ಕೆಲ ಮಕ್ಕಳು ವಯಸ್ಸಿಗೆ ತಕ್ಕಂಗೆ ಬೆಳವಣಿಗೆ ಆಗ್ದೇ ಇರೋದಕ್ಕೆ ಕಾರಣ ಏನು?

Published : Jun 30, 2025, 06:56 PM IST
Children Addicted to Reels

ಸಾರಾಂಶ

ಮಕ್ಕಳ ಬೆಳವಣಿಗೆಯಲ್ಲಿ ಪೌಷ್ಠಿಕಾಂಶ, ಹಾರ್ಮೋನುಗಳು, ದೈಹಿಕ ಚಟುವಟಿಕೆ ಮತ್ತು ನಿದ್ರೆ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳ ಬೆಳವಣಿಗೆ ಕುಂಠಿತವಾಗುವುದಕ್ಕೆ ಕಾರಣ ಏನು ಎಂದು ಈಗ ನೋಡೋಣ.

ಇತ್ತೀಚಿನ ದಿನಗಳಲ್ಲಿ ಕೆಲವು ಮಕ್ಕಳ ಬೆಳವಣಿಗೆ ವಯಸ್ಸಿಗೆ ತಕ್ಕಂತೆ ಇರುವುದಿಲ್ಲ, ಇದ್ದಕ್ಕಿದ್ದಂತೆ ಬೆಳವಣಿಗೆ ಕುಂಠಿತವಾಗುವುವುದು ಕಂಡುಬರುತ್ತಿದೆ. ಹಿಂದಿನ ಪೀಳಿಗೆಗಿಂತ ಅಥವಾ ಅವರ ವಯಸ್ಸಿನ ಇತರ ಮಕ್ಕಳಿಗಿಂತ ಬೆಳವಣಿಗೆ ಮತ್ತು ಎತ್ತರ ಕಡಿಮೆ ಇರುತ್ತದೆ. ಹತ್ತನೇ ತರಗತಿಯಲ್ಲಿ ಓದುವ ವಿದ್ಯಾರ್ಥಿ ಆರನೇ ತರಗತಿಯಂತೆ ಕಾಣಲು ಕಾರಣವೇನು? ಅದನ್ನು ಹೇಗೆ ಸರಿಪಡಿಸುವುದು ಎಂಬುದನ್ನು ಈಗ ನೋಡೋಣ.

ಪೌಷ್ಟಿಕಾಂಶದ ಕೊರತೆ

ಮಕ್ಕಳಿಗೆ ಸಾಕಷ್ಟು ಪೌಷ್ಟಿಕಾಂಶ ಸಿಗದಿರುವುದು ಒಂದು ಕಾರಣವಿರಬಹುದು. ಎಲ್ಲಾ ಪೋಷಕಾಂಶಗಳನ್ನು ಒಳಗೊಂಡ ಸಮತೋಲಿತ ಆಹಾರ ಸಿಗದಿರುವುದು ಮುಖ್ಯ ಕಾರಣ. ನಿಮ್ಮ ಮಗು ಎತ್ತರವಾಗಿ ಬೆಳೆಯಲು ಪ್ರೋಟೀನ್, ಕ್ಯಾಲ್ಸಿಯಂ, ಸತು, ವಿಟಮಿನ್ ಡಿ ಅಗತ್ಯ. ಖಂಡಿತವಾಗಿಯೂ ಬೆಳಗಿನ ಉಪಾಹಾರ ಸೇವಿಸಬೇಕು. ಶಾಲೆಗೆ ಹೋಗುವ ಮಕ್ಕಳು ಬೆಳಗೆ ಎದ್ದು ಶಾಲೆಗೆ ತಯಾರಾಗುವ ಅವಸರದಲ್ಲಿ ಬೆಳಗಿನ ಉಪಾಹಾರವನ್ನು ಬಿಟ್ಟು ಬಿಡುತ್ತಾರೆ. ಅದು ಸಂಪೂರ್ಣವಾಗಿ ತಪ್ಪು.

ತಪ್ಪಿಸಬೇಕಾದ ಆಹಾರ;

ಚಿಪ್ಸ್, ಸಕ್ಕರೆ ಪಾನೀಯಗಳು, ಹುರಿದ ಆಹಾರಗಳನ್ನು ತಪ್ಪಿಸಬೇಕು.

ಹಾರ್ಮೋನ್ ಅಸಮತೋಲನ

ನಿಮ್ಮ ಮಗುವಿಗೆ ಪೌಷ್ಟಿಕ ಆಹಾರವನ್ನು ನೀಡಿದರೂ ಬೆಳವಣಿಗೆಯಾಗದಿದ್ದರೆ, ಅದು ಹಾರ್ಮೋನ್ ಅಸಮತೋಲನವಿರಬಹುದು. ದೇಹದಲ್ಲಿರುವ ಪ್ರಮುಖ ಗ್ರಂಥಿಯಾದ ಪಿಟ್ಯುಟರಿ ಗ್ರಂಥಿಯೇ ಮಕ್ಕಳು ಎತ್ತರವಾಗಿ ಬೆಳೆಯಲು ಕಾರಣ. ನಿಮ್ಮ ಮಗುವಿಗೆ ಪೌಷ್ಟಿಕಾಂಶದ ಕೊರತೆ ಅಥವಾ ಒತ್ತಡ ಕಂಡುಬಂದರೆ ಅದು ಬೆಳವಣಿಗೆಯ ಹಾರ್ಮೋನ್ ಸ್ರವಿಸುವಿಕೆಯನ್ನು ತಡೆಯುತ್ತದೆ.

ಮುಂಚಿನ ಪ್ರೌಢಾವಸ್ಥೆ:

ಇತ್ತೀಚೆಗೆ ಮಕ್ಕಳು ಅವರ ವಯಸ್ಸಿಗೂ ಮುಂಚಿತವಾಗಿ ಪ್ರೌಢಾವಸ್ಥೆಗೆ ತಲುಪುವುದು ಸಾಮಾನ್ಯ ಎನಿಸಿದೆ. ಇದರಿಂದಲೂ ಅವರ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಅವರ ಮೂಳೆಗಳ ಬೆಳವಣಿಗೆಯ ಫಲಕಗಳು ಮುಂಚೆಯೇ ಮುಚ್ಚಲ್ಪಡುತ್ತವೆ.

ದೈಹಿಕ ಚಟುವಟಿಕೆ

ಹಿಂದಿನ ಪೀಳಿಗೆಯ ಮಕ್ಕಳು ಓಡಾಡಿ ಆಟವಾಡುತ್ತಿದ್ದರು. ಆದರೆ ಈ ಪೀಳಿಗೆ ಮೊಬೈಲ್‌ಗಳಲ್ಲಿ ಮುಳುಗಿಹೋಗಿದೆ. ಓಡಾಟ, ಮರ ಏರುವುದು ಮುಂತಾದ ಹೊರಾಂಗಣ ಆಟಗಳು ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಹೊರಗೆ ಆಟವಾಡುವಾಗ ಮೂಳೆ ಬೆಳವಣಿಗೆಗೆ ಅಗತ್ಯವಾದ ವಿಟಮಿನ್ ಡಿ ಸೂರ್ಯನ ಬೆಳಕಿನಿಂದ ದೊರೆಯುತ್ತದೆ.

ನಿದ್ರಾಹೀನತೆ

ರಾತ್ರಿ ಆಳವಾಗಿ ನಿದ್ರಿಸುವಾಗ ಮಾತ್ರ ಬೆಳವಣಿಗೆಯ ಹಾರ್ಮೋನ್ ಸ್ರವಿಸುತ್ತದೆ. ಇಂದಿನ ಮಕ್ಕಳು ಮೊಬೈಲ್‌ನಲ್ಲಿ ವಿಡಿಯೋ ನೋಡುವುದು, ಆಟವಾಡುವುದು ಮುಂತಾದವುಗಳಿಂದಾಗಿ ರಾತ್ರಿ ಎಚ್ಚರವಾಗಿರುತ್ತಾರೆ. ಇದರಿಂದ ಅವರ ಬೆಳವಣಿಗೆಯ ಹಾರ್ಮೋನ್ ಸರಿಯಾಗಿ ಕೆಲಸ ಮಾಡುವುದಿಲ್ಲ.

ಜೀನ್‌ಗಳು

ಮಕ್ಕಳು ಬೆಳೆಯದೆ ಕುಳ್ಳಗಿರುವುದಕ್ಕೆ ಅವರ ಜೀನ್‌ಗಳೂ ಕಾರಣವಿರಬಹುದು. ಇದು ಅವರ ಪೀಳಿಗೆಯ ಗುಣಲಕ್ಷಣಗಳಿಂದ ಬಂದಿರುವ ಸಾಧ್ಯತೆಗಳಿವೆ. ಕೆಲವೊಮ್ಮೆ ಪೋಷಕರು ಎತ್ತರವಾಗಿದ್ದರೂ, ಮಕ್ಕಳು ಕುಳ್ಳಗಿರುವ ಸಾಧ್ಯತೆಯಿದೆ. ಇದಕ್ಕೆ ಕೆಟ್ಟ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ದೀರ್ಘಕಾಲದ ಕಾಯಿಲೆಗಳು, ಒತ್ತಡ ಮುಂತಾದವು ಕಾರಣವಿರಬಹುದು.

ಮಕ್ಕಳ ಬೆಳವಣಿಗೆಗೆ ಏನು ಮಾಡಬಹುದು?

ಪೌಷ್ಟಿಕ ಆಹಾರವನ್ನು ನೀಡಬೇಕು. ಮಕ್ಕಳು ಪ್ರತಿದಿನ ಸೇವಿಸುವ ಆಹಾರದಲ್ಲಿ ಪ್ರೋಟೀನ್ ಇರಬೇಕು. ಮೊಟ್ಟೆ, ಹಾಲು, ದ್ವಿದಳ ಧಾನ್ಯಗಳು ಮತ್ತು ಹಣ್ಣುಗಳು, ಹಸಿರು ತರಕಾರಿಗಳನ್ನು ಮಕ್ಕಳಿಗೆ ಪ್ರತಿದಿನ ನೀಡಬೇಕು. ಫ್ರೈಡ್ ರೈಸ್, ನೂಡಲ್ಸ್ ಮುಂತಾದ ಫಾಸ್ಟ್ ಫುಡ್‌ಗಳನ್ನು ತಪ್ಪಿಸುವುದು ಒಳ್ಳೆಯದು. ಪ್ರತಿದಿನ ಅವರ ನಿದ್ರೆಯನ್ನು ಸರಿಯಾಗಿ ಪಾಲಿಸಲು ಸೂಚಿಸಬೇಕು. ಮಕ್ಕಳು ಪ್ರತಿದಿನ 8 ಗಂಟೆಗಳ ಕಾಲ ನಿದ್ರಿಸುವುದನ್ನು ಖಚಿತಪಡಿಸಿಕೊಳ್ಳಿ.

ಮನೆಯೊಳಗೆ ಇರುವುದಕ್ಕಿಂತ ಹೊರಗೆ ಹೋಗಿ ಆಟವಾಡಲು ಪ್ರೋತ್ಸಾಹಿಸಿ. ಶಾಲೆಗಳಲ್ಲಿ ಯಾವುದೇ ಆಟಗಳಲ್ಲಿ ಸೇರಿಕೊಂಡು ಪ್ರತಿಭೆಗಳನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸಿ. ಮಕ್ಕಳಿಗೆ ಯಾವುದೇ ವಿಟಮಿನ್ ಕೊರತೆ ಇದೆಯೇ? ಎಂದು ಪರೀಕ್ಷಿಸಿ ಅದಕ್ಕೆ ತಕ್ಕಂತೆ ಆಹಾರ ಪದ್ಧತಿಯನ್ನು ಬದಲಾಯಿಸಬೇಕು. ಈ ಬಗ್ಗೆ ವೈದ್ಯರನ್ನು ಒಮ್ಮೆ ಸಂಪರ್ಕಿಸುವುದು ಒಳ್ಳೆಯದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಗಡಿ, ಕೆಮ್ಮು ಇದ್ದಾಗ ಮಕ್ಕಳಿಗೆ ಬಾಳೆಹಣ್ಣು, ಮೊಸರು ಕೊಡಬಹುದಾ? ಕೊಟ್ಟರೆ ಏನಾಗುತ್ತೆ?
ಇಂಥವರನ್ನು ಮದುವೆ ಆದ್ರೆ ಆರೋಗ್ಯವಾಗಿ ಹುಟ್ಟಲ್ಲ ಮಕ್ಕಳು, ಕಾಡುತ್ತೆ ನಾನಾ ಖಾಯಿಲೆ