
ಪ್ರತಿಯೊಬ್ಬರೂ ಅವರದೇ ಸ್ಟೈಲ್ ನಲ್ಲಿ ನಿದ್ರೆ (sleep) ಮಾಡ್ತಾರೆ. ಒಬ್ಬರು ದಿಂಬು ಹಿಡಿದು ಮಲಗಿದ್ರೆ ಮತ್ತೊಬ್ಬರ ಕೈನಲ್ಲಿ ಗೊಂಬೆ ಇರುತ್ತೆ. ಕಣ್ಣು ಕಟ್ಟಿ, ಹೊಟ್ಟೆ ಕೆಳಗೆ ಹಾಕಿ ಹೀಗೆ ನಾನಾ ಸ್ಟೈಲ್ ನಲ್ಲಿ ಜನ ನಿದ್ರೆ ಮಾಡ್ತಾರೆ. ಕೆಲವರು ನಿದ್ರೆ ಮಾಡುವಾಗ ಇಡೀ ದೇಹ ಚಾದರದೊಳಗಿರುತ್ತೆ, ಕಾಲು ಮಾತ್ರ ಹೊರಗೆ ಬಂದಿರುತ್ತೆ. ಅನೇಕರು ಆ ಕಾಲು ಏನ್ ಮಾಡಿದೆ, ಅದನ್ನು ಯಾಕೆ ಹೊರಗೆ ಹಾಕಿ ಮಲಗಿದ್ದೀಯಾ ಅಂತ ಕೇಳ್ತಿರ್ತಾರೆ. ನೀವು ಹೀಗೆ ಮಾಡ್ತಿದ್ದರೆ ಖುಷಿಪಡಿ. ಕಾಲನ್ನು ಹೊದಿಕೆ ಹೊರಗೆ ಹಾಕಿ ಮಲಗುವ ನಿಮ್ಮ ಹವ್ಯಾಸದಿಂದ ಸಾಕಷ್ಟು ಲಾಭವಿದೆ.
ಕಂಬಳಿಯಿಂದ ಪಾದ (foot)ವನ್ನು ಹೊರಗೆ ಹಾಕಿ ಮಲಗುವ ಅಭ್ಯಾಸದ ಹಿಂದೆ ವೈಜ್ಞಾನಿಕ ಕಾರಣವಿದೆ. ಇದು ಉತ್ತಮ ನಿದ್ರೆಗೆ ಸಹಕಾರಿ. ಕೆಲವರಿಗೆ ಕಾಲು ಹೊರಗೆ ಬಂದಿದ್ದು ತಿಳಿಯೋದೇ ಇಲ್ಲ. ಮತ್ತೆ ಕೆಲವರಿಗೆ ಕಾಲು ಹೊರಗೆ ಹಾಕೋವರೆಗೂ ನಿದ್ರೆ ಬರೋದಿಲ್ಲ. ಇದು ಹೆಚ್ಚು ಆರಾಮದಾಯಕವಾಗಿರುತ್ತೆ. ತ್ವರಿತವಾಗಿ ನಿದ್ರಿಸಲು ಸಹಾಯ ಮಾಡುತ್ತೆ. ಯಾವುದೇ ಅಡೆತಡೆ ಇಲ್ದೆ ರಾತ್ರಿ ಪೂರ್ತಿ ನಿದ್ರೆ ಬರುತ್ತೆ. ಆಳವಾದ ಮತ್ತು ಗಾಢವಾದ ನಿದ್ರೆಗೆ ಇದು ಪ್ರಯೋಜನಕಾರಿ.
ಹೊದಿಕೆಯಿಂದ ಕಾಲನ್ನು ಹೊರಗೆ ಹಾಕಿ ಮಲಗಗುವುದರಿಂದ ನಿಮ್ಮ ದೇಹ ತಂಪಾಗುತ್ತದೆ. ಪಾದ, ಅಪಧಮನಿಗಳು ಮತ್ತು ರಕ್ತನಾಳಗಳನ್ನು ಸಂಪರ್ಕಿಸುವ ಅಪಧಮನಿಯ ಅನಾಸ್ಟೊಮೋಸಸ್ ಎಂಬ ವಿಶೇಷ ಸಂಪರ್ಕಗಳನ್ನು ಹೊಂದಿವೆ. ಬಿಸಿಲಿನಲ್ಲಿ, ಈ ಸಂಪರ್ಕ ತೆರೆದುಕೊಳ್ಳುತ್ತವೆ. ಚರ್ಮಕ್ಕೆ ಹೆಚ್ಚಿನ ರಕ್ತ ಹರಿಯಲು ಸಹಾಯವಾಗುತ್ತೆ. ಇದು ನಮ್ಮ ದೇಹವನ್ನು ತಂಪಾಗಿಸುತ್ತದೆ. ಸಾಮಾನ್ಯಕ್ಕಿಂತ ಒಂದು ಅಥವಾ ಎರಡು ಡಿಗ್ರಿಗಳಷ್ಟು ನಮ್ಮ ದೇಹ ತಂಪಾಗಿರುತ್ತದೆ. ಶೀತ ತಾಪಮಾನ ನಾವು ಆರಾಮವಾಗಿ, ಹೆಚ್ಚು ನಿದ್ರೆ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಿಮ್ಮ ದೇಹ ಬಿಸಿಯಾಗಿದ್ದಾಗ ನಿದ್ರೆ ಕಷ್ಟ. ನೀವು ಪಾದಗಳನ್ನು ಕಂಬಳಿಯಿಂದ ಹೊರಗೆ ಹಾಕಿದಾಗ ದೇಹ ತಂಪಾಗಲು ಶುರುವಾಗಿ ನಿದ್ರೆ ತಾನಾಗಿಯೇ ಬರುತ್ತದೆ.
ಪಾದಗಳಲ್ಲಿ ಕೂದಲಿರದ ಕಾರಣ ಪಾದಗಳ ಅಡಿಭಾಗಗಳು ಬೇಗ ತಣ್ಣಗಾಗುತ್ತವೆ. ಕೂದಲಿನ ಅನುಪಸ್ಥಿತಿಯು ಶಾಖವನ್ನು ವೇಗವಾಗಿ ಆವಿಯಾಗುವಂತೆ ಮಾಡುತ್ತವೆ. ಪಾದಗಳು ತಂಪಾದಂತೆ ದೇಹದ ತಾಪಮಾನ ಕುಸಿಯುತ್ತದೆ. ಇದು ಮೆಲಟೋನಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ. ಆಳವಾದ ನಿದ್ರೆಗೆ ಇದು ಸಹಕಾರಿಯಾಗಿದೆ.
ಒಂದೇ ಪಾದ ಹೊರಗೆ ಹಾಕಿ ಮಲಗ್ಬಹುದಾ? : ನಿದ್ರೆ ಅವರ ದೇಹ ಪ್ರಕೃತಿ ಜೊತೆ ಸಂಬಂಧ ಹೊಂದಿದೆ. ಆದ್ರೆ ನಿದ್ರೆ ಚೆನ್ನಾಗಿ ಬರುತ್ತೆ ಎನ್ನುವ ಕಾರಣಕ್ಕೆ ಪ್ರತಿಯೊಬ್ಬರೂ ಪಾದವನ್ನು ಹೊರಗೆ ಹಾಕಿ ಮಲಗೋದು ಸೂಕ್ತವಲ್ಲ. ಇದು ಕೆಲವರ ನಿದ್ರೆ ಹಾಳು ಮಾಡ್ಬಹುದು. ಒಂದು ಪಾದವನ್ನು ಹೊರಗೆ ಹಾಕಿ ಮಲಗೋದ್ರಿಂದ ಅಸಮಾನ ತಾಪಮಾನವನ್ನು ನೀವು ಅನುಭವಿಸ್ಬಹುದು. ಇದು ನಿಮ್ಮ ನಿದ್ರೆಯ ಚಕ್ರ ಹಾಳು ಮಾಡುವ ಸಾಧ್ಯತೆ ಇರುತ್ತದೆ. ಎರಡೂ ಪಾದಗಳನ್ನು ಮುಚ್ಚಿ ಮಲಗಿದ್ರೆ ರಾತ್ರಿಯಿಡೀ ಸಮ ಮತ್ತು ಆರಾಮದಾಯಕ ತಾಪಮಾನವನ್ನು ಕಾಪಾಡಿಕೊಳ್ಳಲು ಸಹಕಾರಿ. ನಿಮ್ಮ ದೇಹ ಬಿಸಿ ಇದೆ ಎಂದಾಗ ನೀವು ಎರಡೂ ಪಾದಗಳನ್ನು ಹೊರಗೆ ಇಡಿ. ರಾತ್ರಿ ಸಮಯದಲ್ಲಿ ನಿಮ್ಮ ಪಾದ ತಣ್ಣಗಿರುತ್ತದೆ ಎಂದಾದ್ರೆ ಸಾಕ್ಸ್ ಧರಿಸಿ ಮಲಗುವುದು ಸೂಕ್ತ. ಮಲಗುವಾಗ ನಿಮ್ಮ ಪಾದಗಳನ್ನು ಸ್ವಲ್ಪ ಎತ್ತರದಲ್ಲಿಟ್ಟರೆ ಪ್ರಯೋಜನಕಾರಿ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಊತವನ್ನು ಕಡಿಮೆ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.