ಅರ್ಧ ರೇಟಿಗೆ ಸಿಗ್ತಿದೆ ಅಂತ ಅಪ್ಪಿತಪ್ಪಿಯೂ ತಿನ್ಬೇಡಿ.. ಇವ್ರು ದೇವಸ್ಥಾನದ ಹೊರಗೆ ಮಾರೋದು ನಾಟಿ ಬಾದಾಮಿಯಲ್ಲ!

Published : Oct 27, 2026, 05:34 PM IST
Bitter almonds toxicity

ಸಾರಾಂಶ

Bitter almonds toxicity: ಕೆಲವು ಯಾತ್ರಾ ಸ್ಥಳಗಳಲ್ಲಿ ರಸ್ತೆಬದಿಯಲ್ಲಿ ಅಂಗಡಿಗಳಿಗಿಂತ ಅರ್ಧ ಬೆಲೆಗೆ ನಾಟಿ ಬಾದಾಮಿ ಎಂದು ಮಾರುವ ಸಣ್ಣ ಬಾದಾಮಿಗಳನ್ನು ಖರೀದಿಸಿದ್ದೀರಾ? ಹಾಗಿದ್ದರೆ ಎಚ್ಚೆತ್ತುಕೊಳ್ಳಿ! ಬಾದಾಮಿಯಂತೆಯೇ ಕಾಣುವ ಇವುಗಳಲ್ಲಿ ಮಾರಣಾಂತಿಕ 'ಸೈನೈಡ್' ವಿಷವಿರುತ್ತದೆ ಎಂದು ಮೈಸೂರು ವಿವಿಯ ಜೆನೆಟಿಕ್ಸ್ ವಿಭಾಗದ ಮುಖ್ಯಸ್ಥರು ಎಚ್ಚರಿಸಿದ್ದಾರೆ.

ಬಾದಾಮಿ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತು. ಆದರೆ, ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಎಲ್ಲೆಂದರಲ್ಲಿ ಬಾದಾಮಿ ಖರೀದಿಸಿ ತಿಂದರೆ ಅದು ಜೀವಕ್ಕೇ ಅಪಾಯ ತರಬಹುದು! ಮೈಸೂರು ವಿಶ್ವವಿದ್ಯಾನಿಲಯದ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ಎಸ್. ಮಾಲಿನಿ ಅವರು ಕೆಲವು ಯಾತ್ರಾ ಸ್ಥಳಗಳಲ್ಲಿ ಸಿಗುವ ಅಗ್ಗದ ಬಾದಾಮಿ ಹಾಗೂ ನಾವು ನಿತ್ಯ ಬಳಸುವ ಕೆಲ ಬೀಜಗಳ ಹಿಂದಿರುವ ಮಾರಕ ವಿಷದ ಬಗ್ಗೆ ಮಹತ್ವದ ಎಚ್ಚರಿಕೆ ನೀಡಿದ್ದಾರೆ.

ಅರ್ಧ ರೇಟಿನ ಬಾದಾಮಿಯ ಅಸಲಿ ಕತೆ

ಪ್ರಮುಖ ದೇವಸ್ಥಾನಗಳ ಹೊರಗೆ ಮಹಿಳೆಯರು ಅಂಗಡಿ ರೇಟಿಗಿಂತ ಅರ್ಧ ಬೆಲೆಗೆ ಸಣ್ಣದಾದ, ಗುಂಡನೆಯ ಬಾದಾಮಿಗಳನ್ನು ‘ನಾಟಿ ಬಾದಾಮಿ’ ಎಂದು ಮಾರುತ್ತಾರೆ. ಆದರೆ ವೈಜ್ಞಾನಿಕವಾಗಿ ಇದು ನಾಟಿ ಬಾದಾಮಿಯಲ್ಲ, ಬದಲಿಗೆ ‘ಕಹಿ ಬಾದಾಮಿ’ (Bitter Almond / Wild Almond). ಇದನ್ನು ಬಾಯಿಗೆ ಹಾಕಿಕೊಂಡರೆ ಕೊಂಚ ಕಹಿ ಮತ್ತು ಒಗರು ರುಚಿ ಇರುತ್ತದೆ.

ಬಾದಾಮಿಯಲ್ಲಿ ಸೈನೈಡ್ ವಿಷ ಹೇಗಿರುತ್ತೆ?

ಗಿಡಗಳು ಕೀಟಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನೈಸರ್ಗಿಕವಾಗಿಯೇ ‘ಫೈಟೋಟಾಕ್ಸಿನ್’ ಎಂಬ ವಿಷವನ್ನು ಉತ್ಪಾದಿಸುತ್ತವೆ. ಈ ಕಹಿ ಬಾದಾಮಿ ಹಾಗೂ ಸಕ್ಕರೆ ಬಾದಾಮಿಯ (ಆಪ್ರಿಕಾಟ್ / Apricot) ಒಳಗಿನ ಬೀಜಗಳಲ್ಲಿ ‘ಅಮೆಗ್ಡಾಲಿನ್’ (Amygdalin) ಎಂಬ ಸೈನೋಜೆನಿಕ್ ರಾಸಾಯನಿಕ ಇರುತ್ತದೆ.
ಇದು ದೇಹ ಪ್ರವೇಶಿಸುತ್ತಿದ್ದಂತೆ ಹೈಡ್ರೋಜನ್ ಸೈನೈಡ್ (Hydrogen Cyanide) ಆಗಿ ಬದಲಾಗುತ್ತದೆ.
ಇದು ನಮ್ಮ ಜೀವಕೋಶಗಳ ಮೈಟೋಕಾಂಡ್ರಿಯಾದ ಮೇಲೆ ದಾಳಿ ಮಾಡಿ, ದೇಹಕ್ಕೆ ಶಕ್ತಿ ನೀಡುವ ಎಟಿಪಿ (ATP) ಉತ್ಪಾದನೆಯನ್ನು ನಿಲ್ಲಿಸುತ್ತದೆ.
ಇದರಿಂದ ರಕ್ತದಲ್ಲಿ ಆಮ್ಲಜನಕವಿದ್ದರೂ ಜೀವಕೋಶಗಳಿಗೆ ಆಕ್ಸಿಜನ್ ಸಿಗದೆ 'ಹೈಪಾಕ್ಸಿಯಾ' ಸ್ಥಿತಿ ನಿರ್ಮಾಣವಾಗುತ್ತದೆ.
ದೇಹದ 20% ಶಕ್ತಿಯನ್ನು ಬಳಸುವ ಮೆದುಳು ಮತ್ತು ಹೃದಯಕ್ಕೆ ಎನರ್ಜಿ ಸಿಗದೆ ಅವು ನಿಷ್ಕ್ರಿಯಗೊಳ್ಳಬಹುದು. ವಿಶೇಷವಾಗಿ ಮಕ್ಕಳಿಗೆ ಇದು ಅತ್ಯಂತ ಅಪಾಯಕಾರಿ!

ಅಪ್ಪಿತಪ್ಪಿಯೂ ತಿನ್ನಬಾರದ ಇತರ ವಿಷಕಾರಿ ಬೀಜಗಳು

ಹರಳೆ ಬೀಜ (Castor Seeds)
ಹರಳೆ ಎಣ್ಣೆ (ಕ್ಯಾಸ್ಟರ್ ಆಯಿಲ್) ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಹರಳೆ ಬೀಜದಲ್ಲಿ ‘ರಿಸಿನ್’ (Ricin) ಎಂಬ ಅತ್ಯಂತ ಪ್ರಬಲವಾದ ವಿಷವಿರುತ್ತದೆ. ಇದು ಜೀವಕೋಶಗಳಲ್ಲಿ ಪ್ರೋಟೀನ್ ಉತ್ಪಾದನೆಯನ್ನೇ ನಾಶಮಾಡಿ ಜೀವಕ್ಕೆ ಕುತ್ತು ತರುತ್ತದೆ.

ಹಸಿ ಕಿಡ್ನಿ ಬೀನ್ಸ್ / ರಾಜ್ಮಾ
ಕಿಡ್ನಿ ಬೀನ್ಸ್ ಅನ್ನು ಹಸಿಯಾಗಿ ಅಥವಾ ಅರ್ಧಂಬರ್ಧ ಬೇಯಿಸಿ ತಿನ್ನಲೇಬಾರದು. ಇದರಲ್ಲಿ ‘ಲೆಕ್ಟಿನ್ / ಫೈಟೋಹಿಮಾಗ್ಲುಟಿನಿನ್’ ಎಂಬ ವಿಷಕಾರಿ ಅಂಶವಿದ್ದು, ತೀವ್ರ ವಾಂತಿ, ತಲೆಸುತ್ತು ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತದೆ. ಇದನ್ನು ಚೆನ್ನಾಗಿ ನೆನೆಸಿ, ಕುದಿಸಿ ಬೇಯಿಸಿಯೇ ತಿನ್ನಬೇಕು.

ದತ್ತೂರ (Datura)
ಶಿವನ ಪೂಜೆಗೆ ಬಳಸುವ ದತ್ತೂರ ಬೀಜಗಳಲ್ಲಿ ಅಟ್ರೋಪಿನ್ ಮತ್ತು ಸ್ಕೋಪೋಲಮೈನ್ ಎಂಬ ಅಪಾಯಕಾರಿ ರಾಸಾಯನಿಕಗಳಿವೆ. ಇದನ್ನು ಸೇವಿಸಿದರೆ ಹೃದಯ ಬಡಿತ ಏರುಪೇರಾಗಿ, ಕಾರ್ಡಿಯಾಕ್ ಅರೆಸ್ಟ್ ಅಥವಾ ಮೆದುಳು ನಿಷ್ಕ್ರಿಯಗೊಂಡು ಸಾವು ಸಂಭವಿಸಬಹುದು.

ಆಪ್ರಿಕಾಟ್ (ಸಕ್ಕರೆ ಬಾದಾಮಿ) ಒಳಬೀಜ
ಆಪ್ರಿಕಾಟ್ ಹಣ್ಣಿನ ಬೀಜವನ್ನು ಜಜ್ಜಿದರೆ ಒಳಗೆ ಸಣ್ಣ ಬಾದಾಮಿಯಂತಹ ಬೀಜ ಸಿಗುತ್ತದೆ. ಮಕ್ಕಳ ಇದನ್ನು ಆಟವಾಡುತ್ತಾ ತಿನ್ನುತ್ತಾರೆ. ಇದರಲ್ಲೂ ಸೈನೈಡ್ ಅಂಶವಿರುವುದರಿಂದ ಮಕ್ಕಳಿಗೆ ಎಂದಿಗೂ ಕೊಡಬೇಡಿ.

ಹಾಗಾದರೆ ಸುರಕ್ಷಿತ ಬೀಜಗಳು ಯಾವುವು? ಹೇಗೆ ತಿನ್ನಬೇಕು?

ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ, ಚಿಯಾ ಸೀಡ್ಸ್, ಕಾಮಕಸ್ತೂರಿ (ಸಬ್ಜಾ), ಎಳ್ಳು, ಕಡಲೆಕಾಯಿ ಹಾಗೂ ಸಾಮಾನ್ಯ ಬಾದಾಮಿ ಸಂಪೂರ್ಣ ಸುರಕ್ಷಿತ.

ನೆನೆಸಿ ತಿನ್ನುವ ಸೀಕ್ರೆಟ್
ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆಸಿ, ಸಿಪ್ಪೆ ತೆಗೆದು ತಿನ್ನಬೇಕು. ಇದರಿಂದ ಅದರಲ್ಲಿರುವ ಟ್ಯಾನಿನ್, ಫೈಟೇಟ್‌ಗಳಂತಹ ಪೋಷಕಾಂಶ-ವಿರೋಧಿ ಅಂಶಗಳು ನೀರಿನಲ್ಲಿ ಕರಗಿ, ಬಾದಾಮಿಯ ಸಂಪೂರ್ಣ ಬಲ ದೇಹಕ್ಕೆ ಸಿಗುತ್ತದೆ.

ಸಲಹೆ: ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಅಪರಿಚಿತ ಬೀಜಗಳನ್ನು, ಸಣ್ಣ ಕಹಿ ಬಾದಾಮಿಗಳನ್ನು ಕೊಂಡು ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡಬೇಡಿ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Drool: ರಾತ್ರಿ ಮಲಗಿದಾಗ ಜೊಲ್ಲು ಸುರಿಯುತ್ತಿದೆಯೇ? ಅದಕ್ಕೆ ಕಾರಣ ಹಾಗೂ ತಡೆಗಟ್ಟುವ ಸೂಕ್ತ ಉಪಾಯ ಇಲ್ಲಿದೆ ನೋಡಿ!
83 ವರ್ಷಕ್ಕೂ ಹೆಚ್ಚು ಕಾಲ ಬದುಕುತ್ತಾರಂತೆ ಇಸ್ರೇಲ್ ಜನರು! ಅವರ ದೀರ್ಘಾಯಸ್ಸಿನ ಗುಟ್ಟೇನು ಗೊತ್ತಾ?