ಮಾಗಿ ಚಳಿಯಲ್ಲಿ ಹಾಸಿಗೆ ಮೇಲೆ ಲವ್ ಆಗ್ಬಿಟೈತೆ,ಬೇಗ ಎದ್ದೇಳುವುದು ಹೇಗೆ?

Suvarna News   | Asianet News
Published : Dec 16, 2019, 01:02 PM IST
ಮಾಗಿ  ಚಳಿಯಲ್ಲಿ ಹಾಸಿಗೆ ಮೇಲೆ ಲವ್ ಆಗ್ಬಿಟೈತೆ,ಬೇಗ ಎದ್ದೇಳುವುದು ಹೇಗೆ?

ಸಾರಾಂಶ

ಕೊರೆವ  ಚಳಿಯಲ್ಲಿ ಹಾಸಿಗೆ, ಹೊದಿಕೆ ಮೇಲೆ ವಿಪರೀತ ಪ್ರೀತಿ ಬೆಳೆದುಬಿಟ್ಟಿದೆ. ಅದೆಷ್ಟು ಪ್ರೀತಿ ಅಂತೀರಾ? ಉದಾಸೀನಗೊಂಡ ಸೂರ್ಯನ ಮಂದ ಕಿರಣಗಳು ಹೊದಿಕೆ ಹೊಳಹೊಕ್ಕು ‘ಗುಡ್ ಮಾರ್ನಿಂಗ್’ ಎಂದು ಉಸುರುತ್ತಿದ್ದರು ಕಣ್ಣುಗಳು ಮಾತ್ರ ಸುಖ ನಿದ್ರೆಯ ಮಂಪರಿನಿಂದ ಹೊರಬರಲು ಒಲ್ಲೆ ಎನ್ನುತ್ತಿವೆ. ಚಳಿಗಾಲದಲ್ಲಿ ಹಾಸಿಗೆ ಸಖ್ಯವೇ ಸುಖದ ಸುಪತ್ತಿಗೆ ಎಂದು ಬೀಗುವ ಮನಸ್ಸಿಗೆ ಲಗಾಮು ಹಾಕುವುದು ಸುಲಭದ ಕೆಲಸವಲ್ಲ. ಅದೇನೋ ಉದಾಸೀನತೆ, ಮೈ ಮನವನ್ನೆಲ್ಲ ಆವರಿಸಿರುತ್ತದೆ. 

ಈ ಜಾಡ್ಯದಿಂದ ಮುಕ್ತಿ ಹೊಂದಲು ನಾಲಿಗೆ ಬಿಸಿ ಬಿಸಿ ಕಾಫಿಯ ಸವಿ ಆಸ್ವಾದಿಸಲು ಹಟ ಹಿಡಿದರೆ, ದೇಹ ಸ್ವೆಟರ್ ಅಥವಾ ಹೊದಿಕೆಯ ಬೆಚ್ಚಗಿನ ಅಪ್ಪುಗೆಯಲ್ಲಿ ಬಂಧಿಯಾಗಬಯಸುತ್ತದೆ. ಆದರೆ, ಬೆಳ್ಳಂಬೆಳಗ್ಗೆ ಮನಸ್ಸಿನ ಮಾತು ಕೇಳಿ ಈ ಎಲ್ಲ ಸುಖಗಳನ್ನು ಅನುಭವಿಸುತ್ತ ಕುಳಿತರೆ ಆಫೀಸ್ಗೆ ಲೇಟ್ ಆಗುವುದಂತೂ ಗ್ಯಾರಂಟಿ. 

‘ಈ ಚಳಿಗಾಲ ಬೇಗ ಮುಗಿದರೆ ಸಾಕಪ್ಪ’ ಎಂದು ಗೃಹಿಣಿಯರು ಹಾರೈಸಿದರೆ, ‘ಅಯ್ಯೋ ಇವತ್ತೊಂದಿನ ಸ್ಕೂಲ್ಗೆ ರಜೆ ಕೊಡಪ್ಪ ಭಗವಂತ’ ಎನ್ನುವುದು ಮೈ ತುಂಬಾ ಹೊದಿಕೆ ಹೊದ್ದು ಹಾಸಿಗೆ ಮೇಲೆ ಮಲಗಿಯೇ ಅಮ್ಮನ ಇನ್ನೊಂದು ಕರೆ ನಿರೀಕ್ಷೆಯಲ್ಲಿ ಕಿವಿ ಅರಳಿಸಿ ಕಣ್ಣರೆಪ್ಪೆಗಳಡಿಯಲ್ಲೇ ದೇವರನ್ನು ಮೊರೆಯಿಡುವ ಮಕ್ಕಳದ್ದು. ಬೆಳಗ್ಗೆ ವಾಕಿಂಗ್ಗೆ ಹೋಗಬೇಕು, ಆಫೀಸ್ಗೆ ಬೇಗ ತೆರಳಬೇಕು, ಮುಂದಿನ ವಾರದ ಕ್ಲಾಸ್ ಟೆಸ್ಟ್ಗೆ ಓದಿಕೊಳ್ಳಬೇಕು, ನಾಳೆ ಬೇಗ ತಿಂಡಿ ಸಿದ್ಧಪಡಿಸಿ ದೇವಸ್ಥಾನಕ್ಕೆ ಹೋಗಬೇಕು...ಹೀಗೆ ಹಿಂದಿನ ರಾತ್ರಿ ಮನಸ್ಸಲ್ಲೇ ಸಿದ್ಧಪಡಿಸಿಟ್ಟುಕೊಂಡ ವೇಳಾಪಟ್ಟಿಯನ್ನು ಮರುದಿನ ಕಾರ್ಯರೂಪಕ್ಕೆ ತರುವುದು ಚಳಿಗಾಲದಲ್ಲಿ ಸವಾಲಿನ ಕೆಲಸವೇ ಸರಿ. ಹಾಗಾದ್ರೆ ಚಳಿಗಾಲದಲ್ಲಿ ದೇಹ ಮತ್ತು ಮನಸ್ಸನ್ನು ನಿಯಂತ್ರಿಸುವುದು ಹೇಗಪ್ಪ ಅಂತೀರಾ? ಹೀಗೆ ಮಾಡಿ ನೋಡಿ.

ಹಾರ್ಟ್‌ ಅಟ್ಯಾಕ್‌ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು!

* ಅಲಾರಂ ಅನ್ನು 10 ನಿಮಿಷ ಹಿಂದಿಡಿ: ಅಲಾರಂ ಹೊಡೆದುಕೊಂಡ ತಕ್ಷಣ ಎಚ್ಚರವಾದರೂ ನಾವದ್ದನ್ನು ನಿಲ್ಲಿಸಿ ಮತ್ತೆ ನಿದ್ದೆಗೆ ಜಾರುತ್ತೇವೆ. ಇದೇ ನಾವು ಮಾಡುವ ದೊಡ್ಡ ತಪ್ಪು. ಅಲಾರಂ ಹೊಡೆದ ತಕ್ಷಣ ಏಳಲು ಕಷ್ಟವಾಗುತ್ತದೆ ಎಂದಾದರೆ ಎದ್ದೇಳಬೇಕಾದ ಸಮಯಕ್ಕಿಂತ 10 ನಿಮಿಷ ಹಿಂದಿಡಿ. ಅಂದರೆ 6 ಗಂಟೆಗೆ ಏಳಬೇಕಿದ್ರೆ 5.50ಕ್ಕೆ ಅಲಾರಂ ಇಡಿ. ಹೀಗೆ ಮಾಡುವುದರಿಂದ ಸಮಯಕ್ಕೆ ಸರಿಯಾಗಿ ಎದ್ದೇಳಲು ಸಾಧ್ಯವಾಗುತ್ತದೆ.

ದೇಹವನ್ನು ಬೆಚ್ಚಗಿರಿಸಿ: ನಿಮ್ಮ ದೇಹ ಮತ್ತು ಮನಸ್ಸು ಹಾಸಿಗೆ ಬಿಟ್ಟು ಎದ್ದೇಳಲು ಹಿಂದೇಟು ಹಾಕಲು ಕಾರಣ ಚಳಿ ಅಲ್ಲವೆ? ಆದಕಾರಣ ಹಾಸಿಗೆಯಿಂದ ಕೆಳಗಿಳಿಯುವ ಮುನ್ನ ಕಾಲುಗಳಿಗೆ ಸಾಕ್ಸ್ ಧರಿಸಿ ಇಲ್ಲವೆ ಸ್ಲಿಪರ್ ಬಳಸಿ. ಸ್ವೆಟರ್ ಅಥವಾ ಜಾಕೆಟ್ ಬಳಸಿ ದೇಹವನ್ನು ಬೆಚ್ಚಗಿರಿಸಿ. ಕಿವಿಯೊಳಗೆ ತಂಪಾದ ಗಾಳಿ ಸೋಕಿದರೆ ಕೂಡ ದೇಹಕ್ಕೆ ಚಳಿಯ ಅನುಭವವಾಗುತ್ತದೆ. ಆದಕಾರಣ ಮಂಕಿಕ್ಯಾಪ್ ಅಥವಾ ಹತ್ತಿ ಬಳಸಿ ಕಿವಿಗಳೊಳಗೆ ಗಾಳಿ ಸೇರದಂತೆ ತಡೆಯಿರಿ.

ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಇರಲಿ ಎಚ್ಚರ!

ಬೆಚ್ಚಗಿನ ನೀರು ಬಳಸಿ: ಕೊರೆವ ಚಳಿಯಲ್ಲಿ ಮುಖಕ್ಕೆ ಬೆಚ್ಚಗಿನ ನೀರು ತಾಗಿಸಿಕೊಳ್ಳುವುದರಿಂದ ಹಿತವೆನಿಸುತ್ತದೆ. ಬಿಸಿ ಬಿಸಿ ನೀರಿನ ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸು ಎರಡೂ ಉಲ್ಲಾಸಿತಗೊಳ್ಳುತ್ತದೆ.

ಬಿಸಿ ಬಿಸಿ ಕಾಫಿಗೆ ತುಟಿ ತಾಗಿಸಿ: ಚಳಿಗಾಲದಲ್ಲಿ ಕಾಫಿ ಮೇಲಿನ ಲವ್ ಇಮ್ಮಡಿಯಾಗುತ್ತದೆ. ಘಮ ಘಮ ಘಮಲಿನ ಬಿಸಿ ಬಿಸಿ ಕಾಫಿ ತುಟಿ ತಾಕಿ ನಾಲಿಗೆಗೆ ಹಿತ ನೀಡಿ ಗಂಟಲನ್ನು ಬೆಚ್ಚಗಾಗಿಸುತ್ತಿದ್ದರೆ, ಆಹಾ! ಅದೆಂಥ ಸುಖ. ಕಾಫಿ ದೇಹದೊಳಗೆಲ್ಲ ಬೆಚ್ಚಗಿನ ಅನುಭೂತಿ ಮೂಡಿಸಿ ಮೈ ಮನಕ್ಕೆ ಮುದ ನೀಡುವ ಮೂಲಕ ನಿಮ್ಮನ್ನು ಮುಂದಿನ ಕೆಲಸಕ್ಕೆ ಅಣಿಗೊಳಿಸುತ್ತದೆ.

ಈರುಳ್ಳಿ ಹೆಚ್ಚುವಾಗ ಮಾತ್ರ ಕಣ್ಣೀರು ಆರೋಗ್ಯಕ್ಕೆ ಪನ್ನೀರು!

ಯೋಗ ಅಥವಾ ವ್ಯಾಯಾಮ ಮಾಡಿ: ಬೆಳಗ್ಗೆ ಪಾರ್ಕ್ಗೆ ತೆರಳಿ ಜಾಗಿಂಗ್ ಮಾಡುವುದು ಚಳಿಗಾಲದಲ್ಲಿ ಸ್ವಲ್ಪ ಕಷ್ಟದ ಕೆಲಸವೇ ಸರಿ. ನಿಮಗೆ ಮನೆಯಿಂದ ಹೊರಗಡಿಯಿಡುವುದು ಕಷ್ಟ ಎನಿಸಿದರೆ ಮನೆಯಲ್ಲೇ ವ್ಯಾಯಾಮ ಅಥವಾ ಯೋಗ ಮಾಡಿ. ಪ್ರತಿದಿನ ಬೆಳಗ್ಗೆ ಕನಿಷ್ಠ 15-20 ನಿಮಿಷವಾದರೂ ಇದಕ್ಕೆ ಮೀಸಲಿಡಿ. ಇದರಿಂದ ಶರೀರಕ್ಕೆ ಅಂಟಿಕೊಂಡಿರುವ ಆಲಸ್ಯ ದೂರವಾಗುವ ಜೊತೆಗೆ ಇಡೀ ದಿನ ನಿಮ್ಮ ಮೈ ಮನ ಉಲ್ಲಾಸಿತವಾಗಿರುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಳಿಗಾಲದಲ್ಲಿಯೇ ಕಿವಿ ನೋವು, ತುರಿಕೆ, ಸೋಂಕಿನ ಸಮಸ್ಯೆ ಕಾಡುವುದೇಕೆ.. ಈ ಸಮಯದಲ್ಲಿ ನಾವೇನು ಮಾಡಬೇಕು?
World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?