ಕೊರೋನಾ (Corona) ವಕ್ಕರಿಸಿದ ಬಳಿಕ ಹಲವು ವೈರಸ್ (Virus)ಗಳ ಆತಂಕ ಹೆಚ್ಚಾಗುತ್ತಲೇ ಇದೆ. ಇದೀಗ ಭಾರತದಲ್ಲಿ ನಾಲ್ಕನೇ ಅಲೆ ಭೀತಿ ಆರಂಭಗೊಂಡಿದೆ. ಇದರ ನಡುವೆ ಮಂಕಿಪಾಕ್ಸ್ (Monkeypox) ಭೀತಿಯೂ ಕಾಡುತ್ತಿದೆ. ಇದೀಗ ಹೊಸದಾಗ ನೊರೋ ವೈರಸ್ (Noro virus) ಕಾಟ ಶುರುವಾಗಿದೆ. ಇದು ಕೊರೋನಾಗಿಂತ ಹೇಗೆ ವಿಭಿನ್ನವಾಗಿದೆ ಅಲ್ಲ ಕೊರೋನಾದಂತೆಯೇ ಮಾರಣಾಂತಿಕವೇ ಎಂಬುದನ್ನು ತಿಳಿಯೋಣ.
ಕೇರಳ (Kerala) ರಾಜ್ಯದ ತಿರುವನಂತಪುರದಲ್ಲಿ ಎರಡು ನೊರೋ ವೈರಸ್ (Noro virus) ಪ್ರಕರಣ ಪತ್ತೆಯಾಗಿದೆ. ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭಗಳಲ್ಲಿ ಎಲ್ಲಾ ಸೋಂಕಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಪ್ರತಿ ಸೋಂಕುಗಳು ಒಂದಕ್ಕಿಂತ ಒಂದು ಹೇಗೆ ವಿಭಿನ್ನವಾಗಿದೆ, ರೋಗ ಲಕ್ಷಣಗಳು (Symptoms) ಯಾವುದು ಎಂದು ತಿಳಿದುಕೊಂಡರೆ, ಸೋಂಕು ತಗುಲಿದರೂ ತಕ್ಷಣಕ್ಕೆ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಬಹುದು. ಹೀಗಾಗಿ ನೊರೋ ವೈರಸ್, ಕೊರೋನಾಗಿಂತ ಹೇಗೆ ವಿಭಿನ್ನವಾಗಿದೆ, ಇದರ ರೋಗ ಲಕ್ಷಣಗಳೇನು ? ಯಾವ ರೀತಿ ಚಿಕಿತ್ಸೆ ಪಡೆಯಬೇಕು ಎಂಬುದನ್ನು ತಿಳಿಯೋಣ.
ನೊರೋ ವೈರಸ್ ಎಂದರೇನು ?
ಫೋರ್ಟಿಸ್ ಆಸ್ಪತ್ರೆ ವಸಂತ್ ಕುಂಜ್‌ನ ಆಂತರಿಕ ವೈದ್ಯಕೀಯ ವಿಭಾಗದ ಹಿರಿಯ ಸಲಹೆಗಾರ ಡಾ.ಮನೋಜ್ ಶರ್ಮಾ ಮಾತನಾಡಿ, ನೊರೊವೈರಸ್ ಗ್ಯಾಸ್ಟ್ರೋ ಎಂಟರೈಟಿಸ್ ಅನ್ನು ಉಂಟುಮಾಡುವ ಅತ್ಯಂತ ಸಾಂಕ್ರಾಮಿಕ ವೈರಸ್ ಆಗಿದೆ ಎಂದು ತಿಳಿಸಿದ್ದಾರೆ. ನೊರೊ ವೈರಸ್‌ಗೆ ಒಡ್ಡಿಕೊಂಡ 12ರಿಂದ 48 ಗಂಟೆಗಳ ನಂತರ ಒಬ್ಬ ವ್ಯಕ್ತಿಯಲ್ಲಿ ಸಾಮಾನ್ಯವಾಗಿ ರೋಗಲಕ್ಷಣಗಳನ್ನು ಕಾಣಿಸಿಕೊಳ್ಳುತ್ತವೆ ಎಂದಿದ್ದಾರೆ.
Norovirus ಕೋವಿಡ್ ನಡುವೆ ಭಾರತಕ್ಕೆ ನೊರೋವೈರಸ್ ಆತಂಕ, ಕೇರಳದಲ್ಲಿ 2 ಪ್ರಕರಣ ಪತ್ತೆ!
ಕೇರಳ ಸರ್ಕಾರವು ಇಬ್ಬರು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ನೊರೊವೈರಸ್ ಸೋಂಕಿನ ಎರಡು ಪ್ರಕರಣಗಳನ್ನು ದೃಢಪಡಿಸಿದೆ. ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ, ಅತಿಸಾರವನ್ನು ಉಂಟುಮಾಡುವ ರೋಟವೈರಸ್ ಅನ್ನು ಹೋಲುವ ವೈರಸ್ ಕಲುಷಿತ ನೀರು ಮತ್ತು ಆಹಾರದ ಮೂಲಕ ಹರಡುತ್ತದೆ ಎಂದು ಹೇಳಿದೆ. ಸಚಿವಾಲಯದ ಅಧಿಕಾರಿಗಳ ಪ್ರಕಾರ, ವಿದ್ಯಾರ್ಥಿಗಳು ಶಾಲೆಯಲ್ಲಿ ನೀಡಲಾದ ಮಧ್ಯಾಹ್ನದ ಊಟವನ್ನು ಸೇವಿಸಿದ ನಂತರ ಆಹಾರ (Food) ವಿಷಪೂರಿತವಾಗಿದೆ ಎಂದು ನಂಬಲಾಗಿದೆ. ಸಾಕಷ್ಟು ನೈರ್ಮಲ್ಯದ ಅನುಪಸ್ಥಿತಿಯಲ್ಲಿಯೂ ಇದು ಹರಡಬಹುದು ಎಂದು ತಜ್ಞರು ಹೇಳುತ್ತಾರೆ.
ನೊರೋ ವೈರಸ್‌ಗೆ ಕಾರಣವೇನು?
ಸ್ವಚ್ಛವಾಗಿ ತೊಳೆಯದ ತಟ್ಟೆಗಳು, ಕೊಳೆ ನೀರು, ಅಶುಚಿ ಆಹಾರದ ಮೂಲಕ ನೊರೋವೈರಸ್ ಹರಡುತ್ತದೆ. ಸೋಂಕು ತಾಗಿದ 12ರಿಂದ 48 ಗಂಟೆಗಳ ಅವಧಿಯಲ್ಲಿ ವಾಂತಿ, ಭೇದಿ, ಹೊಟ್ಟೆನೋವು, ತಲೆನೋವು, ಜ್ವರ ಆರಂಭವಾಗುತ್ತದೆ. ಆದರೆ ಇನ್ನೂ ಅಪಾಯಕಾರಿ ಎಂದರೆ ನೊರೋವೈರಸ್ ಪೀಡಿತನ ಮಲ ಹಾಗೂ ವಾಂತಿಯಲ್ಲಿ ಕೂಡ ವೈರಾಣುಗಳಿರುತ್ತವೆ. ನೊರೋವೈರಸ್ ಹೊಂದಿರುವವನ ಜತೆಗೆ ಆಹಾರ ಹಂಚಿಕೊಂಡು ತಿನ್ನುವುದೂ ಅಪಾಯಕರ. ಹೀಗಾಗಿ ಶುಚಿಯಾದ ಆಹಾರ, ನೀರನ್ನು ಸೇವಿಸುವುದು, ಶುಚಿಯಾದ ತಟ್ಟೆಬಳಸುವುದು ತೀರಾ ಅಗತ್ಯ. ಸ್ಯಾನಿಟೈಸರ್ ಅನ್ನು ಆಗಾಗ ಕೈಗೆ ಹಚ್ಚಿಕೊಳ್ಳುವುದು ಕ್ಷೇಮ.
ವಾಂತಿ-ಭೇದಿ ಆರಂಭವಾಗುವ ಕಾರಣ ಹೆಚ್ಚು ನೀರು ಸೇವಿಸಿ ಹಾಗೂ ಮಾಮೂಲಿ ಚಿಕಿತ್ಸೆ (Treatment) ಪಡೆದು ಇದರಿಂದ ಗುಣವಾಗಬಹುದು. ಗುಣವಾಗಲು 1ರಿಂದ 3 ದಿನ ಸಾಕು. ಆದರೆ ವೃದ್ಧರು, ಮಕ್ಕಳು ಹಾಗೂ ಅನಾರೋಗ್ಯಪೀಡಿತರಿಗೆ ಇದರಿಂದ ಅಪಾಯ ಹೆಚ್ಚು. ಇಂಥವರನ್ನು ಆಸ್ಪತ್ರೆಗೆ ದಾಖಲಿಸಲೇಬೇಕು.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆ, ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯ!
ನೊರೋ ವೈರಸ್‌ಗೆ ಚಿಕಿತ್ಸೆಯೇನು ?
ನೊರೋ ವೈರಸ್‌ನ್ನು ತಡೆಗಟ್ಟಲು ಮುಖ್ಯವಾಗಿ ದೇಹ ಡಿಹೈಡ್ರೇಟ್ ಆಗದಂತೆ ನೋಡಿಕೊಳ್ಳಬೇಕು. ರೋಗ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಹೆಚ್ಚು ಹೆಚ್ಚು ನೀರು ಕುಡಿಯಬೇಕಾದುದು ಅಗತ್ಯ. ನೊರೋ ವೈರಸ್ ತಗುಲುವುದರಿಂದ ಹೆಚ್ಚು ವಾಂತಿ ಮತ್ತು ಅತಿಸಾರ ಆಗುವ ಕಾರಣ ಕಳೆದುಹೋದ ದ್ರವವನ್ನು ಬದಲಿಸಲು ಜನರು ಸಾಕಷ್ಟು ದ್ರವಗಳನ್ನು ಕುಡಿಯಬೇಕು, ಇದು ನಿರ್ಜಲೀಕರಣವನ್ನು ತಡೆಯುತ್ತದೆ. ತೀವ್ರ ನಿರ್ಜಲೀಕರಣಕ್ಕೆ ಆಸ್ಪತ್ರೆಯಲ್ಲಿ ನಿರ್ವಹಣೆ ಅಗತ್ಯವಿರಬಹುದು ಎಂದು ಮಸಿನಾ ಆಸ್ಪತ್ರೆಯ ಸಾಂಕ್ರಾಮಿಕ ರೋಗ ತಜ್ಞೆ ಡಾ.ತೃಪ್ತಿ ಗಿಲಾಡಾ ಹೇಳಿದ್ದಾರೆ.
ಅನೇಕ ಸಾಂಕ್ರಾಮಿಕ ರೋಗಗಳಂತೆ, ಕೈ ನೈರ್ಮಲ್ಯವು ನೊರೊವೈರಸ್ ತಡೆಗಟ್ಟುವಿಕೆಯ ಆಧಾರಸ್ತಂಭವಾಗಿದೆ. ಶೌಚಾಲಯವನ್ನು ಬಳಸಿದ ನಂತರ ಮತ್ತು ತಿನ್ನುವ ಮೊದಲು, ತಯಾರಿಸುವ ಅಥವಾ ಆಹಾರ ಅಥವಾ ಔಷಧಿಗಳನ್ನು ನಿರ್ವಹಿಸುವ ಮೊದಲು ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆಯಬೇಕು ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ನೊರೋ ವೈರಸ್ ಮತ್ತು ಕೊರೋನಾ ವೈರಸ್ ನಡುವಿನ ವ್ಯತ್ಯಾಸವೇನು ?
ಕೋವಿಡ್ ಗಾಳಿಯ ಮೂಲಕ ಹರಡಿದರೆ, ನೊರೊ ವೈರಸ್ ಭೌತಿಕವಾಗಿ ಮಾತ್ರ ಹರಡುತ್ತದೆ. ವೈರಸ್ ಸೋಂಕಿಗೆ ಒಳಗಾಗಬೇಕಾದರೆ ಅದನ್ನು ಯಾವುದೇ ರೀತಿಯಲ್ಲಿ ಸೇವಿಸಿರಬೇಕು. ಎರಡೂ ಸಂದರ್ಭಗಳಲ್ಲಿ ಕೈ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ನಿರ್ಣಾಯಕವಾಗಿದೆ. ಏಕೆಂದರೆ ಪ್ರತಿ ಪ್ರಕರಣದಲ್ಲಿ ಪ್ರಸರಣದ ಮಾರ್ಗವು ವಿಭಿನ್ನವಾಗಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಹೀಗಿದ್ದೂ ನೊರೋ ವೈರಸ್ ಕೋವಿಡ್‌ನಷ್ಟು ಅಪಾಯಕಾರಿಯಲ್ಲ. ಇದರಲ್ಲಿ ಜನರ ಆರೋಗ್ಯ 1 ರಿಂದ 3ದಿನಗಳಲ್ಲಿ ಉತ್ತಮವಾಗುತ್ತದೆ ಮತ್ತು ಮರಣ ಪ್ರಮಾಣವು ತುಂಬಾ ಕಡಿಮೆಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.