
ಸಾರ್ವಜನಿಕ ವಾಶ್‌ರೂಮ್‌ಗಳಲ್ಲಿ ಅಳವಡಿಸಿರುವ ಹ್ಯಾಂಡ್ ಡ್ರೈಯರ್‌ಗಳು ಅನುಕೂಲಕರ ಮತ್ತು ಸುರಕ್ಷಿತವೆಂದು ನೀವು ಭಾವಿಸಿದ್ದರೆ, ಅದು ಸಂಪೂರ್ಣ ನಿಜವಾಗಿರದೇ ಇರಬಹುದು. ಕೆಲವು ಅಧ್ಯಯನಗಳ ಪ್ರಕಾರ, ಇವುಗಳನ್ನು ಬಳಸುವುದರಿಂದ ವಾಶ್‌ರೂಮ್‌ನಲ್ಲಿ ಇರುವ ಬ್ಯಾಕ್ಟೀರಿಯಾ ಹಾಗೂ ಇತರ ಸೂಕ್ಷ್ಮಜೀವಿಗಳ ಸಂಪರ್ಕಕ್ಕೆ ಬರುವ ಸಾಧ್ಯತೆ ಇದೆ. ಹ್ಯಾಂಡ್ ಡ್ರೈಯರ್ ಬಳಸುವಾಗ ಉಂಟಾಗಬಹುದಾದ ಆರೋಗ್ಯದ ಅಪಾಯಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.
ಸಾರ್ವಜನಿಕ ವಾಶ್‌ರೂಮ್‌ಗಳಲ್ಲಿ ಹ್ಯಾಂಡ್ ಡ್ರೈಯರ್‌ಗಳನ್ನು ಪೇಪರ್ ಟವೆಲ್‌ಗೆ ಪರ್ಯಾಯವಾಗಿ ಬಳಸಲಾಗುತ್ತದೆ. ಕೈ ತೊಳೆದ ಬಳಿಕ ಕೆಲವೇ ಕ್ಷಣಗಳಲ್ಲಿ ಕೈ ಒಣಗಿಸಲು ಇದು ಸಹಾಯಕವಾಗುತ್ತದೆ. ಆದರೆ ಹಲವು ಸಂಶೋಧನೆಗಳು, ಹ್ಯಾಂಡ್ ಡ್ರೈಯರ್‌ಗಳು ನಾವು ಅಂದುಕೊಂಡಷ್ಟು ಸ್ವಚ್ಛವಾಗಿಲ್ಲ ಎಂದು ಸೂಚಿಸಿವೆ. ಈ ಮಷಿನ್ ಗಳು ಹೊರಗಿನಿಂದ ಹೊಸ ಅಥವಾ ಸಂಪೂರ್ಣ ಶುದ್ಧೀಕರಿಸಿದ ಗಾಳಿಯನ್ನು ಬಳಸುವುದಿಲ್ಲ. ಬದಲಾಗಿ, ವಾಶ್‌ರೂಮ್‌ನೊಳಗಿನ ಗಾಳಿಯನ್ನೇ ವೇಗವಾಗಿ ಹೊರಹಾಕುತ್ತವೆ. ಸಾರ್ವಜನಿಕ ವಾಶ್‌ರೂಮ್‌ಗಳ ಗಾಳಿಯಲ್ಲಿ ಧೂಳು, ಬ್ಯಾಕ್ಟೀರಿಯಾ, ಫಂಗಸ್ ಮತ್ತು ಇತರ ಸೂಕ್ಷ್ಮ ಕಣಗಳು ಇರಬಹುದು. ಇಂತಹ ಗಾಳಿಯನ್ನು ಕೈಗಳ ಮೇಲೆ ಮತ್ತೆ ಬೀಸಿದಾಗ, ಈಗಾಗಲೇ ತೊಳೆದ ಕೈಗಳು ಮತ್ತೆ ಕಲುಷಿತವಾಗುವ ಸಾಧ್ಯತೆ ಇದೆ. ಆದರೆ ಪ್ರತಿಯೊಂದು ಹ್ಯಾಂಡ್ ಡ್ರೈಯರ್ ಅಪಾಯಕಾರಿ ಎಂದಲ್ಲ, ಆದರೆ ಬಳಸುವ ಮುನ್ನ ಎಚ್ಚರಿಕೆ ಅಗತ್ಯ.
ಹ್ಯಾಂಡ್ ಡ್ರೈಯರ್‌ಗೆ ಸಂಬಂಧಿಸಿದ ಪ್ರಮುಖ ಆತಂಕವೆಂದರೆ, ಟಾಯ್ಲೆಟ್ ಫ್ಲಷ್ ಮಾಡಿದಾಗ ಗಾಳಿಯಲ್ಲಿ ಸೂಕ್ಷ್ಮ ಕಣಗಳು ಹರಡುವುದು. ಇದನ್ನು "ಟಾಯ್ಲೆಟ್ ಪ್ಲೂಮ್ " ಎಂದು ಕರೆಯಲಾಗುತ್ತದೆ. ಈ ಕಣಗಳು ಕೆಲ ಸಮಯ ಗಾಳಿಯಲ್ಲೇ ತೇಲುತ್ತಿದ್ದು, ವಾಶ್‌ರೂಮ್‌ನ ವಿವಿಧ ಭಾಗಗಳಿಗೆ ಹರಡಬಹುದು. ಹ್ಯಾಂಡ್ ಡ್ರೈಯರ್ ಇದೇ ಗಾಳಿಯನ್ನು ಒಳಗೆಳೆದು ವೇಗವಾಗಿ ಹೊರಹಾಕುವುದರಿಂದ, ಆ ಸೂಕ್ಷ್ಮ ಕಣಗಳು ಮತ್ತೆ ಕೈಗಳಿಗೆ ಹಾಗೂ ಸುತ್ತಮುತ್ತಲಿನ ಮೇಲ್ಮೈಗಳಿಗೆ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಹೆಚ್ಚಿನ ವೇಗದ ಜೆಟ್ ಹ್ಯಾಂಡ್ ಡ್ರೈಯರ್‌ಗಳಲ್ಲಿ ಈ ಅಪಾಯ ಇನ್ನಷ್ಟು ಹೆಚ್ಚಿರಬಹುದು. ಇದರಿಂದ ಕೈಗಳಿಗೆ ಮಾತ್ರವಲ್ಲದೆ ಬಟ್ಟೆಗಳಿಗೆ ಹಾಗೂ ಹತ್ತಿರದಲ್ಲಿರುವ ಇತರರಿಗೂ ಈ ಕಣಗಳು ಹರಡಬಹುದು.
ಯಾರಿಗೆ ಹೆಚ್ಚು ಅಪಾಯ?
ವಾಶ್‌ರೂಮ್‌ನ ವಾತಾವರಣ ಸಾಮಾನ್ಯವಾಗಿ ತೇವಾಂಶದಿಂದ ಕೂಡಿರುತ್ತದೆ. ಇದು ಶಿಲೀಂಧ್ರ ಮತ್ತು ಫಂಗಸ್ ಬೆಳೆಯಲು ಅನುಕೂಲಕರವಾಗಿದೆ. ಹ್ಯಾಂಡ್ ಡ್ರೈಯರ್ ಈ ಕಣಗಳನ್ನು ಗಾಳಿಯೊಂದಿಗೆ ಹರಡುವುದರಿಂದ, ಅಲರ್ಜಿ ಅಥವಾ ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಯಾವುದು ಉತ್ತಮ ಆಯ್ಕೆ?
ವಾಶ್‌ರೂಮ್‌ನಲ್ಲಿ ಪೇಪರ್ ಟವೆಲ್ ಲಭ್ಯವಿದ್ದರೆ ಅದನ್ನು ಬಳಸುವುದು ಉತ್ತಮ. ಅದು ಇಲ್ಲದಿದ್ದರೆ ಕೈಗಳನ್ನು ಸ್ವಾಭಾವಿಕವಾಗಿ ಗಾಳಿಯಲ್ಲಿ ಒಣಗಲು ಬಿಡುವುದೂ ಸುರಕ್ಷಿತ ಆಯ್ಕೆಯಾಗಿದೆ.ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ, ಕೈಗಳನ್ನು ಸಾಬೂನು ಮತ್ತು ನೀರಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ಚೆನ್ನಾಗಿ ತೊಳೆಯುವುದು. ಸೋಂಕುಗಳಿಂದ ರಕ್ಷಿಸಿಕೊಳ್ಳಲು ಇದೇ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.