Health Tips : ನಿರಂತರವಾಗಿ ಕಾಲು ಅಲುಗಾಡ್ತಿರುತ್ತಾ? ಇದೊಂದು ಖಾಯಿಲೆ

By Suvarna News  |  First Published Mar 12, 2024, 2:14 PM IST

ನಮ್ಮ ದೇಹದಲ್ಲಿ  ವಿಟಮಿನ್ಸ್ ಅಗತ್ಯವಿದೆ. ಒಂದು ವಿಟಮಿನ್ ಹೆಚ್ಚು ಕಮ್ಮಿ ಆದ್ರೆ ಆರೋಗ್ಯ ಹದಗೆಡುತ್ತದೆ. ಈ ನಾವು ಹೇಳಲು ಹೊರಟಿರುವ ಖಾಯಿಲೆ ಕೂಡ ವಿಟಮಿನ್ ಜೊತೆ ನಿಕಟ ಸಂಬಂಧ ಹೊಂದಿದೆ.  


ನಮ್ಮ ಶರೀರ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ವಿಟಿಮಿನ್ ಗಳು ಬೇಕು. ದೇಹಕ್ಕೆ ಯಾವುದೇ ಒಂದು ವಿಟಮಿನ್ ಕೊರತೆ ಉಂಟಾದರೂ ಅದರಿಂದ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಕಲಬೆರಕೆ ಆಹಾರ ಹಾಗೂ ರಾಸಾಯನಿಕ ಮಿಶ್ರಿತ ಆಹಾರಗಳಿಂದ ಇಂದು ಅನೇಕರು ವಿಟಮಿನ್ ಕೊರತೆಯನ್ನು ಅನುಭವಿಸುತ್ತಿದ್ದಾರೆ.

ವಿಟಮಿನ್ ಕೊರತೆಯಿಂದ ಉಂಟಾಗುವ ಸಮಸ್ಯೆಗಳಲ್ಲಿ ರೆಸ್ಟ್ ಲೆಸ್ ಲೆಗ್ ಸಿಂಡ್ರೋಮ್ (RLS) ಕೂಡ ಒಂದು. ಈ ತೊಂದರೆ ಉಂಟಾದವರಿಗೆ ಕಾಲುಗಳಲ್ಲಿ ತೀವ್ರವಾದ ಬಿಗಿತ, ಸೆಳೆತ, ನೋವು ಕಾಣಿಸಿಕೊಳ್ಳುತ್ತದೆ. ನಮ್ಮ ಕಲ್ಪನೆಗೂ ಬರದೇ ಇರುವ ರೀತಿಯಲ್ಲಿ ನಮ್ಮ ಕಾಲುಗಳು ಅಲುಗಾಡುತ್ತವೆ. ತಜ್ಞರು ಇದನ್ನು ರೆಸ್ಟ್ ಲೆಸ್ ಸಿಂಡ್ರೋಮ್ ಎನ್ನುತ್ತಾರೆ. ಆರ್ ಎಲ್ ಎಸ್ ಒಂದು ರೀತಿಯ ನರ ವೈಜ್ಞಾನಿಕ ಸ್ಥಿತಿಯಾಗಿದ್ದು, ಕಾಲುಗಳಿಗೆ ಅಹಿತಕರ ಸಂವೇದನೆಯನ್ನು ಉಂಟುಮಾಡುತ್ತದೆ. ಈ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ರಾತ್ರಿಯ ವೇಳೆ ಸರಿಯಾಗಿ ನಿದ್ರೆ ಮಾಡಲೂ ಆಗುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ.

Latest Videos

ಔಷಧಿ ಪ್ಯಾಕೆಟ್‌ಗಳ ಮೇಲಿನ ಕೆಂಪು ಪಟ್ಟಿ ಅರ್ಥ ವಿವರಿಸಿದ ಆರೋಗ್ಯ ಸಚಿವಾಲಯ

ರೆಸ್ಟ್ ಲೆಸ್ ಲೆಗ್ ಸಿಂಡ್ರೋಮ್ (Restless Legs Syndrome)  ಗೆ ಕಾರಣ ಮತ್ತು ಪರಿಹಾರಗಳು : ರೆಸ್ಟ್ ಲೆಸ್ ಲೆಗ್ ಸಿಂಡ್ರೋಮ್ ಗೆ ಯಾವುದೇ ರೀತಿಯ ಚಿಕಿತ್ಸೆ (Treatment) ಇಲ್ಲ. ಈ ಸಮಸ್ಯೆಯಿಂದ ದೂರವಿರಲು ನಾವು ನಮ್ಮ ಶರೀರದಲ್ಲಿ ವಿಟಮಿನ್ ಗಳ ಕೊರತೆ ಆಗದಂತೆ ಎಚ್ಚರ ವಹಿಸಬೇಕು ಎಂದು ವೈದ್ಯರು ಹೇಳುತ್ತಾರೆ. ವಿಟಮಿನ್ ಬಿ, ಸಿ, ಡಿ ಮತ್ತು ಇ ಗಳ ಕೊರತೆಯಿಂದ ರೆಸ್ಟ್ ಲೆಸ್ ಲೆಗ್ ಸಿಂಡ್ರೋಮ್ ಉಂಟಾಗುತ್ತದೆ.

ವಿಟಮಿನ್ ಬಿ ಕೊರತೆ : ಕೆಲವು ಅಧ್ಯಯನಗಳ ಪ್ರಕಾರ, ನಮ್ಮ ಶರೀರದಲ್ಲಿ ವಿಟಮಿನ್ ಬಿ12 ಕಡಿಮೆಯಾದಾಗ ಆರ್ ಎಲ್ ಎಸ್ ಉಂಟಾಗುತ್ತದೆ. ವಿಟಮಿನ್ ಬಿ6 ಕೊರತೆಯೂ ಕೆಲವು ರೋಗಗಳಿಗೆ ಕಾರಣವಾಗುತ್ತದೆ. ಮೊಟ್ಟೆ, ಮೀನು, ಹಾಲು ಮುಂತಾದ ಆಹಾರಗಳನ್ನು ಸೇವಿಸುವುದರ ಮೂಲಕ ವಿಟಮಿನ್ ಬಿ ಯನ್ನು ಹೆಚ್ಚಿಸಿಕೊಳ್ಳಬಹುದು. ಅತಿಯಾದ ಅಥವಾ ಮಿತಿಮೀರಿದ ವಿಟಮಿನ್ ಸೇವನೆ ಕೂಡ ತೀವ್ರವಾದ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ವಿಟಮಿನ್ ಡಿ ಕೊರತೆ : ವಿಟಮಿನ್ ಡಿ ಕೊರತೆಯು ಕಡಿಮೆ ಮಟ್ಟದ ಡೋಪಮೈನ್ ಗೆ ಕಾರಣವಾಗುತ್ತದೆ. ಮೆದುಳಿನಲ್ಲಿನ ಡೋಪಮೈನ್ ರಾಸಾಯನಿಕದ ಕೊರತೆಯು ಆಯಾಸ, ಕಾಲುಗಳಲ್ಲಿ ಸೆಳೆತವನ್ನು ಉಂಟುಮಾಡುತ್ತದೆ. ಇದರಿಂದ ಆರ್ ಎಲ್ ಎಸ್ ಸಮಸ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಅಸಹಜ ಅಥವಾ ಸ್ನಾಯುಗಳ ಅನೈಚ್ಛಿಕ ಚಲನೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ನೀವು ಆಹಾರದಲ್ಲಿ ವಿಟಮಿನ್ ಡಿ ಯನ್ನು ಸೇರಿಸಿಕೊಳ್ಳಬೇಕು.

ಅಪ್ಪಿ ತಪ್ಪಿಯೂ ಲಿಪ್ ಸ್ಟಿಕ್ ಈ ರೀತಿ ಬಳಕೆ ಮಾಡಲೇಬೇಡಿ

ವಿಟಮಿನ್ ಸಿ ಮತ್ತು ಇ :  ದೀರ್ಘಕಾಲದ ಮೂತ್ರಪಿಂಡದ ಖಾಯಿಲೆಯನ್ನು ಹೊಂದಿರುವವರಿಗೆ ರೆಸ್ಟ್ ಲೆಸ್ ಲೆಗ್ ಸಿಂಡ್ರೋಮ್ ಅಪಾಯ ಕಾಡಬಹುದು. ವಿಟಮಿನ್ ಸಿ ಮತ್ತು ಇ ಯುಕ್ತ ಆಹಾರ ಸೇವನೆಯಿಂದ ಆರ್ ಎಲ್ ಎಸ್ ಸಮಸ್ಯೆಯಿಂದ ದೂರ ಇರಬಹುದು. ಈ ವಿಟಮಿನ್ ಗಳು ಕೆಲವು ರೋಗಲಕ್ಷಣಗಳನ್ನು ದೂರ ಮಾಡುತ್ತವೆ ಹಾಗೂ ಜೀವಕೋಶಗಳು ಹಾನಿಗೊಳಗಾಗುವುದನ್ನು ತಪ್ಪಿಸುತ್ತವೆ. ವಿಟಮಿನ್ ಸಿ ಮತ್ತು ಇ ಸೇವನೆಯಿಂದ ವಾಕರಿಕೆ, ಅತಿಸಾರ, ಹೊಟ್ಟೆ ಸೆಳೆತ, ರಕ್ತಸ್ರಾವ, ಪ್ರಾಸ್ಟೇಟ್ ಕ್ಯಾನ್ಸರ್ ಮುಂತಾದ ಅಡ್ಡಪರಿಣಾಮಗಳು ಕೂಡ ಉಂಟಾಗಬಹುದು. ವಿಟಮಿನ್ ಸಿ ಹಾಗೂ ಇ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಕಿಮೋಥೆರಪಿಗಳಂತಹ ಚಿಕಿತ್ಸೆಗಳ ಪರಿಣಾಮಗಳನ್ನು ಕೂಡ ಕಡಿಮೆ ಮಾಡುತ್ತದೆ. 

ವಿಟಮಿನ್ ಯುಕ್ತ ಆಹಾರಗಳ ಸೇವನೆಯ ಹೊರತಾಗಿ ಸಾಸಿವೆ ಎಣ್ಣೆ ಲೇಪನ, ಆಕ್ಯುಪ್ರೆಶರ್ ಅಥವಾ ಆಯುರ್ವೇದಿಕ್ ಚಿಕಿತ್ಸೆಗಳು ರೆಸ್ಟ್ ಲೆಸ್ ಲೆಗ್ ಸಿಂಡ್ರೋಮ್ ಗೆ ಪರಿಹಾರವಾಗಿದೆ.

click me!