
ಮನೆಯಲ್ಲಿರುವ ಪುಟಾಣಿ ಮಕ್ಕಳು (Children) ನಾನಾ ತರಹದ ಆಟವನ್ನು ಆಡ್ತಾರೆ. ಅವರ ಮೇಲೆ ಪಾಲಕರು ಸದಾ ಗಮನ ಇಟ್ಟಿರಬೇಕು. ಕೆಲವೊಂದು ಆಟ ಅಪಾಯಕಾರಿ ಅಂತ ನಾವು ಭಾವಿಸ್ತೇವೆ. ಅದ್ರಲ್ಲಿ ಮಕ್ಕಳು ವೃತ್ತಾಕಾರವಾಗಿ ತಿರುಗೋದು ಒಂದು. ಮಕ್ಕಳು ವೃತ್ತಾಕಾರವಾಗಿ ಬ್ರೇಕ್ ಇಲ್ಲದೆ ತಿರುಗ್ತಾ ಇದ್ರೆ ಪಾಲಕರಿಗೆ ಭಯವಾಗುತ್ತದೆ. ಈಗ ತಲೆ ಸುತ್ತುತ್ತೆ, ಕುಳಿತ್ಕೊಳ್ಳಿ ಅಂತ ಮಕ್ಕಳಿಗೆ ಹೇಳ್ತಿರುತ್ತಾರೆ. ಅನೇಕ ಬಾರಿ, ಮಕ್ಕಳನ್ನು ಬೈದು ಬುದ್ಧಿ ಹೇಳ್ತಾರೆ. ಮಕ್ಕಳ ತರ್ಲೆ ಇದು, ಇದನ್ನೇ ಆಟ ಮಾಡ್ಕೊಂಡಿದ್ದಾರೆ, ಎಲ್ಲಿ ಹೋದ್ರೂ ಹೀಗೆ ಸುತ್ತುತ್ತಿರುತ್ತಾರೆ ಅಂತೆಲ್ಲ ಪಾಲಕರು ಗೊಣಗ್ತಿರುತ್ತಾರೆ. ಆದ್ರೆ ಮಕ್ಕಳು ಹೀಗೆ ಮಾಡೋದು ಬರೀ ಆಟ ಮಾತ್ರವಲ್ಲ. ಅದ್ರಿಂದ ಲಾಭವಿದೆ ಅಂದ್ರೆ ನೀವು ನಂಬ್ಲೇಬೇಕು.
ಪೇರೆಂಟಿಂಗ್ ಕೋಚ್ (parenting coach) ಅನುರಾಧ ಗುಪ್ತಾ, ಮಕ್ಕಳು ಹೀಗೆ ಸುತ್ತು ಹೊಡೆಯೋದು ಏಕೆ, ಅದ್ರಿಂದ ಪ್ರಯೋಜನ ಏನು ಎಂಬುದನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ವಿವರಿಸಿದ್ದಾರೆ. ಅವರ ಪ್ರಕಾರ, ಮಕ್ಕಳು ಹೀಗೆ ಮಾಡುವುದು ತುಂಬಾ ಸಾಮಾನ್ಯ ಮತ್ತು ತಮಾಷೆಯಾಗಿ ಕಾಣಿಸಬಹುದು. ಆದರೆ ಇದು ಪುಟ್ಟ ದೇಹಕ್ಕೆ ಅಗತ್ಯ. ಮಕ್ಕಳು ವೃತ್ತಾಕಾರ (round)ವಾಗಿ ತಿರುಗುವುದರಿಂದ ಐದು ಪ್ರಯೋಜನವಿದೆ ಎಂದು ಅವರು ಹೇಳಿದ್ದಾರೆ.
ವೃತ್ತಾಕಾರವಾಗಿ ಮಕ್ಕಳು ಸುತ್ತೋದ್ರಿಂದ ಏನಾಗುತ್ತೆ? :
ಶಾಂತವಾಗುವ ಮಕ್ಕಳ ಮನಸ್ಸು : ವೃತ್ತಾಕಾರವಾಗಿ ಸುತ್ತಿದಾಗ ತಲೆ ತಿರುಗಿದ ಅನುಭವವಾಗುತ್ತದೆ. ಇದು ಮಕ್ಕಳ ದೇಹವನ್ನು ಬಲಗೊಳಿಸುತ್ತದೆ. ವಿಚಿತ್ರ ಸಂವೇದನೆ ಎದುರಿಸಲು ಮಕ್ಕಳು ಕಲಿಯುತ್ತಾರೆ. ಮಕ್ಕಳು ಮಾಡುವ ಈ ಕೆಲಸ ಅವರಿಗೆ ಅರಿವಿಲ್ಲದಂತೆ ಅವರಿಗೆ ಶಾಂತವಾಗಿರುವುದನ್ನು ಕಲಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.
ದೇಹದ ಬ್ಯಾಲೆನ್ಸ್ : ಕಿವಿಗಳ ಒಳಗೆ ವೆಸ್ಟಿಬುಲರ್ ಸಿಸ್ಟಮ್ ಎಂದು ಕರೆಯಲ್ಪಡುವ ಒಂದು ವ್ಯವಸ್ಥೆ ಇದೆ. ಇದು ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು, ಬೀಳದೆ ದೇಹವನ್ನು ಬ್ಯಾಲೆನ್ಸ್ ಮಾಡಿ ನಡೆಯಲು ನಮಗೆ ಸಹಾಯ ಮಾಡುತ್ತದೆ. ಮಗುವು ಪ್ರತಿ ಬಾರಿಯೂ ಹೀಗೆ ಸುತ್ತಿದಾಗ ವೆಸ್ಟಿಬುಲರ್ ಸಿಸ್ಟಮ್ ಬಲಗೊಳ್ಳುತ್ತದೆ.
ಆತ್ಮವಿಶ್ವಾಸ ಹೆಚ್ಚಳ : ಹೀಗೆ ಸುತ್ತುತ್ತಿದ್ದಾಗ ಮಕ್ಕಳಿಗೆ ತಮ್ಮ ದೇಹವು ಎಲ್ಲಿ ಮತ್ತು ಹೇಗೆ ಚಲಿಸುತ್ತಿದೆ ಎಂಬುದು ತಿಳಿಯುತ್ತೆ. ವೃತ್ತಾಕಾರವಾಗಿ ಚಲಿಸುವುದರಿಂದ ಅವರ ದೇಹದಲ್ಲಿ ವಿಭಿನ್ನ ರೀತಿಯ ಆತ್ಮವಿಶ್ವಾಸ ಬೆಳೆಯುತ್ತದೆ. ಅವರು ಯಾವುದಕ್ಕೂ ಡಿಕ್ಕಿ ಹೊಡೆಯುವುದಿಲ್ಲ. ಅವರಿಗೆ ತಮ್ಮ ದೇಹದ ಮೇಲೆ ಸಂಪೂರ್ಣ ವಿಶ್ವಾಸ ಬರುತ್ತದೆ.
ಸ್ಥಿರವಾಗಿ ಕುಳಿತುಕೊಳ್ಳಲು ಸಹಾಯ : ಮಕ್ಕಳು ಹೀಗೆ ವೃತ್ತಾಕಾರದಲ್ಲಿ ಸುತ್ತುವುದನ್ನು ಪಾಲಕರು ತಡೆಯಬಾರದು. ಮಕ್ಕಳು ಹೀಗೆ ಮಾಡೋದ್ರಿಂದ ಅವರು ಒಂದು ಕಡೆ ಸ್ಥಿರವಾಗಿ ಕುಳಿತುಕೊಳ್ಳಲು ಸಹಾಯವಾಗುತ್ತದೆ. ಒಂದೇ ವಿಷ್ಯದ ಮೇಲೆ ಗಮನ ಕೇಂದ್ರೀಕರಿಸಲು ಇದು ನೆರವಾಗುತ್ತದೆ.
ಪಾಲಕರು ಏನು ಮಾಡ್ಬೇಕು? : ನಿಮ್ಮ ಮಕ್ಕಳು ಹೀಗೆ ಸುತ್ತುತ್ತಿದ್ದರೆ ಅವರನ್ನು ತಡೆಯುವ ಪ್ರಯತ್ನ ಮಾಡ್ಬೇಡಿ. ಅಕ್ಕಪಕ್ಕ ಅಪಾಯಕಾರಿ ವಸ್ತು ಇರದಂತೆ ನೋಡಿಕೊಳ್ಳಿ. ಮಕ್ಕಳಲ್ಲಿ ಸಮತೋಲನದ ಕೊರತೆ ಮತ್ತು ಗಮನ ಕೇಂದ್ರೀಕರಿಸಲು ತೊಂದ್ರೆ ಆಗ್ತಿದ್ದರೆ ಅವರ ವೆಸ್ಟಿಬುಲರ್ ದುರ್ಬಲವಾಗಿದೆ ಎಂದರ್ಥ. ನಿಮ್ಮ ಮಕ್ಕಳು ಸುತ್ತುತ್ತಿದ್ದರೆ ವೆಸ್ಟಿಬುಲರ್ಸಿಸ್ಟಮ್ ಬಲಗೊಳ್ಳುತ್ತದೆ. ಯಾವುದೇ ಔಷಧಿ, ಮಾತ್ರೆ ಇಲ್ಲದೆ ನಿಮ್ಮ ಮಕ್ಕಳ ಆರೋಗ್ಯ ಸುಧಾರಿಸುತ್ತದೆ. ಮಕ್ಕಳು ಅನವಶ್ಯಕವಾಗಿ ಈ ಆಟ ಆಡ್ತಿಲ್ಲ. ಅವರು ಆಟವೆಂದು ಭಾವಿಸಿರುವ ಇದು ಅವರ ಮೆದುಳು, ದೇಹ ಮತ್ತು ಭಾವನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.