ಕೇರಳದಲ್ಲಿ ಟೊಮೇಟೊ ಜ್ವರ; ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ

By Suvarna NewsFirst Published Aug 23, 2022, 8:17 AM IST
Highlights

ಕೊರೋನಾ ವೈರಸ್ ಹರಡಲು ಆರಂಭವಾದಾಗಿನಿಂದ ದೇಶದಲ್ಲಿ ಹೊಸ ಹೊಸ ಕಾಯಿಲೆಗಳು ವಕ್ಕರಿಸುತ್ತಲೇ ಇವೆ. ಕೋವಿಡ್ ಬಳಿಕ ಮಂಕಿಪಾಕ್ಸ್‌, ನೋರೋ ವೈರಸ್ ನಂತ್ರ ಈಗ ಎಲ್ಲೆಡೆ ಟೊಮೆಟೋ ಜ್ವರ ಹರಡುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಕೇರಳದಲ್ಲಿ ಕೇರಳದಲ್ಲಿ ಟೊಮೇಟೊ ಜ್ವರ ಪ್ರಕರಣಗಳು ವರದಿಯಾಗುತ್ತಿದ್ದು,ರಾಜ್ಯದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಬೆಂಗಳೂರು: ಕೇರಳದಲ್ಲಿ ಟೊಮೇಟೊ ಜ್ವರ ಪ್ರಕರಣಗಳು ವರದಿಯಾಗುತ್ತಿದ್ದು, ಹೈಅಲರ್ಟ್ ಘೋಷಿಸಲಾಗಿದೆ. ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು, ನಾಗರಿಕರು ಕೂಡ ಜಾಗರೂಕರಾಗಿರಬೇಕು ಮತ್ತು ಯಾವುದೇ ರೀತಿಯ ಚರ್ಮದ ದದ್ದುಗಳು ಕಂಡುಬಂದರೆ ತಕ್ಷಣವೇ ವರದಿ ಮಾಡುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ ಯಾವುದೇ ಪ್ರಕರಣಗಳು ವರದಿಯಾಗದ ಕಾರಣ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆದರೂ ತೀವ್ರ ನಿಗಾ ವಹಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಗಳಲ್ಲಿ ನಿಯಮಿತ ತಪಾಸಣೆ
ಕರ್ನಾಟಕ ಮತ್ತು ಕೇರಳದ ಗಡಿ ಜಿಲ್ಲೆಗಳಲ್ಲಿ ಈ ಹಿಂದೆ ಅನುಸರಿಸುತ್ತಿದ್ದ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಗಡಿಗಳಲ್ಲಿ ನಿಯಮಿತ ತಪಾಸಣೆಯನ್ನೂ ತೀವ್ರಗೊಳಿಸಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಕಣ್ಗಾವಲು ಘಟಕಗಳ ಉಪನಿರ್ದೇಶಕಿ ಡಾ.ಪದ್ಮಾ ಅವರು ಹೇಳಿದ್ದಾರೆ. ದೇಹದಲ್ಲಿ ಕೆಂಪು ಬಣ್ಣದ ನೋವಿರುವ ಗುಳ್ಳೆಗಳು ಕೈ, ಕಾಲು ಮತ್ತು ಬಾಯಿ ನೋವು ಟೊಮೋಟೊ ಜ್ವರದ ಲಕ್ಷಣಗಳಾಗಿದ್ದು,  ಇದು ಹೆಚ್ಚು ಸಾಂಕ್ರಾಮಿಕವಾಗಿದೆ. ಹಾಗಾಗಿ ಶಾಲೆಗಳಲ್ಲಿ ಹೆಚ್ಚಿನ ನಿಗಾವಹಿಸುವುದು ಮತ್ತು ಮೊದಲೇ ಪತ್ತೆ ಮಾಡುವುದು ಅತ್ಯಗತ್ಯ ಎಂದು ವೈಟ್‌ಫೀಲ್ಡ್‌ನ ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್ ಡಾ.ಪ್ರವೀಣ್ ಭಾರದ್ವಾಜ್ ಅವರು ತಿಳಿಸಿದ್ದಾರೆ.

Corona Crisis: ಕರ್ನಾಟಕದಲ್ಲಿ 1268 ಕೋವಿಡ್‌ ಕೇಸ್‌ ಪತ್ತೆ: 6 ಸಾವು

ಟೊಮೇಟೋ ಜ್ವರ ಎಂದರೇನು ?
ಸಾಮಾನ್ಯವಾಗಿ 'ಟೊಮೇಟೋ ಜ್ವರ' ಎಂದು ಕರೆಯಲ್ಪಡುವ ಸಾಂಕ್ರಾಮಿಕ ರೋಗವು ಕರುಳಿನ ವೈರಸ್‌ಗಳಿಂದ ಉಂಟಾಗುತ್ತದೆ ಮತ್ತು ಹೆಚ್ಚಾಗಿ ಮಕ್ಕಳಲ್ಲಿ (Children) ಕಂಡುಬರುತ್ತದೆ. ವಯಸ್ಕರಲ್ಲಿ ಅನಾರೋಗ್ಯವು ಅಪರೂಪವಾಗಿದೆ. ಏಕೆಂದರೆ ಅವರು ಸಾಮಾನ್ಯವಾಗಿ ವೈರಸ್‌ನಿಂದ ರಕ್ಷಿಸಲು ಸಾಕಷ್ಟು ಪ್ರಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುತ್ತಾರೆ. ಟೊಮೇಟೊ ಫ್ಲೂ ವೈರಸ್ ಜ್ವರ, ಆಯಾಸ ಮತ್ತು ದೇಹದ ನೋವು (Body pain) ಮತ್ತು ಚರ್ಮದ ಮೇಲೆ ದದ್ದುಗಳು ಸೇರಿದಂತೆ ಕೋವಿಡ್-19 ನ ರೋಗಲಕ್ಷಣಗಳನ್ನು ಹೋಲುವ ರೋಗಲಕ್ಷಣಗಳನ್ನು ತೋರಿಸಿದರೂ, ವೈರಸ್ SARS-CoV-2 ಗೆ ಸಂಬಂಧಿಸಿಲ್ಲ ಎಂದು ಅಧ್ಯಯನವು ಗಮನಿಸಿದೆ.

ಟೊಮೇಟೊ ಜ್ವರವು (Tomato fever) ವೈರಲ್ ಸೋಂಕಿಗಿಂತ ಹೆಚ್ಚಾಗಿ ಮಕ್ಕಳಲ್ಲಿ ಚಿಕೂನ್‌ಗುನ್ಯಾ ಅಥವಾ ಡೆಂಗ್ಯೂ ಜ್ವರದ ನಂತರದ ಪರಿಣಾಮವಾಗಿರಬಹುದು, ಫ್ಲೂ ಸ್ವಯಂ-ಸೀಮಿತಗೊಳಿಸುವ ಕಾಯಿಲೆಯಾಗಿದೆ. ಚಿಕಿತ್ಸೆ (Treatment) ನೀಡಲು ಯಾವುದೇ ನಿರ್ದಿಷ್ಟ ಔಷಧಿ ಅಸ್ತಿತ್ವದಲ್ಲಿಲ್ಲ ಎಂದು ಲ್ಯಾನ್ಸೆಟ್ ಅಧ್ಯಯನವು ಗಮನಿಸಿದೆ.

ಟೊಮೇಟೋ ಜ್ವರ ರೋಗಲಕ್ಷಣಗಳು
ಜ್ವರ
ಕೈ, ಅಂಗೈ, ಮೊಣಕೈ, ಮೊಣಕಾಲುಗಳ ಮೇಲೆ ದದ್ದು
ಮೊಣಕೈ, ಅಂಗೈ, ಬಾಯಿಯಲ್ಲಿ ಗುಳ್ಳೆಗಳು
ಹಸಿದಿದ್ದರೂ ತಿನ್ನಲು ತೊಂದರೆ
ದೇಹದಲ್ಲಿ ಎದ್ದುಕಾಣುವ ಕೆಂಪು ಗುಳ್ಳೆಗಳು

ಕೇರಳದಲ್ಲಿ ಮೊದಲ ಪ್ರಕರಣ
ಮೇ 6, 2022 ರಂದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಟೊಮೇಟೊ ಜ್ವರವು ಮೊದಲ ಬಾರಿಗೆ ವರದಿಯಾಗಿದೆ. ಜುಲೈ 26, 2022 ರ ಹೊತ್ತಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಿಂದ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 82 ಕ್ಕೂ ಹೆಚ್ಚು ಮಕ್ಕಳು ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಕೇರಳದ ಆಂಚಲ್, ಆರ್ಯಂಕಾವು ಮತ್ತು ನೆಡುವತ್ತೂರ್. ವೈರಲ್ ಸೋಂಕಿನ ಹರಡುವಿಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಭಾರತದ ಇತರ ಭಾಗಗಳಲ್ಲಿ ಹರಡುವುದನ್ನು ತಡೆಯಲು ಕೇರಳ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಕ್ಯಾನ್ಸರ್ ಅಪಾಯ ಹೆಚ್ಚಿಸುವ ಮೂರು ಕಾರಣಗಳು!

ಟೊಮೇಟೋ ಜ್ವರಕ್ಕೆ ಚಿಕಿತ್ಸೆಯೇನು ?
ಟೊಮೆಟೊ ಜ್ವರವು ಚಿಕೂನ್‌ಗುನ್ಯಾ, ಡೆಂಗ್ಯೂ ಮತ್ತು ಕೈ, ಕಾಲು ಮತ್ತು ಬಾಯಿ ಕಾಯಿಲೆಯ ಲಕ್ಷಣಗಳನ್ನು ಹೋಲುವುದರಿಂದ ಸೋಂಕಿನ ಚಿಕಿತ್ಸೆಯು ಸಹ ಹೋಲುತ್ತದೆ. ಕಿರಿಕಿರಿ ಮತ್ತು ದದ್ದುಗಳ ಪರಿಹಾರಕ್ಕಾಗಿ ರೋಗಿಗಳಿಗೆ ಪ್ರತ್ಯೇಕಿಸಲು, ವಿಶ್ರಾಂತಿ, ಸಾಕಷ್ಟು ದ್ರವಗಳು ಮತ್ತು ಬಿಸಿನೀರಿನ ಸ್ಪಂಜನ್ನು ಸೂಚಿಸಲಾಗುತ್ತದೆ. ಜ್ವರ ಮತ್ತು ದೇಹದ ನೋವಿಗೆ ಪ್ಯಾರಸಿಟಮಾಲ್‌ ತೆಗೆದುಕೊಳ್ಳಬಹುದು ಎಂದು ತಿಳಿದುಬಂದಿದೆ.

click me!