ಎದೆಯುರಿ ಬಂದ್ರೆ ಗ್ಯಾಸ್ಟ್ರಿಕ್ ಅಂತಾ ಸುಮ್ಮನಾಗ್ತೇವೆ. ಮಸಾಲೆ ಪದಾರ್ಥ ತಿಂದಿದ್ದು ಹೆಚ್ಚಾಯ್ತು ಎಂದುಕೊಳ್ತೇವೆ. ಒಂದೋ ಎರಡೋ ದಿನ ಬಂದ್ರೆ ಓಕೆ. ಪ್ರತಿ ದಿನ ಈ ಉರಿ ಕಾಡ್ತಿದೆ ಎಂದಾದ್ರೆ ನಿರ್ಲಕ್ಷ್ಯ ಮಾಡ್ಬೇಡಿ.
ನಿತ್ಯದ ಊಟ ತಿಂಡಿಗಳಲ್ಲಿ ಕೊಂಚ ಏರುಪೇರಾದರೂ ಸಾಕು ಶರೀರದಲ್ಲಿ ಒಂದಲ್ಲ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬೆಳಿಗ್ಗೆ ಎದ್ದೊಡನೆ ವಿಪರೀತ ಖಾರ ಅಥವಾ ಮಸಾಲೆ ಪದಾರ್ಥಗಳನ್ನು ಸೇವಿಸಿದರೆ ಎದೆಯಲ್ಲಿ, ಹೊಟ್ಟೆಯಲ್ಲಿ ಉರಿ ಆರಂಭವಾಗುತ್ತದೆ. ಹಸಿದ ಹೊಟ್ಟೆಯಲ್ಲಿ ಟೀ ಕಾಫಿಗಳ ಸೇವನೆಯಿಂದ ಕೆಲವರಿಗೆ ಎಸಿಡಿಟಿ, ಪಿತ್ತ ಮುಂತಾದ ತೊಂದರೆಗಳು ಆರಂಭವಾಗುತ್ತವೆ. ಸುಲಭವಾಗಿ ಜೀರ್ಣವಾಗದೇ ಇರುವ ಆಹಾರವನ್ನು ಸೇವಿಸಿದಾಗ ಅಜೀರ್ಣದ ತೊಂದರೆ ಎದುರಾಗುತ್ತದೆ. ಈ ಎಲ್ಲ ಸಮಸ್ಯೆಗಳು ಕೂಡ ಪ್ರಾರಂಭದ ಹಂತದಲ್ಲಿ ನಮಗೆ ಸಣ್ಣ ಸಮಸ್ಯೆಯಂತೆ ಕಾಣಿಸಿದರೂ ನಂತರದಲ್ಲಿ ಇದನ್ನು ಶಮನಗೊಳಿಸುವುದು ಕಷ್ಟವಾಗುತ್ತದೆ. ಹಾಗಾಗಿ ಆರೋಗ್ಯದ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ತಕ್ಷಣವೇ ಪರಿಹರಿಸಿಕೊಳ್ಳಬೇಕು.
ಮನುಷ್ಯನ ಶರೀರದಲ್ಲಿ ಜೀರ್ಣಕ್ರಿಯೆ (Digestion) ಸರಿಯಾಗಿ ನಡೆಯದೇ ಇದ್ದಾಗಲೂ ಆರೋಗ್ಯ (Health) ದಲ್ಲಿ ಅನೇಕ ತೊಂದರೆಗಳು ಎದುರಾಗುತ್ತವೆ. ಅಂತಹುದೇ ಒಂದು ಸಮಸ್ಯೆ ಗೆರ್ಡ್ (Gerd) . ಗೆರ್ಡ್ ಜೀರ್ಣಕ್ರಿಯೆಗೆ ಸಂಬಂಧಿಸಿದ ಅಸ್ವಸ್ಥತೆಯಾಗಿದೆ. ಇದರ ಕುರಿತು ಕೆಲವು ಮಾಹಿತಿ ಇಲ್ಲಿದೆ.
WORLD HOMEOPATHY DAY : ಮಾತ್ರೆ ಒಂದೇ ರೀತಿ ಕಂಡ್ರೂ ಹೋಮಿಯೋಪತಿಯಲ್ಲಿ ನೀಡಲಾಗುತ್ತೆ ಬೇರೆ ಬೇರೆ ಔಷಧಿ
ಗೆರ್ಡ್ ಎಂದರೇನು? : ಗ್ಯಾಸ್ಟ್ರೋಸೊಫೇಜಿಲ್ ರಿಪ್ಲಕ್ಸ್ ಡಿಸೀಸ್ (GERD) ಒಂದು ಜೀರ್ಣಕ್ರಿಯೆಯ ಅಸ್ವಸ್ಥತೆಯಾಗಿದೆ. ನಮ್ಮ ಹೊಟ್ಟೆಯಲ್ಲಿರುವ ಆಸಿಡ್ ಅಂಶವು ಹಿಂತಿರುಗಿ ಅನ್ನನಾಳಕ್ಕೆ ಹೋಗುತ್ತದೆ. ಇದರಿಂದ ಅನ್ನನಾಳದಲ್ಲಿ ಉರಿಯ ಸಮಸ್ಯೆಯಾಗುತ್ತದೆ. ಗೆರ್ಡ್ ಮನುಷ್ಯ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಖಾಯಿಲೆಯಾಗಿದೆ. ಈ ತೊಂದರೆಯಿಂದ ಆಹಾರವು ಅನ್ನನಾಳದ ಮೂಲಕ ಹೊಟ್ಟೆಯನ್ನು ಸರಿಯಾಗಿ ತಲುಪುವುದಿಲ್ಲ.
ಗೆರ್ಡ್ ಸಮಸ್ಯೆಯಿಂದ ಎದೆಯುರಿ, ಹುಳಿ ತೇಗು, ಬ್ಲೋಟಿಂಗ್, ವಾಂತಿ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ಜೀರ್ಣಕ್ರಿಯೆಯಲ್ಲಿ ಅನ್ನನಾಳವು ಆಹಾರವನ್ನು ಹೊಟ್ಟೆಯೊಳಗೆ ಹೋಗಲು ಅನುವುಮಾಡಿಕೊಡುತ್ತದೆ ಹಾಗೂ ಆಮ್ಲವು ಅನ್ನನಾಳಕ್ಕೆ ಹಿಂತಿರುಗುವುದನ್ನು ತಡೆಯುತ್ತದೆ. ಅನ್ನನಾಳ ದುರ್ಬಲಗೊಂಡಾಗ ಈ ಕ್ರಿಯೆಗಳು ಸರಿಯಾಗಿ ನಡೆಯದೇ ಎದೆಯುರಿ ಮುಂತಾದ ಸಮಸ್ಯೆಗಳು ಆರಂಭವಾಗುತ್ತದೆ.
ಗೆರ್ಡ್ ಸಮಸ್ಯೆಗೆ ಕಾರಣವೇನು? : ಆಹಾರ ಪದ್ಧತಿಯಲ್ಲಿ ತಪ್ಪಾದಾಗ ಅಥವಾ ಕಳಪೆ ಜೀವನಶೈಲಿಯಿಂದಾಗಿ ಗೆರ್ಡ್ ರಿಪ್ಲೆಕ್ಸ್ ಉಂಟಾಗುವ ಸಾಧ್ಯತೆ ಇದೆ. ಚಾಕಲೇಟ್, ಕರಿದ ಪದಾರ್ಥ, ಮಸಾಲೆಯುಕ್ತ ಆಹಾರ, ಕಾಫಿ, ಟೀ, ಮದ್ಯಪಾನ, ಧೂಮಪಾನ ಮುಂತಾದವುಗಳಿಂದಲೂ ಅನ್ನನಾಳ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.
ಗೆರ್ಡ್ ಸಮಸ್ಯೆ ಯಾರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತೆ? : ಗೆರ್ಡ್ ಸಾಮಾನ್ಯವಾಗಿ ಬೊಜ್ಜಿನ ಸಮಸ್ಯೆಯಿರುವವರಲ್ಲಿ ಕಾಣಿಸುತ್ತದೆ. ಗರ್ಭಿಣಿಯರಿಗೆ, ಅಸ್ಥಮಾ ಮಾತ್ರೆಗಳನ್ನು ಪ್ರತಿನಿತ್ಯವೂ ಸೇವಿಸುವವರಿಗೆ, ಧೂಮಪಾನಿಗಳಿಗೆ, ಆಹಾರವನ್ನು ಅಗೆದು ತಿನ್ನದೇ ಇರುವವರಿಗೆ, ಹೆಚ್ಚು ಮಸಾಲೆ ಪದಾರ್ಥಗಳನ್ನು ಸೇವಿಸುವವರಿಗೆ ಈ ರೋಗ ಹೆಚ್ಚಾಗಿ ಕಾಣಿಸುತ್ತದೆ.
ಗೆರ್ಡ್ ರಿಫ್ಲಕ್ಸ್ ನ ಲಕ್ಷಣಗಳು :
• ಗಂಟಲು ಅಥವಾ ಎದೆಯಲ್ಲಿ ಉರಿ
• ಆತಂಕದ ಭಾವನೆ
• ಅಜೀರ್ಣ
• ಬ್ಲೋಟಿಂಗ್
• ವಾಕರಿಕೆ ಅಥವಾ ವಾಂತಿ
• ಹೊಟ್ಟೆ ನೋವು
• ತಲೆ ತಿರುಗುವಿಕೆ
• ಉಸಿರಾಟದ ತೊಂದರೆ
Health Tips : ಏನೋ ಆತಂಕ, ಪದೆ ಪದೇ ಲಟಿಕೆ ತೆಗೀತಾನೇ ಇರ್ತೀರಾ? ಇದು ಒಳ್ಳೇಯದಲ್ಲ!
ಗೆರ್ಡ್ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಏನಾಗುತ್ತೆ? :
ಅನ್ನನಾಳದ ಉರಿಯೂತ : ಈ ಸ್ಥಿತಿಯಲ್ಲಿ ಅನ್ನನಾಳ ಊದಿಕೊಳ್ಳುತ್ತೆ
ಅನ್ನನಾಳದ ಬಿಗಿತ : ಈ ಸ್ಥಿತಿಯಲ್ಲಿ ಆಹಾರದ ನಾಳ ತೆಳುವಾಗುತ್ತದೆ ಇದರಿಂದ ಆಹಾರ ನುಂಗುವುದು ಕಷ್ಟವಾಗುತ್ತದೆ.
ಗೆರ್ಡ್ ಸಮಸ್ಯೆ ಇರುವವರು ಉಸಿರಾಡಿದಾಗ ಹೊಟ್ಟೆಯಲ್ಲಿರುವ ಆಮ್ಲವು ಶ್ವಾಸಕೋಶವನ್ನು ತಲುಪುತ್ತದೆ. ಇದರಿಂದ ಎದೆಯಲ್ಲಿ ಬಿಗಿತ, ಅಸ್ತಮಾದಂತಹ ಸಮಸ್ಯೆಗಳು ಎದುರಾಗುತ್ತವೆ.
ಗೆರ್ಡ್ ಗೆ ಚಿಕಿತ್ಸೆ ಏನು? : ಗೆರ್ಡ್ ಪ್ರಾರಂಭಿಕ ಹಂತದಲ್ಲಿದ್ದಾಗ ಅದನ್ನು ಮಾತ್ರೆಗಳಿಂದ ಗುಣಪಡಿಸಬಹುದು. ಮಾತ್ರೆಗಳಿಂದ ವಾಸಿಯಾಗದೇ ಇದ್ದಲ್ಲಿ ಪ್ರೊಟಾನ್ ಪಂಪ್ ಇನ್ಹಿಬಿಟರ್ (ಪಿಪಿಐ) ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಹೊಟ್ಟೆಯಲ್ಲಿರುವ ಎಸಿಡ್ ಕಡಿಮೆಗೊಳಿಸಬಹುದು. ಇದರ ಹೊರತಾಗಿ H 2 ಬ್ಲಾಕರ್ಸ್ ನಿಂದ ಅಥವಾ ಎನ್ಟಾ ಎಸಿಡ್ ಸಹಾಯದಿಂದ ಎಸಿಡ್ ಉತ್ಪನ್ನವಾಗುವುದನ್ನು ಕಡಿಮೆಗೊಳಿಸಲಾಗುತ್ತದೆ.