
ಬೇಸಿಗೆ ಎಂದರೆ ಏನಾದರೂ ಕುಡಿಯುತ್ತಲೇ ಇರೋಣ ಎನಿಸುತ್ತದೆ. ಹೀಗಾದಾಗ ಬಹುತೇಕರು ತಣ್ಣನೆಯ ರೆಡಿ ಡ್ರಿಂಕ್ಸ್ ಮೊರೆ ಹೋಗುವುದೇ ಹೆಚ್ಚು. ನಂತರದಲ್ಲಿ ಸಿಕ್ಕಾಪಟ್ಟೆ ಶುಗರ್ ಹೊಟ್ಟೆಗೆ ಹೋಯಿತಲ್ಲಾ ಎಂದು ಕೊರಗುವಂತಾಗುತ್ತದೆ. ಈ ಅನಾರೋಗ್ಯಕಾರಿ ಡ್ರಿಂಕ್‌ಗಳನ್ನು ದೂರವಿಟ್ಟು ಹಣ್ಣು ಹಾಗೂ ತರಕಾರಿ ಜ್ಯೂಸ್‌ಗಳನ್ನು ಮನೆಯಲ್ಲೇ ಮಾಡಿ ಕುಡಿಯುವ ಅಭ್ಯಾಸ ಒಳ್ಳೆಯದು. ಆರೋಗ್ಯ ಹಾಗೂ ಸೌಂದರ್ಯ ಎರಡೂ ದೃಷ್ಟಿಯಿಂದ ಡಯಟ್‌ನಲ್ಲಿ ತರಕಾರಿಗಳಿಗೆ ಹೆಚ್ಚು ಹೆಚ್ಚು ಸ್ಥಾನ ನೀಡಿ.
ಅದರಲ್ಲೂ ವೈರಸ್ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು, ಫಿಟ್ ಆಗಿರುವುದು ಅತ್ಯಗತ್ಯವಾಗಿರುವುದರಿಂದ ಉತ್ತಮ ಆಹಾರ ನಮ್ಮ ಜೀವನದ ಭಾಗವಾಗಬೇಕು. ಒಂದು ದೊಡ್ಡ ಲೋಟದ ತರಕಾರಿ ಜ್ಯೂಸ್ ಸಾಕು, ಹೊಟ್ಟೆ ತುಂಬಿಸಲು, ಆ ಸಮಯದ ಅಗತ್ಯ ಪೋಷಕಸತ್ವಗಳನ್ನು ದೇಹಕ್ಕೆ ಪೂರೈಸಲು. ಸಾಮಾನ್ಯವಾಗಿ ತರಕಾರಿಗಳನ್ನು ಬೇಯಿಸುವುದರಿಂದ ಅದರ ಪೋಷಕಾಂಶಗಳು ನಷ್ಟವಾಗುತ್ತವೆ. ಜ್ಯೂಸ್ ಮಾಡಿ ಕುಡಿದಾಗ ಈ ನಷ್ಟ ತಪ್ಪಿಸಬಹುದು. ಹಾಗಾಗಿ ಇಲ್ಲಿವೆ ಕೆಲ ತರಕಾರಿ ಜ್ಯೂಸ್‌ಗಳು ಹಾಗೂ ಅವುಗಳ ಆರೋಗ್ಯ ಲಾಭಗಳು.
ಚೀನೀಕಾಯಿ ಜ್ಯೂಸ್
ಇದನ್ನು ನೀವು ಕೇಳದಿರಬಹುದು. ಆದರೆ, ಈ ತರಕಾರಿಯ ಸಿಹಿಯಾದ ಜ್ಯೂಸ್‌ನ ಆರೋಗ್ಯ ಲಾಭಗಳನ್ನು ಕೇಳಿದರೆ, ನೀವಿದರೊಂದಿಗೆ ಪ್ರೀತಿಯಲ್ಲಿ ಬೀಳುವುದರಲ್ಲಿ ಅನುಮಾನವಿಲ್ಲ, ವಿಟಮಿನ್ ಬಿ1, ಬಿ2, ಬಿ6, ಡಿ, ಸಿ, ಇ ಹಾಗೂ ಮಿನರಲ್‌ಗಳಾದ ಕಾಪರ್, ಮೆಗ್ನೀಶಿಯಂ, ಐರನ್ ಹಾಗೂ ಫಾಸ್ಫರಸ್ ಇದರಲ್ಲಿ ಹೇರಳವಾಗಿವೆ. ಹಾಗಾಗಿ, ವಾರಕ್ಕೆರಡು ದಿನ ಚೀನೀಕಾಯಿಯ ಜ್ಯೂಸ್ ಮಾಡಿ ಕುಡಿಯುವ ಅಭ್ಯಾಸ ಒಳಿತು. ರುಚಿ ಹೆಚ್ಚಿಸಲು ಸ್ವಲ್ಪ ಜೇನು, ನಿಂಬೆರಸ ಹಾಗೂ ಪುದೀನಾ ಎಲೆಗಳನ್ನು ಸೇರಿಸಿಕೊಳ್ಳಿ.
ಲಿವರ್, ಕಿಡ್ನಿ ಹಾಗೂ ಬ್ಲ್ಯಾಡರ್ ಸಮಸ್ಯೆ ಇರುವವರಿಗೆ ಈ ಜ್ಯೂಸ್ ಔಷಧದ ರೀತಿಯಲ್ಲಿ ಕೆಲಸ ಮಾಡುತ್ತದೆ. ಸ್ಟ್ರೋಕ್ ಹಾಗೂ ಹೃದಯದ ಸಮಸ್ಯೆಗಳ ಸಂಭಾವ್ಯತೆ ಕಡಿಮೆ ಮಾಡುತ್ತದೆ. ಇನ್ನು ಹೀಗೆ ತರಕಾರಿ ಜ್ಯೂಸ್ ಕುಡಿಯುವವರಲ್ಲಿ ಮಲಬದ್ಧತೆ ಸಮಸ್ಯೆ ಕೂಡಾ ಇರುವುದಿಲ್ಲ.
ಕ್ಯಾರಟ್ ಜ್ಯೂಸ್
ತರಕಾರಿ ಜ್ಯೂಸ್‌ಗಳಲ್ಲಿ ಇದು ಸ್ವಲ್ಪ ಜನಪ್ರಿಯವೇ. ಇದರ ರುಚಿ, ಬಣ್ಣ ಹಾಗೂ ಪೋಷಕಾಂಶಗಳಿಂದಾಗಿ ಕ್ಯಾರೆಟ್ ಜ್ಯೂಸ್, ಸ್ವೀಟ್ ಸೇರಿದಂತೆ ಎಲ್ಲವನ್ನೂ ಮಕ್ಕಳಿಂದ ಹಿಡಿದು ಮುದುಕರವರೆಗೆ ಇಷ್ಟಪಡುತ್ತಾರೆ. ವರ್ಷದುದ್ದಕ್ಕೂ ಸಿಗುವ ಕ್ಯಾರೆಟ್ಟನ್ನು ಇದರ ಬೀಟಾ ಕೆರೋಟಿನ್, ಫೈಬರ್, ವಿಟಮಿನ್ ಕೆ1, ಪೊಟ್ಯಾಶಿಯಂ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳಿಗಾಗಿ ಬಳಸಬೇಕು. ಇದು ದೃಷ್ಟಿಯನ್ನು ಹೆಚ್ಚಿಸಿ, ಇರುಳುಗುರುಡುತನ ಹೋಗಲಾಡಿಸಬಲ್ಲದು. ತ್ವಚೆಯ ಆರೋಗ್ಯಕ್ಕೂ ಒಳ್ಳೆಯದು. ಪ್ರತಿ ಬೆಳಗ್ಗೆ ಕ್ಯಾರೆಟ್ ಜ್ಯೂಸನ್ನು ಉಪ್ಪು, ಸ್ವಲ್ಪ ಪೆಪ್ಪರ್ ಹಾಕಿ ತಯಾರಿಸಿ ಸೇವಿಸಿ.
ಬೀಟ್‌ರೂಟ್ ಜ್ಯೂಸ್
ಫೋಲೇಟ್, ಮ್ಯಾಂಗನೀಸ್, ಪೊಟ್ಯಾಶಿಯಂ, ಐರನ್ ಹಾಗೂ ವಿಟಮಿನ್ ಸಿಗಳ ಕಣಜವಾಗಿರುವ ಬೀಟ್‌ರೂಟ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ರಕ್ತ ಸಂಚಲನ ಹೆಚ್ಚಿಸಿ, ಬಿಪಿ ತಗ್ಗಿಸುತ್ತದೆ. ಸ್ವಲ್ಪ ನಿಂಬೆರಸ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿಕೊಂಡರೆ ಬೀಟ್‌ರೂಟ್ ಜ್ಯೂಸ್‌ನ ರುಚಿಗೂ ಕೊರತೆಯಿರುವುದಿಲ್ಲ.
ಸೋರೆಕಾಯಿ ಜ್ಯೂಸ್
ಸಾಮಾನ್ಯವಾಗಿ ಸೋರೆಕಾಯಿ ಪಲ್ಯ, ಸಾಂಬಾರ್ ಎಲ್ಲ ಬಹುತೇಕರಿಗೆ ಇಷ್ಟವಿಲ್ಲ. ಆದರೆ, ನ್ಯೂಟ್ರಿಶನ್‌ನ ಪವರ್‌ಹೌಸ್ ಆಗಿರುವ ಸೋರೆಕಾಯಿಯನ್ನು ದೂರವಿಟ್ಟರೆ ನಷ್ಟ ತಪ್ಪಿದ್ದಲ್ಲ. ವಿಟಮಿನ್ ಸಿ, ಕೆ ಹಾಗೂ ಕ್ಯಾಲ್ಶಿಯಂ ಭರಿತ ಸೋರೆಕಾಯಿಯನ್ನು ಜ್ಯೂಸ್ ಆಗಿ ಸೇವಿಸುವುದು ಉಳಿದೆಲ್ಲ ರೂಪಕ್ಕಿಂತ ಉತ್ತಮ. ವಾರದ ಒಂದು ದಿನ ಸೋರೆಕಾಯಿ ಜ್ಯೂಸ್ ಆಭ್ಯಾಸ ಮಾಡಿಕೊಳ್ಳಿ. ಇದು ರಕ್ತದೊತ್ತಡ ತಗ್ಗಿಸುತ್ತದೆ. ದೇಹವನ್ನು ತಂಪಾಗಿಸಿ ಮೂತ್ರಕೋಶದ ಯಾವುದೇ ಸಮಸ್ಯೆಗಳಿದ್ದರೂ ತೊಡೆದು ಹಾಕುತ್ತದೆ. ಒತ್ತಡ ಕಳೆವ ಜೊತೆಗೆ ಮಲಬದ್ಧತೆ ಸಮಸ್ಯೆಗೂ ಇತಿ ಹಾಡುತ್ತದೆ. ಇದರ ರುಚಿ ಹೆಚ್ಚಿಸಲು ಸ್ವಲ್ಪ ಪುದೀನಾ ಎಲೆಗಳು, ನಿಂಬೆರಸ, ತಾಜಾ ಎಳೆ ಸೌತೆಕಾಯಿ ಸೇರಿಸಬಹುದು.
ಸೌತೆಕಾಯಿ ರಸ
ಎಳೆಸೌತೆ ಬೇಸಿಗೆಗೆ ಸದಾ ಸಾಥ್ ನೀಡುತ್ತಾ ಬಂದಿದೆ. ಸಲಾಡ್, ಸ್ಯಾಂಡ್‌ವಿಚ್‌ಗೆ ರುಚಿ ನೀಡುವ ಸೌತೆಕಾಯಿ ಫೋಲೇಟ್, ಪ್ಯಾಂಟೋಥೆನಿಕ್ ಆ್ಯಸಿಡ್, ಐರನ್, ಸಿಲಿಕಾ, ವಿಟಮಿನ್ ಕೆ, ಸಿ, ಮೆಗ್ನೀಶಿಯಂ, ಫಾಸ್ಫರಸ್, ರೈಬೋಫ್ಲೇವಿನ್, ಬಿ6, ಕ್ಯಾಲ್ಶಿಯಂ, ಜಿಂಕ್‌ನಿಂದ ಸಮೃದ್ಧವಾಗಿದೆ. ಪ್ರತಿದಿನ ಇದನ್ನು ಬಳಸುವುದರಿಂದ ರೋಗ ನಿರೋಧಕ ವ್ಯವಸ್ಥೆಗೆ ಬಲ ಬರುತ್ತದೆ. ಅಲರ್ಜಿ ವಿರುದ್ಧ ಹೋರಾಡುವ ಎಳೆಸೌತೆ, ದೇಹವನ್ನು ತಂಪಾಗಿರಿಸುವ ಜೊತೆಗೆ ತೂಕ ನಿಯಂತ್ರಣದಲ್ಲಿಡಲು ಸಹಕಾರಿ. ಒಂದು ದೊಡ್ಡ ಲೋಟ ಕುಕುಂಬರ್ ಜ್ಯೂಸ್ ದೇಹವನ್ನು ಡಿಟಾಕ್ಸ್ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.