
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ, ಭಾರತದಲ್ಲಿ ರಸ್ತೆ ಅಪಘಾತಗಳಿಂದ ಪ್ರತಿವರ್ಷ 2 ಲಕ್ಷಕ್ಕೂ ಅಧಿಕ ಸಾವುಗಳು ಸಂಭವಿಸುತ್ತವೆ. ಸರಿಯಾದ ರಸ್ತೆಗಳ ಕೊರತೆ, ಕುಡಿದು ಮತ್ತು ನಿರ್ಲಕ್ಷ್ಯದ ಚಾಲಕರು ಈ ಪ್ರಕರಣಗಳಲ್ಲಿ ಹೆಚ್ಚಿನವುಗಳಿಗೆ ಕಾರಣರಾಗಿದ್ದರೂ, ಈ ಬಲಿಪಶುಗಳಲ್ಲಿ ಹಲವರು ಸರಿಯಾದ ವೈದ್ಯಕೀಯ ಆರೈಕೆ ಮತ್ತು ಪ್ರಥಮ ಚಿಕಿತ್ಸೆಯ ಕೊರತೆಯಿಂದ ಸಾಯುತ್ತಾರೆ. ಅದರಲ್ಲಿ ಒಂದು ಅಪಘಾತಕ್ಕೀಡಾದ ವ್ಯಕ್ತಿಗೆ ನೀರು ಅಥವಾ ಆಹಾರ ಕೊಡುವುದು ಕೂಡ ಬಹುದೊಡ್ಡ ಕಾರಣಗಳಲ್ಲಿ ಒಂದಾಗಿದೆ. ಅದು ಏಕೆ ಎನ್ನುವುದನ್ನು ಈ ಕೆಳಗೆ ವೈದ್ಯರು ಹೇಳಿದಂತೆ ವಿವರಿಸಲಾಗಿದೆ. ಆದರೆ ಅಪಘಾತಕ್ಕೀಡಾದ ವ್ಯಕ್ತಿ ನೀರು ಕೇಳಿದರೆ, ಒಂದಷ್ಟು ಹನಿ ನೀರಿನಿಂದ ಆ ವ್ಯಕ್ತಿಯ ಬಾಯಿಯನ್ನು ಒದ್ದೆ ಮಾಡಬಹುದೇ ವಿನಾ, ನೀರನ್ನಂತೂ ಕೊಡಲೇಬಾರದು.
ರಸ್ತೆ ಅಪಘಾತವಾದ ತಕ್ಷಣ, ಅಪಘಾತಪೀಡಿತ ವ್ಯಕ್ತಿ ನೀರು ನೀರು ಎಂದು ಕೇಳುವುದು ಸರ್ವೇ ಸಾಮಾನ್ಯ. ಆದರೆ ಯಾವುದೇ ಕಾರಣಕ್ಕೂ ಆ ವ್ಯಕ್ತಿಗಳಿಗೆ ನೀರು ಕೊಡಲೇಬಾರದು ಎನ್ನುತ್ತಾರೆ ವೈದ್ಯರು. ಸಾಮಾನ್ಯವಾಗಿ ಎಲ್ಲರೂ ಮಾಡುವ ದೊಡ್ಡ ತಪ್ಪು ಇದು. ಆದರೆ ನೀವು ಕೊಡುವ ನೀರೇ ಅಪಘಾತ ಪೀಡಿತರಿಗೆ ಮೃತ್ಯುಸಮಾನವಾಗಬಹುದು ಎನ್ನುವುದು ವೈದ್ಯರ ಮಾತು. ತೀವ್ರವಾಗಿ ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡುವುದು ಸವಾಲಿನ ಕೆಲಸವಾಗಿದ್ದು, ಅದಕ್ಕೆ ಹೆಚ್ಚಿನ ಮನಸ್ಸು ಮತ್ತು ಮಾನಸಿಕ ಶಕ್ತಿಯ ಅಗತ್ಯವಿರುತ್ತದೆ. ಪ್ರತಿ ನಿಮಿಷವೂ ಜೀವನ ಮತ್ತು ಸಾವಿನ ನಡುವಿನ ವ್ಯತ್ಯಾಸವನ್ನು ಮಾಡಬಹುದು. ಇಂಥ ಸಮಯದಲ್ಲಿ ಅಪಘಾತಕ್ಕೀಡಾದ ವ್ಯಕ್ತಿ ನೀರು ಕೇಳಿದರು ಎಂದು ಸಹಾಯ ಮಾಡುವ ಉದ್ದೇಶದಿಂದ ನೀರನ್ನು ಕೊಟ್ಟರೆ ಅದು ಅವರ ಅಪಘಾತದ ಸ್ಥಿತಿಯನ್ನು ಅವಲಂಬಿಸಿ ಮೃತ್ಯುವಿಗೆ ತಳ್ಳುತ್ತದೆ.
ನೀರು ಮತ್ತು ಆಹಾರವು ಕಟ್ಟುನಿಟ್ಟಾಗಿ ಇಂಥ ಸಂದರ್ಭದಲ್ಲಿ, ನಿಷೇಧಿಸಲಾಗಿದೆ. ನಮ್ಮಲ್ಲಿ ಹಲವರಿಗೆ ಇದು ಅಸಂಬದ್ಧ ಎನ್ನಿಸಿದರೂ ಇದು ಸತ್ಯ. ಕೆಲವು ಅಪಘಾತಕ್ಕೀಡಾದವರು (ಪ್ರತಿಯೊಂದು ಅಪಘಾತ ಪ್ರಕರಣದಲ್ಲಿ ಅಲ್ಲ, ಆದರೆ ಗಾಯದ ಗಂಭೀರತೆಯನ್ನು ಅವಲಂಬಿಸಿ) ಶಸ್ತ್ರಚಿಕಿತ್ಸೆಗೆ ಒಳಗಾಗಗಬಹುದು. ಉದಾಹರಣೆಗೆ, SDH (ಸಬ್ಡ್ಯೂರಲ್ ಹೆಮಟೋಮಾ) ಅಥವಾ ಮೂಳೆ ಮುರಿತ, ತಲೆಗೆ ಗಾಯ ಇತ್ಯಾದಿ. ಅಂಥ ರೋಗಿಗಳಿಗೆ ಆಪರೇಷನ್ಗೆ ಕಳುಹಿಸುವಾಗ ಅವರಿಗೆ ಅನಿರ್ದಿಷ್ಟವಾಗಿ ಅರಿವಳಿಕೆ ಅಗತ್ಯವಿರುತ್ತದೆ. ಅಂಥ ಸಂದರ್ಭದಲ್ಲಿ ಅವರಿಗೆ ನೀಡುವ ನೀರಿನಿಂದ ಬಹಳ ಸಮಸ್ಯೆ ಆಗಬಹುದು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹೊಟ್ಟೆಗೆ ಪ್ರವೇಶಿಸಿದ ಯಾವುದಾದರೂ ವಸ್ತುವು ಅರಿವಳಿಕೆಗಾಗಿ ಇಂಟ್ಯೂಬೇಶನ್ ಸಮಯದಲ್ಲಿ ಹೊರಬರಬಹುದು ಮತ್ತು ಶ್ವಾಸಕೋಶವನ್ನು ತಲುಪಬಹುದು. ಇದು ನ್ಯುಮೋನಿಯಾದಿಂದ ತೀವ್ರವಾದ ಉಸಿರಾಟದ ತೊಂದರೆ ಸಿಂಡ್ರೋಮ್‌ವರೆಗೆ ಯಾವುದಕ್ಕೂ ಕಾರಣವಾಗಬಹುದು ಎನ್ನುತ್ತಾರೆ ವೈದ್ಯರು.
ಅಪಘಾತಕ್ಕೀಡಾದ ವ್ಯಕ್ತಿ ಪ್ರಜ್ಞಾಹೀನನಾಗಿದ್ದರೆ, ದೇಹದ ಸಾಮಾನ್ಯ ರಕ್ಷಣಾತ್ಮಕ ಪ್ರತಿಕ್ರಿಯೆ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ, ವ್ಯಕ್ತಿಯು ಸಂಪೂರ್ಣವಾಗಿ ಪ್ರಜ್ಞೆ ಹೊಂದಿಲ್ಲದಿದ್ದರೆ ನೀರನ್ನು ಸೇವಿಸಬಹುದು ಮತ್ತು ಅದು ಉಸಿರುಗಟ್ಟುವಿಕೆ ಮತ್ತು ಸಾವಿಗೆ ಕಾರಣವಾಗಬಹುದು ಅಥವಾ ಆಸ್ಪಿರೇಷನ್ ನ್ಯುಮೋನಿಯಾ ಉಂಟಾಗಿ ಸಾವು ಸಂಭವಿಸಬಹುದು. ಪ್ರಜ್ಞಾಹೀನ ವ್ಯಕ್ತಿಯು ದೇಹದ ರಕ್ಷಣೆಯ ದುರ್ಬಲ ಪ್ರತಿಕ್ರಿಯೆಯಿಂದಾಗಿ ಸ್ವತಃ ವಾಂತಿ ಮಾಡಿಕೊಂಡಾಗ ಉಸಿರುಗಟ್ಟಿ ಸಾಯಬಹುದು.
ಯಾರಿಗಾದರೂ ಸಹಾಯ ಮಾಡುವ ಮೊದಲು, ಅಪಘಾತಕ್ಕೀಡಾದ ಸುತ್ತಲಿನ ಪ್ರದೇಶವನ್ನು ತೆರವುಗೊಳಿಸಲು ಪ್ರಯತ್ನಿಸಿ ಮತ್ತು ನಂತರ ತುರ್ತು ಸೇವೆಗಳಿಗೆ ಕರೆ ಮಾಡಿ. ಯಾವುದೇ ರೀತಿಯ ತುರ್ತು ಅಥವಾ ತುರ್ತುರಹಿತ ಆಂಬ್ಯುಲೆನ್ಸ್ ಸೇವೆಗಾಗಿ ಬೆಂಗಳೂರಿನಾದ್ಯಂತ ಆಂಬ್ಯುಲೆನ್ಸ್ ಸೇವೆಗಳಿಗಾಗಿ ಸಹಾಯವಾಣಿ ಸಂಖ್ಯೆ 9343-180000 ಅನ್ನು ಸಂಪರ್ಕಿಸಿ. ತರಬೇತಿ ಪಡೆದ ವೃತ್ತಿಪರರು ನಿಮ್ಮ ಕರೆಗೆ ತ್ವರಿತವಾಗಿ ಪ್ರತಿಕ್ರಿಯಿಸುತ್ತಾರೆ, ಅಗತ್ಯವಿರುವವರಿಗೆ ಅಗತ್ಯವಾದ ವೈದ್ಯಕೀಯ ಸಹಾಯವನ್ನು ನೀಡುತ್ತಾರೆ. ನಿಮ್ಮ ತ್ವರಿತ ಕ್ರಮವು ಯಾರೊಬ್ಬರ ಜೀವನದಲ್ಲಿ ಎಲ್ಲಾ ವ್ಯತ್ಯಾಸವನ್ನುಂಟು ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.