
ಅನೇಕ ಹುಡುಗಿಯರು ನಾಯಿಗಳು, ಕುದುರೆಗಳು ಅಥವಾ ಇತರ ದೊಡ್ಡ ಪ್ರಾಣಿಳ ಜೊತೆ, ಚೆನ್ನಾಗಿ ಆಟವಾಡುತ್ತಾ ಇರೋದನ್ನು ನೀವು ಹೆಚ್ಚಾಗಿ ಗಮನಿಸಿರಬಹುದು,ಅಷ್ಟೇ ಯಾಕೆ ಕೆಲವು ಹುಡುಗಿಯರಿಗಂತೂ ದೆವ್ವವನ್ನು ಕಂಡ್ರೂ ಭಯ ಇರಲ್ಲ. ಆದರೆ ಗೋಡೆಯ ಮೇಲೆ ಹಲ್ಲಿಯನ್ನು ನೋಡಿದ ತಕ್ಷಣ ಅವರು ಭಯಭೀತರಾಗುತ್ತಾರೆ. ಕಿರುಚುವುದು, ಇದ್ದಕ್ಕಿದ್ದಂತೆ ಬೆಚ್ಚಿ ಬೀಳುವುದು ಅಥವಾ ತಕ್ಷಣ ಓಡಿಹೋಗುವುದು ಸಾಮಾನ್ಯ. ಆದರೆ ಈ ನಿರುಪದ್ರವ, ಸಣ್ಣ ಹಲ್ಲಿ ನಮ್ಮನ್ನು ಕಚ್ಚದಿದ್ದರೂ ನಾವು ಏಕೆ ಹೆದರುತ್ತೇವೆ? ಇದಕ್ಕೆ ಕಾರಣ ಏನು ಅನ್ನೋದನ್ನು ನೋಡೋಣ.
ತಜ್ಞರ ಪ್ರಕಾರ, ಮೆದುಳು ಏನನ್ನಾದರೂ ಬೆದರಿಕೆ ಎಂದು ಗ್ರಹಿಸಿದಾಗ, ಅದು ತಕ್ಷಣ ಪ್ರತಿಕ್ರಿಯಿಸುತ್ತದೆ. ಈ ಪ್ರಕ್ರಿಯೆಯಲ್ಲಿ, ಅಮಿಗ್ಡಾಲಾ ಎಂದು ಕರೆಯಲ್ಪಡುವ ಮೆದುಳಿನ ಒಂದು ಭಾಗವು ಸಕ್ರಿಯಗೊಳ್ಳುತ್ತದೆ. ಈ ಪ್ರದೇಶವು ಭಾವನೆಗಳನ್ನು ನಿಯಂತ್ರಿಸುತ್ತದೆ ಮತ್ತು ದೇಹದ "ಫೈಟ್ ಅಥವಾ ಫ್ಲೈಟ್" ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ. ಇದು ಅಡ್ರಿನಾಲಿನ್‌ನಂತಹ ಒತ್ತಡದ ಹಾರ್ಮೋನು ಬಿಡುಗಡೆ ಮಾಡುತ್ತದೆ, ಇದರಿಣ್ದಾಗಿ ಹೃದಯ ಬಡಿತ ಹೆಚ್ಚಳ, ತ್ವರಿತ ಉಸಿರಾಟ ಮತ್ತು ಬೆವರುವಿಕೆಗೆ ಕಾರಣವಾಗುತ್ತದೆ. ಹಲ್ಲಿಗೆ ಹೆದರುವಂತದ್ದು ಏನು ಇಲ್ಲ ಎಂದು ತಿಳಿದಿದ್ದರೂ ಸಹ, ಅನೇಕ ಜನರು ಅದನ್ನು ನೋಡಿದಾಗ ಆತಂಕಕ್ಕೊಳಗಾಗುತ್ತಾರೆ.
ಚಾರ್ಲ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಪ್ರಕಾರ, ನಮ್ಮ ಮೆದುಳಿಗೆ ನಿಜವಾದ ಅಪಾಯ ಮತ್ತು ಗ್ರಹಿಸಿದ ಅಪಾಯದ ನಡುವೆ ತಕ್ಷಣ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಒಮ್ಮೆ ಯಾವುದಕ್ಕಾದರೂ ಭಯದ ಪ್ರತಿಕ್ರಿಯೆ ಉಂಟಾದರೆ, ದೇಹವು ಅದರ ಬಗ್ಗೆ ಯೋಚಿಸುವ ಮೊದಲೇ ಅದೇ ರೀತಿ ಪ್ರತಿಕ್ರಿಯಿಸುತ್ತದೆ. ಫೋಬಿಯಾಗಳಲ್ಲಿ, ವ್ಯಕ್ತಿಯ ಭಯವು ನಿಜವಾದ ಅಪಾಯಕ್ಕಿಂತ ಡೇಂಜರಸ್ ಆಗಿದೆ, ಅಂದರೆ ಮೆದುಳು ಈ ಭಯವನ್ನು ಸಂಪೂರ್ಣವಾಗಿ ನೈಜವೆಂದು ಭಾವಿಸುತ್ತದೆ ಎಂದು ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ತಿಳಿಸಿದೆ.
ಮನಶ್ಶಾಸ್ತ್ರಜ್ಞರ ಪ್ರಕಾರ, ಹಲ್ಲಿಗಳ ಭಯವು ವಿವಿಧ ಕಾರಣಗಳಿಗಾಗಿ ಬೆಳೆಯಬಹುದು. ಕೆಲವರಿಗೆ ಇದು ಬಾಲ್ಯದ ಅನುಭವಕ್ಕೆ ಸಂಬಂಧಿಸಿದೆ, ಆದರೆ ಇನ್ನು ಕೆಲವರು ತಮ್ಮ ಪೋಷಕರು ಅಥವಾ ಇತರ ಕುಟುಂಬ ಸದಸ್ಯರು ಹಲ್ಲಿಗಳಿಗೆ ಹೆದರುವುದನ್ನು ಗಮನಿಸುವ ಮೂಲಕ ಈ ಭಯವನ್ನು ತಮ್ಮಲ್ಲೂ ಬೆಳೆಸಿಕೊಳ್ಳುತ್ತಾರೆ. ಇದನ್ನು ಸ್ಪೆಸಿಫಿಕ್ ಫೋಬಿಯಾ ಎಂದು ಕರೆಯಲಾಗುತ್ತದೆ, ಇದರಲ್ಲಿ ನಿರ್ದಿಷ್ಟ ವಸ್ತು ಅಥವಾ ಪರಿಸ್ಥಿತಿಯ ಅತಿಯಾದ ಭಯವನ್ನು ಅನುಭವಿಸಲಾಗುತ್ತದೆ. ಈ ಫೋಬಿಯಾ ಹಾವುಗಳು ಅಥವಾ ಜೇಡಗಳ ಭಯದಷ್ಟು ಸಾಮಾನ್ಯವಲ್ಲದಿದ್ದರೂ, ಅದರ ರಚನೆಯ ಪ್ರಕ್ರಿಯೆಯು ಹೋಲುತ್ತದೆ. ಹಠಾತ್ ಮತ್ತು ವೇಗವಾಗಿ ಚಲಿಸುವ ಜೀವಿಗಳ ಬಗ್ಗೆ ಮಾನವ ಮೆದುಳು ಹೆಚ್ಚು ಜಾಗರೂಕವಾಗಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಹಲ್ಲಿಯ ಹಠಾತ್ ಚಲನೆ, ಅದರ ವಿಶಿಷ್ಟ ದೈಹಿಕ ನೋಟ ನಮ್ಮ ಮೆದುಳಿಗೆ ಅಪಾಯದ ಸೂಚನೆ ನೀಡುತ್ತದೆ. ಹಾಗಾಗಿಯೇ ಹೆಚ್ಚಾಗಿ ಜನರು ಹಲ್ಲಿ ಕಂಡ ತಕ್ಷಣ ಹೆದರುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.