
ಬೆಂಗಳೂರು: ನರಮಂಡಲದ ಸಮಸ್ಯೆಯಿಂದ ಉಂಟಾಗುವ 'ಪಾರ್ಕಿನ್ಸನ್' ರೋಗಕ್ಕೆ ಒಳಗಾಗಿದ್ದ 68 ವರ್ಷದ ವ್ಯಕ್ತಿಗೆ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡವು 'ನ್ಯೂರೋಸ್ಮಾರ್ಟ್ ಪೋರ್ಟಬಲ್ ಮೈಕ್ರೋ ಎಲೆಕ್ಟ್ರೋಡ್ ರೆಕಾರ್ಡಿಂಗ್ (MER) ಸಿಸ್ಟಮ್' ಬಳಸಿಕೊಂಡು ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. ಪಾರ್ಕಿನ್ಸನ್ ರೋಗಕ್ಕೆ ನಿಖರ ಚಿಕಿತ್ಸೆ ನೀಡಬಹುದಾದ ನೂತನ ಅಪ್ಲಿಕೇಷನ್‌ನನ್ನು ಫೋರ್ಟಿಸ್ ಆಸ್ಪತ್ರೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಬಳಸಲಾಗಿದೆ.
ಫೋರ್ಟಿಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ರಘುರಾಮ್ ಜಿ, ನರವಿಜ್ಞಾನ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ಗುರುಪ್ರಸಾದ್ ಹೊಸೂರಕರ್ ಹಾಗೂ ನರವಿಜ್ಞಾನ ತಂಡವು ನ್ಯೂರೋಸ್ಮಾರ್ಟ್ ಪೋರ್ಟಬಲ್ MER ವ್ಯವಸ್ಥೆಯನ್ನು ಚಿಕಿತ್ಸಾ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿ ಬಳಸಿಕೊಂಡಿದೆ.
ಈ ಕುರಿತು ಮಾತನಾಡಿದ ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ ರಘುರಾಮ್ ಜಿ, 'ನರಮಂಡಲದಲ್ಲಿ ಆಗುವ ಸಮಸ್ಯೆಯಿಂದ ಉಂಟಾಗುವ ಪಾರ್ಕಿನ್ಸನ್ ವಯಸ್ಸಾದ ಸಾಕಷ್ಟು ಜನರನ್ನು ಕಾಡುತ್ತದೆ. ಈ ಕಾಯಿಲೆ ಬಂದವರಿಗೆ ಇಡೀ ದೇಹವೇ ನಡುಕ ಉಂಟಾಗುತ್ತದೆ' ಎಂದಿದ್ದಾರೆ.
ತಮ್ಮ ಯಶಸ್ವಿ ಶಸ್ತ್ರಚಿಕಿತ್ಸೆ ಬಗ್ಗೆ ಹೇಳುತ್ತಾ, '68 ವರ್ಷದ ಪ್ರಕಾಶ್ ಎಂಬವರು ಸಹ ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದರು. ಅಷ್ಟೇ ಅಲ್ಲದೆ, ರಕ್ತದೊತ್ತಡ, ಮಧುಮೇಹದಂತಹ ಇತರ ಆರೋಗ್ಯ ಸಮಸ್ಯೆ ಹೊಂದಿದ್ದರು. ಈ ಹಿಂದೆ ಅವರು ತಮ್ಮ ಹೃದಯ, ಬೆನ್ನುಮೂಳೆ, ಅಂಡವಾಯುಗಳ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಇಷ್ಟೆಲ್ಲಾ ಆರೋಗ್ಯ ಸಮಸ್ಯೆ ಹೊಂದಿರುವ ಪ್ರಕಾಶ್ ಅವರ ಕುತ್ತಿಗೆ ಸೇರಿದಂತೆ ಇಡೀ ದೇಹವೇ ನಡುಕ ಉಂಟು ಮಾಡುವ ಪಾರ್ಕಿನ್ಸನ್ ಕಾಯಿಲೆಯು ಅವರನ್ನು ಸಂಪೂರ್ಣ ನಲುಗಿಸಿತ್ತು'
ಆದರೆ ನ್ಯೂರೋಸ್ಮಾರ್ಟ್ ಪೋರ್ಟಬಲ್ ಮೈಕ್ರೋ ಎಲೆಕ್ಟ್ರೋಡ್ ರೆಕಾರ್ಡಿಂಗ್ ಸುಧಾರಿತ ತಂತ್ರಜ್ಞಾನವು ಡೀಪ್ ಬ್ರೈನ್ ಸ್ಟಿಮ್ಯುಲೇಶನ್ (DBS) ಚಿಕಿತ್ಸೆಗೆ ನಿಖರತೆ ನೀಡಲಿದೆ. ಈ ತಂತ್ರಜ್ಞಾನದ ಮೂಲಕ ಮೆದುಳಿನಲ್ಲಿ ಆಗಿರುವ ಸಮಸ್ಯೆಗಳನ್ನು ಸೂಕ್ಷ್ಮರೀತಿಯಲ್ಲಿ ವಿಶ್ಲೇಷಣೆ ಮಾಡಿ, ಅದಕ್ಕೆ ಸೂಕ್ತ ರೀತಿಯ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಈ ತಂತ್ರಜ್ಞಾನವನ್ನು ದೇಶದಲ್ಲೇ ಮೊದಲ ಬಾರಿಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಇನ್ನು ಈ ನೂತನ ತಂತ್ರಜ್ಞಾನವಾದ ನ್ಯೂರೋಸ್ಮಾರ್ಟ್‌ನಲ್ಲಿ AI ಸಾಮರ್ಥ್ಯಗಳನ್ನು ಬಳಸಿಕೊಂಡು, ರೋಗಿಯು ಎಚ್ಚರವಾಗಿರುವಂತೆ ನೋಡಿಕೊಂಡು ಈ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ರೋಗಿಯು ನಿದ್ರೆಗೆ ಜಾರದಂತೆ ನೋಡಿಕೊಳ್ಳಲಾಗುವುದು. ಈ ಮೂಲಕ ಸುಲಭ ಹಾಗೂ ವೇಗವಾಗಿ ಚಿಕಿತ್ಸೆ ನೀಡಲಾಗುತ್ತದೆ. ಶಸ್ತ್ರಚಿಕಿತ್ಸೆಯಾದ ಐದು ದಿನಗಳಲ್ಲೇ ರೋಗಿಯನ್ನು ಡಿಸ್ಚಾರ್ಚ್ ಮಾಡಲಾಯಿತು. ಪಾರ್ಕಿನ್ಸನ್ ಸಮಸ್ಯೆ ಇರುವ ವಯೋ ವೃದ್ಧರಿಗೆ ಈ ತಂತ್ರಜ್ಞಾನ ಹೆಚ್ಚು ಉಪಯುಕ್ತವಾಗಲಿದೆ ಎಂದು ವಿವರಿಸಿದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.