ಟಾಯ್ಲೆಟ್‌ನಲ್ಲೂ ಮೊಬೈಲ್‌ ನೋಡ್ತಾ ಇರ್ತೀರಾ? ಹಾಗಿದ್ರೆ ಈ ಕಾಯಿಲೆ ಖಚಿತ! 

Published : Feb 14, 2025, 09:54 PM ISTUpdated : Feb 15, 2025, 08:11 AM IST
ಟಾಯ್ಲೆಟ್‌ನಲ್ಲೂ ಮೊಬೈಲ್‌ ನೋಡ್ತಾ ಇರ್ತೀರಾ? ಹಾಗಿದ್ರೆ ಈ ಕಾಯಿಲೆ ಖಚಿತ! 

ಸಾರಾಂಶ

ಟಾಯ್ಲೆಟ್‌ನಲ್ಲಿ ಹೊಟ್ಟೆ ಅದರ ಪಾಡಿಗೆ ಆ ಕೆಲಸ ಮಾಡ್ತಾ ಇರಲಿ, ಕಣ್ಣುಗಳಿಗೆ ಮೊಬೈಲ್‌ ಇರಲಿ ಎಂದು ಮೊಬೈಲ್‌ ಫೋನ್‌ ಒಯ್ಯುವವರೇ ಇಂದು ಅಧಿಕ. ಅಲ್ಲಿ ಕುಳಿತು ರೀಲ್ಸ್‌ ನೋಡುತ್ತಾ ಹೊತ್ತು ಹೋದದ್ದೇ ಗೊತ್ತಾಗುವುದಿಲ್ಲ. ನೀವೂ ಇಂಥವರಾ? ಹಾಗಿದ್ರೆ ನಿಮಗೆ ಈ ಕಾಯಿಲೆ, ಸಮಸ್ಯೆಗಳೆಲ್ಲ ಕಾಡಬಹುದು, ಎಚ್ಚರ! 

ಶೌಚಾಲಯಕ್ಕೆ ಹೋಗಿ ಕೆಲಸ ಮುಗಿಸಿ ಬರಲು ಆರೋಗ್ಯವಂತ ವ್ಯಕ್ತಿಗೆ ಐದು ನಿಮಿಷ ಸಾಕು. ಆದರೆ ಮೊಬೈಲ್‌ ತೆಗೆದುಕೊಂಡು ಒಳಗೆ ಹೋದರೆ ಹೊರಬರಲು ಹತ್ತಾರು ನಿಮಿಷವೇ ಬೇಕು. ಆ ಸಮಯ ಜಾರಿ ಹೋದದ್ದು ನಮಗೆ ಗೊತ್ತೇ ಆಗಿರುವುದಿಲ್ಲ. ರೀಲ್ಸೋ, ಮೀಡಿಯಾ ನೋಡುತ್ತಲೋ ಹೊತ್ತು ಹೋಗಿರುತ್ತದೆ. ಈ ಅಭ್ಯಾಸವನ್ನು ತಕ್ಷಣವೇ ನಿಲ್ಲಿಸುವಂತೆ ತಜ್ಞರು ಸಲಹೆ ನೀಡುತ್ತಾರೆ. ತಜ್ಞರ ಪ್ರಕಾರ ಈ ಅಭ್ಯಾಸ ಹಲವು ಅನಾರೋಗ್ಯಗಳಿಗೆ ದಾರಿ. 

ನಮ್ಮ ಟಾಯ್ಲೆಟ್‌ ಸೂಕ್ಷ್ಮಜೀವಿಗಳು ಅತಿ ಹೆಚ್ಚಾಗಿ ಇರುವ ಸ್ಥಳ. ವಿಶೇಷವಾಗಿ ಟಾಯ್ಲೆಟ್ ಸೀಟ್ ಅಥವಾ ಫ್ಲಶ್ ಹ್ಯಾಂಡಲ್ ಮೊದಲಾದ ಹಲವರು ಸ್ಪರ್ಶಿಸುವ ಸ್ಥಳಗಳು ಅತಿ ಹೆಚ್ಚು ಕ್ರಿಮಿಗಳಿಂದ ಕೂಡಿರುತ್ತವೆ. ಪ್ರತಿ ಬಾರಿ ಫ್ಲಶ್ ಮಾಡಿದಾಗಲೂ ಗಾಳಿಗೆ ಸಿಡಿಯುವ ನೀರಿನ ತುಂತುರುಗಳಲ್ಲಿಯೂ ಅತ್ಯಧಿಕ ಪ್ರಮಾಣದ ಸೂಕ್ಷ್ಮಕ್ರಿಮಿಗಳಿರುತ್ತವೆ. ಇವು ತೇಲಾಡುತ್ತಾ ಶೌಚಾಲಯದ ಒಳಗಿರುವ ಎಲ್ಲಾ ವಸ್ತುಗಳ ಮೇಲೆ ಅಂಟಿಕೊಳ್ಳುತ್ತವೆ. ನಿಮ್ಮ ಮೊಬೈಲ್ ಪರದೆಗೂ ಅಂಟಿಕೊಳ್ಳುತ್ತವೆ. ಇದೇ ಕಾರಣಕ್ಕೆ ಹಲ್ಲುಜ್ಜುವ ಬ್ರಶ್, ಶೇವಿಂಗ್ ಬ್ರಶ್, ನಾಲಿಗೆ ಸ್ವಚ್ಛಗೊಳಿಸುವ ಟಂಗ್ ಕ್ಲೀನರ್ ಮೊದಲಾದವುಗಳನ್ನು ಬಳಸುವ ಮುನ್ನ ಬಿಸಿನೀರಿನಲ್ಲಿ ಅದ್ದಿ ಸ್ವಚ್ಛಗೊಳಿಸಬೇಕು. 

ಆದರೆ ನಾವು ನಮ್ಮ ಬೆರಳುಗಳಿಂದ ಮೊಬೈಲ್‌ ಸ್ಕ್ರೀನನ್ನು ಸವರುತ್ತಾ ಅಲ್ಲಿರುವ ಸೂಕ್ಷ್ಮಕ್ರಿಮಿಗಳನ್ನು ನಮ್ಮ ಕೈಯಾರೆ ದೇಹಕ್ಕೆ ಆಹ್ವಾನಿಸುತ್ತೇವೆ. ಶೌಚಾಲಯದಿಂದ ಹೊರಬಂದ ಬಳಿಕ, ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಂಡಿದ್ದರೂ ಮೊಬೈಲ್ ಪರದೆಯನ್ನು ಸ್ವಚ್ಛಗೊಳಿಸಿರದ ಕಾರಣ ನಂತರವೂ ನಮ್ಮ ಬೆರಳುಗಳ ಮೂಲಕ ಈ ಸೂಕ್ಷ್ಮ ಕ್ರಿಮಿಗಳು ನಮಗೆ ಹಾಗೂ ನಮ್ಮ ಒಡನಾಟದಲ್ಲಿರುವ ಇತರ ವ್ಯಕ್ತಿಗಳಿಗೂ ದಾಟಿಕೊಳ್ಳುತ್ತವೆ. 

ಶೌಚಾಲಯಕ್ಕೆ ಮೊಬೈಲು ಜೊತೆಗೆ ಕೊಂಡೊಯ್ಯುವ ವ್ಯಕ್ತಿಗಳು ಸಾಮಾನ್ಯಕ್ಕೂ ಹೆಚ್ಚು ಸಮಯ ಶೌಚಾಲಯದಲ್ಲಿಯೇ ಕಳೆಯುತ್ತಾರೆ. ಅಂದರೆ ಮಲವಿಸರ್ಜನೆಗೆ ಸಹಜವಾಗಿ ಬೇಕಾಗುವ ಸಮಯಕ್ಕಿಂತಲೂ ಹೆಚ್ಚು ಸಮಯ ನೀಡುತ್ತಾರೆ. ದೇಹದ ಸಹಜ ಕ್ರಿಯೆ ಆಗಬೇಕಾದ ಸಮಯದಲ್ಲಿ ಆಗದೇ ತೀರಾ ನಿಧಾನಗೊಳ್ಳುತ್ತದೆ. ಇದು ನಿಧಾನಗೊಂಡಷ್ಟೂ ಮಲಬದ್ಧತೆಯಾಗುವ ಸಾಧ್ಯತೆ ಹೆಚ್ಚುತ್ತದೆ. ಮಲವಿಸರ್ಜನೆಗೂ ಐಚ್ಛಿಕ ಸ್ನಾಯುಗಳ ಒತ್ತಡದ ಅಗತ್ಯವಿದೆ. ಮೊಬೈಲು ಎದುರಿಗಿದ್ದಾಗ ಮೆದುಳು ಇದರಲ್ಲಿರುವ ಮಾಹಿತಿಯ ಮೇಲೆ ಕೇಂದ್ರೀಕರಿಸುವ ಕಾರಣ ಐಚ್ಛಿಕವಾಗಿ ನಡೆಯಬೇಕಾಗಿರುವ ಕಾರ್ಯ ನಡೆಯದೇ ಹೋಗುತ್ತದೆ ಹಾಗೂ ಹಿಮ್ಮುಖ ಚಲನೆ ಕಾಣಿಸಿಕೊಳ್ಳಬಹುದು.

ಆಗ ದೊಡ್ಡ ಕರುಳು ಮತ್ತು ಗುದನಾಳದಲ್ಲಿ ಮಲದ ಸಾಂದ್ರತೆ ಹೆಚ್ಚಿ ಒಳಗೋಡೆಗಳ ಮೇಲಿನ ಒತ್ತಡ ಹೆಚ್ಚುತ್ತದೆ. ಇದನ್ನು ವೈದ್ಯವಿಜ್ಞಾನದಲ್ಲಿ faecal impaction ಎಂದು ಕರೆಯಲಾಗುತ್ತದೆ. ಮೊಬೈಲಿನಲ್ಲಿ ಕಳೆಯುವ ಸಮಯ ಹೆಚ್ಚಿದಷ್ಟೂ ಈ ಸ್ಥಿತಿ ಹೆಚ್ಚುತ್ತಾ ಹೋಗಬಹುದು. ಈ ಪ್ರಾತಃವಿಧಿ ನೈಸರ್ಗಿಕವಾಗಿ ನಡೆಯಲು ಈ ಸಮಯದಲ್ಲಿ ಯಾವುದೇ ಮನಸ್ಸನ್ನು ಹೊರಳಿಸುವ ವಿಷಯಗಳಿಲ್ಲದೇ ಇದ್ದಷ್ಟೂ ಒಳ್ಳೆಯದು. 

ಈ ಅಭ್ಯಾಸದಿಂದ ಮೂತ್ರನಾಳದ ಸೋಂಕು (UTI - urinary tract infections) ಸಹಾ ಎದುರಾಗಬಹುದು. ಏಕೆಂದರೆ ಶೌಚಾಲಯ ಬಳಸುವ ಮುನ್ನ ನೀವು ಸ್ಪರ್ಶಿಸುವ ಟಾಯ್ಲೆಟ್ ಸೀಟ್, ಟಾಯ್ಲೆಟ್ ಪೇಪರ್ ರೋಲ್ ಮೊದಲಾದವುಗಳಲ್ಲಿರುವ ಕ್ರಿಮಿಗಳು ನಿಮ್ಮ ಬೆರಳಿಗೆ ಅಂಟಿಕೊಳ್ಳುತ್ತವೆ. ನೀವು ಮೊಬೈಲ್ ಪರದೆಯನ್ನು ಸ್ಪರ್ಶಿಸಿದಾಗ ಪರದೆಗೂ ಅಂಟಿಕೊಳ್ಳುತ್ತವೆ. ಶೌಚಾಲಯದಿಂದ ಹೊರಬಂದ ಬಳಿಕ ನೀವು ಕೈತೊಳೆದುಕೊಂಡಿದ್ದರೂ ಕ್ರಿಮಿಗಳು ಮೊಬೈಲ್ ಪರದೆಯ ಮೇಲೆ ಹಾಗೇ ಇರುತ್ತವೆ.

ಈಗ ಮೊಬೈಲ್ ಹಿಡಿದು ಹೊರಬರುವಾಗ ನೀವು ಇಚ್ಛಿಸದೇ ಇದ್ದರೂ ಈ ಕ್ರಿಮಿಗಳು ಮತ್ತೆ ನಿಮ್ಮ ಬೆರಳಿಗೆ ದಾಟಿಕೊಳ್ಳುತ್ತವೆ ಹಾಗೂ ಈ ಕೈಗಳಿಂದ ಸ್ಪರ್ಶಿಸುವ ಮೂಗು, ಅಥವಾ ಸೇವಿಸುವ ಆಹಾರದ ಮೂಲಕ ಬಾಯಿಗೆ ತಲುಪುತ್ತವೆ. ಒಮ್ಮೆ ಈ ಕ್ರಿಮಿಗಳಿಗೆ ಮೂಗಿನ ಒಳಭಾಗ ಅಥವಾ ಬಾಯಿ, ಕಣ್ಣು ಮೊದಲಾದ ತೇವಭಾಗ ಸಿಕ್ಕಿತೋ, ತಕ್ಷಣವೇ ಇವು ಒಳನುಸುಳುತ್ತವೆ ಹಾಗೂ ಸಂತಾನಾಭಿವೃದ್ದಿಗೊಳಿಸಿ ಸೋಂಕು ಹರಡುತ್ತವೆ. ಪರಿಣಾಮವಾಗಿ ಅತಿಸಾರ, ಮಲಬದ್ಧತೆ, ಹೊಟ್ಟೆ ಉಬ್ಬರಿಕೆ, ಹುಳಿತೇಗು, ವಾಕರಿಕೆ, ವಾಂತಿ, ಅತಿಸಾರ, ಹೊಟ್ಟೆ ನೋವು ಮತ್ತು ಸೆಳೆತ ಮೊದಲಾದವು ಎದುರಾಗಬಹುದು.

Benefits of Lemon Water: ದಿನವಿಡೀ ನಿಂಬೆಹಣ್ಣಿನ ನೀರು ಕುಡಿಯುವುದರಿಂದ ಆಗುವ 10 ಪ್ರಯೋಜನಗಳು

ಮೂಲವ್ಯಾಧಿ ಗಂಭೀರ ಸಮಸ್ಯೆಯಾಗಿದ್ದು ಇದನ್ನು ಸಾಮಾನ್ಯವಾಗಿ ಪೈಲ್ಸ್ ಅಥವಾ Hemorrhoids ಎಂದು ಕರೆಯಲಾಗುತ್ತದೆ. ಶೌಚಾಲಯದಲ್ಲಿ ಫೋನ್ ಬಳಸುವುದರಿಂದ ನಿಮಗೆ ಪೈಲ್ಸ್ ಎದುರಾಗಬಹುದು ಎಂದು ತಿಳಿದರೆ ನಿಮಗೆ ಆಘಾತವಾಗಬಹುದು. ಅಂದರೆ ನಿಮ್ಮ ದೇಹವು ದೀರ್ಘ ಅವಧಿಗಳ ಅಭ್ಯಾಸವನ್ನು ಪಡೆಯುತ್ತದೆ ಮತ್ತು ಇದು ಗುದನಾಳದ ರಕ್ತನಾಳಗಳ ಉರಿಯೂತಕ್ಕೆ ಮತ್ತು ಗುದನಾಳದ ಸುತ್ತಲೂ ಮೂಲವ್ಯಾಧಿ ಉಂಟಾಗಲು ಕಾರಣವಾಗಬಹುದು. ಮೂಲವ್ಯಾಧಿಗಳಿಂದಾಗಿ ಗುದನಾಳದ ರಕ್ತಸ್ರಾವವೂ ಉಂಟಾಗುತ್ತದೆ.

ಶೌಚಾಲಯದ ಸಮಯ, ಮೆದುಳನ್ನು ಶೌಚಕ್ರಿಯೆಗೆ ಮಾತ್ರವೇ ಮೀಸಲಾಗಿಸಿ ನಿರಾಳವಾಗುವ ಅತ್ಯಂತ ಖಾಸಗಿ ಸಮಯವೂ ಹೌದು. ಈ ಸಮಯದಲ್ಲಿ ಫೋನ್ ಕೊಂಡು ಹೋದರೆ ಮೆದುಳಿಗೆ ವಿಶ್ರಾಂತಿ ಸಿಗುವ ಬದಲು ಕೆಲಸದ ಹೊರೆ ದುಪ್ಪಟ್ಟಾಗುತ್ತದೆ. ಇದು ಅನಗತ್ಯ ಮಾನಸಿಕ ಒತ್ತಡಕ್ಕೆ ದಾರಿ. 

ಗೋಧಿಗಿಂತ ಈ 3 ವಿಧದ ಹಿಟ್ಟಿನಿಂದ ತಯಾರಿಸಿದ ಚಪಾತಿ ತಿಂದ್ರೆ ಏರೋದಿಲ್ಲ ಬ್ಲಡ್ ಶುಗರ್: ಒಮ್ಮೆ ಟ್ರೈ ಮಾಡಿ!
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?
ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?