
ಮಧುಮೇಹ ಆರೋಗ್ಯಕ್ಕೆ ಅದೆಷ್ಟು ಹಾನಿ ಮಾಡುತ್ತದೆ ಎನ್ನುವುದನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ, ಕೆಲವರು ಅನುಭವಿಸಿಯೂ ಇದ್ದೇವೆ. ಟೈಪ್ 1 ಮಧುಮೇಹವಾಗಲಿ, ಟೈಪ್ 2 ಮಧುಮೇಹವಾಗಲೀ, ಎಲ್ಲವೂ ಒಂದಲ್ಲ ಹಲವು ರೀತಿಯಲ್ಲಿ ಸಮಸ್ಯೆ ತಂದು ಒಡ್ಡುತ್ತವೆ. ಟೈಪ್ 2 ಮಧುಮೇಹವನ್ನಾದರೂ ಜೀವನಶೈಲಿಯನ್ನು ಸರಿಪಡಿಸಿಕೊಳ್ಳುವ ಮೂಲಕ, ಸರಳ, ಚಟುವಟಿಕೆಯುಕ್ತ ಜೀವನಶೈಲಿ ಅಭ್ಯಾಸ ಮಾಡಿಕೊಳ್ಳುವ ಮೂಲಕ ಸರಿಪಡಿಸಿಕೊಳ್ಳಬಹುದು. ಆದರೆ, ಟೈಪ್ 1 ಹಾಗಲ್ಲ, ಅದು ಆನುವಂಶಿಕವಾಗಿ ಬಂದಿರುತ್ತದೆ. ಆದರೆ, ಇವೆರಡಕ್ಕಿಂತಲೂ ಹೆಚ್ಚು ಗಂಭೀರವಾದ ಮಧುಮೇಹದ ಮತ್ತೊಂದು ಹಂತವಿದೆ, ಅದು ಟೈಪ್ 3 ಮಧುಮೇಹ! ಇದ್ಯಾವ ರೀತಿಯ ಮಧುವೇಹ, ಮತ್ತೆ ಹೊಸ ವಿಧಾನವೇನಾದರೂ ಆರಂಭವಾಯಿತೇ ಎನ್ನುವ ಗೊಂದಲ ಬೇಡ. ಟೈಪ್ 3 ಮಧುಮೇಹ ಉಳಿದೆರಡು ಮಧುಮೇಹಕ್ಕಿಂತ ಹೆಚ್ಚು ಸವಾಲು ಒಡ್ಡುತ್ತದೆ. ಏಕೆಂದರೆ, ಇದು ವಿವಿಧ ಕಾರಣಗಳಿಂದ ಪ್ಯಾಂಕ್ರಿಯಾಸ್ ಅಥವಾ ಮೇದೋಜ್ಜೀರಕ ಗ್ರಂಥಿಗೆ ಹಾನಿಯಾದಾಗ ಉಂಟಾಗುವ ಮಧುಮೇಹ. ಇದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆಯಲಿಲ್ಲವಾದರೆ ಭಾರೀ ಅನಾಹುತವಾಗುತ್ತದೆ. ಸಾಕಷ್ಟು ಜನರಲ್ಲಿ ಈ ಸಮಸ್ಯೆ ಜೀವವನ್ನೇ ಕಸಿದುಕೊಳ್ಳುವ ಮಟ್ಟಿಗೆ ತೀವ್ರವಾಗಿಬಿಡುತ್ತದೆ. ಹೀಗಾಗಿ, ಈ ಕುರಿತು ಅರಿತುಕೊಳ್ಳುವುದು ಉತ್ತಮ.
ಮಧುಮೇಹ (Diabetes) ಇಂದಿನ ಸಾಮಾನ್ಯ ಸಮಸ್ಯೆ. ನಾವು ಟೈಪ್ 1, ಟೈಪ್ 2 ಮಾದರಿಯ ಮಧುಮೇಹವನ್ನು ಸಾಮಾನ್ಯವಾಗಿ ಕಂಡಿರುತ್ತೇವೆ. ಆದರೆ, ಟೈಪ್ 3 ಮಧುಮೇಹ ಹಾಗಲ್ಲ. ಅದು ಪ್ಯಾಂಕ್ರಿಯಾಸ್ (Pancreas) ಹಾಳಾದಾಗ ಉಂಟಾಗುವ ಸಮಸ್ಯೆ. ಇದು ಬಹುಬೇಗ ಅರಿವಿಗೆ ಬರುವುದಿಲ್ಲ. ನಿಧಾನವಾಗಿ ಹೆಚ್ಚುತ್ತ ಏಕಾಏಕಿ ಜೀವಕ್ಕೇ ಕುತ್ತಾಗುತ್ತದೆ. ಪ್ಯಾಂಕ್ರಿಯಾಸ್ ನಮ್ಮ ದೇಹದ ಪ್ರಮುಖ ಅಂಗ. ಯಾವುದಾದರೂ ಸರ್ಜರಿ, ಟ್ಯೂಮರ್ (Tumor) ಅಥವಾ ಇನ್ನಿತರ ಹಲವಾರು ಕಾರಣದಿಂದ ಅನೇಕ ಬಾರಿ ಪ್ಯಾಂಕ್ರಿಯಾಸ್ ಗೆ ಹಾನಿಯಾಗಿರುತ್ತದೆ. ಆ ಸಮಯದಲ್ಲಿ ಇನ್ಸುಲಿನ್ (Insulin) ಸರಿಯಾಗಿ ಬಿಡುಗಡೆ ಆಗುವುದಿಲ್ಲ. ದೇಹಕ್ಕೆ ಅಗತ್ಯವಿರುಷ್ಟು ಇನ್ಸುಲಿನ್ ಉತ್ಪಾದನೆ ಆಗದೇ ಸಮಸ್ಯೆ ಆಗುತ್ತದೆ. ಇನ್ಸುಲಿನ್ ನಮ್ಮ ರಕ್ತದಲ್ಲಿರುವ ಸಕ್ಕರೆ (Sugar) ಅಂಶವನ್ನು ಕೋಶಗಳಿಗೆ ತಲುಪಿಸುವ ಹಾಗೂ ಈ ಮೂಲಕ ದೇಹಕ್ಕೆ ಅಗತ್ಯ ಶಕ್ತಿ ನೀಡುವ ಕೆಲಸ ಮಾಡುತ್ತದೆ. ಟೈಪ್ 3 ಮಧುಮೇಹಿಗಳಲ್ಲಿ ಪ್ಯಾಂಕ್ರಿಯಾಸ್ ಜೀರ್ಣಕ್ರಿಯೆಗೆ (Digestion) ಬೇಕಾದ ಅಗತ್ಯ ಎಂಜೈಮುಗಳನ್ನು ಸಹ ಉತ್ಪಾದನೆ ಮಾಡುವುದಿಲ್ಲ.
ಯೋಗ ಮಾತ್ರವಲ್ಲ ಮಂತ್ರ ಕೂಡ ಆರೋಗ್ಯದ ಮೇಲೆ ಮ್ಯಾಜಿಕ್ ಮಾಡುತ್ತೆ!
ಲಕ್ಷಣವೇನು?
ಅಸಲಿಗೆ, ಟೈಪ್ 3 ಮಧುಮೇಹ ಅಪರೂಪದ ಪ್ರಕರಣಗಳಲ್ಲಿ ಕಂಡುಬರುತ್ತದೆ. ಬಹಳಷ್ಟು ಪ್ರಕರಣಗಳಲ್ಲಿ ಇದರ ಲಕ್ಷಣವೇ ಗೋಚರಿಸುವುದಿಲ್ಲ. ಹೀಗಾಗಿ, ಸಮಯ ಮೀರಿದಾಗ ಚಿಕಿತ್ಸೆ (Treatment) ಕಷ್ಟವಾಗುತ್ತದೆ. ಆದರೂ ದೇಹದಲ್ಲಿ ಉಂಟಾಗುವ ಕೆಲವು ಬದಲಾವಣೆಗಳ ಆಧಾರದ ಮೇಲೆ ಪತ್ತೆ ಮಾಡಬಹುದು. ಏಕಾಏಕಿ ತೂಕ (Weight loss) ಭಾರೀ ಕಡಿಮೆ ಆಗುತ್ತ ಸಾಗಿದರೆ ತಕ್ಷಣ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹೊಟ್ಟೆಯಲ್ಲಿ ನೋವು (Pain), ಅತಿಯಾದ ಸುಸ್ತು (Fatigue), ಅತಿಯಾದ ಗ್ಯಾಸ್ಟ್ರಿಕ್ (Gastric), ಹೈಪೋಗ್ಲಿಸಿಮಿಯಾ, ಭೇದಿ ಕಂಡುಬರಬಹುದು.
ಕಾರಣವೇನು?
ಪ್ಯಾಂಕ್ರಿಯಾಸ್ ಗೆ ಸಂಬಂಧಿಸಿದ ಸಮಸ್ಯೆಗಳಿಂದ ಟೈಪ್ 3 ಮಧುಮೇಹ ಉಂಟಾಗುತ್ತದೆ. ಕ್ರಾನಿಕ್ ಪ್ಯಾಂಕ್ರಿಯಾಟಿಕ್ ನಿಂದ ಬಳಲುವ ಶೇ.80ರಷ್ಟು ಜನರಲ್ಲಿ ಇದು ಸಾಮಾನ್ಯ. ಪ್ಯಾಂಕ್ರಿಯಾಸ್ ಕ್ಯಾನ್ಸರ್ (Cancer), ಸಿಸ್ಟಿಕ್ ಫೈಬ್ರೊಸಿಸ್ ಸೇರಿದಂತೆ ಹಲವು ಕಾರಣಗಳನ್ನು ಗುರುತಿಸಲಾಗಿದೆ. ಹೀಗಾಗಿ, ಪ್ಯಾಂಕ್ರಿಯಾಸ್ ಅನ್ನು ಚೆನ್ನಾಗಿ ಇಟ್ಟುಕೊಳ್ಳುವತ್ತ ಗಮನ ನೀಡಬೇಕು.
ಶುಗರ್ ಇದ್ಯಾ ? ಚಿಂತೆ ಬಿಡಿ, ಅನ್ನದ ಬದಲು ಅವಲಕ್ಕಿ ತಿನ್ನಿ
ಚೆನ್ನಾಗಿ ಇಟ್ಕೊಳಿ
ಮೇದೋಜ್ಜೀರಕ ಗ್ರಂಥಿ ಆರೋಗ್ಯಪೂರ್ಣವಾಗಿರಬೇಕು, ಚೆನ್ನಾಗಿ ಕೆಲಸ ನಿರ್ವಹಿಸಬೇಕು ಎಂದಾದರೆ ಹೆಚ್ಚು ನೀರು (Water) ಕುಡಿಯಿರಿ. ಜಂಕ್ ಫುಡ್ (Junk Food) ಸೇವನೆ ಕಡಿಮೆ ಮಾಡಿ. ಮದ್ಯಪಾನ (Drinking) ಬಿಟ್ಟುಬಿಡಿ. ಆಸಿಡಿಟಿ (Acidity) ಮತ್ತು ಅಜೀರ್ಣ ಸಮಸ್ಯೆ ಇದ್ದರೆ ಅದನ್ನು ನಿಯಂತ್ರಿಸಿಕೊಳ್ಳಿ. ರಾತ್ರಿ ತಡವಾಗಿ ಆಹಾರ ಸೇವನೆ ಬೇಡ. ತೆಂಗಿನೆಣ್ಣೆ (Coconut Oil), ಆಲಿವ್ (Olive) ಎಣ್ಣೆ, ಮನೆಯಲ್ಲಿ ತಯಾರಿಸಿದ ತುಪ್ಪ (Ghee) ಹಾಗೂ ಬಟರ್ ಫ್ರೂಟ್ ಪ್ಯಾಂಕ್ರಿಯಾಸ್ ಆರೋಗ್ಯಕ್ಕೆ ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.