ನಾನ್​ಸ್ಟಿಕ್​ ಪಾತ್ರೆಯ ಒಂದೇ ಒಂದು ಗೀರು, ಬದುಕನ್ನೇ ಶಾಶ್ವತ ನರಕ ಮಾಡ್ಬೋದು! FICCI ಎಚ್ಚರಿಕೆ ನೋಡಿ

Published : Apr 07, 2026, 11:46 AM IST
Non stick cookwares

ಸಾರಾಂಶ

ನಾನ್​ಸ್ಟಿಕ್​ ಪಾತ್ರೆಗಳ ಮೇಲಿನ ಗೀರುಗಳು PFAS ಎಂಬ "ಶಾಶ್ವತ ರಾಸಾಯನಿಕಗಳನ್ನು" ಬಿಡುಗಡೆ ಮಾಡುತ್ತವೆ. ಈ ವಿಷಕಾರಿ ಕಣಗಳು ದೇಹದಲ್ಲಿ ಕೊಳೆಯದೆ ಕ್ಯಾನ್ಸರ್, ಹಾರ್ಮೋನುಗಳ ಅಸಮತೋಲನ ಮತ್ತು ಬಂಜೆತನದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಈಗ ಎಲ್ಲಿ ನೋಡಿದರೂ ಅನಾರೋಗ್ಯ ಸಮಸ್ಯೆ. ಅದರಲ್ಲಿಯೂ ಕ್ಯಾನ್ಸರ್​ನಂಥ ಭಯಾನಕ ಕಾಯಿಲೆಗಳು ಸರ್ವೇ ಸಾಮಾನ್ಯ ಎನ್ನಿಸಿಬಿಟ್ಟಿವೆ. ಶುಗರ್​, ಬಿಪಿಯ ರೀತಿಯಲ್ಲಿಯೇ ಹಲವಾರು ಮಂದಿ ಕ್ಯಾನ್ಸರ್​ನಿಂದ ಬಳಲುತ್ತಿರುವುದು ಆಸ್ಪತ್ರೆಗಳಲ್ಲಿ ನರಳುತ್ತಿರುವವರನ್ನು ನೋಡಿದರೆ ತಿಳಿಯುತ್ತದೆ. ಕ್ಯಾನ್ಸರ್​ ಬರಲು ಇಂಥದ್ದೇ ಕಾರಣ ಏನೂ ಅಂತಿಲ್ಲವಾದರೂ, ನಾವೇ ಮಾಡಿಕೊಳ್ಳುವ ಎಡವಟ್ಟಿನಿಂದಲೂ, ತಿಳಿದೋ ತಿಳಿಯದೆಯೋ ಮಾಡುವ ಕೆಲಸದಿಂದಲೂ ಉಂಟಾಗುತ್ತಿದೆ. ಅದೂ ನಮ್ಮ ಅಡುಗೆ ಮನೆಯಿಂದಲೇ ಶುರುವಾಗುತ್ತಿದೆ.

ನಾನ್​ಸ್ಟಿಕ್​ ಎನ್ನುವ ವಿಷ

ಅಂಥದ್ದರಲ್ಲಿ ಒಂದು ನಾನ್​ಸ್ಟಿಕ್​ ಪ್ಯಾನ್​​ ಅಥವಾ ಪಾತ್ರೆ. ಈ ಬಗ್ಗೆ ಇದಾಗಲೇ ಹಲವು ವೈದ್ಯರು ಮಾತನಾಡಿದ್ದಾರೆ. ಹಲವರಲ್ಲಿ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಆದರೂ ಕಬ್ಬಿಣ, ಮಣ್ಣಿನ ಪಾತ್ರೆಗಳು ಕಿರಿಕಿರಿ ಎನ್ನುವ ಕಾರಣಕ್ಕೆ ಧಾವಂತದ ಈ ಯುಗದಲ್ಲಿ ಹಲವರ ಮನೆಗಳಲ್ಲಿ ನಾನ್​ಸ್ಟಿಕ್​ ಪಾತ್ರೆಗಳು ತುಂಬಿಹೋಗಿವೆ. ಜೊತೆಗೆ ಟಿವಿಯಲ್ಲಿ ಬರುವ ಜಾಹೀರಾತುಗಳು, ಅವುಗಳಲ್ಲಿ ಕಾಣಿಸಿಕೊಳ್ಳುವ ಸುಂದರ ತರುಣಿಯರು, ನಟಿಯರು... ಇನ್ನೇನು ಬೇಕು, ಜನರು ಮರುಳಾಗಲು ಹೇಳಿ? ಆ ಜಾಹೀರಾತುಗಳಲ್ಲಿ ಬರುವ ನಟಿಯರು ತಮ್ಮ ಮನೆಯಲ್ಲಿ ಏನು ಬಳಸುತ್ತಾರೆ ಎನ್ನುವುದು ವೀಕ್ಷಕರಿಗೆ ತಿಳಿದಿಲ್ಲವಲ್ಲ? ಹಾಗೆಂದು ಸಾಮಾನ್ಯ ಜನರು ಮರುಳಾದರೆ, ಕ್ಯಾನ್ಸರ್​ನಂಥ ಭಯಾನಕ ಕಾಯಿಲೆಗೆ ಕಟ್ಟಿಟ್ಟದ್ದೇ.

FICCI ಮಾಜಿ ಅಧ್ಯಕ್ಷೆ ಎಚ್ಚರಿಕೆ

ಇದೀಗ ಈ ಬಗ್ಗೆ ಅಪೋಲೋ ಆಸ್ಪತ್ರೆಗಳ ಸಮೂಹದ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ (FICCI) ಮಾಜಿ ಅಧ್ಯಕ್ಷೆ ಸಂಗೀತಾ ರೆಡ್ಡಿ, ನಾನ್-ಸ್ಟಿಕ್ ಪಾತ್ರೆಗಳ ಮೇಲಿನ ಒಂದು ಸರಳ ಗೀರು ಕೂಡ ಉಂಟುಮಾಡುವ ಸಂಭಾವ್ಯ ಆರೋಗ್ಯ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ನಾನ್​ಸ್ಟಿಕ್​ ಪಾತ್ರೆಗಳು ತರುವ ಭಯಾನಕ ಕಾಯಿಲೆಗಳ ಬಗ್ಗೆ ವಿವರಣೆ ನೀಡಿದ್ದಾರೆ.

ಒಂದೇ ಗೀರು ಬದುಕೇ ನಾಶ

ನಾನ್​ ಸ್ಟಿಕ್​ ಪಾತ್ರೆಗಳಲ್ಲಿ ದೋಸೆ, ಚಪಾತಿ ಎಲ್ಲವೂ ಚೆನ್ನಾಗಿ ಏಳುವುದು ಸರ್ವೇ ಸಾಮಾನ್ಯ. ಅದರಲ್ಲಿಯೂ ದೋಸೆಗೆ ಎಣ್ಣೆ ಹಾಕುವುದೇ ಬೇಡ, ಸುಲಭದಲ್ಲಿ ಏಳುತ್ತವೆ ಎಂದು ಅದನ್ನು ಬಳಸುವವರು ಹಲವರು. ಆದರೆ ಇದೇ ನಾನ್​ಸ್ಟಿಕ್​ ಪಾತ್ರೆಯಲ್ಲಿ ಉಂಟಾಗುವ ಒಂದೇ ಒಂದು ಗೀರು ಕೂಡ ಬದುಕನ್ನೇ ಸರ್ವನಾಶ ಮಾಡಬಹುದು ಎನ್ನುವುದನ್ನು ಎಚ್ಚರಿಸಿದ್ದಾರೆ ಇವರು. ಆದರೆ ಕಾಲ ಕ್ರಮೇಣ ಆ ನಾನ್​ಸ್ಟಿಕ್​ ಪ್ಯಾನ್​ನಲ್ಲಿ ಗೀಚುಗಳು ಬರುವುದನ್ನಂತೂ ನೋಡಿಯೇ ಇರುತ್ತೀರಿ ಅಲ್ಲವೇ. ಹಾಗಿದ್ದರೆ ಆ ಅಂಶಗಳೆಲ್ಲಾ ಎಲ್ಲಿಗೆ ಹೋದವು? ದೋಸೆ, ಚಪಾತಿ, ರೊಟ್ಟಿಯ ಮೂಲಕ ಹೊಟ್ಟೆಯನ್ನು ಸೇರಿರುವ ಆ ವಿಷಕಾರಿ ಅಂಶ ಸದ್ದಿಲ್ಲದೇ ಕ್ಯಾನ್ಸರ್​ ಅಂಶವನ್ನು ಏಳುವಂತೆ ಮಾಡುತ್ತಿವೆ ಎನ್ನುವುದು ಅವರ ಹೇಳಿರುವ ಅಂಶ. ಗೀರಿನಲ್ಲಿ Per- and polyfluoroalkyl substances (PFAS) ಎನ್ನುವ ಕಣ ಇರುತ್ತದೆ. ಇದನ್ನು ಸಾಮಾನ್ಯವಾಗಿ "ಶಾಶ್ವತ ರಾಸಾಯನಿಕಗಳು" ಎಂದು ಕರೆಯಲಾಗುತ್ತದೆ, ಇದು ಮಾನವ ದೇಹದಲ್ಲಿ ಕೊಳೆಯುವುದಿಲ್ಲ. ಈ ರಾಸಾಯನಿಕಗಳು ಕ್ಯಾನ್ಸರ್, ಹಾರ್ಮೋನುಗಳ ಅಸಮತೋಲನ, ಬಂಜೆತನ ಮತ್ತು ರೋಗನಿರೋಧಕ ಅಸ್ವಸ್ಥತೆಗಳಿಗೆ ಹೆಚ್ಚು ಸಂಬಂಧಿಸಿವೆ ಎಂದು ಅವರು ಹೇಳಿದ್ದಾರೆ.

ಏನಿರುತ್ತೆ ಇದರಲ್ಲಿ?

2022 ರಲ್ಲಿ ಗ್ಲೋಬಲ್ ಸೆಂಟರ್ ಫಾರ್ ಎನ್ವಿರಾನ್ಮೆಂಟಲ್ ರೆಮಿಡಿಯೇಶನ್‌ನ ಸಂಶೋಧಕರು ನಡೆಸಿದ ಅಧ್ಯಯನವು ಟೆಫ್ಲಾನ್-ಲೇಪಿತ ಮೇಲ್ಮೈಯಲ್ಲಿ ಒಂದು ಗೀರು 9,000 ಕ್ಕೂ ಹೆಚ್ಚು ಸೂಕ್ಷ್ಮ ಮತ್ತು ನ್ಯಾನೊಪರ್ಟಿಕಲ್‌ಗಳನ್ನು ಬಿಡುಗಡೆ ಮಾಡುತ್ತದೆ ಎಂದು ಸಾಬೀತು ಮಾಡಿದೆ. ಟೆಫ್ಲಾನ್-ಲೇಪಿತ ಪಾತ್ರೆಗಳನ್ನು ಈ ಹಿಂದೆ PFOA (ಪರ್ಫ್ಲೋರೋಕ್ಟಾನೊಯಿಕ್ ಆಮ್ಲ) ಬಳಸಿ 2013 ರವರೆಗೆ ತಯಾರಿಸಲಾಗುತ್ತಿತ್ತು. ಆ ಸಮಯದಲ್ಲಿ ನಡೆಸಿದ ಅಧ್ಯಯನದಲ್ಲಿ ಇದು ಮೂತ್ರಪಿಂಡ ಮತ್ತು ವೃಷಣ ಕ್ಯಾನ್ಸರ್‌ಗಳ ಅಪಾಯಕ್ಕೆ ಸಂಬಂಧಿಸಿರುವುದಾಗಿ ತಿಳಿದುಬಂದಿತ್ತು. ಇಂದು, ಟೆಫ್ಲಾನ್ ಅನ್ನು ಹೊಸ ಪೀಳಿಗೆಯ PFAS ರಾಸಾಯನಿಕಗಳನ್ನು ಬಳಸಿ ಉತ್ಪಾದಿಸಲಾಗುತ್ತದೆ, ಅವುಗಳಲ್ಲಿ ಕೆಲವು ಇದೇ ರೀತಿಯ ಸಮಸ್ಯೆಗಳನ್ನು ತರುತ್ತಿವೆ ಎಂದಿದ್ದಾರೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Paneer Side Effects: ಪ್ರೋಟೀನ್‌ ಅಂತ ಪನೀರ್‌ ತಿಂತೀರಾ? ಈ ಸಮಸ್ಯೆ ಇದ್ದವ್ರು ತಿಂದ್ರೆ ಅಷ್ಟೇ ಕಥೆ!
ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ದೈಹಿಕ ಸಂಪರ್ಕ ಬೆಳೆಸಬಹುದೇ?, ಇಲ್ಲಿದೆ ಶಾಕಿಂಗ್‌ ಸತ್ಯ