
ಲಿಪ್‌ಸ್ಟಿಕ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ ಎನ್ನುವಂತಾಗಿಬಿಟ್ಟದೆ. ಎಷ್ಟೋ ಮಹಿಳೆಯರು ಊಟ ಬೇಕಾದರೂ ಬಿಟ್ಟಾರು, ಲಿಪ್‌ಸ್ಟಿಕ್ ಬಿಡಲೊಲ್ಲರು ಎನ್ನುವ ಸ್ಥಿತಿ ಇದೆ. ಸಿನಿಮಾ ತಾರೆಯರಿಂದ ಪ್ರೇರೇಪಿತರಾಗುವುದು ಒಂದೆಡೆಯಾದರೆ, ವಯಸ್ಸಾದಂತೆಲ್ಲಾ ಚಿಕ್ಕವರಾಗಿ ಕಾಣಿಸುವ ಹಂಬದಲ್ಲಿ ಕೃತಕ ಬಣ್ಣಗಳ ಮೊರೆ ಇಡುತ್ತಿದ್ದಾರೆ. ಅದರಲ್ಲಿಯೂ ಸೌಂದರ್ಯದ ಮಾತು ಬಂದಾಗ ಲಿಪ್‌ಸ್ಟಿಕ್ ಕೊಡುಗೆ ಅಪಾರವಾಗಿದೆ. ದೊಡ್ಡವರೇ ಹೀಗೆ ಮಾಡುವಾಗ ಅದರಿಂದ ಸಹಜವಾಗಿ ಚಿಕ್ಕಮಕ್ಕಳೂ ಪ್ರೇರೇಪಿತರಾಗುತ್ತಿದ್ದಾರೆ. ಇದರಿಂದ ಕ್ಯಾನ್ಸರ್ನಂಥ ಮಾರಣಾಂತಿಕ ಕಾಯಿಲೆಗಳು ಬರುವುದು ಇದಾಗಲೇ ಸಾಬೀತಾಗಿದೆ. ಅದೇನೇ ಇದ್ದರೂ ಕೃತಕ ಸುಂದರವಾಗಿ ಕಾಣುವುದಕ್ಕಾಗಿ ಇದರ ಮೊರೆ ಹೋಗುತ್ತಿರುವ ಕಾರಣ, ಚಿಕ್ಕಮಕ್ಕಳಲ್ಲಿಯೂ ಕ್ಯಾನ್ಸರ್ನಂಥ ಗಂಭೀರ ಕಾಯಿಲೆ ಬರುತ್ತಿರುವುದು ಆತಂಕತಂದಿದೆ.
ಇದೇ ಕಾರಣಕ್ಕೆ ಕೇರಳ ಸರ್ಕಾರ ಬಹು ದೊಡ್ಡ ನಿರ್ಧಾರವನ್ನು ಮಾಡಿದೆ. ಇಲ್ಲಿ ಕೂಡ ಉಳಿದ ಕಡೆಗಳಂತೆಯೇ ತರಗತಿಗಳ ನಡುವಿನ ವಿರಾಮದ ಸಮಯದಲ್ಲಿಯೇ ಬಾಲಕಿಯರು ಬ್ಯಾಗ್ನಿಂದ ಲಿಪ್‌ಸ್ಟಿಕ್ ತೆಗೆದು ಹಚ್ಚಿಕೊಳ್ಳುತ್ತಿರುವುದು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಅವರ ಭವಿಷ್ಯದ ಭಯಾನಕತೆಯನ್ನು ಅರಿತು ಕೇರಳ ಸರ್ಕಾರ ಶಾಲಾ ಕ್ಯಾಂಪಸ್ನಲ್ಲಿ ಲಿಪ್‌ಸ್ಟಿಕ್ ಬ್ಯಾನ್ ಮಾಡುವ ಚಿಂತನೆ ನಡೆಸಿದ್ದು, ಅದಕ್ಕೆ ಚಾಲನೆ ಕೂಡ ನೀಡಲಾಗಿದೆ.
ಕೊಲ್ಲಂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು, ಮಕ್ಕಳಲ್ಲಿ ಹೆಚ್ಚುತ್ತಿರುವ ಸೌಂದರ್ಯವರ್ಧಕಗಳ ಬಳಕೆಯ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಲು ಪ್ರೇರೇಪಿಸಿದೆ. ಜಿಲ್ಲೆಯ ಮೊದಲ "ಲಿಪ್‌ಸ್ಟಿಕ್-ಮುಕ್ತ ಕ್ಯಾಂಪಸ್" ಎಂದು ಏಕಕಾಲದಲ್ಲಿ ಘೋಷಿಸಲಾದ ಮಯ್ಯನಾಡ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜಿಲ್ಲಾ ಮಟ್ಟದ ಉದ್ಘಾಟನೆ ನಡೆಸಲಾಯಿತು. ಕವಿ ಕುರೀಪುಳ ಶ್ರೀಕುಮಾರ್ ಈ ಅಭಿಯಾನವನ್ನು ಉದ್ಘಾಟಿಸಿ ಲಿಪ್ಸ್ಟಿಕ್ನಿಂದ ಭವಿಷ್ಯದಲ್ಲಿ ಆಗುವ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದರು.
"ಪ್ರತಿಯೊಬ್ಬ ಮನುಷ್ಯನೂ ಸುಂದರವಾಗಿ ಹುಟ್ಟುತ್ತಾನೆ, ಹಾಗಾದರೆ ನಮಗೆ ಸೌಂದರ್ಯವರ್ಧಕಗಳು ಏಕೆ ಬೇಕು ಎಂದು ಪ್ರಶ್ನಿಸಿದ ಶ್ರೀಕುಮಾರ್ ಅವರು, ಬಾಹ್ಯ ಸೌಂದರ್ಯವಲ್ಲ, ಆಂತರಿಕ ಸೌಂದರ್ಯವೇ ಮುಖ್ಯ ಎಂದು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. ಪರಿಸರ ಹಾನಿಯ ವಿಷಯದಲ್ಲಿ ಸುಗಂಧ ದ್ರವ್ಯಗಳು ಸೇರಿದಂತೆ ಸೌಂದರ್ಯವರ್ಧಕಗಳು ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ ಎಂದ ಅವರು, ದೊಡ್ಡವರಿಗಿಂತಲೂ ಮಕ್ಕಳು ಅತಿ ಶೀಘ್ರದಲ್ಲಿ ಕ್ಯಾನ್ಸರ್ನಂಥ ರೋಗಗಳಿಗೆ ತುತ್ತಾಗುತ್ತಿರುವುದಕ್ಕೆ ಇದೂ ಒಂದು ಕಾರಣ ಎನ್ನುವುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.
ಲಿಪ್‌ಸ್ಟಿಕ್ ಮತ್ತು ಅಂತಹುದೇ ಉತ್ಪನ್ನಗಳು ಮಕ್ಕಳಿಗೆ ನಿಜವಾದ ಆರೋಗ್ಯದ ಅಪಾಯವನ್ನುಂಟುಮಾಡುತ್ತವೆ. ಮಕ್ಕಳ ಚರ್ಮವು ವಯಸ್ಕರಿಗಿಂತ ಹೆಚ್ಚು ತೆಳ್ಳಗಿರುವುದರಿಂದ, ಈ ಉತ್ಪನ್ನಗಳಲ್ಲಿನ ರಾಸಾಯನಿಕಗಳು ದೇಹಕ್ಕೆ ಹೆಚ್ಚು ವೇಗವಾಗಿ ಹೀರಲ್ಪಡುತ್ತವೆ. ಅದನ್ನು ಹೆಚ್ಚಾಗಿ ಬಳಸಿದರೆ, ಅಲರ್ಜಿಗಳು, ಹಾರ್ಮೋನುಗಳ ಅಡ್ಡಿ, ಬೆಳವಣಿಗೆಯ ಸಮಸ್ಯೆಗಳು ಮತ್ತು ಹೆಚ್ಚಿದ ಕ್ಯಾನ್ಸರ್ ಅಪಾಯ ಬರುತ್ತದೆ ಎಂದು ಹೇಳಿದರು. ಅಷ್ಟಕ್ಕೂ ಶಾಲೆಗಳಲ್ಲಿ ಒಂದು ಹಂತದಲ್ಲಿ ಶಿಕ್ಷಕರು ಈ ಪಾಠ ಮಾಡಬಹುದು. ಆದರೆ ಖುದ್ದು ಶಿಕ್ಷಕಿಯರೇ ಈ ಕೃತಕ ಬಣ್ಣದ ಮೊರೆ ಹೋಗಿದ್ದರೆ ಮತ್ತು ಅಮ್ಮಂದಿರು ಇದರ ದಾಸರಾಗಿದ್ದರೆ ಮಕ್ಕಳಿಗೆ ಬುದ್ಧಿ ಹೇಳಿ ಏನು ಪ್ರಯೋಜನ ಎನ್ನುವುದು ಕೂಡ ಇದೇ ವೇಳೆ ದೊಡ್ಡ ಪ್ರಶ್ನೆಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.