ಮಕ್ಕಳು, ಹದಿಹರೆಯದ ಯುವತಿಯರು, ಗರ್ಭಿಣಿಯರು ನಮ್ಮ ದೇಶದಲ್ಲಿ ಅನೀಮಿಕ್ ಆಗಿರುವುದು ಹೆಚ್ಚು. ತಾಯಿ ರಕ್ತಹೀನತೆಯಿಂದ ಬಳಲುತ್ತಿದ್ದರೆ ಹಸುಗೂಸುಗಳು ಸಹ ರಕ್ತಹೀನತೆಗೆ ತುತ್ತಾಗುತ್ತವೆ. ಮುಂದೆ ಇದು ನಾನಾ ರೀತಿಯ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ.
ಬೆಂಗಳೂರು(ಫೆ.13): ಅನೀಮಿಯಾ, ಅರ್ಥಾತ್ ರಕ್ತಹೀನತೆ, ನಮ್ಮ ದೇಹದಲ್ಲಿ ಕಬ್ಬಿಣಾಂಶ ಮತ್ತು ಪೌಷ್ಟಿಕಾಂಶದ ಕೊರತೆಯಿಂದಾಗಿ ಕಾಣಿಸಿಕೊಳ್ಳುವ ಅನಾರೋಗ್ಯ. ಮಕ್ಕಳು, ಹದಿಹರೆಯದ ಯುವತಿಯರು, ಗರ್ಭಿಣಿಯರು ನಮ್ಮ ದೇಶದಲ್ಲಿ ಅನೀಮಿಕ್ ಆಗಿರುವುದು ಹೆಚ್ಚು. ತಾಯಿ ರಕ್ತಹೀನತೆಯಿಂದ ಬಳಲುತ್ತಿದ್ದರೆ ಹಸುಗೂಸುಗಳು ಸಹ ರಕ್ತಹೀನತೆಗೆ ತುತ್ತಾಗುತ್ತವೆ. ಮುಂದೆ ಇದು ನಾನಾ ರೀತಿಯ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ.
ಹರ್ಯಾಣಾದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಅಂದರೆ ಶೇ.70ರಷ್ಟು ಮಂದಿ ಇದರಿಂದ ಬಳಲುತ್ತಿದ್ದಾರೆ. ಜಾರ್ಖಂಡ್‌ನಲ್ಲಿ ಶೇ.69, ಮಧ್ಯಪ್ರದೇಶದಲ್ಲಿ ಶೇ.68, ಬಿಹಾರದಲ್ಲಿ ಶೇ.63.5ರಷ್ಟು ಮಕ್ಕಳು ಅನೀಮಿಯಾದಿಂದ ಬಳಲುತ್ತಿದ್ದಾರೆ ಅಂದರೆ ಈ ಸಮಸ್ಯೆ ನಮ್ಮ ದೇಶದಲ್ಲಿ ಎಷ್ಟು ವ್ಯಾಪಕವಾಗಿದೆ ಎಂಬುದು ಅರ್ಥವಾಗುತ್ತದೆ.
undefined
Health: ಅಲಾಸ್ಕಾಪಾಕ್ಸ್‌ಗೆ ಮೊದಲ ಸಾವು, ಏನಿದರ ಲಕ್ಷಣ?
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಕ್ತಹೀನತೆ ಕಡಿಮೆ ಮಾಡಲು 1970ರಲ್ಲಿ ನ್ಯಾಷನಲ್ ನ್ಯೂಟ್ರಿಷನಲ್ ಅನೀಮಿಯಾ ಫ್ರೊಪಿಲ್ಯಾಕಿಸ್ ಪ್ರೋಗ್ರಾಂ (ಎನ್ಎನ್‌ಎಪಿಪಿ) ಪ್ರಾರಂಭಿಸಿತು. 2018ರಲ್ಲಿ ಇದರ ಹೆಸರು ʻಅನೀಮಿಯಾ ಮುಕ್ತ ಭಾರತʼ ಎಂದು ಬದಲಾಯಿತು. ಬೆಂಗಳೂರಿನ ಭಾರತೀಯ ಶಿಶು ಸಂಘವು ಈ ಬಾರಿ ‘ಐಎಪಿ ಕೆ ಬಾತ್ ಕಮ್ಯೂನಿಟಿ ಕೆ ಸಾಥ್’ ಅಭಿಯಾನ ಹಮ್ಮಿಕೊಂಡಿದೆ. ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಜಿ.ವಿ.ಬಸವರಾಜು ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ.
ರಕ್ತ ಹೀನತೆ ಎಂದರೇನು?
ಶರೀರದ ಅಗತ್ಯಗಳನ್ನು ಪೂರೈಸುವಷ್ಟು ಕೆಂಪು ರಕ್ತ ಕಣಗಳ ಸಂಖ್ಯೆ ನಮ್ಮ ರಕ್ತದಲ್ಲಿ ಇಲ್ಲದಾಗ ಅಥವಾ ಅವುಗಳಿಗೆ ಸಾಕಷ್ಟು ಆಮ್ಲಜನಕ ಪೂರೈಸುವ ಸಾಮರ್ಥ್ಯ ಇಲ್ಲದಿದ್ದಾಗ ಅದನ್ನು ರಕ್ತಹೀನತೆ ಎಂದು ಕರೆಯುತ್ತೇವೆ. ಕಬ್ಬಿಣಾಂಶದ ಕೊರತೆಯು ರಕ್ತಹೀನತೆ ಉಂಟಾಗಲು ಸಾಮಾನ್ಯ ಕಾರಣ. ರಕ್ತದಲ್ಲಿ ಫೋಲೇಟ್, ವಿಟಮಿನ್ ಬಿ12, ವಿಟಮಿನ್ ಎ ಕೊರತೆಗಳು, ದೀರ್ಘಕಾಲದ ಉರಿಯೂತ, ಅನುವಂಶಿಕ ಅಸ್ವಸ್ಥತೆಗಳು ರಕ್ತಹೀನತೆಗೆ ಕಾರಣವಾಗಿವೆ. ವ್ಯಕ್ತಿಯಲ್ಲಿ ಆಯಾಸ, ದೌರ್ಬಲ್ಯ, ತಲೆತಿರುಗುವಿಕೆ, ಅರೆನಿದ್ರಾವಸ್ಥೆ ರಕ್ತಹೀನತೆಯ ಪ್ರಮುಖ ಲಕ್ಷಣಗಳು.
ಪರಿಹಾರ ಏನು?
‘ಅನೀಮಿಯಾ ನಿವಾರಣೆಗೆ ಕಬ್ಬಿಣಾಂಶ ಹೆಚ್ಚಿರುವ ಪದಾರ್ಥಗಳನ್ನು ಸೇವಿಸಬೇಕು. ಹಸಿರು ಸೊಪ್ಪುಗಳು, ಮೊಳಕೆ ಕಾಳುಗಳು, ಬೆಲ್ಲ, ಕರ್ಜೂರ ಹೇರಳವಾಗಿ ಸೇವಿಸಬೇಕು. ವಾರಕ್ಕೊಮ್ಮೆ ಫೋಲೇಟ್ ಸೇವನೆ ಮಾಡಬೇಕು.
ಹಿಮೋಗ್ಲೋಬಿನ್ ಪ್ರಮಾಣ 5-10 ವರ್ಷದವರಲ್ಲಿ 11.5 ಗ್ರಾಂ, 10-15 ವರ್ಷದವರಲ್ಲಿ 12 ಗ್ರಾಂ, 10-14 ವರ್ಷದ ಗಂಡು ಮಕ್ಕಳಲ್ಲಿ 13 ಗ್ರಾಂ ಇರಬೇಕು. ಇದಕ್ಕಿಂತ ಕಡಿಮೆಯಿದ್ದರೆ ಅನೀಮಿಯಾ ಉಂಟಾಗುವ ಸಾಧ್ಯತೆಯಿರುತ್ತದೆ.
ಮುಟ್ಟಿನ ರಕ್ತಹೀನತೆ (10-11 ಗ್ರಾಂ) ಇರುವಾಗ ಧಾತು ರೂಪದ ಕಬ್ಬಿಣದ ಮಾತ್ರೆಗಳನ್ನು ಮೂರು ತಿಂಗಳವರೆಗೆ ವೈದ್ಯರ ಅನುಮತಿ ಮೇರೆಗೆ ತೆಗೆದುಕೊಳ್ಳಬೇಕು.
ಬಂದೇ ಬಿಟ್ಟಿತು ಪರೀಕ್ಷೆ; ಮಕ್ಕಳಲ್ಲಿ ಹೆಚ್ಚುವ ಒತ್ತಡ ನಿಯಂತ್ರಿಸೋದು ಹೇಗೆ?
ತೀವ್ರತರವಾದ ಕಬ್ಬಿಣದ ಅಂಶದ ಕೊರತೆ (ಹಿಮೋಗ್ಲೋಬಿನ್ 8ರಿಂದ 10 ಗ್ರಾಂ) ಇದ್ದಾಗ ಚಿಕಿತ್ಸೆ ನೀಡಬೇಕಾಗುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಕಬ್ಬಿಣಾಂಶ ಕೊರತೆ ನೀಗಿಸಲು ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಕಬ್ಬಿಣ ಮತ್ತು ಫೊಲಿಕ್ ಆಸಿಡ್‌ಗಳ ಮಾತ್ರೆ ವಿತರಿಸಲಾಗುತ್ತಿದೆ. ಮಕ್ಕಳು ಮತ್ತು ಹರೆಯದವರಲ್ಲಿ ರಕ್ತಹೀನತೆಯನ್ನು ಆರಂಭದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಕೊಡುವುದರಿಂದ ಮುಂದೆ ಉಂಟಾಗುವ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ತಡೆಗಟ್ಟಲು ಸಾಧ್ಯವಿದೆ.
ಅನೀಮಿಯಾ ಅಥವಾ ರಕ್ತಹೀನತೆ ಕಾಯಿಲೆ ಭಾರತದಲ್ಲಿ ಬಹುದೊಡ್ಡ ಸಮಸ್ಯೆ. ಇದು ಹೆಚ್ಚಾಗಿ ಮಕ್ಕಳು, ಯುವತಿಯರು ಹಾಗೂ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುತ್ತಿದೆ. ಅನೀಮಿಯಾ ಹೊಡೆದೋಡಿಸಲು ಪ್ರತಿವರ್ಷ ಫೆ.13ರಂದು ʻಅನೀಮಿಯಾ ಜಾಗೃತಿʼ ದಿನ ಆಚರಿಸಲಾಗುತ್ತದೆ ಎಂದು ಬೆಂಗಳೂರಿನ ಮಕ್ಕಳ ತಜ್ಞ ಫ್ರೊ.ಎ.ಆರ್.ಸೋಮಶೇಖರ್ ತಿಳಿಸಿದ್ದಾರೆ.