
ಋತು ಬದಲಾಗುವ ಸಮಯದಲ್ಲಿ ದೇಹ ಅದಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಚಳಿಗಾಲದಿಂದ ಬೇಸಿಗೆಕಾಲ ಶುರುವಾದಾಗ ಅಥವಾ ಬೇಸಿಗೆಯಿಂದ ಮಳೆಗಾಲಕ್ಕೆ ಋತು ಬದಲಾದಾಗ ಅನಾರೋಗ್ಯಗಳು ಕಾಡುವುದು ಹೆಚ್ಚು. ಮಕ್ಕಳಿಗೆ ಅನೇಕ ಬಾರಿ ಕಾಲೋಚಿತ ಜ್ವರ, ಹೊಟ್ಟೆ ಸಮಸ್ಯೆಗಳು ಮತ್ತು ಶೀತದಂತಹ ಸಮಸ್ಯೆಗಳು ಶುರುವಾಗುತ್ತವೆ. ದೊಡ್ಡವರಿಗಿಂತ ಮಕ್ಕಳಿಗೆ ಖಾಯಿಲೆ (Disease) ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಬೇಸಿಗೆಯಿಂದ ಮಳೆಗಾಲ ಶುರುವಾಗುವ ಸಮಯದಲ್ಲಿ ಇದು ಹೆಚ್ಚಾಗಿ ಕಾಡುತ್ತದೆ. ಶಾಲೆ (School) ಶುರುವಾಗುವ ಕಾರಣ ಒಬ್ಬರಿಂದ ಇನ್ನೊಬ್ಬರಿಗೆ ಜ್ವರ, ನೆಗಡಿ, ಕೆಮ್ಮ ಹರಡುತ್ತದೆ. ಕೆಮ್ಮಿನಿಂದ ಇನ್ನೇನು ಚೇತರಿಸಿಕೊಂಡಿದ್ದಾರೆ ಎನ್ನುವಾಗ್ಲೇ ಮತ್ತೊಮ್ಮೆ ಕೆಮ್ಮು ಶುರುವಾಗಿರುತ್ತದೆ.
ಮಕ್ಕಳನ್ನು ಶಾಲೆ ಬಿಡಿಸೋದು ಸಾಧ್ಯವಿಲ್ಲ. ಇದೇ ಸಮಯದಲ್ಲಿ ಮಕ್ಕಳ ಆರೋಗ್ಯ (Health) ಕಾಪಾಡೋದು ಪಾಲಕರಿಗೆ ಸವಾಲಾಗಿರುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ಸಮಸ್ಯೆ ಹೆಚ್ಚಾಗಿ ಕಾಡುವುದಿಲ್ಲ. ಅದೇ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಲ್ಲಿ ಅನಾರೋಗ್ಯ ಹೆಚ್ಚು. ಬದಲಾಗುತ್ತಿರುವ ಋತು (eason) ವಿನಲ್ಲಿ ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸವನ್ನು ಪಾಲಕರು ಮಾಡ್ಬೇಕು. ಕೆಲ ಆಹಾರವನ್ನು ಮಕ್ಕಳಿಗೆ ನಿಯಮಿತವಾಗಿ ನೀಡೋದ್ರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸೋದು ಹೇಗೆ? :
ನೀರು : ವಯಸ್ಕರಿಗೆ ಮಾತ್ರವಲ್ಲ ಮಕ್ಕಳಿಗೂ ನೀರಿನ ಅವಶ್ಯಕತೆಯಿದೆ. ನೀರು, ಮಕ್ಕಳ ದೇಹಕ್ಕೆ ಶಕ್ತಿ ನೀಡಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೀರು ಕುಡಿಯೋದ್ರಿಂದ ಮಕ್ಕಳು ಅನೇಕ ರೋಗದಿಂದ ದೂರವಿರ್ತಾರೆ. ಮಕ್ಕಳ ಎಲುಬು ಬಲಗೊಳ್ಳುವ ಜೊತೆಗೆ ಜೀರ್ಣಕ್ರಿಯೆ ಸುಲಭವಾಗುತ್ತದೆ.
Health Tips : ಮಕ್ಕಳ ಶರೀರದಲ್ಲಿ ಬರ್ತ್ ಮಾರ್ಕ್ ಏಕಿರುತ್ತೆ?
ಋತುವಿನ ತರಕಾರಿ : ಆಯಾ ಋತುವಿನಲ್ಲಿ ಯಾವ ತರಕಾರಿ ಲಭ್ಯವಾಗುತ್ತದೆಯೋ ಅದನ್ನು ಮಕ್ಕಳಿಗೆ ಅವಶ್ಯವಾಗಿ ನೀಡಬೇಕು. ಆ ತರಕಾರಿಗಳು ಮಕ್ಕಳ ದೇಹದಲ್ಲಿ ಕಾಡುವ ದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಕ್ಕಳಿಗೆ, ಪಾಲಕ್ ಸೊಪ್ಪು, ಸೋರೆಕಾಯಿ, ತುಪ್ಪ, ಬೀಟ್‌ರೂಟ್ ಮುಂತಾದ ತರಕಾರಿಗಳನ್ನು ನಿಯಮಿತವಾಗಿ ನೀಡಬೇಕಾಗುತ್ತದೆ. ಈ ತರಕಾರಿಗಳನ್ನು ಮಕ್ಕಳು ತಿನ್ನುವುದರಿಂದ ಅವರಿಗೆ ರಕ್ತಹೀನತೆ ಸಮಸ್ಯೆ ಕಾಡುವುದಿಲ್ಲ.
ಪ್ರೋಟೀನ್ ಯುಕ್ತ ಆಹಾರ : ಪನೀರ್, ಸೋಯಾ, ಬಟಾಣಿ, ಡ್ರೈ ಫ್ರೂಟ್ಸ್, ಮೊಟ್ಟೆ ಮತ್ತು ಚಿಕನ್ ಇತ್ಯಾದಿಗಳಲ್ಲಿ ಪ್ರೋಟೀನ್ ಹೆಚ್ಚಿನ ಮಟ್ಟದಲ್ಲಿರುತ್ತದೆ. ಇದನ್ನು ಮಕ್ಕಳಿಗೆ ನೀಡುವುದ್ರಿಂದ ಮಕ್ಕಳ ಆರೋಗ್ಯ ಸುಧಾರಿಸುತ್ತದೆ. ರೋಗ ನಿರೋಧಕ ಶಕ್ತಿಯಲ್ಲಿ ಹೆಚ್ಚಳವಾಗುತ್ತದೆ. ಸ್ನಾಯುಗಳು ಬಲಪಡೆಯುತ್ತವೆ.
Childrens Health: ಮಕ್ಕಳು ಏನ್ ಕೊಟ್ರೂ ತಿನ್ನೋದಿಲ್ಲ, ಇದಕ್ಕೇನು ಪರಿಹಾರ?
ಮೊಸರು : ಮಕ್ಕಳಿಗೆ ಪಾಲಕರು ನೀಡುವ ಆಹಾರ ಬಹಳ ಮುಖ್ಯವಾಗುತ್ತದೆ. ಈಗಿನ ದಿನಗಳಲ್ಲಿ ಮಕ್ಕಳು ಫಾಸ್ಟ್ ಫುಡ್ ಸೇವನೆ ಮಾಡ್ತಿದ್ದಾರೆ. ಪ್ಯಾಕ್ ಮಾಡಿದ ಆಹಾರವನ್ನು ಕೂಡ ಹೆಚ್ಚಾಗಿ ಬಳಕೆ ಮಾಡ್ತಿದ್ದಾರೆ. ಇವುಗಳ ಜೊತೆ ಕೋಲ್ಡ್ ಡ್ರಿಂಕ್ಸ್ ಕೂಡ ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಮಕ್ಕಳನ್ನು ಈ ಆಹಾರದಿಂದ ದೂರವಿಡಬೇಕು. ಮೊಸರು ಸೇರಿದಂತೆ ಹಾಲಿನ ಉತ್ಪನ್ನಗಳನ್ನು ನೀಡ್ಬೇಕು. ಮೊಸರಿನಲ್ಲಿ ಪ್ರೋಟೀನ್, ಕಬ್ಬಿಣ, ಸತು ಮತ್ತು ವಿಟಮಿನ್ ಸಿ ಇದ್ದು, ಇದು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೂಳೆಗಳನ್ನು ಬಲಪಡಿಸುವ ಕೆಲಸ ಮೊಸರಿನಿಂದ ಆಗುತ್ತದೆ.
ಮಕ್ಕಳಿಗೆ ದೈಹಿಕ ವ್ಯಾಯಾಮ : ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಜೊತೆಗೆ ಅವರ ದೈಹಿಕ ಕ್ರಿಯೆಯ ಬಗ್ಗೆ ಪಾಲಕರು ಗಮನ ನೀಡಬೇಕು. ಮಕ್ಕಳು ಆಹಾರ ತಿಂದು, ಕುಳಿತಲ್ಲೇ ಮೊಬೈಲ್ ವೀಕ್ಷಣೆ ಮಾಡ್ತಿದ್ದರೆ, ಟಿವಿ ನೋಡ್ತಿದ್ದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಸಾಧ್ಯವಿಲ್ಲ. ದೈಹಿಕ ವ್ಯಾಯಾಮ ಅತ್ಯಗತ್ಯ. ಮಕ್ಕಳು ಮನೆಯಿಂದ ಹೊರಗೆ ಬಿದ್ದು, ಆಟವಾಡಿದ್ರೆ , ದೇಹಕ್ಕೆ ವ್ಯಾಯಾಮ ನೀಡಿದ್ರೆ ದೇಹ ಶಕ್ತಿಪಡೆಯುವ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಿ ಸೋಂಕಿನ ವಿರುದ್ಧ ಹೋರಾಡಲು ದೇಹ ಸಿದ್ಧವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.