ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ವಿವಿ ಅನುಷ್ಠಾನ ಯಾವಾಗ?

By Kannadaprabha News  |  First Published Oct 12, 2022, 11:32 AM IST
  • ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ವಿವಿ ಅನುಷ್ಠಾನ ಯಾವಾಗ?
  • ಘೋಷಣೆಗಿದ್ದ ಆಸಕ್ತಿ ನಂತರ ಕಾಣುತ್ತಿಲ್ಲ
  • ಎರಡನ್ನೂ ಸಿಎಂ ಅವರೇ ಘೋಷಣೆ ಮಾಡಿದರೂ ಕಾರ್ಯಗತವಾಗುತ್ತಿಲ್ಲ

ಕೊಪ್ಪಳ (ಅ.12) : ಈಗಾಗಲೇ ಮುಖ್ಯಮಂತ್ರಿಗಳು ಘೋಷಿಸಿರುವ ಈ ಭಾಗದ ಜನರು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಕೊಪ್ಪಳ ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯ ಹಾಗೂ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ವೇಗ ದೊರೆಯುವುದು ಯಾವಾಗ, ಕಾಮಗಾರಿ ಆರಂಭವಾಗಿ ಅವು ಅಸ್ತಿತ್ವಕ್ಕೆ ಬರುವುದು ಎಂದು?. ಇದು ಈ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜನರು ಕೇಳುತ್ತಿರುವ ಪ್ರಶ್ನೆ.

ಉತ್ತರ ಕನ್ನಡಕ್ಕೆ ಉತ್ಕೃಷ್ಟ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ಧ: ಸಚಿವ ಸುಧಾಕರ

Tap to resize

Latest Videos

undefined

ಭಾನಾಪುರ ಬಳಿ ದೇಶದ ಮೊದಲ ಆಟಿಕೆ ಕ್ಲಸ್ಟರ್‌ ಭೂಮಿ ಪೂಜೆಗೆ ಆಗಮಿಸಿದ್ದ ಆಗಿನ ಮುಖ್ಯಮಂತಿ ಬಿ.ಎಸ್‌. ಯಡಿಯೂರಪ್ಪ ಅವರು ಘೋಷಿಸಿದ್ದ ವಿಶ್ವವಿದ್ಯಾಲಯವನ್ನು ಈ ಬಾರಿಯ ಬಜೆಟ್‌ನಲ್ಲಿಯೂ ಘೋಷಣೆ ಮಾಡಲಾಗಿದೆ ಮತ್ತು ಸಚಿವ ಸಂಪುಟ ಸಭೆಯಲ್ಲೂ ಒಪ್ಪಿಗೆ ಪಡೆಯಲಾಗಿದೆ. ಆದರೆ, ಅನುಷ್ಠಾನಕ್ಕೆ ವೇಗ ಸಿಕ್ಕಿಲ್ಲ.

ಅಷ್ಟೇ ಅಲ್ಲ, ಇತ್ತೀಚೆಗೆ ಕೊಪ್ಪಳಕ್ಕೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು ‘ಕನ್ನಡಪ್ರಭ’ ಪ್ರಾರಂಭಿಸಿದ್ದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಅಭಿಯಾನಕ್ಕೆ ಸ್ಪಂದಿಸಿ ಘೋಷಣೆ ಮಾಡಿದ್ದರು. ಹೀಗೆ ಘೋಷಣೆಯಾದ ಮೇಲೆ ಅದು ಕಾರ್ಯಗತವಾಗುವ ದಿಸೆಯಲ್ಲಿ ಅಷ್ಟಾಗಿ ವೇಗದಿಂದ ಕ್ರಮವಾಗುತ್ತಿಲ್ಲ.

ಕೊಪ್ಪಳಕ್ಕೊಂದು ವಿಶ್ವವಿದ್ಯಾಲಯ ಘೋಷಿಸಿದ್ದರೂ ಸೂಕ್ತ ಜಾಗವನ್ನು ಗುರುತಿಸುವ ಕಾರ್ಯ ನಡೆಯುತ್ತಿಲ್ಲ. ತುರ್ತಾಗಿ ಸದ್ಯ ಯಾವುದಾದರೂ ಕಟ್ಟಡದಲ್ಲಿ ಪ್ರಾರಂಭಿಸುವ ಕುರಿತು ಸರ್ಕಾರ ಮುಂದಾಗುತ್ತಿಲ್ಲ. ಸಚಿವ ಸಂಪುಟದಲ್ಲಿ ಆದೇಶವಾದ ನಂತರ ಪುನಃ ಆ ಬಗ್ಗೆ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ರವಾನೆಯಾಗಿಲ್ಲ. ಅದು ಕೇವಲ ಘೋಷಣೆಯಾಗಿಯೇ ಉಳಿಯತೇ ಎನ್ನುವ ಮಾತು ಕೇಳಿಬರುತ್ತಿದೆ.

ಕೊಪ್ಪಳಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ ಬಳಿಕ ಅದಕ್ಕೆ ಬೇಕಾಗಿರುವ ಸುಮಾರು ನಾಲ್ಕಾರು ಎಕರೆ ಭೂಮಿಯ ಅಗತ್ಯವನ್ನು ಪರಿಗಣಿಸಿ, ಪರಿಶೀಲಿಸಲು ವೈದ್ಯಕೀಯ ಇಲಾಖೆಯಿಂದ ಪತ್ರವೊಂದು ಕಿಮ್ಸ್‌ ಕಾಲೇಜಿಗೆ ಬಂದಿದೆ. ಈಗಿರುವ ಕಿಮ್ಸ್‌ ಮೆಡಿಕಲ್‌ ಕಾಲೇಜು ಬಳಿಯೇ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಿಸುವ ಕುರಿತು ಚಿಂತನೆ ನಡೆದಿದೆಯಾದರೂ ವೇಗ ಪಡೆಯುತ್ತಿಲ್ಲ ಎನ್ನುವುದು ಸ್ಥಳೀಯರ ಅಸಮಾಧಾನ.

ಭೂಮಿ ಬೇಕು ಭೂಮಿ:

ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಅಗತ್ಯ ಜಾಗದ ಕೊರತೆ ಎದುರಾಗಿದೆ. ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಜಾಗವೇ ಇಲ್ಲದಂತಾಗಿದೆ. ಅಲ್ಲದೇ ಸರ್ಕಾರಿ ಪದವಿ ಕಾಲೇಜು, ಸರ್ಕಾರಿ ಮಹಿಳಾ ಕಾಲೇಜು, ವಿವಿ, ಸೂಪರ್‌ ಸ್ವೆಷಾಲಿಟಿ ಆಸ್ಪತ್ರೆ ಸೇರಿದಂತೆ ಸಾಲು ಸಾಲು ಯೋಜನೆಗಳಿಗೆ ಅಗತ್ಯ ಭೂಮಿಯೇ ಇಲ್ಲವಾಗಿದೆ. ಜಿಲ್ಲಾ ಕೇಂದ್ರದಲ್ಲಿ ಕಳೆದ ನಾಲ್ಕಾರು ವರ್ಷಗಳಿಂದ ನಡೆಯುತ್ತಿರುವ ಸ್ನಾತಕೋತ್ತರ ಕೇಂದ್ರಕ್ಕೂ ಜಾಗ ಇಲ್ಲದ್ದರಿಂದ ತಳಕಲ್‌ ಎಂಜಿನಿಯರಿಂಗ್‌ ಕಾಲೇಜಿಗೆ ಶಿಫ್‌್ಟಮಾಡಲಾಗಿದೆ.

ಈಗ ಕೊಪ್ಪಳದಲ್ಲಿ ‘ಸರ್ಕಾರಿ ಭೂಮಿ ಬೇಕು ಭೂಮಿ’ ಎನ್ನುವ ಕೂಗು ಕೇಳಿ ಬರುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಭವಿಷ್ಯ ಗಮನದಲ್ಲಿಟ್ಟುಕೊಂಡು ಬೆಳೆಯುತ್ತಿರುವ ಕೊಪ್ಪಳಕ್ಕೆ ಕನಿಷ್ಠ 500 ಎಕರೆ ಭೂಮಿಯನ್ನು ನಗರಕ್ಕೆ ಹೊಂದಿಕೊಂಡು ಸ್ವಾಧೀನಪಡಿಸಿಕೊಂಡು ಭೂಬ್ಯಾಂಕ್‌ ಮಾಡುವ ಅಗತ್ಯವಿದೆ.

ಕೆಕೆಆರ್‌ಡಿಬಿಯಲ್ಲಿ ಸಾಕಷ್ಟುಅನುದಾನ ಇದ್ದು, ವಾರ್ಷಿಕ ನೂರು ಎಕರೆ ಭೂಮಿ ಖರೀದಿಗೆ ಅದರಲ್ಲಿ ಅವಕಾಶ ಕಲ್ಪಿಸಬೇಕು ಮತ್ತು ಈ ಕುರಿತು ಘೋಷಣೆ ಮಾಡಬೇಕು ಎನ್ನುವ ಆಗ್ರಹ ಬಲವಾಗಿದೆ.

17 ವರ್ಷದ ಬಳಿಕ ರೈತರ ವಿರುದ್ಧ MSPL ಕಂಪನಿಗೆ ಗೆಲುವು

ಎರಡು ಅವಕಾಶಗಳು ಉಂಟು

1. ಕೊಪ್ಪಳಕ್ಕೆ ಹೊಂದಿಕೊಂಡು ಎಂಎಸ್‌ಪಿಎಲ್‌ ಕಂಪನಿಗೆ 2ನೇ ಹಂತದಲ್ಲಿ ಕೆಆರ್‌ಐಡಿಬಿಎಲ್‌ ವತಿಯಿಂದ ಸ್ವಾಧೀನ ಮಾಡಿಕೊಳ್ಳಲು ಗುರುತಿಸಿರುವ ಭೂಮಿ ಸುಮಾರು 950 ಎಕರೆ ಇದ್ದು, ಇದರ ಸ್ವಾಧೀನ ಪ್ರಕ್ರಿಯೆ ಆಗಿಲ್ಲ. ಈ ಭೂಮಿಯನ್ನಾದರೂ ಸ್ವಾಧೀನ ಮಾಡಿಕೊಳ್ಳಬಹುದು.

2. ಡಿಸಿ ಕಚೇರಿ ಹಿಂದೆ ಇರುವ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಸುಮಾರು 54 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ನಿವೇಶನ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈ ಭೂಮಿಯನ್ನಾದರೂ ವರ್ಗಾಯಿಸಿಕೊಂಡು, ಸರ್ಕಾರಿ ಇಲಾಖೆ ಮತ್ತು ಯೋಜನೆಗಳಿಗೆ ಕಾಯ್ದಿರಿಸಿದರೆ ಅನುಕೂಲವಾಗುತ್ತದೆ.

ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಭೂಮಿಯ ಕೊರತೆ ಇದ್ದು, ಭೂಬ್ಯಾಂಕ್‌ ಅನಿವಾರ್ಯವಾಗಿದೆ. ಈ ದಿಸೆಯಲ್ಲಿ ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ, ಭೂ ಸ್ವಾಧೀನಕ್ಕೆ ಅನುದಾನ ನೀಡಬೇಕಾಗಿದೆ.

ರಾಘವೇಂದ್ರ ಹಿಟ್ನಾಳ, ಶಾಸಕರು, ಕೊಪ್ಪಳ

ಈಗಾಗಲೇ ಕೊಪ್ಪಳಕ್ಕೆ ವಿಶ್ವವಿದ್ಯಾಲಯ ಮತ್ತು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಘೋಷಣೆಯಾಗಿದ್ದು, ಅವುಗಳ ಅನುಷ್ಠಾನ ವೇಗವಾಗಿ ಆಗಬೇಕಾಗಿದೆ. ಅಗತ್ಯ ಭೂಮಿ ಖರೀದಿಗೆ ಕಲ್ಯಾಣ ಕರ್ನಾಟಕ ಅನುದಾನದಲ್ಲಿ ವಿಶೇಷ ಅವಕಾಶ ನೀಡಬೇಕಾಗಿದೆ.

ಸಂಗಣ್ಣ ಕರಡಿ ಸಂಸದರು, ಕೊಪ್ಪಳ

click me!