚ್ಚಳಕ್ಕೆ ಮಾಲಿನ್ಯ ಕಾರಣ?| ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ಹೆಚ್ಚಾದಂತೆ ಕೊರೋನಾ ಸೋಂಕು, ಸಾವಿನ ಸಂಖ್ಯೆಯೂ ಅಧಿಕ

ನವದೆಹಲಿ(ಅ.29): ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ಹೆಚ್ಚಾದಂತೆ ಕೊರೋನಾ ಸೋಂಕು, ಸಾವಿನ ಸಂಖ್ಯೆಯೂ ಅಧಿಕವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಸೋಮವಾರ ಒಂದೇ ದಿನ 54 ಮಂದಿ ಸಾವಿಗೀಡಾಗಿದ್ದು, ಇದು ಮೂರು ತಿಂಗಳ ಗರಿಷ್ಠ ಮಟ್ಟವಾಗಿದೆ.

ದೈನಂದಿನ ಕೇಸುಗಳ ಸಂಖ್ಯೆ ಮತ್ತೆ 4 ಸಾವಿರದ ಗಡಿ ದಾಟಿದೆ. ವಾಯು ಮಾಲಿನ್ಯ ಪ್ರಮಾಣ ಹೆಚ್ಚಳ ಆಗಿರುವುದು ಕೊರೋನಾ ವೈರಸ್‌ ಪ್ರಕರಣಗಳ ಏರಿಕೆ ಹಾಗೂ ಸೋಂಕಿತರ ಸಾವಿಗೆ ಕಾರಣ ಆಗಿರಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪೌಲ್‌ ಹಾಗೂ ಐಸಿಎಂಆರ್‌ನ ನಿರ್ದೇಶಕ ಡಾ.ಬಲರಾಮ್‌ ಭಾರ್ಗವ್‌ ಅವರು ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಪ್ರಮಾಣ ಕೊರೋನಾ ವೈರಸ್‌ ಪ್ರಕರಣಗಳ ಏರಿಕೆಗೆ ಕಾರಣವಾಗಬಲ್ಲದು ಎಂದು ಹೇಳಿದ್ದಾರೆ. ವಿದೇಶಗಳಲ್ಲೂ ಇದೇ ಟ್ರೆಂಡ್‌ ಕಂಡುಬಂದಿದ್ದು, ಅಧ್ಯಯನದ ಅಗತ್ಯವಿದೆ ಎಂದಿದ್ದಾರೆ.

ಯುರೋಪ್‌ ಹಾಗೂ ಅಮೆರಿಕದಲ್ಲಿ ಮಾಲಿನ್ಯಕಾರಕ ಸ್ಥಳಗಳಲ್ಲಿ ಸಂಭವಿಸಿದ ಸಾವಿನ ಅಧ್ಯಯನ ನಡೆಸಿದ ಸಂದರ್ಭದಲ್ಲಿ ಮಾಲಿನ್ಯದ ವೇಳೆ ಕೊರೋನಾ ಸಂಬಂಧಿತ ಸಾವಿನ ಸಂಖ್ಯೆ ಏರಿಕೆ ಆಗಿರುವುದು ಕಂಡುಬಂದಿದೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಪೌಲ್‌ ಹೇಳಿದ್ದಾರೆ.

ಇದೇ ವೇಳೆ ದೆಹಲಿಯ ಫೋರ್ಟಿಸ್‌ ಹೃದ್ರೋಗ ಆಸ್ಪತ್ರೆ, ಗಂಗಾ ರಾಮ್‌ ಆಸ್ಪತ್ರೆಯ ವೈದ್ಯರು ಕೂಡ ವಾಯು ಮಾಲಿನ್ಯ ಕೊರೋನಾ ರೋಗಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ ಹೆಚ್ಚಿನ ಕಾಳಜಿವಹಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

click me!