ಕಣ್ಣಿನ ಆರೋಗ್ಯ ಬಹಳ ಮುಖ್ಯ. ಸಣ್ಣ ಸಮಸ್ಯೆಯಾದ್ರೂ ಅಸ್ವಸ್ಥತೆಯನ್ನು ನಾವು ಎದುರಿಸ್ತೇವೆ. ಸಣ್ಣಪುಟ್ಟ ಕಣ್ಣಿನ ಸಮಸ್ಯೆಗೆ ಐ ಡ್ರಾಪ್ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಈ ಐ ಡ್ರಾಪ್ ಪರಿಣಾಮ ಬೇಗ ಆಗ್ಬೇಕೆಂದ್ರೆ ಕೆಲವೊಂದು ಟಿಪ್ಸ್ ಪಾಲನೆ ಮಾಡ್ಬೇಕು.
ಅನೇಕ ಕಣ್ಣಿನ ಸಮಸ್ಯೆಗೆ ಐ ಡ್ರಾಪ್ ಹಾಕುವಂತೆ ವೈದ್ಯರು ಸಲಹೆ ನೀಡ್ತಾರೆ. ಕಣ್ಣಿನ ಸೋಂಕು, ಕಣ್ಣಿನಲ್ಲಾಗುವ ಸಣ್ಣ ಗಾಯಗಳು ಅಥವಾ ಗ್ಲುಕೋಮಾದಂತಹ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಐ ಡ್ರಾಪ್ ಬಳಸಬೇಕಾಗುತ್ತದೆ. ಇದಲ್ಲದೆ ಒಣ ಕಣ್ಣಿನ ಸಮಸ್ಯೆ ಅಥವಾ ಕಣ್ಣು ಕೆಂಪಾದಾಗ್ಲೂ ವೈದ್ಯರು ನೀಡೋದು ಐ ಡ್ರಾಪ್. ಬಹುತೇಕ ಕಣ್ಣಿನ ಸಮಸ್ಯೆಗೆ ಐ ಡ್ರಾಪ್ ನಲ್ಲಿಯೇ ಪರಿಹಾರ ಸಿಗುತ್ತದೆ. ಐ ಡ್ರಾಪ್ ತಂದ್ರೆ ಆಗ್ಲಿಲ್ಲ, ಅದನ್ನು ಹೇಗೆ ಬಳಸಬೇಕು ಎನ್ನುವ ಬಗ್ಗೆ ಮಾಹಿತಿ ಇರಬೇಕು. ಅನೇಕರಿಗೆ ಕಣ್ಣಿನ ಡ್ರಾಪ್ ಬಳಕೆ ಹೇಗೆ ಎಂಬುದು ಸರಿಯಾಗಿ ತಿಳಿದಿರುವುದಿಲ್ಲ. ಐ ಡ್ರಾಪ್ ಸರಿಯಾಗಿ ಬಳಕೆ ಮಾಡಿದ್ರೆ ಕಣ್ಣು ಅದನ್ನು ಹೀರಿಕೊಳ್ಳಲು ಸುಲಭವಾಗುತ್ತದೆ. ಹಾಗೆಯೇ ಕಣ್ಣಿನ ಸಮಸ್ಯೆ ಬೇಗ ಗುಣವಾಗುತ್ತದೆ. ಕಣ್ಣಿಗೆ ಡ್ರಾಪ್ ಹಾಕುವ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕಾಗುತ್ತದೆ. ಹಾಗೆ ಡ್ರಾಪ್ ಹಾಕಿಕೊಳ್ಳಲು ನಿಮಗೆ ಸಮಸ್ಯೆ ಎನ್ನಿಸಿದ್ರೆ ನಿಮ್ಮ ಕುಟುಂಬದವರ ಸಹಾಯ ಪಡೆಯಬೇಕಾಗುತ್ತದೆ. ಇಂದು ನಾವು ಕಣ್ಣಿನ ಡ್ರಾಪ್ ಹೇಗೆ ಬಳಕೆ ಮಾಡ್ಬೇಕು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಐ ಡ್ರಾಪ್ (Eye Drop ) ಹಾಕುವ ಮೊದಲು ಇದು ತಿಳಿದಿರಿ :
1. ಮೊದಲನೆಯದಾಗಿ ನೀವು ಬೆನ್ನಿನ ಮೇಲೆ ಮಲಗಬೇಕು. ನಂತ್ರ ನಿಮ್ಮ ತಲೆಯನ್ನು ಸ್ವಲ್ಪ ಹಿಂದಕ್ಕೆ ಮಾಡ್ಬೇಕು. ಡ್ರಾಪ್ ಅಗತ್ಯವಿರುವ ಕಣ್ಣಿನ ಕೆಳ ರೆಪ್ಪೆಯನ್ನು ಕೈಗಳ ಸಹಾಯದಿಂದ ಕೆಳಕ್ಕೆ ಎಳೆಯಬೇಕು.
2. ಐ ಡ್ರಾಪ್ ಬಾಟಲಿ (Bottle) ಯನ್ನು ನಿಮ್ಮ ಕಣ್ಣಿನ ಹತ್ತಿರ ಇರಿಸಬೇಕು. ಡ್ರಾಪರ್ ತುದಿಯು ಕೆಳಮುಖವಾಗಿರಬೇಕು. ನಿಮ್ಮ ಹಣೆಯ ಮೇಲೆ ನಿಮ್ಮ ಮಣಿಕಟ್ಟನ್ನು ಇಡಬೇಕು. ಆಗ ನೀವು ಬಾಟಲಿ ಹಿಡಿದಿರುವ ಕೈಗೆ ವಿಶ್ರಾಂತಿ (rest) ಸಿಕ್ಕಂತಾಗುತ್ತದೆ.
3. ಈಗ ಬಾಟಲಿಯನ್ನು ನಿಧಾನವಾಗಿ ಒತ್ತಿ. ಆಗ ಕಣ್ಣಿನೊಳಗೆ ಹನಿ ಬೀಳುತ್ತದೆ.
4. ನಂತ್ರ ಕಣ್ಣನ್ನು ನಿಧಾನವಾಗಿ ಮುಚ್ಚಿ. ಮುಖವನ್ನು ನಿಧಾನವಾಗಿ ನೆಲದ ಕಡೆ ತಿರುಗಿಸಿ. ಈ ಸಮಯದಲ್ಲಿ ಕಣ್ಣು ಮಿಟುಕಿಸಬೇಡಿ. ಕಣ್ಣುಗುಡ್ಡೆಗಳನ್ನು ಚಲಿಸುವುದು ಮತ್ತು ಕಣ್ಣುರೆಪ್ಪೆಗಳನ್ನು ಬಿಗಿಯಾಗಿ ಮುಚ್ಚುವುದು ಮಾಡಬೇಡಿ
5. ಕಣ್ಣಿನಿಂದ ನೀರು ಅಥವಾ ದ್ರವ ಹೊರಗೆ ಬರ್ತಿದ್ದರೆ ನೀವು ಟಿಶ್ಯೂ ಸಹಾಯದಿಂದ ಅದನ್ನು ಒರೆಸಬೇಕು. ಶುದ್ಧ ಕಾಟನ್ ಬಟ್ಟೆಯನ್ನೂ ನೀವು ಬಳಸಬಹುದು.
6. ಅದೇ ಕಣ್ಣಿಗೆ ಎರಡನೇ ಡ್ರಾಪ್ ಹಾಕಬೇಕಾದರೆ ಒಂದೇ ಬಾರಿ ಎರಡೂ ಡ್ರಾಪ್ ಹಾಕಬಾರದು. ಒಂದು ಡ್ರಾಪ್ ಹಾಕಿ ಕನಿಷ್ಠ 5-10 ನಿಮಿಷಗಳ ನಂತ್ರ ಇನ್ನೊಂದು ಡ್ರಾಪ್ ಹಾಕ್ಬೇಕು.
7. ಬಾಟಲಿಯ ಲೇಬಲ್ ನಲ್ಲಿ ನೀಡಿರುವ ನಿರ್ದೇಶನವನ್ನು ನೀವು ಪಾಲನೆ ಮಾಡಬೇಕಾಗುತ್ತದೆ.
ಕಣ್ಣು ಕುಣಿಯೋದು ಶುಭ ಅಂತ ಬಿಡ್ಬೇಡಿ, ಅನಾರೋಗ್ಯವೂ ಆಗಿರಬಹುದು!
ಐ ಡ್ರಾಪ್ ಬಾಟಲ್ ಬಳಸುವಾಗ ಏನು ಮಾಡ್ಬೇಕು? :
ಐ ಡ್ರಾಪ್ ಮುಚ್ಚಳವನ್ನು ತೆರೆಯುವ ಮೊದಲು ಯಾವಾಗಲೂ ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಿ.
ಬಾಟಲಿಯನ್ನು ತೆರೆಯುವ ಮೊದಲು ಬಾಟಲಿಯ ಮೇಲಿನ ಮುಕ್ತಾಯ ದಿನಾಂಕವನ್ನು ಎಚ್ಚರಿಕೆಯಿಂದ ಓದಿ.
ಎರಡು ರೀತಿಯ ಡ್ರಾಪ್ ಬಳಸುತ್ತಿದ್ದರೆ, ವೈದ್ಯರ ಸಲಹೆ ಮೇರೆಗೆ ಮೊದಲು ಯಾವ ಡ್ರಾಪ್ ಬಳಕೆ ಮಾಡ್ಬೇಕು ಎಂಬುದನ್ನು ತಿಳಿಯಿರಿ. ವೈದ್ಯರ ಸಲಹೆಯಂತೆ ನಿಯಮದ ಪ್ರಕಾರ ಡ್ರಾಪ್ ಹಾಕಿಕೊಳ್ಳಿ.
ಐ ಡ್ರಾಪ್ ಹಾಗೂ ಕಣ್ಣಿನ ಮುಲಾಮು ಎರಡನ್ನೂ ಬಳಸುತ್ತಿದ್ದರೆ, ಮೊದಲು ಐಡ್ರಾಪ್ ಅನ್ನು ಬಳಸಿ. ಕನಿಷ್ಠ 10 ನಿಮಿಷಗಳ ನಂತರ ಮುಲಾಮುವನ್ನು ಅನ್ವಯಿಸಿ.
ಮಳೆಗಾಲದಲ್ಲಿ ಕಣ್ಣಿನ ಬಗ್ಗೆಯೂ ಇರಲಿ ಕಾಳಜಿ!
ಐ ಡ್ರಾಪ್ ಬಳಸುವಾಗ ಏನು ಮಾಡಬಾರದು? :
ಡ್ರಾಪ್ ನ ತುದಿಯನ್ನು ಸ್ಪರ್ಶಿಸಬೇಡಿ. ಮುಚ್ಚಳ ತೆಗೆದು ಇಡಬೇಡಿ. ನಿಮ್ಮ ಐ ಡ್ರಾಪ್ ಬೇರೆಯವರಿಗೆ ನೀಡಬೇಡಿ. ಸೀಲ್ ತೆಗೆದ ಐ ಡ್ರಾಪನ್ನು ಒಂದು ತಿಂಗಳು ಮಾತ್ರ ಬಳಸಿ.
ಐ ಡ್ರಾಪ್ ಬಳಸಿದ ನಂತ್ರ ನೋವು, ಉರಿ, ತುರಿಕೆ ಅಥವಾ ಬೇರೆ ಯಾವುದೇ ಅಡ್ಡಪರಿಣಾಮ ಕಾಣಿಸಿಕೊಂಡಲ್ಲಿ, 10 ನಿಮಿಷಕ್ಕಿಂತಲೂ ಹೆಚ್ಚು ಸಮಯ ಈ ಸಮಸ್ಯೆ ಇದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ.