Empty Calories: ಬಾಯಿಗಷ್ಟೇ ರುಚಿ..ದೇಹಕ್ಕೆ ಹಿಡಿಸದ ಆಹಾರಗಳಿವು..!

By Suvarna NewsFirst Published Dec 14, 2021, 2:06 PM IST
Highlights

ಸುಮ್ನೆ ಕೂತಿದ್ದಾಗ, ಬೋರ್ ಅನಿಸಿದಾಗ ಪಿಜ್ಜಾ (Pizza), ಬರ್ಗರ್ (Burger) ಆರ್ಡರ್ ಮಾಡಿ ತಿನ್ನೋದು ಅಥವಾ ಪ್ಯಾಕೆಟ್ ಫುಡ್ ತಂದು ತಿನ್ತಾ ಕೂರೋದು ಈಗಿನ ಜನರೇಷನ್‌ (Generation)ನ ಅಭ್ಯಾಸ. ಆದರೆ ನಿಮಗೆ ಗೊತ್ತಾ, ಬಾಯಿಗೆ ವ್ಹಾವ್ ಏನ್ ಟೇಸ್ಟ್, ಯಮ್ಮಿಯಾಗಿದೆ ಅಂತ ಅನಿಸೋ ಈ ಫುಡ್‌ (Food)ಗಳು ಆರೋಗ್ಯಕ್ಕೆ ಸಿಕ್ಕಾಪಟ್ಟೆ ಡೇಂಜರ್..ಎಂಪ್ಟೀ ಕ್ಯಾಲೊರೀಸ್ ಅನ್ನೋ ಈ ಫುಡ್‌ ಯಾವುದೆಲ್ಲಾ..?

ಇವತ್ತಿನ ದಿನಗಳಲ್ಲಿ ಮನುಷ್ಯನ ಹಲವು ಆರೋಗ್ಯ (Health) ಸಮಸ್ಯೆಗಳಿಗೂ ಕಾರಣವಾಗಿರುವುದು ಆಧುನಿಕ ಜೀವನಶೈಲಿ. ಕುಳಿತಲ್ಲಿಯೇ ಕುಳಿತು ಮಾಡುವ ಕೆಲಸ, ಜಂಕ್ ಫುಡ್ (Junk Food) ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿಯೇ ತೂಕ ಹೆಚ್ಚಳ, ಬೊಜ್ಜು ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ತೂಕ ಹೆಚ್ಚಾಗುವುದು ಈಗಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿ ಹೋಗಿದೆ. ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿರುವುದು, ಒತ್ತಡ, ಆತಂಕಗಳ ಜೀವನ ಇದಕ್ಕೆ ಮುಖ್ಯ ಕಾರಣವಾಗಿದೆ. ಹೀಗಾಗಿಯೇ ನಾವು ತಿನ್ನುವ ಆಹಾರದ ಬಗ್ಗೆ ಗಮನಹರಿಸಬೇಕಾದುದು ಅತೀ ಅಗತ್ಯ. 

ಸುಮ್ಮನೆ ಕುಳಿತಿದ್ದಾಗ, ಕೆಲಸ ಮಾಡುವಾಗ, ಆಲಸ್ಯ ಎನಿಸಿದಾಗ ಹಲವರು ರೆಡಿಮೇಡ್ (Readymade) ಆಗಿ ಸಿಗುವ ಪ್ಯಾಕೆಟ್ ಫುಡ್‌ಗಳನ್ನು ಸೇವಿಸುತ್ತಾರೆ. ಆದರೆ ಈ ರೀತಿ ತಿನ್ನುವ ಫುಡ್‌ (Food)ಗಳಿಂದ ಬಾಯಿಗೆ ರುಚಿಯಾಗುತ್ತದೆಯಷ್ಟೇ, ಆರೋಗ್ಯಕ್ಕೆ ಯಾವುದೇ ಪ್ರೊಟೀನ್, ಪೋಷಕಾಂಶಗಳು ಸಿಗುವುದಿಲ್ಲ. ನಿರ್ಧಿಷ್ಟವಾಗಿ ಪೋಷಕಾಂಶಗಳನ್ನು ಹೊಂದಿರದೆ. ಬಾಯಿಗೆ ಮಾತ್ರ ರುಚಿಸುವ ಆದರೆ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುವ ಇಂಥಹಾ ಆಹಾರಗಳನ್ನು ಮತ್ತು ಪಾನಿಯಗಳನ್ನು ಖಾಲಿ ಕ್ಯಾಲೊರಿ ಎಂದು ಹೇಳುತ್ತಾರೆ. ಇವುಗಳು ಮುಖ್ಯವಾಗಿ ಹೆಚ್ಚಿನ ಸಕ್ಕರೆ, ಕೊಬ್ಬು ಅಥವಾ ಅಲ್ಕೋಹಾಲ್ (Alcohol ) ಅಂಶವನ್ನು ಹೊಂದಿರುವ ಆಹಾರ ಮತ್ತು ಪಾನೀಯಗಳಾಗಿವೆ. ಆದರೆ ಇದು ಶೂನ್ಯ ಪೌಷ್ಠಿಕಾಂಶವನ್ನು ಹೊಂದಿರುತ್ತದೆ. 

30 ನಿಮಿಷದಲ್ಲಿ 300 ಕ್ಯಾಲೊರಿ ಬರ್ನ್ ಮಾಡಿ: ಹೇಗೆ ಅನ್ನೋದು ನೋಡಿ

ಯಾವುದೇ ರೀತಿಯ ಆಹಾರವನ್ನು ಅತಿಯಾಗಿ ತಿನ್ನುವುದು, ಸಹಜವಾಗಿ ಮುಂದಿನ ದಿನಗಳಲ್ಲಿ ಅನಾರೋಗ್ಯಕರಕ್ಕೆ ಕಾರಣವಾಗಬಹುದು. ಅದಲ್ಲೂ ಯಾವುದೇ ಆರೋಗ್ಯ ಪ್ರಯೋಜನಗಳನ್ನು ಒದಗಿಸದ ಆಹಾರವನ್ನು ಅತಿಯಾಗಿ ತಿನ್ನುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು.

ಸಂಶೋಧನೆಯೊಂದರ ಪ್ರಕಾರ ಪುರುಷರು ದಿನಕ್ಕೆ ಸರಾಸರಿ 923 ಖಾಲಿ ಕ್ಯಾಲೊರಿ (Calorie)ಗಳನ್ನು ತಿನ್ನುತ್ತಾರೆ ಎಂದು ತಿಳಿದುಬಂದಿದೆ. ಮಹಿಳೆ (Woman)ಯರ ದಿನವೊಂದಕ್ಕೆ ಖಾಲಿ ಕ್ಯಾಲೊರಿಗಳ ಸರಾಸರಿ ಸೇವನೆಯು ದಿನಕ್ಕೆ 624 ಕ್ಯಾಲೊರಿಗಳು ಎಂದು ಹೇಳಲಾಗುತ್ತದೆ. ಈ ಆಹಾರಗಳ ನಿಯಮಿತ ಸೇವನೆಯು ಹಾರ್ಮೋನ್ ಅಸ್ವಸ್ಥತೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಖಾಲಿ ಕ್ಯಾಲೊರಿಗಳನ್ನು ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಳವಾಗುತ್ತದೆ. ಮಾತ್ರವಲ್ಲದೆ ಉರಿಯೂತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಮಧುಮೇಹ ಮತ್ತು ಹೃದ್ರೋಗದಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು.

ಸಿದ್ಧವಾಗಿ ಸಿಗುವ ಪ್ಯಾಕೆಟ್ ಫುಡ್‌ಗಳು ಖಾಲಿ ಕ್ಯಾಲೊರಿಗಳನ್ನು ಹೊಂದಿರುತ್ತವೆ. ಇದು ದೇಹಕ್ಕೆ ಅನಗತ್ಯವಾದ ಕೊಬ್ಬು, ಹೆಚ್ಚು ಸಕ್ಕರೆಯ ಪ್ರಮಾಣವನ್ನು ಸೇರಿಸುತ್ತದೆ. ಇಂಥಹಾ ಆಹಾರದ ಸೇವನೆಯೇ ತೂಕ ಹೆಚ್ಚಾಗಲು ಮತ್ತು ಪೌಷ್ಟಿಕಾಂಶದ ಕೊರತೆಗೆ ಕಾರಣವಾಗುತ್ತದೆ. ಹೀಗಾಗಿ ಖಾಲಿ ಕ್ಯಾಲೊರಿಯ ಆಹಾರವನ್ನು ಸೇವಿಸುವ ಬದಲು ಆರೋಗ್ಯಯುತ ಆಹಾರವನ್ನು ತಿನ್ನುವ ಅಭ್ಯಾಸವನ್ನು ರೂಢಿ ಮಾಡಬೇಕಿದೆ.

ಅಕ್ಕಿ ಸೇವಿಸಿಯೂ ಕ್ಯಾಲೊರಿ ಕಂಟ್ರೋಲ್ ಮಾಡುವುದು ಹೇಗೆ?

ಕಾರ್ಬೋಹೈಡ್ರೇಟ್ ಆಧಾರಿತ ಸಿಹಿತಿಂಡಿಗಳಾದ ಕೇಕ್‌ಗಳು, ಪೇಸ್ಟ್ರಿಗಳು, ಸೋಡಾ, ಪಾನೀಯಗಳು, ಹಣ್ಣಿನ ರಸಗಳು ಸೇರಿದಂತೆ ಸಕ್ಕರೆ ಪಾನೀಯಗಳು ಇಂಥಹಾ ಖಾಲಿ ಕ್ಯಾಲೋರಿಗಳು. ಕ್ಯಾಂಡಿ ಬಾರ್‌ಗಳು, ಚಾಕೊಲೇಟ್ ಬಾರ್‌ಗಳು, ಮಿಠಾಯಿಗಳು, ಮಾಂಸ, ಐಸ್ ಕ್ರೀಂ, ಕೆಚಪ್ ಮೊದಲಾದವು ಸಹ ಈ ರೀತಿಯ ಆಹಾರಗಳಾಗಿವೆ. ಬರ್ಗರ್, ಚಿಪ್ಸ್, ಫ್ರೆಂಚ್ ಫ್ರೈಸ್, ಪಿಜ್ಜಾಗಳಂತಹ ಜಂಕ್ ಫುಡ್, ಅಲ್ಕೋಹಾಲ್ ಆಧಾರಿತ ಪಾನೀಯಗಳು ಸಹ ಇದೇ ಸಾಲಿಗೆ ಸೇರುತ್ತದೆ. 

ಆರೋಗ್ಯಕರ ಪರ್ಯಾಯಗಳೊಂದಿಗೆ ಅನಾರೋಗ್ಯಕರ ಆಹಾರ ಪದಾರ್ಥಗಳನ್ನು ಸುಲಭವಾಗಿ ಬದಲಾವಣೆ ಮಾಡಿಕೊಳ್ಳಬಹುದು. ಸಕ್ಕರೆ ಹಾಕಿದ ಮೊಸರನ್ನು ಸೇವಿಸುವ ಬದಲು ಸಾದಾ ಮೊಸರನ್ನು ಸೇವಿಸಿ. ಫ್ರೈಡ್ ಚಿಕನ್ ಬದಲಿಗೆ ನೀವು ಗ್ರಿಲ್ಡ್ ಅಥವಾ ಬೇಯಿಸಿದ ಚಿಕನ್ ಸೇವಿಸಬಹುದು. ತಾಜಾ ಹಣ್ಣುಗಳು, ತರಕಾರಿಗಳು, ಸೊಪ್ಪುಗಳು, ಧಾನ್ಯಗಳು, ದ್ವಿದಳ ಧಾನ್ಯಗಳ ಸೇವನೆ ಸಹ ಆರೋಗ್ಯಕ್ಕೆ ಉತ್ತಮವಾಗಿದೆ.

click me!