World's Longest Hairball: 14 ವರ್ಷದ ಬಾಲಕಿ ಹೊಟ್ಟೆಯಲ್ಲಿತ್ತು 210 ಸೆಂ.ಮೀ ಉದ್ದದ ಕೂದಲಿನ ಉಂಡೆ

Published : May 31, 2025, 10:37 AM IST
hairball

ಸಾರಾಂಶ

ರಾಜಸ್ಥಾನದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಕೂದಲು ತಿನ್ನುತ್ತಿದ್ದ ಹುಡುಗಿ ಹೊಟ್ಟೆಯಿಂದ ದಾಖಲೆ ಮಟ್ಟದ ಉಂಡೆಯನ್ನು ವೈದ್ಯರು ಹೊರ ತೆಗೆದಿದ್ದಾರೆ. ಇದೊಂದು ಮಾನಸಿಕ ಖಾಯಿಲೆ ಅಂತ ವೈದ್ಯರು ಹೇಳಿದ್ದಾರೆ.

ರಾಜಸ್ಥಾನ (Rajasthan)ದ ಸವಾಯಿ ಮಾನ್ಸಿಂಗ್ (SMS) ಆಸ್ಪತ್ರೆಯ ವೈದ್ಯರು ಅಚ್ಚರಿ ಮತ್ತು ಅಪರೂಪದ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ವಿಶ್ವದ ಅತಿ ಉದ್ದದ ಟ್ರೈಕೋಬೆಜೋರ್ (ಕೂದಲಿನ ಉಂಡೆ) ಯನ್ನು ತೆಗೆದಿದ್ದಾರೆ. ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಬರಾರಾ ಗ್ರಾಮದ 14 ವರ್ಷದ ಹುಡುಗಿ ಹೊಟ್ಟೆಯಿಂದ 210 ಸೆಂ.ಮೀ ಉದ್ದದ ಕೂದಲಿನ ಉಂಡೆಯನ್ನು ತೆಗೆಯಲಾಗಿದೆ.

ಪ್ರಸ್ತುತ 10 ನೇ ತರಗತಿ ಓದುತ್ತಿರುವ ಹುಡುಗಿ ಹೊಟ್ಟೆಯಿಂದ ಕೂದಲಿನ ಉಂಡೆ (Hair ball)ಯನ್ನು ಹೊರ ತೆಗೆಯಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಮಣ್ಣು, ಮರದ ತುಂಡು, ಸೀಮೆಸುಣ್ಣ ಮತ್ತು ದಾರವನ್ನು ತಿನ್ನುವ ಅಭ್ಯಾಸವಿತ್ತು. ಆರನೇ ತರಗತಿಯಲ್ಲಿರುವಾಗ್ಲೇ ಆಕೆಗೆ ಈ ಚಟ ಶುರುವಾಗಿತ್ತು. ನಿಧಾನವಾಗಿ ಅದು ಗಂಭೀರ ಸ್ವರೂಪ ಪಡೆದಿತ್ತು. ಒಂದು ತಿಂಗಳಿನಿಂದ ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿತ್ತು. ನಂತ್ರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಕಾಂಟ್ರಾಸ್ಟ್ ವರ್ಧಿತ ಸಿಟಿ ಸ್ಕ್ಯಾನ್ (ಸಿಇಸಿಟಿ) ಮಾಡಿದ ವೇಳೆ ಹೊಟ್ಟೆ ಊದಿಕೊಂಡಿದ್ದು ಹಾಗೂ ಅದ್ರಲ್ಲಿ ಯಾವುದೋ ಅಸಹಜ ವಸ್ತು ಇರೋದು ಪತ್ತೆಯಾಗಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದ ವೈದ್ಯರು ತಕ್ಷಣ ಲ್ಯಾಪರೊಟಮಿ ಶಸ್ತ್ರಚಿಕಿತ್ಸೆ ಮಾಡಿದ್ರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಶಸ್ತ್ರಚಿಕಿತ್ಸೆ ಸಮಯದಲ್ಲಿ, ಟ್ರೈಕೋಬೆಜೋರ್ ಹೊಟ್ಟೆಯಲ್ಲಿ ಮಾತ್ರವಲ್ಲದೆ ಸಣ್ಣ ಕರುಳಿಗೆ ಹರಡಿದೆ ಎಂಬುದು ವೈದ್ಯರಿಗೆ ಗೊತ್ತಾಯ್ತು. ಹಾಗಾಗಿ ಒಂದೇ ಬಾರಿ ಎಲ್ಲವನ್ನು ತೆಗೆಯೋದು ಸವಾಲಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.

ಡಾ. ರಾಜೇಂದ್ರ ಬುಗಾಲಿಯಾ, ಡಾ. ದೇವೇಂದ್ರ ಸೈನಿ, ಡಾ. ಅಮಿತ್ ಮತ್ತು ಡಾ. ಸುನಿಲ್ ಚೌಹಾಣ್ ಅವರ ಅರಿವಳಿಕೆ ತಂಡ ಡಾ. ಜೀವನ್ ಕಂಕರಿಯಾ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ. ಶಸ್ತ್ರಚಿಕಿತ್ಸೆಯ ನಂತರ, ರೋಗಿಯ ಸ್ಥಿತಿ ಸ್ಥಿರವಾಗಿದೆ. ಅವಳು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾಳೆ. ಪಿಕಾ ಎಂಬ ಮಾನಸಿಕ ಆರೋಗ್ಯ ಅಸ್ವಸ್ಥತೆ ಇದಕ್ಕೆ ಕಾರಣ ಎಂದು ವೈದ್ಯರು ಹೇಳಿದ್ದಾರೆ.

ಕೂದಲಿನ ಉಂಡೆ ಹೊಟ್ಟೆಯಲ್ಲಿ ಏಕೆ ರೂಪುಗೊಳ್ಳುತ್ತದೆ? : ಟ್ರೈಕೋಬೆಜೋರ್ ಒಂದು ರೀತಿಯ ಗಡ್ಡೆ. ಇದು ಕೂದಲಿನಿಂದ ತಯಾರಾಗುತ್ತದೆ. ಒಬ್ಬ ವ್ಯಕ್ತಿಯು ದೀರ್ಘಕಾಲದವರೆಗೆ ಕೂದಲನ್ನು ತಿನ್ನುವಾಗ ಅದು ಕ್ರಮೇಣ ಹೊಟ್ಟೆಯೊಳಗೆ ಸಂಗ್ರಹವಾಗುತ್ತದೆ.

ಇದಕ್ಕೆ ಕಾರಣ ಏನು? : ಟ್ರೈಕೋಬೆಜೋರ್ಗಳು ಸಾಮಾನ್ಯವಾಗಿ ಟ್ರೈಕೋಫೇಜಿಯಾ ಮತ್ತು ಪಿಕಾ ಎಂಬ ಮಾನಸಿಕ ಅಸ್ವಸ್ಥತೆಯಿಂದ ಉಂಟಾಗುತ್ತದೆ. ಟ್ರೈಕೋಫೇಜಿಯಾದಲ್ಲಿ, ವ್ಯಕ್ತಿಯು ತನ್ನ ಅಥವಾ ಯಾರದ್ದಾದರೂ ಕೂದಲನ್ನು ಅಗಿಯುವ ಅಥವಾ ನುಂಗುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಾನೆ. ಪಿಕಾ ಇದು ಮಾನಸಿಕ ಸ್ಥಿತಿಯಾಗಿದ್ದು, ಇದರಲ್ಲಿ ವ್ಯಕ್ತಿಯು ಮಣ್ಣು, ಸೀಮೆಸುಣ್ಣ, ದಾರ, ಮರ ಅಥವಾ ಕೂದಲಿನಂತಹ ಆಹಾರೇತರ ವಸ್ತುಗಳನ್ನು ತಿನ್ನಲು ಪ್ರಾರಂಭಿಸುತ್ತಾನೆ.

ಕೂದಲು ಏಕೆ ಜೀರ್ಣವಾಗುವುದಿಲ್ಲ? : ಹೊಟ್ಟೆಯಲ್ಲಿ ಜೀರ್ಣಕಾರಿ ಕಿಣ್ವಗಳಿರುತ್ತವೆ. ಇದು ಸಾಮಾನ್ಯ ಆಹಾರವನ್ನು ಒಡೆಯುತ್ತದೆ. ಆದರೆ ಕೂದಲು ಕೆರಾಟಿನ್ ಎಂಬ ಗಟ್ಟಿಯಾದ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದು ಜೀರ್ಣಕ್ರಿಯೆಯಲ್ಲಿ ಒಡೆಯುವುದಿಲ್ಲ. ಆದ್ದರಿಂದ, ಅವು ಹೊಟ್ಟೆಯಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ.

ಕೂದಲಿನ ಉಂಡೆ ಹೇಗೆ ರೂಪುಗೊಳ್ಳುತ್ತದೆ? : ಕೂದಲನ್ನು ನಿರಂತರವಾಗಿ ನುಂಗಿದಾಗ, ಅವು ಹೊಟ್ಟೆಯಲ್ಲಿ ಒಂದೇ ಸ್ಥಳದಲ್ಲಿ ಸಂಗ್ರಹವಾಗುತ್ತವೆ. ಕ್ರಮೇಣ ಅವು ಸಿಕ್ಕಿಹಾಕಿಕೊಳ್ಳುತ್ತವೆ ಮತ್ತು ಚೆಂಡಿನಂತಹ ಘನ ಗಡ್ಡೆಯನ್ನು ರೂಪಿಸುತ್ತವೆ. ಕಾಲಾನಂತರದಲ್ಲಿ, ಈ ಗಡ್ಡೆ ದೊಡ್ಡದಾಗಿ ಬೆಳೆಯುತ್ತದೆ ಮತ್ತು ಕರುಳನ್ನು ತಲುಪಬಹುದು.

ಇದರ ಲಕ್ಷಣಗಳು ಏನು? : ಕೂದಲಿನ ಗಡ್ಡೆಯಾದಾಗ ನಿರಂತರ ಹೊಟ್ಟೆ ನೋವು, ವಾಂತಿ, ಕಡಿಮೆ ಹಸಿವು, ತೂಕ ಇಳಿಕೆ ಸೇರಿದಂತೆ ಅನೇಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಲಬದ್ಧತೆ ಅಥವಾ ಅನಿಲ ಸಮಸ್ಯೆ ಕೂಡ ಕಾಣಿಸಿಕೊಳ್ಳುವುದಿದೆ.

ಚಿಕಿತ್ಸೆ ಏನು? : ಎಂಡೋಸ್ಕೋಪಿ ಮೂಲಕ ಸಣ್ಣ ಟ್ರೈಕೋಬೆಜೋರ್ಗಳನ್ನು ತೆಗೆದುಹಾಕಬಹುದು. ದೊಡ್ಡ ಗಾತ್ರದ ಸಂದರ್ಭಗಳಲ್ಲಿ, ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಮನೋವೈದ್ಯಕೀಯ ಚಿಕಿತ್ಸೆ ಮತ್ತು ಸಮಾಲೋಚನೆ ಸಹ ಅಗತ್ಯ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ